Site icon Vistara News

ಥಾಮಸ್‌ ಕಪ್| ಭಾರತ ತಂಡದ ಐತಿಹಾಸಿಕ ಗೆಲುವು

ಥಾಮಸ್‌ ಕಪ್

ಥಾಮಸ್‌ ಕಪ್‌ 2022: ಸಂಭ್ರಮಿಸಲು ಇನ್ನೇನು ಬೇಕು? ಇತಿಹಾಸದಲ್ಲಿ ಮೊದಲಬಾರಿಗೆ ಭಾರತದ ಬ್ಯಾಡ್‌ಮಿಂಟನ್‌ ಪುರುಷರ ತಂಡ ಥಾಮಸ್‌ ಕಪ್‌ ಚಾಂಪಿಯನ್‌ಶಿಪ್‌ ಗೆದ್ದಿದೆ. ಥಾಮಸ್‌ ಕಪ್ ಎನ್ನುವುದು ಕ್ರಿಕೆಟ್‌ನಲ್ಲಿ ವಿಶ್ವಕಪ್‌, ಫುಟ್‌ಬಾಲ್‌ನಲ್ಲಿ ಫಿಫಾ ವಿಶ್ವಕಪ್‌, ಟೆನ್ನಿಸ್‌ನಲ್ಲಿ ವಿಂಬಲ್ಡನ್‌ ರೀತಿ ಪ್ರಾಮುಖ್ಯತೆ ಹೊಂದಿರುವ ಟೂರ್ನಮೆಂಟ್‌. ಇಂಥದ್ದೊಂದು ಟೂರ್ನಮೆಂಟ್‌ನಲ್ಲಿ ಕಪ್‌ ಗೆದ್ದಿರುವುದು ದೇಶಕ್ಕೆ ಹೆಮ್ಮೆ ಮೂಡಿಸಿದೆ.

1983ರಲ್ಲಿ ಭಾರತ ಪ್ರಥಮ ಬಾರಿಗೆ ಕ್ರಿಕೆಟ್‌ ವಿಶ್ವಕಪ್ ಗೆದ್ದ ಮಧುರ ಘಳಿಗೆಯನ್ನೊಮ್ಮೆ ನೆನಪಿಸಿಕೊಂಡರೆ ಎಂಥವರಿಗೂ ರೋಮಾಂಚನವಾಗುತ್ತದೆ! ಅನೇಕ ವಿಶ್ವಕಪ್‌ ಪಂದ್ಯಗಳನ್ನು ಆಡಿದ್ದರೂ ಭಾರತ ಅಲ್ಲಿಯವರೆಗೆ ಒಂದೇ ಒಂದು ವಿಶ್ವಕಪ್‌ ಗೆಲ್ಲಲು ಸಾಧ್ಯವಾಗಿರಲಿಲ್ಲ. 1983ರಲ್ಲಿ ಕೂಡ ಭಾರತ ಗೆಲ್ಲಲು ಸಾಧ್ಯವಿಲ್ಲ ಎಂದು ದೇಶದ ಜನರಲ್ಲಿ ಅಭಿಪ್ರಾಯವಿತ್ತು. ಭಾರತದ ತಂಡ ದುರ್ಬಲವಾಗಿದೆ ಎಂದು ತಂಡದ ಆಟಗಾರರ ಮೇಲಿನ ಭರವಸೆಯನ್ನು ಕಳೆದುಕೊಂಡಿದ್ದರು. ಆದರೆ ಕಪಿಲ್‌ ದೇವ್‌ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಮಾತ್ರ ಎಲ್ಲಾ ಟೀಕೆಗಳನ್ನು, ನಿರೀಕ್ಷೆಗಳನ್ನೂ ಮೀರಿ ವಿಶ್ವಕಪ್‌ ಕೈಯಲ್ಲಿ ಎತ್ತಿ ಹಿಡಿದಾಗ ಇಡೀ ದೇಶದಲ್ಲಿ ಹಬ್ಬದ ವಾತಾವರಣವಿತ್ತು. ಈಗ ಮತ್ತೊಮ್ಮೆ ಅದೇ ಹಬ್ಬದ ವಾತಾವರಣ ಮೂಡಿದೆ!

ಭಾರತದ ಬ್ಯಾಡ್‌ಮಿಂಟನ್‌ ಪುರುಷರ ತಂಡದ ಐತಿಹಾಸಿಕ ʼಥಾಮಸ್‌ ಕಪ್‌ʼ ಗೆಲುವು ಈ ಸಂಭ್ರಮಕ್ಕೆ ಕಾರಣವಾಗಿದೆ. ಥಾಮಸ್‌ ಕಪ್‌ ಗೆಲ್ಲಲು ಭಾರತ ಸೋಲಿಸಿದ್ದು ಸಾಮಾನ್ಯ ತಂಡವನ್ನಲ್ಲ! 14 ಬಾರಿ ಚಾಂಪಿಯನ್‌ ಆದ ಇಂಡೋನೆಷಿಯಾ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದೆ. ಇನ್ನೊಮ್ಮೆ ಹೋಲಿಕೆ ಮಾಡುವುದಾದರೆ, ಕ್ರಿಕೆಟ್‌ನಲ್ಲಿ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ರೀತಿಯಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಇಂಡೋನೇಷಿಯಾ ತಂಡ ಪ್ರಬಲವಾಗಿದೆ.

1983 ಹಾಗೂ 2022

1983ರಲ್ಲಿ ಭಾರತ ಕ್ರಿಕೆಟ್‌ ವಿಶ್ವಕಪ್‌ ಹಾಗೂ 2022ರ ಬ್ಯಾಡ್‌ಮಿಂಟನ್‌ ಥಾಮಸ್‌ ಕಪ್‌ ನಡುವೆ ಏನಾದರು ಸಾಮ್ಯತೆ ಇದೆಯೇ?

  1. 1983ರಲ್ಲಿ ಭಾರತ ವಿಶ್ವಕಪ್‌ ಗೆಲ್ಲುತ್ತದೆ ಎಂಬ ಭರವಸೆ ಇರಲಿಲ್ಲ. ಈಗಲೂ ಭಾರತ ತಂಡ ಥಾಮಸ್‌ ಕಪ್‌ ಗೆಲ್ಲಬೇಕು ಎಂಬ ಆಸೆಯಿತ್ತು. ಅದರೆ ಗೆಲ್ಲುತ್ತದೆ ಎಂಬ ಖಚಿತ ಭರವಸೆ ಜನರಲ್ಲಿ ಇರಲಿಲ್ಲ. ಆದರೆ, ಎರಡೂ ಸಮಯದಲ್ಲಿ ಭಾರತ ತಂಡ ಜನರ ಭರವಸೆಯನ್ನು ಮೀರಿ ಚಾಂಪಿಯನ್‌ ಆಗಿದ್ದಾರೆ.
  2. ಆಗ ಕ್ರಿಕೆಟ್‌ ಫೈನಲ್‌ ಪಂದ್ಯದಲ್ಲಿ ಭಾರತ ಎದುರಾಗಿದ್ದು ವೆಸ್ಟ್‌ ಇಂಡೀಸ್‌ ತಂಡ. ಅಂದಿನ ಚಾಂಪಿಯನ್.‌ ಆ ತಂಡವನ್ನು ಸೋಲಿಸುವುದು ಸಿಂಹಸ್ವಪ್ನವೇ ಆಗಿತ್ತು. ಈ ಬಾರಿ ಬ್ಯಾಡ್‌ಮಿಂಟನ್‌ನಲ್ಲಿ ಭಾರತ ಎದುರಿಸಬೇಕಾಗಿದ್ದು ಇಂಡೋನೇಷಿಯಾ ತಂಡ. 14 ಬಾರಿ ಚಾಂಪಿಯನ್‌ ಆಗಿರುವ ಲೆಜೆಂಡರಿ ತಂಡ ಅದು. ಎರಡೂ ಬಾರಿ ಭಾರತ ಅಸಾಧ್ಯವನ್ನು ಸಾಧಿಸಿದೆ.

ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ಎರಡೂ ಪಂದ್ಯಗಳು ಮಾದರಿಯಾಗಿ ನಿಲ್ಲುತ್ತವೆ. ಒಂದು ಪಂದ್ಯವನ್ನು ಗೆಲ್ಲಲು ಮುಖ್ಯವಾಗಿ ʼಗೆಲ್ಲಲೇ ಬೇಕುʼ ಎಂಬ ಛಲ ಬೇಕು ಎಂದು ಈ ಆಟಗಾರರು ತೋರಿಸಿಕೊಟ್ಟಿದ್ದಾರೆ.

ಐತಿಹಾಸಿಕ ಪಂದ್ಯ

ಥಾಮಸ್‌ ಕಪ್‌ನ ಫೈನಲ್‌ ಪಂದ್ಯ. ಭಾರತ ಮತ್ತು ಇಂಡೋನೇಷಿಯಾ ಮುಖಾಮುಖಿಯಾದ ರೋಮಾಂಚಕ ಘಳಿಗೆ. ಪಂದ್ಯವನ್ನು ವೀಕ್ಷಿಸುವವರಲ್ಲಿ ಯಾರು ಗೆಲ್ಲಬಹುದು ಎಂಬ ಕುತೂಹಲ. ಭಾರತೀಯರ ಕಣ್ಣುಗಳಲ್ಲಿ ಭಾರತವು ಗೆಲ್ಲಬೇಕೇಂಬ ನಿರೀಕ್ಷೆ. ಈ ವಾತಾವರಣದ ನಡುವೆ ಮೊದಲ ಪಂದ್ಯದ ಆರಂಭ; ಭಾರತದ ಲಕ್ಷ್ಯ ಸೇನ್‌ ಹಾಗೂ ಇಂಡೊನೆಷಿಯಾದ ಆಂಥೊನಿ ಗಿಂಟಿಂಗ್‌ ನಡುವಿನ ಪಂದ್ಯ.

ಮೊದಲ ಪಂದ್ಯದಲ್ಲಿ ಅಂಥೊನಿ 21-8 ಅಂತರದಲ್ಲಿ ಲಕ್ಷ್ಯ ಸೇನ್‌ ಅವರನ್ನು ಸೋಲಿಸಿದರು. ಆದರೆ 2ನೇ ಪಂದ್ಯದಲ್ಲಿ ಲಕ್ಷ್ಯ ಸೇನ್‌ ಕಮ್‌ ಬ್ಯಾಕ್‌ ಅದ್ಭುತವಾಗಿತ್ತು. 21-17 ಅಂತರದಲ್ಲಿ ಅಂಥೊನಿ ಅವರನ್ನು ಸೋಲಿಸಿದರು. ಮೂರನೇ ಪಂದ್ಯ ನಿರ್ಣಾಯಕ ಪಂದ್ಯ. ಎರಡೂ ತಂಡಗಳಿಗೆ ಮಾಡು ಇಲ್ಲವೇ ಮಡಿ ಸನ್ನಿವೇಶ ಎದುರಾಗಿತ್ತು. ಆದರೆ, ಮೂರನೇ ಪಂದ್ಯವನ್ನು ಲಕ್ಷ್ಯ ಸೇನ್‌ ಜಯ ಸಾಧಿಸಿದರು. 21-16 ಸ್ಕೋರ್‌ ಅಂತರ.

ಭಾರತ 1-0 ಲೀಡ್‌

ಮೊದಲ ಡಬಲ್ಸ್‌ ಪಂದ್ಯ
ಭಾರತದ ಸಾತ್ವಿಕ್‌ ಸೈರಾಜ ರಂಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಜೋಡಿಯಾದರೆ, ಇಂಡೊನೆಷಿಯಾದ ಮೊಹಮ್ಮದ್‌ ಎಹ್ಸಾನ್‌ ಹಾಗೂ ಕೆವಿನ್‌ ಸುಕಮುಲಿಯೊ ಜೋಡಿಯಾಗಿ ಮುಖಾಮುಖಿಯಾದರು. ಮೂರೂ ಪಂದ್ಯಗಳು ರೋಚಕವಾಗಿತ್ತು. ಎರಡೂ ತಂಡಗಳ ನಡುವೆ ನೆಕ್ ಟು ನೆಕ್‌ ಫೈಟ್‌ ಇತ್ತು. ಆದರೆ ಮೂರು ಪಂದ್ಯದಲ್ಲಿ ಗೆಲುವು ಭಾರತದ ತಂಡದ್ದಾಗಿತ್ತು.
ಸ್ಕೋರ್:‌ 18-21, 23-21, 21-19

ಭಾರತ 2-0 ಲೀಡ್

ಇನ್ನು ಫೈನಲ್‌ ಪಂದ್ಯ. ಭಾರತದ ಕಿಡಂಬಿ ಶ್ರೀಕಾಂತ್‌ ಹಾಗೂ ಜೊನಾಟನ್‌ ಕ್ರಿಸ್ಟೀ ನಡುವಿನ ಅಂತಿಮ ಪಂದ್ಯ. 21-15, 23-21, 23-21 ಅಂತರದಲ್ಲಿ ಭಾರತ ಇಂಡೊನೇಷಿಯಾ ತಂಡವನ್ನು ಸೋಲಿಸಿ ಥಾಮಸ್‌ ಕಪ್‌ ಚರಿತ್ರೆಯಲ್ಲಿ ಹೊಸ ಇತಿಹಾಸ ಬರೆದಿದೆ.

ಚಾಂಪಿಯನ್‌ಶಿಪ್‌ ವಿಜೇತರಿಗೆ ಪ್ರಧಾನಮಂತ್ರಿ ಮೋದಿಯವರು ಕೂಡಲೇ ದೂರವಾಣಿ ಮೂಲಕ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ.

ಇದನ್ನೂ ಓದಿ: highest paid: ಲಿಯಾನಲ್‌ ಮೆಸ್ಸಿಗೆ ಒಂದು ವರ್ಷಕ್ಕೆ ₹1000 ಕೋಟಿ ಸಂಭಾವನೆ!

Exit mobile version