2023 ಕ್ರಿಕೆಟ್ ಕ್ಷೇತ್ರವು ಸ್ಮರಣೆಯಲ್ಲಿ ಇಟ್ಟುಕೊಳ್ಳಬೇಕಾದ ವರ್ಷ. ಐಪಿಎಲ್ ವಿಶ್ವ ಕಪ್, ಏಷ್ಯನ್ ಗೇಮ್ಸ್, ಏಷ್ಯಾ ಕಪ್ ಸೇರಿದಂತೆ ನಾನಾ ಟೂರ್ನಿಗಳು ನಡೆದಿವೆ. ಇಲ್ಲೆಲ್ಲ ಪ್ರತಿಭೆಗಳ ಅನಾವರಣ ಹಾಗೂ ಅತ್ಯುತ್ತಮ ಪ್ರದರ್ಶನಗಳಿಗೆ ಕ್ರಿಕೆಟ್ ಪ್ರೇಮಿಗಳು ಸಾಕ್ಷಿಯಾಗಿದ್ದಾರೆ. ಹಿರಿಯ ಮತ್ತು ಕಿರಿಯ ಕ್ರಿಕೆಟಿಗರು ಅವಿಸ್ಮರಣೀಯ ಸಾಧನೆ ಮಾಡಿದ್ದಾರೆ. ವಿಶೇಷವಾಗಿ 2023ರ ಏಕದಿನ ವಿಶ್ವ ಕಪ್ನಲ್ಲಿ (Year Ender 2023) ಬ್ಯಾಟ್ಸ್ಮನ್ಗಳು ಮತ್ತು ಬೌಲರ್ಗಳು ನಂಬಲಾಗದ ಸಾಧನೆಗಳನ್ನು ಮಾಡಿದ್ದಾರೆ.
ಸ್ಫೋಟಕ ಆರಂಭಿಕರಿಂದ ಹಿಡಿದು ಮಧ್ಯಮ ಕ್ರಮಾಂಕದಲ್ಲಿ ರನ್ ಬಾರಿಸುವ ಬ್ಯಾಟರ್ಗಳು ಮಿಂಚಿದ್ದಾರೆ. ಬೌಲಿಂಗ್ನಲ್ಲಿ ಆರಂಭಿಕ ಸ್ಪೆಲ್ನಿಂದ ಹಿಡಿದು ಡೆತ್ ಓವರ್ ತನಕ ಅನೇಕ ವೇಗಿಗಳು ಗಮನ ಸೆಳೆದಿದ್ದಾರೆ. ಸ್ಪಿನ್ ಕೈಚಳಕವೂ ಕಣ್ಣಿಗೆ ಹಬ್ಬವಾಗಿದೆ. ಹೀಗಾಗಿ 2023ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಸೇರಿಸಿಕೊಂಡು 11 ಆಟಗಾರರು ಇರುವ ತಂಡವನ್ನು ರಚಿಸಲಾಗಿದೆ. ಇವರಲ್ಲಿ 4 ಭಾರತಿಯರೇ ಇದ್ದಾರೆ. ಇದು 2023 ರ ಬೆಸ್ಟ್ ಪ್ಲೇಯಿಂಗ್ ಇಲೆವೆನ್. ಅದರಲ್ಲಿ ಯಾರೆಲ್ಲ ಇದ್ದಾರೆ ಎಂದು ನೋಡೋಣ.
1. ಶುಬ್ಮನ್ ಗಿಲ್ (ಭಾರತ)
ಶುಬ್ಮನ್ ಗಿಲ್ 2023 ರಲ್ಲಿ ಬ್ಯಾಟ್ನೊಂದಿಗೆ ವಿಶೇಷವಾಗಿ ಏಕದಿನ ಕ್ರಿಕೆಟ್ನಲ್ಲಿ ಅದ್ಭುತ ವರ್ಷವನ್ನು ಹೊಂದಿದ್ದರು. ನ್ಯೂಜಿಲೆಂಡ್ ವಿರುದ್ಧ ದ್ವಿಶತಕ ಸೇರಿದಂತೆ ಎರಡು ಶತಕಗಳನ್ನು ಬಾರಿಸುವ ಮೂಲಕ ಅವರು ವರ್ಷವನ್ನು ಭರ್ಜರಿಯಾಗಿ ಪ್ರಾರಂಭಿಸಿದ್ದರು. ಅವರು ವರ್ಷವಿಡೀ ಆ ಫಾರ್ಮ್ ಅನ್ನು ಮುಂದುವರಿಸಿದ್ದರು. 2023ರಲ್ಲಿ 29 ಏಕದಿನ ಪಂದ್ಯಗಳನ್ನಾಡಿರುವ ಗಿಲ್ 63.36ರ ಸರಾಸರಿಯಲ್ಲಿ 105.45ರ ಸ್ಟ್ರೈಕ್ ರೇಟ್ನಲ್ಲಿ 1584 ರನ್ ಗಳಿಸಿದ್ದಾರೆ.
ಅವರು ಒಟ್ಟು ಐದು ಶತಕಗಳು ಮತ್ತು ಒಂಬತ್ತು ಅರ್ಧಶತಕಗಳನ್ನು ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 208 ಆಗಿದ್ದು, ಏಕದಿನ ಪಂದ್ಯಗಳಲ್ಲಿ ದ್ವಿಶತಕ ಬಾರಿಸಿದ ಐದನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಷ್ಟೇ ಅಲ್ಲ, ಅವರು ಒಟ್ಟು 41 ಸಿಕ್ಸರ್ ಮತ್ತು 180 ಬೌಂಡರಿಗಳನ್ನು ಬಾರಿಸಿದ್ದಾರೆ.
2. ರೋಹಿತ್ ಶರ್ಮಾ (ಭಾರತ)
2023ರಲ್ಲಿ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದು ಒಟ್ಟು 27 ಪಂದ್ಯಗಳನ್ನು ಆಡಿದ್ದಾರೆ. ಎರಡು ಶತಕಗಳು ಮತ್ತು ಒಂಬತ್ತು ಅರ್ಧಶತಕಗಳೊಂದಿಗೆ 1255 ರನ್ ಗಳಿಸಿದ್ದಾರೆ. ಅವರು 52.29 ಸರಾಸರಿ ಮತ್ತು 117.07 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇದು ಈ ವರ್ಷ ಏಕದಿನ ಮಾದರಿಯಲ್ಲಿ ಗರಿಷ್ಠ, ಅವರು ಹೆಚ್ಚು ಪ್ರಭಾವ ಬೀರಿದ್ದು 2023 ರ ವಿಶ್ವಕಪ್ನಲ್ಲಿ. ಅಲ್ಲಿ ಅವರು ಒಂದು ಶತಕ ಮತ್ತು ಮೂರು ಅರ್ಧಶತಕಗಳೊಂದಿಗೆ 500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಒಟ್ಟಾರೆಯಾಗಿ 2023ರಲ್ಲಿ ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ 131 ಬೌಂಡರಿಗಳು ಮತ್ತು ಒಟ್ಟು 67 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
3. ವಿರಾಟ್ ಕೊಹ್ಲಿ (ಭಾರತ)
2023 ವಿರಾಟ್ ಕೊಹ್ಲಿಗೆ ವಿಮೋಚನೆಯ ವರ್ಷದಂತಿತ್ತು. ಮೊದಲಾಗಿ ಅವರು ತಮ್ಮ ಶತಕಗಳ ಬರವನ್ನು ಕೊನೆಗೊಳಿಸಿದರು. ಬಳಿಕ ಪ್ರಭಾವಶಾಲಿ ಫಾರ್ಮ್ಗೆ ಮರಳಿದರು. ಕೊಹ್ಲಿ 27 ಏಕದಿನ ಪಂದ್ಯಗಳಲ್ಲಿ 6 ಶತಕ ಮತ್ತು 8 ಅರ್ಧಶತಕಗಳೊಂದಿಗೆ 1377 ರನ್ ಗಳಿಸಿದ್ದಾರೆ. ಅವರ ಸರಾಸರಿ 72.47 ಮತ್ತು ಸ್ಟ್ರೈಕ್ ರೇಟ್ 99.13 ಆಗಿದೆ. ಅವರು ಒಟ್ಟು 122 ಬೌಂಡರಿಗಳು ಮತ್ತು 24 ಸಿಕ್ಸರ್ ಗಳನ್ನು ಬಾರಿಸಿದ್ದಾರೆ.
ಕಿಂಗ್ ಕೊಹ್ಲಿ 2023 ರ ಐಸಿಸಿ ವಿಶ್ವ ಕಪ್ನಲ್ಲಿ ಪ್ರಾಬಲ್ಯ ಮೆರೆದರು. ಅಲ್ಲಿ ಅವರು ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ಎರಡು ವಿಶ್ವ ದಾಖಲೆಗಳನ್ನು ಮುರಿದರು. ಅವರು 765 ರನ್ ಗಳಿಸುವ ಮೂಲಕ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಚಿನ್ ಅವರ ದಾಖಲೆಯನ್ನು ಮುರಿದರು. ಏಕದಿನ ಕ್ರಿಕೆಟ್ನಲ್ಲಿ 50 ಶತಕಗಳನ್ನು ಬಾರಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ವಿಶ್ವಕಪ್ 2023 ರಲ್ಲಿ ಮೂರು ಶತಕಗಳು ಮತ್ತು ಆರು ಅರ್ಧಶತಕಗಳನ್ನು ಬಾರಿಸಿದ್ದರು.
4. ಬಾಬರ್ ಅಜಮ್ (ಪಾಕಿಸ್ತಾನ)
ಪಾಕಿಸ್ತಾನ ತಂಡ ಸೆಮಿಫೈನಲ್ಗೆ ಅರ್ಹತೆ ಪಡೆಯಲು ವಿಫಲವಾದ ನಂತರ ಪಾಕಿಸ್ತಾನ ನಾಯಕತ್ವದಿಂದ ಕೆಳಗಿಳಿಯಬೇಕಾಗಿ ಬಂದಿದ್ದರಿಂದ ಬಾಬರ್ ಅಜಮ್ಗೆ 2023 ನಿರೀಕ್ಷೆ ಮೂಡಿಸಿರಬಹುದು. ಆದರೆ ಬ್ಯಾಟರ್ ಆಗಿ ಅವರು ಗರಿಷ್ಠ ಸಾಧನೆ ಮಾಡಿದ್ದಾರೆ. ಬಾಬರ್ 25 ಪಂದ್ಯಗಳಲ್ಲಿ 2 ಶತಕ ಮತ್ತು 10 ಅರ್ಧಶತಕಗಳೊಂದಿಗೆ 1065 ರನ್ ಗಳಿಸಿದ್ದಾರೆ. ಅವರ ಸರಾಸರಿ 46.30 ಮತ್ತು ಸ್ಟ್ರೈಕ್ ರೇಟ್ 84.65 ಆಗಿದೆ. ಏಷ್ಯಾಕಪ್ನಲ್ಲಿ ನೇಪಾಳ ವಿರುದ್ಧ 151 ರನ್ ಗಳಿಸಿದ್ದು ಅವರ ಗರಿಷ್ಠ ಸ್ಕೋರ್ ಆಗಿದೆ.
5. ಡ್ಯಾರಿಲ್ ಮಿಚೆಲ್ (ನ್ಯೂಜಿಲೆಂಡ್)
ಡ್ಯಾರಿಲ್ ಮಿಚೆಲ್ 2023 ರಲ್ಲಿ ಏಕದಿನ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಪರ ಅತ್ಯುತ್ತಮ ಬ್ಯಾಟರ್ ಆಗಿದ್ದಾರೆ. ಈ ವರ್ಷ 26 ಏಕದಿನ ಪಂದ್ಯಗಳನ್ನು ಆಡಿರುವ ಅವರು ಐದು ಶತಕಗಳು ಮತ್ತು ಮೂರು ಅರ್ಧಶತಕಗಳೊಂದಿಗೆ 1204 ರನ್ ಗಳಿಸಿದ್ದಾರೆ. ಅವರು 52.34 ಸರಾಸರಿಯನ್ನು ಹೊಂದಿದ್ದಾರೆ. 100.24 ಸ್ಟ್ರೈಕ್ ರೇಟ್ ಅವರಿಗಿದೆ. ಅವರು ಒಟ್ಟು 37 ಸಿಕ್ಸರ್ ಮತ್ತು 93 ಬೌಂಡರಿಗಳನ್ನು ಬಾರಿಸಿದ್ದಾರೆ.
ವಿಶ್ವಕಪ್ 2023 ರಲ್ಲಿ, ಮಿಚೆಲ್ ಭಾರತದ ವಿರುದ್ಧ 2 ಶತಕಗಳನ್ನು ಬಾರಿಸಿದ್ದಾರೆ. 69 ಸರಾಸರಿ ಮತ್ತು 111.06 ಸ್ಟ್ರೈಕ್ ರೇಟ್ನಲ್ಲಿ 552 ರನ್ ಪೇರಿಸಿದ್ದಾರೆ. ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಬಂದ 134 ರನ್ ಈ ವರ್ಷ ಏಕದಿನ ಪಂದ್ಯಗಳಲ್ಲಿ ಅವರ ಗರಿಷ್ಠ ಸ್ಕೋರ್ ಆಗಿದೆ.
6. ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನದ ವಿಕೆಟ್ಕೀಪರ್ )
ಮೊಹಮ್ಮದ್ ರಿಜ್ವಾನ್ 2023 ರಲ್ಲಿ ಏಕದಿನ ಪಂದ್ಯಗಳಲ್ಲಿ 1000 ರನ್ ಗಳಿಸಿದ ಪಾಕಿಸ್ತಾನದ ಮತ್ತೊಬ್ಬ ಬ್ಯಾಟ್ಸ್ಮನ್. ಅವರು 25 ಏಕದಿನ ಪಂದ್ಯಗಳಲ್ಲಿ ಒಂದು ಶತಕ ಮತ್ತು ಏಳು ಅರ್ಧಶತಕಗಳೊಂದಿಗೆ 1023 ರನ್ ಗಳಿಸಿದ್ದಾರೆ. ಅವರ ಸರಾಸರಿ 63.93 ಮತ್ತು ಸ್ಟ್ರೈಕ್ ರೇಟ್ 93.76 ಆಗಿದೆ.. ರಿಜ್ವಾನ್ 95 ಬೌಂಡರಿ ಮತ್ತು 12 ಸಿಕ್ಸರ್ ಬಾರಿಸಿದ್ದಾರೆ. ಹೈದರಾಬಾದ್ನಲ್ಇ ನಡೆದ ಶ್ರೀಲಂಕಾ ವಿರುದ್ಧದ ಪಾಕಿಸ್ತಾನ ವಿಶ್ವಕಪ್ 2023 ರ ದಾಖಲೆಯ ಚೇಸಿಂಗ್ನಲ್ಲಿ ಅವರ ಗರಿಷ್ಠ ಸ್ಕೋರ್ 131* ಆಗಿತ್ತು.
7. ಮಿಚೆಲ್ ಮಾರ್ಷ್ (ಆಸ್ಟ್ರೇಲಿಯಾ)
ಮಿಚೆಲ್ ಮಾರ್ಷ್ 2023 ರಲ್ಲಿ ಆಸ್ಟ್ರೇಲಿಯಾ ಪರ ಅದ್ಭುತ ವರ್ಷವನ್ನು ಹೊಂದಿದ್ದರು. ಮಾರ್ಷ್ 20 ಏಕದಿನ ಪಂದ್ಯಗಳಲ್ಲಿ 47.66ರ ಸರಾಸರಿಯಲ್ಲಿ 858 ರನ್ ಗಳಿಸಿದ್ದಾರೆ. ಅವರು 2023 ರಲ್ಲಿ ಏಕದಿನ ಪಂದ್ಯಗಳಲ್ಲಿ 96 ಬೌಂಡರಿಗಳು ಮತ್ತು 43 ಸಿಕ್ಸರ್ಗಳನ್ನು ಬಾರಿಸಿದ್ದಾರೆ. 2023ರ ವಿಶ್ವಕಪ್ನಲ್ಲಿ ಬಾಂಗ್ಲಾದೇಶ ವಿರುದ್ಧ 177* ರನ್ ಬಾರಿಸಿದ್ದು ಅವರ ಗರಿಷ್ಠ ಸ್ಕೋರ್ ಆಗಿತ್ತು. ಮಾರ್ಷ್ ತಮ್ಮ ಹುಟ್ಟುಹಬ್ಬದಂದು ಬೆಂಗಳೂರಿನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ವಿಶ್ವ ಕಪ್ ಪಂದ್ಯದಲ್ಲಿ ಶತಕ ಗಳಿಸಿದ್ದಾರೆ.
8. ಕುಲದೀಪ್ ಯಾದವ್ (ಭಾರತ)
ಕುಲದೀಪ್ ಯಾದವ್ 2023 ರಲ್ಲಿ ಏಕದಿನ ಪಂದ್ಯಗಳಲ್ಲಿ ಬಹಳ ಪ್ರಭಾವಶಾಲಿ ಪ್ರದರ್ಶನ ನೀಡಿದ್ದರು. ಅವರು ಭಾರತೀಯ ತಂಡದಲ್ಲಿ ಪ್ರಮುಖ ಸ್ಪಿನ್ನರ್ ಆಗಿ 49 ವಿಕೆಟ್ ಉರುಳಿಸಿದರು. ಅವರು 4.61 ಎಕಾನಮಿ ಮತ್ತು 20.48 ಸರಾಸರಿಯಲ್ಲಿ ಆ ವಿಕೆಟ್ಗಳನ್ನು ಪಡೆದರು. ಅವರ ಅತ್ಯುತ್ತಮ ಬೌಲಿಂಗ್ ಅಂಕಿ ಅಂಶ 25 ರನ್ಗೆ 5 ವಿಕೆಟ್. ಇದು ಏಷ್ಯಾ ಕಪ್ 2023 ರಲ್ಲಿ ಬಂದಿತ್ತು. ಐಸಿಸಿ ವಿಶ್ವಕಪ್ 2023 ರಲ್ಲಿ ಕುಲ್ದೀಪ್ ಯಾದವ್ ಮಧ್ಯಮ ಓವರ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿ , ಭಾರತಕ್ಕಾಗಿ ನಿರ್ಣಾಯಕ ವಿಕೆಟ್ ಗಳಿಸಿದ್ದರು. ವಿಶ್ವಕಪ್ನಲ್ಲಿ ಅವರು 11 ಪಂದ್ಯಗಳಲ್ಲಿ 4.45 ಎಕಾನಮಿಯಲ್ಲಿ 15 ವಿಕೆಟ್ ಉರುಳಿಸಿದ್ದಾರೆ.
9. ಕೇಶವ್ ಮಹಾರಾಜ್ (ದಕ್ಷಿಣ ಆಫ್ರಿಕಾ)
ಕೇಶವ್ ಮಹಾರಾಜ್ 2023 ರಲ್ಲಿ ದಕ್ಷಿಣ ಆಫ್ರಿಕಾ ಪರ 18 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು 27 ವಿಕೆಟ್ ಗಳನ್ನು ಪಡೆದಿದ್ದಾರೆ. ಅವರ ಸರಾಸರಿ 24.55 ಮತ್ತು 4.32 ಎಕಾನಮಿ ಹೊಂದಿದ್ದರು. ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ 33 ರನ್ಗೆ 4 ವಿಕೆಟ್. ಐಸಿಸಿ ವಿಶ್ವಕಪ್ 2023 ರಲ್ಲಿ, ಮಹಾರಾಜ್ ದಕ್ಷಿಣ ಆಫ್ರಿಕಾ ಪರ 10 ಪಂದ್ಯಗಳಲ್ಲಿ 4.45 ಎಕಾನಮಿಯಲ್ಲಿ 15 ವಿಕೆಟ್ ಪಡೆದಿದ್ದರು. ಅವರು ಪ್ರಸ್ತುತ ಐಸಿಸಿ ಶ್ರೇಯಾಂಕದಲ್ಲಿ ನಂ.1 ಏಕದಿನ ಬೌಲರ್ ಆಗಿದ್ದಾರೆ.
10. ಶಾಹೀನ್ ಅಫ್ರಿದಿ (ಪಾಕಿಸ್ತಾನ)
ಶಾಹೀನ್ ಅಫ್ರಿದಿ 2023 ರಲ್ಲಿ ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನದ ಅತ್ಯುತ್ತಮ ಬೌಲರ್. ಅವರು 21 ಪಂದ್ಯಗಳನ್ನು ಆಡಿದ್ದಾರೆ ಮತ್ತು 24.04 ಸರಾಸರಿಯಲ್ಲಿ 42 ವಿಕೆಟ್ ಪಡೆದಿದ್ದಾರೆ. ಪಾಕಿಸ್ತಾನದ ಪರ 54 ರನ್ಗೆ 5 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿತ್ತು. ಐಸಿಸಿ ವಿಶ್ವಕಪ್ 2023 ರಲ್ಲಿ, ಶಾಹೀನ್ ಅಫ್ರಿದಿ ಮೆನ್ ಇನ್ ಗ್ರೀನ್ ಪರ ಒಂಬತ್ತು ಪಂದ್ಯಗಳಲ್ಲಿ 18 ವಿಕೆಟ್ ಉರುಳಿಸಿದ್ದಾರೆ.
11. ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ 19 ಪಂದ್ಯಗಳಲ್ಲಿ 43 ವಿಕೆಟ್ ಪಡೆದಿದ್ದಾರೆ. ಅವರ ಸರಾಸರಿ 16.46 ಮತ್ತು 5.32 ಎಕಾನಮಿ ಹೊಂದಿದ್ದರು. ಶಮಿ 2023 ರಲ್ಲಿ ಏಕದಿನ ಪಂದ್ಯಗಳಲ್ಲಿ ನಾಲ್ಕು ಬಾರಿ ಐದು ವಿಕೆಟ್ಗಳನ್ನು ಪಡೆದ್ದಾರೆ. ಇದು ವಿಶ್ವ ದಾಖಲೆಯಾಗಿದೆ. ಅವರು 2023 ರ ವಿಶ್ವಕಪ್ನಲ್ಲಿ ಭಾರತಕ್ಕಾಗಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
ವಿಶ್ವ ಕಪ್ನಲ್ಲಿ ಕೇವಲ ಏಳು ಪಂದ್ಯಗಳನ್ನು ಆಡಿದ ಶಮಿ 24 ವಿಕೆಟ್ ಪಡೆದರು. ಇದು ಪಂದ್ಯಾವಳಿಯಲ್ಲಿ 5.26 ಎಕಾನಮಿ ಮತ್ತು 10.70 ಸರಾಸರಿಯಲ್ಲಿ ಬಂದ ಅತಿ ಹೆಚ್ಚು ವಿಕೆಟ್ ಆಗಿದೆ. ವಿಶ್ವ ಕಪ್ನಲ್ಲಿ ಮೂರು ಬಾರಿ ಐದು ವಿಕೆಟ್ ಸಾಧನೆ ಮಾಡಿರುವುದು ಅವರ ಮತ್ತೊಂದು ವಿಶ್ವ ದಾಖಲೆ. ವಿಶ್ವ ಕಪ್ನಲ್ಲಿ 57 ರನ್ಗೆ 7 ವಿಕೆಟ್ ಮತ್ತೊಂದು ವಿಶ್ವ ದಾಖಲೆ.