ವಾಷಿಂಗ್ಟನ್: ಸರ್ಬಿಯಾ ಟೆನಿಸ್ ದಂತಕತೆ ನೊವಾಕ್ ಜೋಕೊವಿಕ್ ಅವರು ಮನಮೋಹಕ ಆಟದ ಜತೆಗೆ ವಿನಮ್ರ ವ್ಯಕ್ತಿತ್ವ, ಸರಳ ಸ್ವಭಾವದಿಂದಲೂ ಖ್ಯಾತಿ ಗಳಿಸಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ನ್ಯೂಯಾರ್ಕ್‌ನ ಅರ್ಥುರ್ ಆ್ಯಶ್ ಸ್ಟೇಡಿಯಂನಲ್ಲಿ (Arthur Ashe Stadium) ನಡೆದ ಯುಎಸ್ ಓಪನ್‌ನ (US Open 2023) ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಗೆಲುವು ಸಾಧಿಸಿದ ಬಳಿಕ ಅಮೆರಿಕ ಬಾಸ್ಕೆಟ್‌ಬಾಲ್ ದಂತಕತೆ ಕೋಬ್ ಬ್ರ್ಯಾಂಟ್ (Kobe Bryant) ಅವರಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.
ಹೌದು, ಅಮೆರಿಕ ವೃತ್ತಿಪರ ಬಾಸ್ಕೆಟ್‌ಬಾಲ್ ಇತಿಹಾಸದ ಅಗ್ರಜರಾಗಿರುವ ಕೋಬ್ ಬ್ರ್ಯಾಂಟ್ ಅವರ ಭಾವಚಿತ್ರ ಇರುವ, ಬ್ಲ್ಯಾಕ್ ಮಾಂಬಾ ಎಂದು ಮುದ್ರಿಸಿರುವ ಟಿ ಶರ್ಟ್ ಧರಿಸುವ ಮೂಲಕ ನೊವಾಕ್ ಜೋಕೊವಿಕ್ ಅವರು ಅಮೆರಿಕನ್ನರ ಮನಗೆದ್ದರು. ವಿಶ್ವದಲ್ಲೇ ಅತ್ಯಂತ ವಿಷಕಾರಿ ಹಾವಾಗಿರುವ ‘ಬ್ಲ್ಯಾಕ್ ಮಾಂಬಾ’ ಹೆಸರಿನಿಂದಲೇ ಕೋಬ್ ಬ್ರ್ಯಾಂಟ್ ಖ್ಯಾತಿ ಗಳಿಸಿದ್ದರು. ಹಾಗಾಗಿ ಬ್ಲ್ಯಾಕ್ ಮಾಂಬಾ ಎಂದು ಮುದ್ರಿಸಿರುವ ಟಿ ಶರ್ಟ್ ಧರಿಸುವ ಮೂಲಕ ಜೋಕೊವಿಕ್ ಗಮನ ಸೆಳೆದರು.
ʼಬ್ಲ್ಯಾಕ್ ಮಾಂಬಾʼಗೆ ಜೋಕೊ ಗೌರವ
ಕೋಬ್ ಬ್ರ್ಯಾಂಟ್ ಅವರು ಬಾಸ್ಕೆಟ್‌ಬಾಲ್ ಆಡುವಾಗ 24 ಎಂಬ ಅಂಕಿ ಮುದ್ರಿಸಿದ ಟಿ ಶರ್ಟ್ ಧರಿಸುತ್ತಿದ್ದರು. ಇತ್ತ ನೊವಾಕ್ ಜೋಕೊವಿಕ್ ಅವರು 24ನೇ ಗ್ರ್ಯಾಂಡ್‌ಸ್ಲ್ಯಾಮ್ ಗೆಲ್ಲುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಈ 24 ಅಂಕಿಯ ನಂಟಿನ ಪ್ರತೀಕವಾಗಿಯೂ ಜೋಕೊವಿಕ್ ಅವರು ಕೋಬ್ ಬ್ರ್ಯಾಂಟ್ ಫೋಟೊ, 24 ಅಂಕಿಯ ಮುದ್ರಣವಿರುವ ಟಿ ಶರ್ಟ್ ಧರಿಸಿದ್ದರು. ಆ ಮೂಲಕ ಅಮೆರಿಕ ದಂತಕತೆಗೆ ಗೌರವ ಸಲ್ಲಿಸಿದರು. 20 ವರ್ಷ ಬಾಸ್ಕೆಟ್‌ಬಾಲ್ ಆಡಿ ಅಮೆರಿಕದ ಮನೆಮಾತಾಗಿದ್ದ ಕೋಬ್ ಬ್ರ್ಯಾಂಟ್ ಅವರು 2020ರಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾಗಿದ್ದು ದುರಂತ. ಕೋಬ್ ಬ್ರ್ಯಾಂಟ್ ಎರಡು ಬಾರಿ ಒಲಿಂಪಿಕ್ಸ್ ಗೆಲುವಿನ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: US Open 2023: ಯುಎಸ್ ಓಪನ್ ಗೆದ್ದು ದಾಖಲೆ ಬರೆದ ನೊವಾಕ್ ಜೋಕೊವಿಕ್; ಇತಿಹಾಸಕ್ಕೆ ಇನ್ನೊಂದೇ ಹೆಜ್ಜೆ ಬಾಕಿ
ಅಮೆರಿಕ ಓಪನ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ನೊವಾಕ್ ಜೋಕೊವಿಕ್ ವಿಶಿಷ್ಟ ದಾಖಲೆ ಬರೆದಿದ್ದಾರೆ. ಟೆನಿಸ್ ಇತಿಹಾಸದಲ್ಲಿಯೇ ಅತಿಹೆಚ್ಚು ಗ್ರ್ಯಾನ್‌ಸ್ಲ್ಯಾಮ್‌ಗಳನ್ನು ಗೆದ್ದ ಮಾರ್ಗರೇಟ್ ಕೋರ್ಟ್ ಅವರ ದಾಖಲೆಯನ್ನು ಸರ್ಬಿಯಾ ಆಟಗಾರ ಸರಿಗಟ್ಟಿದ್ದಾರೆ. ಮಾರ್ಗರೇಟ್ ಕೋರ್ಟ್ ಅವರು 24 ಗ್ರ್ಯಾನ್‌ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದರು. ಈಗ ಜೋಕೊವಿಕ್ ಅವರು ಕೂಡ 24ನೇ ಗ್ರ್ಯಾನ್‌ಸ್ಲ್ಯಾಮ್ ಗೆಲ್ಲುವ ಮೂಲಕ ಟೆನಿಸ್ ದಂತಕತೆಯ ದಾಖಲೆ ಸರಿಗಟ್ಟಿದ್ದಾರೆ. ಇನ್ನೊಂದು ಗ್ರ್ಯಾನ್‌ಸ್ಲ್ಯಾಮ್ ಗೆದ್ದರೆ ನೊವಾಕ್ ಜೋಕೊವಿಕ್ ಸಾರ್ವಕಾಲಿಕ ದಾಖಲೆ ಬರೆಯಲಿದ್ದಾರೆ.