ಮುಂಬಯಿ: ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ನ ವೇಟ್‌ಲಿಫ್ಟಿಂಗ್‌ನಲ್ಲಿ (CWG- 2022) ಭಾರತಕ್ಕೆ ಬೆಳ್ಳಿಯ ಪದಕ ಗೆದ್ದುಕೊಟ್ಟ ೨೧ ವರ್ಷದ ಸಂಕೇತ್ ಮಹಾದೇವ್ ಸರ್ಗರ್, ಸಾಂಗ್ಲಿ ಪಟ್ಟಣದಲ್ಲಿ ಪಾನ್ ಬೀಡಾ ಮಾರುತ್ತಿರುವ ಶ್ರಮಿಕರೊಬ್ಬರ ಪುತ್ರ. ಸಂಕೇತ್ ಬಂಗಾರ ಗೆಲ್ಲುತ್ತಿದ್ದಂತೆ ಪಾನ್ ಬೀಡಾ ಅಂಗಡಿ ಮುಂದೆ ಕ್ರೀಡಾಭಿಮಾನಿಗಳ ದಂಡೇ ಸೇರಿಕೊಂಡಿತ್ತು. ಜತೆಗೆ ಸಾಂಗ್ಲಿ ಪಟ್ಟಣದ ನಿವಾಸಿಗಳೂ ನಮ್ಮೂರ ಹುಡುಗ ಹೆಮ್ಮೆ ತಂದ ಎಂದು ಖುಷಿಯಿಂದ ಬೀಗಿದರು.
ಹಳ್ಳಿಯಿಂದ ಕೆಲಸ ಹುಡುಕಿಕೊಂಡು ಸಾಂಗ್ಲಿ ಪಟ್ಟಣ ಸೇರಿದ್ದ ಮಹಾದೇವ್ ಅವರು ಜೀವನೋಪಾಯಕ್ಕೆ ತಳ್ಳು ಗಾಡಿಯಲ್ಲಿ ಹಣ್ಣುಗಳನ್ನು ಮಾರಲು ಅರಂಭಿಸಿದ್ದರು. ಬಳಿಕ ಪಾನ್ ಬೀಡಾ ಅಂಗಡಿಯೊಂದನ್ನು ಇಟ್ಟಿದ್ದರು. ಅಲ್ಲೂ ಸ್ವಲ್ಪ ದುಡ್ಡು ಮಾಡಿದ ತಳ್ಳು ಗಾಡಿಯಲ್ಲಿ ಸಣ್ಣ ಹೋಟೆಲ್ ಕೂಡ ತೆರೆದಿದ್ದರು. ಇಷ್ಟೆಲ್ಲ ಆಗುವಾಗ ಸಂಕೇತ್ ಸರ್ಗರ್ ಬೆಳೆದು ನಿಂತಿದ್ದ. ಆತನೂ ತಂದೆಗೆ ಸಹಾಯ ಮಾಡಲು ಪಾನ್ ಬೀಡಾ ಅಂಗಡಿಗೆ ಬರುತ್ತಿದ್ದ.
ಜಿಮ್ ಸೇರಿದ ಸಂಕೇತ್
ಮಗನನ್ನು ಹೇಗಾದರೂ ಮಾಡಿದ ಕ್ರೀಡಾ ಕ್ಷೇತ್ರಕ್ಕೆ ಸೇರಿಸಬೇಕು ಎಂಬ ಅಭಿಲಾಷೆ ಹೊಂದಿದ್ದ ಮಹಾದೇವ್ ಅವರ ಕಣ್ಣಿಗೆ ಬಿದ್ದಿದ್ದು ಪಾನ್ ಬೀಡಾ ಅಂಗಡಿಯ ಪಕ್ಕದ ಜಿಮ್. ಅಲ್ಲಿಗೆ ಹೋಗಿ ವೇಟ್ ಲಿಫ್ಟಿಂಗ್ ತರಬೇತಿಗೆ ಸೇರಿಸಿದ್ದರು. ಆ ದಿನದಿಂದ ಕಾಮನ್ವೆಲ್ತ್ ರಜತ ಪದಕಧಾರಿಯ ಸಾಧನೆಯ ಹಾದಿ ಆರಂಭಗೊಂಡಿತ್ತು. ಅಂಗಡಿಯಲ್ಲಿ ತಂದೆಗೆ ನೆರವು ನೀಡುತ್ತಿದ್ದ ಜತೆಗೆ ಮುಂಜಾನೆದ್ದು ಜಿಮ್‌ಗೆ ಹೋಗಿ ವೇಟ್‌ಲಿಫ್ಟಿಂಗ್ ಕೂಡ ಅಭ್ಯಾಸ ಮಾಡಲು ಆರಂಭಿಸಿದರು ರಜತ ಪದಕ ವಿಜೇತ ಸಂಕೇತ್.
ಅಭ್ಯಾಸದ ಜತೆಗೆ ಅವರು ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲೂ ಭಾಗವಹಿಸಲು ಆರಂಭಿಸಿದ್ದರು. ಆದರೆ, ಅಲ್ಲೆಲ್ಲ ಉತ್ತಮ ಫಲಿತಾಂಶ ಬರುತ್ತಿರಲಿಲ್ಲ. ಈ ವೇಳೆ ತಂದೆ ಮಹಾದೇವ್ ಅವರು “ಸಾಧನೆ ಮಾಡಬೇಕಾದರೆ ಇನ್ನಷ್ಟು ಪ್ರಯತ್ನ ಹಾಕಬೇಕು. ಇಲ್ಲದಿದ್ದರೆ ಅಂಗಡಿಯಲ್ಲಿ ಕುಳಿತು ವ್ಯಾಪಾರ ಮಾಡುವುದೇ ಉತ್ತಮ,” ಎಂದು ಹೇಳಿದ್ದರು. ಈ ಮಾತನ್ನು ಸವಾಲಾಗಿ ಸ್ವೀಕರಿಸಿ ಸತತ ಅಭ್ಯಾಸ ಮಾಡಿ ಒಂದೊಂದೇ ಹಂತ ಮೇಲಕ್ಕೇರಿದ್ದ.
೨೦೨೦ರಲ್ಲಿ ಹಿರಿಯರ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಮುಂದಿನ ವರ್ಷವೂ ಅವರೇ ಚಾಂಪಿಯನ್ ಆದರು. ಆದರೆ, ೨೦೨೧ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಆರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಹೀಗಾಗಿ ಕಾಮನ್ವೆಲ್ತ್‌ಗೆ ಅವಕಾಶ ಪಡೆಯುವುದೇ ಕಷ್ಟ ಎಂದೆನಿಸಿತ್ತು. ಆದರೆ, ೨೦೨೨ರಲ್ಲಿ ನಡೆದ ಸಿಂಗಾಪುರ ಓಪನ್‌ನಲ್ಲಿ ಒಟ್ಟಾರೆ ೨೫೬ ಕೆ. ಜಿ ಭಾರ ಎತ್ತಿದ ಸಂಕೇತ್ ರಾಷ್ಟ್ರೀಯ ದಾಖಲೆ ಸೃಷ್ಟಿಸುವ ಜತೆಗೆ ಕಾಮನ್ವೆಲ್ತ್‌ಗೆ ಟಿಕೆಟ್ ಗಿಟ್ಟಿಸಿಕೊಂಡರು.
೨೦೧೮ರಲ್ಲಿ ಕಂಡ ಕನಸು
೨೦೧೮ರ ಏಪ್ರಿಲ್‌ನಲ್ಲಿ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಗುರುರಾಜ್ ಅವರು ೫೬ ಕೆ.ಜಿ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು. ಈ ವೇಳೆ ಸಂಕೇತ್ ಗಿರಾಕಿಯೊಬ್ಬರಿಗೆ ಪಾನ್ ಕಟ್ಟುತ್ತಿದ್ದರು. ಗುರುರಾಜ್ ಅವರ ಸಾಧನೆಯನ್ನು ನೋಡಿದ್ದ ಸಂಕೇತ್, ಮುಂದಿನ ಸಲ ನಾನು ಆ ವೇದಿಕೆಯನ್ನೇರುವೆ ಎಂದಿದ್ದರು. ಆ ಮಾತನ್ನು ಸಂಕೇತ್ ಮಹಾದೇವ್ ಸರ್ಗರ್ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ | CWG- 2022 | ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ, ಬೆಳ್ಳಿ ಗೆದ್ದ ಸಂಕೇತ್ ಸಾಗರ್