ನ್ಯೂಯಾರ್ಕ್: ಅದ್ಭುತ ಫಾರ್ಮ್ನಲ್ಲಿರುವ ಭಾರತದ ಅನುಭವಿ ಟೆನಿಸ್ ಆಟಗಾರ ರೋಹನ್ ಬೋಪಣ್ಣ(Rohan Bopanna) ಮತ್ತು ಅವರ ಅವರ ಜತೆಗಾರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್(Matthew Ebden) ಯುಎಸ್ ಓಪನ್ 2023ರ(US Open 2023) ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಪ್ರಶಸ್ತಿಯೊಂದನ್ನು ಖಾತ್ರಿಪಡಿಸಿದ್ದಾರೆ. ಗೆದ್ದರೆ ಈ ಟೂರ್ನಿಯಲ್ಲಿ ಐತಿಹಾಸಿಕ ಪ್ರಶಸ್ತಿಯೊಂದು ಬೋಪಣ್ಣ ಪಾಲಿಗೆ ಒಲಿಯಲಿದೆ.
ಪಾಕ್ ಜತೆಗಾರನೊಂದಿಗೆ ಆಟ
2010ರ ಯುಎಸ್ ಓಪನ್‌ನಲ್ಲಿ ಬೋಪಣ್ಣ ಅವರು ಪಾಕಿಸ್ತಾನದ ಐಸಾಮ್-ಉಲ್-ಹಕ್ ಖುರೇಷಿ ಜತೆಗೆ ಕಣಕ್ಕಿಳಿದು ಈ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದರು. ಆದರೆ ಇಲ್ಲಿ 7–6(7–5), 7–6(7–4) ಅಂತರದಿಂದ ಸೋತು ರನ್ನರ್ ಅಪ್ಗೆ ತೃಪ್ತಿಪಟ್ಟಿದ್ದರು. ಇದೀಗ ಎರಡನೇ ಪ್ರಯತ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಇರಾದೆಯಲ್ಲಿದ್ದಾರೆ.
ಗುರುವಾರ ತಡರಾತ್ರಿ ನಡೆದ ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಇಂಡೋ-ಆಸೀಸ್ ಜೋಡಿ ಫ್ರೆಂಚ್ ಜೋಡಿಯಾದ ಪಿಯರೆ-ಹ್ಯೂಗ್ಸ್ ಹರ್ಬರ್ಟ್ ಮತ್ತು ನಿಕೋಲಸ್ ಮಹುತ್ ವಿರುದ್ಧ 7-6 (3), 6-2 ನೇರ ಸೆಟ್‌ಗಳ ಜಯದೊಂದಿಗೆ ಫೈನಲ್ಗೆ ಲಗ್ಗೆಯಿಟ್ಟರು. ಮೊದಲ ಸೆಟ್ನಲ್ಲಿ ಟ್ರೈಬ್ರೇಕರ್ ಹೋರಾಟ ನಡೆಯಿತು. ದ್ವಿತೀಯ ಸೆಟ್ನಲ್ಲಿ ಆಕ್ರಮಣಕಾರಿ ಆಟವಾಡಿದ ಬೋಪಣ್ಣ-ಎಬ್ಡೆನ್ ಎದುರಾಳಿಗೆ ಸಂಪೂರ್ಣ ಒತ್ತಡ ಹಾಕಿ ಪಂದ್ಯವನ್ನು ಗೆದ್ದರು. ಈ ಪಂದ್ಯ ಒಂದು ಗಂಟೆ 34 ನಿಮಿಷಗಳಲ್ಲಿ ಮುಕ್ತಾಯ ಕಂಡಿತು. ಫೈನಲ್‌ನಲ್ಲಿ ಬೋಪಣ್ಣ ಮತ್ತು ಎಬ್ಡೆನ್ ತಂಡ ಮೂರನೇ ಶ್ರೇಯಾಂಕದ ಯುಎಸ್‌ಎ ರಾಜೀವ್ ರಾಮ್ ಮತ್ತು ಗ್ರೇಟ್ ಬ್ರಿಟನ್‌ನ ಜೋ ಸಾಲಿಸ್‌ಬರಿ ವಿರುದ್ಧ ಸೆಣಸಾಡಲಿದ್ದಾರೆ.
ಅತ್ಯಂತ ಹಿರಿಯ ಆಟಗಾರ
43 ವರ್ಷದ ಕೊಡಗಿನವರಾದ ರೋಹನ್ ಬೋಪಣ್ಣ ಅವರು ಗ್ರ್ಯಾಂಡ್ ಸ್ಲಾಮ್ ಡಬಲ್ಸ್ ಫೈನಲ್ ತಲುಪಿದ ಅತ್ಯಂತ ಹಿರಿಯ ಆಟಗಾರ ಎಂಬ ವಿಶ್ವ ದಾಖಲೆ ಬರೆದಿದ್ದಾರೆ. ಇದೇ ವರ್ಷ ದೋಹಾ ಮತ್ತು ಇಂಡಿಯನ್ ವೆಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿರುವ ಬೋಪಣ್ಣ-ಎಬ್ಡೆನ್ ಜೋಡಿ ಇದೀಗ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಎರಡು ತಿಂಗಳ ಹಿಂದೆ ನಡೆದಿದ್ದ ವಿಂಬಲ್ಡನ್ ಟೂರ್ನಿಯ(Wimbledon 2023) ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿತ್ತು. ಆದರೆ ಇಲ್ಲಿ ಅಗ್ರ ಶ್ರೇಯಾಂಕದ ನೆದರ್ಲೆಂಡ್ಸ್-ಬ್ರಿಟಿಷ್ ಜೋಡಿಯಾದ ವೆಸ್ಲೆ ಕೂಲ್‌ಹೋಫ್ ಮತ್ತು ನೀಲ್ ಸ್ಕಾಪ್‌ಸ್ಕಿ ಎದುರು ಸೋಲು ಕಂಡಿದ್ದರು.
ಇದನ್ನೂ ಓದಿ US Open 2023: ಯುಎಸ್ ಓಪನ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಬೋಪಣ್ಣ-ಎಬ್ಡೆನ್ ಜೋಡಿ
ಕ್ವಾರ್ಟರ್-ಫೈನಲ್ ಹಣಾಹಣಿಯಲ್ಲಿ ಇಂಡೋ-ಆಸೀಸ್ ಜೋಡಿ ಅಮೆರಿಕಾದ 15ನೇ ಶ್ರೇಯಾಂಕದ ಜೋಡಿಯಾದ ನಥಾನಿಯಲ್ ಲ್ಯಾಮನ್ಸ್ ಮತ್ತು ಜಾಕ್ಸನ್ ವಿಥ್ರೋ ಅವರನ್ನು 7-6(10), 6-1 ನೇರ ಸೆಟ್‌ಗಳ ಅಂತರದಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದರು.