ಕೊಲಂಬೊ: ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ತುರ್ತು ಪರಿಸ್ಥಿತಿ (Lanka On Fire ) ಬಿಗಡಾಯಿಸುತ್ತಿದ್ದು, ದಿನದಿಂದ ದಿನಕ್ಕೆ ಜನಜೀವನ ದುಸ್ತರವಾಗುತ್ತಿದೆ. ಪ್ರಮುಖವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ತಲೆದೋರಿದ್ದು, ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡುವುದೂ ಕಷ್ಟ ಎನಿಸಿದೆ. ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರ ಚಾಮಿಕಾ ಕರುಣಾರತ್ನೆಗೂ ಇದೇ ಸಮಸ್ಯೆ ಎದುರಾಗಿದ್ದು, ಕಾರಿಗೆ ಪೆಟ್ರೋಲ್ ಸಿಗದೇ ಅಭ್ಯಾಸಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
೨೬ ವರ್ಷದ ಯುವ ಆಟಗಾರ ಚಾಮಿಕಾ ಕರುಣಾರತ್ನೆ ಮುಂಬರುವ ಏಷ್ಯಾ ಕಪ್‌ಗೆ ಅಭ್ಯಾಸ ನಡೆಸುವ ಉದ್ದೇಶ ಹೊಂದಿದ್ದಾರೆ. ಆದರೆ ಅವರಿಗೆ ಕ್ಲಬ್ ಹಾಗೂ ಬೇರೆ ಬೇರೆ ಗ್ರೌಂಡ್‌ಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಪೆಟ್ರೋಲ್ ಸಿಗದ ಕಾರಣ ಮನೆಯಿಂದ ಹೊರಗೆ ಕಾಲಿಡಲೂ ಸಾಧ್ಯವಾಗುತ್ತಿಲ್ಲ.
ಚಾಮಿಕಾ ಅವರು ಎಎನ್‌ಐ ಜತೆ ಮಾತನಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಣಗೊಳ್ಳುತ್ತಿದೆ “ಏಷ್ಯಾ ಕಪ್ ಶ್ರೀಲಂಕಾದಲ್ಲಿ ನಡೆಯಬೇಕಾಗಿದೆ. ಅಲ್ಲದೆ, ನಾನು ಕೊಲಂಬೊಗೆ ಅಭ್ಯಾಸಕ್ಕೆ ತೆರಳಬೇಕಾಗಿದೆ. ಅಥವಾ ಕ್ಲಬ್‌ಗೆ ನೆಟ್ ಪ್ರಾಕ್ಟೀಸ್‌ಗೆ ತೆರಳಬೇಕು. ಆದರೆ ಎರಡು ದಿನಗಳಿಂದ ಪೆಟ್ರೋಲ್ ಬಂಕ್‌ನಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದೇನೆ. ಇದೀಗ ೧೦೦೦೦ ರೂಪಾಯಿಗೆ ಪೆಟ್ರೋಲ್ ದೊರಕಿದೆ. ಅದೂ ಒಂದೆರಡು ದಿನಗಳಿಗೆ ಸಾಕಾಗಬಹುದು. ಮುಂದೇನು ಮಾಡುವುದು ಗೊತ್ತಿಲ್ಲʼ ಎಂದು ಚಾಮಿಕಾ ಅವರು ಹೇಳಿದ್ದಾರೆ.
ಭಾರತಕ್ಕೆ ಥ್ಯಾಂಕ್ಸ್
“ಭಾರತ ನಮ್ಮ ಸಹೋದರ ದೇಶ. ನಾವು ಸಂಕಷ್ಟದಲ್ಲಿ ಇದ್ದ ವೇಳೆ ಭಾರತ ದೇಶ ನಮ್ಮ ನೆರವಿಗೆ ಬಂದಿದೆ. ನಮಗೆ ಸಾಕಷ್ಟು ನೆರವು ನೀಡಿದೆ. ಅವರಿಗೆ ಧನ್ಯವಾದಗಳು,ʼʼ ಎಂದು ಚಾಮಿಕಾ ಹೇಳಿದ್ದಾರೆ.
ಇದನ್ನೂ ಓದಿ | Lanka on fire| ಶ್ರೀಲಂಕಾ ಬಿಟ್ಟು ಹೋಗದಂತೆ ಮಾಜಿ ಪ್ರಧಾನಿ ಮಹೀಂದ್ರಾ ರಾಜಪಕ್ಸಗೆ ನಿರ್ಬಂಧ