Site icon Vistara News

Taekwondo Premier League : ಬಂತು ಐಪಿಎಲ್ ರೀತಿ ಟೇಕ್ವಾಂಡೋ ಪ್ರೀಮಿಯರ್ ಲೀಗ್!

Premier League

#image_title

ಹೈದರಾಬಾದ್: ಐಪಿಎಲ್ ರೀತಿ ಇದೀಗ ಟೇಕ್ವಾಂಡೋ ಪ್ರೀಮಿಯರ್ ಲೀಗ್(ಟಿಪಿಎಲ್) ಕೂಡ ಶುರುವಾಗಲಿದ್ದು, ಜೂನ್ 22ರಿಂದ 26ರ ವರೆಗೂ ನವದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾನುವಾರ ಸಂಜೆ ಇಲ್ಲಿ ನಡೆದ ಫ್ರಾಂಚೈಸಿಗಳ ಅನಾವರಣ ಕಾರ್ಯಕ್ರಮದಲ್ಲಿ ಡಾ. ವೆಂಕಟ ಕೆ. ಗಂಜಾಮ್ ಅವರು ತಂಡಗಳ ಮಾಲಿಕರು, ಮೆಂಟರ್‌ಗಳು ಹಾಗೂ ಕೋಚ್‌ಗಳ ವಿವರಗಳನ್ನು ಬಹಿರಂಗಪಡಿಸಿದರು. ಭಾರೀ ಜನಪ್ರಿಯತೆ ಹೊಂದಿರುವ ಕ್ರೀಡೆಯ ಹೊಸ ಯುಗ ಆರಂಭಗೊಳ್ಳಲಿದೆ ಎಂದು ಡಾ. ವೆಂಕಟ ಅವರು ಭರವಸೆ ವ್ಯಕ್ತಪಡಿಸಿದರು.

‘ಪುರುಷರ ಲೀಗ್‌ನ ಬಳಿಕ ಕತಾರ್‌ನ ದೋಹಾದಲ್ಲಿ ಅಂತಾರಾಷ್ಟ್ರೀಯ ಲೀಗ್ ನಡೆಯಲಿದೆ. ಆ ಬಳಿಕ ಮಹಿಳೆಯರು ಹಾಗೂ ಮಕ್ಕಳಿಗೂ ಲೀಗ್ ಆರಂಭಿಸಲಿದ್ದೇವೆ. ಇದರೊಂದಿಗೆ ಭಾರತದಲ್ಲಿ ವರ್ಷವಿಡೀ ನಡೆಯಲಿರುವ ಮೊದಲ ಲೀಗ್ ಆಗಿ ಹೊರಹೊಮ್ಮಲಿದೆ’ ಎಂದು ಡಾ. ವೆಂಕಟ ತಿಳಿಸಿದರು.

ಲೀಗ್‌ನ ಸ್ಥಾಪಕ ನಿರ್ದೇಶಕ ದುವ್ವರಿ ಗಣೇಶ್ ಮಾತನಾಡಿ, ಜೂ.22-26ರ ವರೆಗೂ ನಡೆಯಲಿರುವ ಟೂರ್ನಿಯು ಮೊದಲ ಬಾರಿಗೆ ತಂಡಗಳ ಮಾದರಿಗೆ ಸಾಕ್ಷಿಯಾಗಲಿದೆ. ‘ಪ್ರತಿ ತಂಡದಲ್ಲಿ 5 ಅಗ್ರ ಆಟಗಾರರು ಇರಲಿದ್ದಾರೆ. ಸ್ಪರ್ಧೆಯು ವೇಗ ಹಾಗೂ ರೋಚಕವಾಗಿರಲಿ ಎನ್ನುವ ಉದ್ದೇಶದಿಂದ 58.1-67.9 ಕೆ.ಜಿ. ವಿಭಾಗಗಳಿಗೆ ಸೀಮಿತಗೊಳಿಸಲಾಗಿದೆ’ ಎಂದು ವಿವರಿಸಿದರು.

ಟಿಪಿಎಲ್‌ನಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು, ಈ ಪೈಕಿ 4 ತಂಡಗಳನ್ನು ಮಹಿಳೆಯರು ಖರೀದಿಸಿರುವುದು ಒಂದು ದಾಖಲೆಯೇ ಸರಿ. ಈ ಲೀಗ್‌ನ ಸ್ಥಾಪಕ ನಿರ್ದೇಶಕರಾದ ನವನೀತಾ ಬಛು, ಭಾರತದ ಮೊದಲ ಮಹಿಳಾ ಟೇಕ್ವಾಂಡೋ ಟ್ರೈನರ್ ಎನ್ನುವುದು ಗಮನಾರ್ಹ ಸಂಗತಿ.

‘ಟೇಕ್ವಾಂಡೋ ಕೇವಲ ಒಂದು ಕ್ರೀಡೆಯಲ್ಲ. ಅದು ಮಹಿಳೆಯರ ಸ್ವಯಂ ರಕ್ಷಣಾ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳುವಂತೆ ಮಾಡುತ್ತದೆ. ಟಿಪಿಎಲ್ ಎಲ್ಲಾ ಹೆಣ್ಣು ಮಕ್ಕಳಿಗೆ ಈ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಲಿದೆ’ ಎಂದು ನವನೀತಾ ಹೇಳಿದರು.

2013ರ ಮಿಸ್ ಏಷ್ಯಾ ಪೆಸಿಫಿಕ್ ವರ್ಲ್ಡ್ ಶೃಷ್ಟಿ ರಾಣಾ ಹರ‌್ಯಾಣ ಹಂಟರ್ಸ್‌ ತಂಡದ ಮಾಲಕಿಯಾಗಿದ್ದಾರೆ. ಮಹಾರಾಷ್ಟ್ರ ಆ್ಯವೆಂಜರ್ಸ್‌ ತಂಡಕ್ಕೆ ರುಚಿತಾ ಮಿತ್ತಲ್, ಬೆಂಗಳೂರು ನಿಂಜಾಸ್ ತಂಡಕ್ಕೆ ಶಿಲ್ಪಾ ಪಟೇಲ್, ಚೆನ್ನೈ ಸ್ಟ್ರೈಕರ್ಸ್‌ ತಂಡಕ್ಕೆ ಇಶಾ ಪಟೇಲ್ ಮಾಲಕಿಯರಾಗಿದ್ದಾರೆ.

ಇದನ್ನೂ ಓದಿ : IPL 2023 : ಐಪಿಎಲ್​ 16ನೇ ಆವೃತ್ತಿಯ ಲೀಗ್​ ಹಂತದ ಸಿಂಹಾವಲೋಕನ ಇಲ್ಲಿದೆ

ಡೆಲ್ಲಿ ವಾರಿಯರ್ಸ್‌ ತಂಡವನ್ನು ಗ್ಲೋಬಲ್ ಸ್ಪೋರ್ಟ್ಸ್ ಸಂಸ್ಥೆಯ ಮಾಲಿಕರಾದ ಶ್ಯಾಮ್ ಪಟೇಲ್ ಅವರು ಖರೀದಿಸಿದ್ದು, ಹೈದರಾಬಾದ್ ಗ್ಲೈಡರ್ಸ್‌ ತಂಡಕ್ಕೆ ಐಮಾರ್ಕ್ ಡೆವಲಪರ್ಸ್‌ನ ಮಾಲಿಕ ಅಲ್ಲು ವೆಂಕಟ ರೆಡ್ಡಿ, ಗುಜರಾತ್ ಥಂಡರ್ಸ್‌ ತಂಡಕ್ಕೆ ವಿಜಯ್ ಕುಮಾರ್ ಭನ್ಸಾಲಿ, 2006ರಲ್ಲಿ ಮಿಸ್ಟರ್ ಇಂಡಿಯಾ ಪ್ರಶಸ್ತಿ ಗೆದ್ದಿದ್ದ ಬಿಜಿತ್ ಗೊಗೊಯ್ ಅಸ್ಸಾಂ ಹೀರೋಸ್ ತಂಡದ ಮಾಲಿಕರಾಗಿದ್ದಾರೆ.

ದಕ್ಷಿಣ ಕೊರಿಯಾ ಮೂಲದ ಸಮರ ಕಲೆ ಟೇಕ್ವಾಂಡೋನಲ್ಲಿ ಸ್ಪರ್ಧಿಗಳು ಪರಸ್ಪರ ಒದೆಯುವ ಹಾಗೂ ಗುದ್ದುವ ಮೂಲಕ ಮೇಲುಗೈ ಸಾಧಿಸಲು ಯತ್ನಿಸಲಿದ್ದಾರೆ. ಒಲಿಂಪಿಕ್ ಕ್ರೀಡೆಯಾಗಿರುವ ಟೇಕ್ವಾಂಡೋವನ್ನು 200ಕ್ಕೂ ಹೆಚ್ಚು ದೇಶಗಳಲ್ಲಿ 2 ಕೋಟಿಗೂ ಹೆಚ್ಚು ಅಥ್ಲೀಟ್‌ಗಳು ಆಡುತ್ತಾರೆ.

ಭಾನುವಾರ ನಡೆದ ‘ಮೀಟ್ ಆ್ಯಂಡ್ ಗ್ರೀಟ್’ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಪಾಲ್ಗೊಂಡಿದ್ದರು. ಈ ಪೈಕಿ ಕೊರಿಯಾದ ಗೌರವಾನ್ವಿತ ಕೌನ್ಸಲ್ ಜನರಲ್ ಸುರೇಶ್ ಚುಕ್ಕಪಲ್ಲಿ, ಆಂಧ್ರಪ್ರದೇಶದ ಮಾಜಿ ಡಿಜಿ ಡಾ. ಸಿ.ಎನ್. ಗೋಪಿನಾಥ್ ರೆಡ್ಡಿ, ಮಿಸ್ ಏಷ್ಯಾ ಇಂಟರ್‌ನ್ಯಾಷನಲ್ ರಶ್ಮಿ ಠಾಕೂರ್ ಪ್ರಮುಖರು.

Exit mobile version