ಮೊಹಾಲಿ : ಕೆ. ಎಲ್ ರಾಹುಲ್ (೫೫). ಹಾರ್ದಿಕ್ ಪಾಂಡ್ಯ (೭೧*) ಜೋಡಿಯ ಅರ್ಧ ಶತಕಗಳು ಹಾಗೂ ಸೂರ್ಯಕುಮಾರ್ ಯಾದವ್ (೪೬) ಅವರ ಉಪಯುಕ್ತ ಬ್ಯಾಟಿಂಗ್ ನೆರವು ಪಡೆದ ಭಾರತ ತಂಡ, ಮೂರು ಟಿ೨೦ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ ೨೦೯ ರನ್‌ಗಳ ಗೆಲುವಿನ ಗುರಿಯನ್ನೊಡ್ಡಿದೆ.
ಇಲ್ಲಿನ ಐಎಸ್ ಬಿಂದ್ರಾ ಸ್ಟೇಡಿಯಮ್‌ನಲ್ಲಿ ನಡೆದ ಹಣಾಹಣಿಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ ೨೦ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೨೦೮ ರನ್ ಪೇರಿಸಿದೆ.
ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಉತ್ತಮ ಆರಂಭದ ಸೂಚನೆ ನೀಡಿದ ಹೊರತಾಗಿಯೂ ೨೧ ರನ್ ಆಗುವಷ್ಟರಲ್ಲಿ ರೋಹಿತ್ ಶರ್ಮ (೧೧) ಅವರ ವಿಕೆಟ್ ಕಳೆದುಕೊಂಡಿತು. ಬಳಿಕ ಬಂದ ವಿರಾಟ್ ಕೊಹ್ಲಿಯೂ ೨ ರನ್‌ಗಳಿಗೆ ವಿಕೆಟ್ ಒಪ್ಪಿಸುವುದರೊಂದಿಗೆ ೩೫ ರನ್‌ಗಳಿಗೆ ೨ ವಿಕೆಟ್ ಕಳೆದುಕೊಂಡ ಭಾರತ ತಂಡ ಹಿನ್ನಡೆ ಎದುರಿಸಿತು. ಆದರೆ, ಆ ಬಳಿಕ ಜತೆಯಾದ ಕೆ. ಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಅರಂಭಿಕ ಕುಸಿತದಿಂದ ಮೇಲಕ್ಕೆತ್ತಿದರು. ಈ ಜೋಡಿ ಮೂರನೇ ವಿಕೆಟ್‌ಗೆ ೬೮ ರನ್‌ಗಳನ್ನು ಪೇರಿಸಿತು. ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಹುಲ್ ೩೫ ಎಸೆತಗಳಲ್ಲಿ ೫೫ ರನ್ ಬಾರಿಸಿದರು. ಆದರೆ, ಹೇಜಲ್‌ವುಡ್ ಎಸೆತಕ್ಕೆ ದೊಡ್ಡ ಹೊಡೆತ ಬಾರಿಸಲು ಹೋಗಿ ಔಟಾದರು.
ಪಾಂಡ್ಯ ಅಬ್ಬರ
ಸೂರ್ಯಕುಮಾರ್ ಯಾದವ್ ಆರಂಭದಿಂದಲೇ ಮಿಂಚಿದರಲ್ಲದೆ, ೨೫ ಎಸೆತಗಳಲ್ಲಿ ೪೬ ರನ್ ಬಾರಿಸಿದರು. ಬಳಿಕ ಆಡಲು ಇಳಿದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ೩೦ ಎಸೆತಗಳಲ್ಲಿ ಅಜೇಯ ೭೧ ರನ್ ಬಾರಿಸಿದರು. ಆರಂಭದಿಂದಲೇ ಆಸ್ಟ್ರೇಲಿಯಾದ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಪಾಂಡ್ಯ ಇನಿಂಂಗ್ಸ್‌ನ ಕೊನೇ ಮೂರು ಎಸೆತಗಳಲ್ಲಿ ಸತತ ಮೂರು ಸಿಕ್ಸರ್ ಬಾರಿಸುವುದರೊಂದಿಗೆ ಸ್ಮರಣೀಯ ಬ್ಯಾಟಿಂಗ್ ಮಾಡಿದರು.
ಸ್ಕೋರ್ ವಿವರ: ಭಾರತ ೨೦ ಓವರ್‌ಗಳಲ್ಲಿ ೬ ವಿಕೆಟ್‌ಗೆ ೨೦೮ (ಕೆ.ಎಲ್ ರಾಹುಲ್ ೫೫, ಸೂರ್ಯಕುಮಾರ್ ಯಾದವ್ ೪೦, ಹಾರ್ದಿಕ್ ಪಾಂಡ್ಯ೭೧*; ಜೋಶ್ ಹೇಜಲ್‌ವುಡ್ ೩೯ಕ್ಕೆ೨, ನಥಾನ್ ಎಲ್ಲಿಸ್ ೩೦ಕ್ಕೆ೩).