ಜೈಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ 16ನೇ ಆವೃತ್ತಿಯ 60ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 112 ರನ್ಗಳ ಭರ್ಜರಿ ವಿಜಯ ಸಾಧಿಸಿದೆ. ಈ ಮೂಲಕ ಫಾಫ್ ಡು ಪ್ಲೆಸಿಸ್ ಬಳಗದ ಪ್ಲೇಆಫ್ ಪ್ರವೇಶದ ಕನಸು ಮತ್ತೆ ಚಿಗುರಿದೆ. ಈ ಪಂದ್ಯಕ್ಕೆ ಮೊದಲು ಏನೇ ಮಾಡಿದರು ಆರ್ಸಿಬಿ ಪ್ಲೇಆಫ್ಗೆ ಏರುವುದಿಲ್ಲ ಎಂಬ ಸ್ಥಿತಿ ಇತ್ತು. ಆದರೆ, ಸಂಜು ಸ್ಯಾಮ್ಸನ್ ಪಡೆಯ ವಿರುದ್ಧ ದೊರಕಿದ ಬೃಹತ್ ರನ್ಗಳ ಅಂತರದ ಜಯದಿಂದ ಪರಿಸ್ಥಿತಿ ಬದಲಾಗಿದೆ. ಆರ್ಸಿಬಿಯ ಪ್ಲೇಆಫ್ ಕನಸು ಜೀವಂತವಾಗಿ ಉಳಿದಿದೆ.
ರಾಜಸ್ಥಾನ್ ವಿರುದ್ಧದ ಪಂದ್ಯದ ಬಳಿಕ ಆರ್ಸಿಬಿ ತಂಡ ಆಡಿರುವ 12 ಪಂದ್ಯಗಳಲ್ಲಿ 6 ಗೆಲವು ಸಾಧಿಸಿದೆ 12 ಅಂಕಗಳನ್ನು ಪಡೆದುಕೊಂಡಿದೆ. ಇದೇ ವೇಳೆ ದೊಡ್ಡ ಅಂತರದ ಗೆಲುವು ಪಡೆದ ಕಾರಣ ನೆಟ್ರನ್ರೇಟ್ (+0.166) ಪ್ಲಸ್ನತ್ತ ತಿರುಗಿದೆ. ಇದು 13 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿರುವ ರಾಜಸ್ಥಾನ್ ರಾಯಲ್ಸ್ (+0.140) ತಂಡಕ್ಕಿಂತಲೂ ಮುಂದಿದೆ. ಈ ಕಾರಣಕ್ಕೆ ರಾಜಸ್ಥಾನ್ ತಂಡಕ್ಕಿಂತ ಆರ್ಸಿಬಿಗೆ ಪ್ಲೇಆಫ್ ಚಾ್ನ್ಸ್ ಹೆಚ್ಚಿದೆ.
ಇಷ್ಟಕ್ಕೆ ಮುಗಿದಿಲ್ಲ. ಆರ್ಸಿಬಿ ತಂಡ ಇದುವರೆಗೆ 12 ಪಂದ್ಯಗಳನ್ನು ಆಡಿರುವ ಕಾರಣ ಇನ್ನು ಎರಡು ಪಂದ್ಯಗಳು ಬಾಕಿ ಉಳಿದಿದೆ. ರಾಜಸ್ಥಾನ್ ತಂಡಕ್ಕೆ ಇನ್ನೊಂದು ಪಂದ್ಯ ಮಾತ್ರ ಇದೆ. ಹೀಗಾಗಿ ಆರ್ಸಿಬಿ ಮುಂದಿನೆರಡು ಪಂದ್ಯಗಳಲ್ಲಿ ಗೆದ್ದರೆ ಪ್ಲೇಆಫ್ ಚಾನ್ಸ್ ಇದೆ ಎಂದು ಹೇಳಬಹುದು. ಆದರೆ ಖಾತರಿಯಲ್ಲ. ಇನ್ನೆರಡು ಪಂದ್ಯಗಳನ್ನು ಗೆದ್ದರೆ ಆರ್ಸಿಬಿ ತಂಡದ ಒಟ್ಟು ಅಂಕ 16 ಆಗುತ್ತದೆ. ಪ್ಲೇಆಫ್ ರೇಸ್ನಲ್ಲಿರುವ ರಾಜಸ್ಥಾನ್ ತಂಡ ಉಳಿದಿರುವ ಇನ್ನೊಂದು ಪಂದ್ಯದಲ್ಲಿ ಗೆದ್ದರೆ ಒಟ್ಟು ಅಂಕ 14 ಆಗುತ್ತದೆ. ಅಲ್ಲಿಗೆ ರಾಜಸ್ಥಾನ್ ಔಟ್. ಹಾಗೆಂದು ಆರ್ಸಿಬಿ ತೇರ್ಗಡೆ ಆಯಿತು ಎಂದರ್ಥವಲ್ಲ. ಲಕ್ನೊದ ಸೋಲು ಗೆಲುವಿನ ಮೂಲಕ ಆರ್ಸಿಬಿ ಭವಿಷ್ಯ ನಿರ್ಧಾರವಾಗಲಿದೆ.
ಇದನ್ನೂ ಓದಿ : IPL 2023: ಆರ್ಸಿಬಿ ವಿರುದ್ಧ ರಾಜಸ್ಥಾನ್ಗೆ ಹೀನಾಯ ಸೋಲು
ಪ್ರಸ್ತುತ ಆರ್ಸಿಬಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಲಕ್ನೊ ಸೂಪರ್ ಜೈಂಟ್ಸ್ ತಂಡ 12 ಪಂದ್ಯಗಳಲ್ಲಿ 6 ಗೆಲುವು ಹಾಗೂ ಒಂದು ಪಂದ್ಯ ಮಳೆಯಿಂದ ರದ್ದಾಗ ಕಾರಣ ಅಂಕ ಹಂಚಿಕೆಯಲ್ಲಿ ಪಡೆದ 1 ಅಂಕ ಸೇರಿದಂತೆ ಒಟ್ಟು 13 ಅಂಕಗಳನ್ನು ಕ್ರೊಡೀಕರಿಸಿಕೊಂಡಿದೆ. ಅಲ್ಲದೆ, ನೆಟ್ರನ್ರೇಟ್ (+0.309) ಆರ್ಸಿಬಿಗಿಂತ ಮುಂದಿದೆ. ಈ ತಂಡ ಮುಂದಿನೆರಡು ಪಂದ್ಯಗಳಲ್ಲಿ ಗೆದ್ದರೆ ಆರ್ಸಿಬಿ ಕನಸು ನುಚ್ಚುನೂರು ಗ್ಯಾರಂಟಿ. ಈ ತಂಡದ ಒಟ್ಟು ಅಂಕ 17ಕ್ಕೆ ಏರುತ್ತದೆ.
ಆರ್ಸಿಬಿ ತಂಡಕ್ಕೆ ಮತ್ತೊಂದು ಸವಾಲು ಮುಂಬಯಿ ಇಂಡಿಯನ್ಸ್. ಈ ತಂಡ ಆಡಿರುವ 12 ಪಂದ್ಯಗಳಲ್ಲಿ 7ರಲ್ಲಿ ಗೆದ್ದು 14 ಅಂಕಗಳನ್ನು ಗೆದ್ದುಕೊಂಡಿದೆ. ಆದರೆ, ರನ್ರೇಟ್ ಮೈನಸ್ (-0.117) ಇದೆ. ಒಂದು ವೇಳೆ ಮುಂಬಯಿ ತನ್ನೆರಡು ಪಂದ್ಯಗಳಲ್ಲಿ ಸೋತರೆ ಆರ್ಸಿಬಿಗೆ ಅವಕಾಶ ಸುಲಭ. ಆದರೆ, ಒಂದರಲ್ಲಿ ಗೆದ್ದರೂ ಮತ್ತೆ ಪೈಪೋಟಿ. ಮುಂಬಯಿಗೆ ಒಂದು ಪಂದ್ಯದಲ್ಲಿ ಲಕ್ನೊ ಎದುರಾಳಿ. ಆರ್ಸಿಬಿ ತಂಡ ಮುಂದಿನೆರಡು ಪಂದ್ಯಗಳಲ್ಲಿ ಗೆದ್ದು, ಮುಂಬಯಿ ತಂಡ ಲಕ್ನೊ ತಂಡವನ್ನು ಸೋಲಿಸಿದರೆ ಕನಿಷ್ಠ ಪಕ್ಷ ನಾಲ್ಕನೇ ತಂಡವಾಗಿ ಪ್ಲೇಆಫ್ ಅವಕಾಶ ಖಾತರಿ. ಮುಂಬಯಿ ಮತ್ತೊಂದು ಪಂದ್ಯದಲ್ಲಿ ಎಸ್ಆರ್ಎಚ್ ಎದುರಾಳಿ.
ಕೊನೆಯದಾಗಿ ಪಂಜಾಬ್ ಕಿಂಗ್ಸ್ ತಂಡವೂ 12 ಪಂದ್ಯಗಳಲ್ಲಿ 12 ಪಾಯಿಂಟ್ ಗಳಿಸಿದೆ. ಆದರೆ, ರನ್ರೇಟ್ (-0.268) ಮೈನಸ್.