ನವ ದೆಹಲಿ : World Athletics Championships-೨೦೨೨ ಕೂಟದ ಜಾವೆಲಿನ್ ಎಸೆತದಲ್ಲಿ ಬೆಳ್ಳಿಯ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ ಅವರ ಊರಾದ ಪಾಣಿಪತ್‌ನಲ್ಲಿ ಸಂಭ್ರಮ ಮನೆ ಮಾಡಿದೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಂಗಾರದ ಪದಕ ಗೆಲ್ಲುವ ಮೂಲಕ ಭಾರತೀಯ ಕ್ರೀಡಾ ಇತಿಹಾಸದಲ್ಲಿ ಹೊಸ ಶಕೆಯನ್ನು ಆರಂಭಿಸಿದ್ದ ಹರಿಯಾಣದ ಮೂಲದ ಪ್ರತಿಭೆ ತಮ್ಮ ಸಾಧನೆಯ ಹಾದಿಯಲ್ಲಿ ಮುಂದುವರಿಯುತ್ತಲೇ ಇದ್ದಾರೆ. ಇತ್ತೀಚೆಗೆ ಸ್ಟಾಕ್‌ಹೋಮ್‌ನಲ್ಲಿ ನಡೆದಿದ್ದ ಡೈಮಂಡ್ ಲೀಗ್‌ನಲ್ಲಿ ಹೊರ ರಾಷ್ಟ್ರೀಯ ದಾಖಲೆ ಬರೆದು ಬೆಳ್ಳಿ ಗೆದಿದ್ದ ನೀರಜ್ ಇದೀಗ World Athletics Championships ಕೂಟದಲ್ಲೂ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದಾರೆ.
ನೀರಜ್ ಅವರ ಸ್ಪರ್ಧೆಯ ಹಿನ್ನೆಲೆಯಲ್ಲಿ ಕ್ರೀಡಾಭಿಮಾನಿಗಳು ಭಾನುವಾರ ಮುಂಜಾನೆ ಎದ್ದು ನೇರ ಪ್ರಸಾರ ನೋಡಿದರು. ಅಂತೆಯೇ ನೀರಜ್ ಅವರ ಹುಟ್ಟೂರಿನಲ್ಲಿ ಅವರ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಢರು ಕೂಡ ನೀರಜ್ ಪದಕ ಗೆಲ್ಲುವ ಸಂಭ್ರವನ್ನು ವೀಕ್ಷಿಸಿದರು. ಮೊದಲ ಎಸೆತ ವಿಫಲಗೊಳ್ಳುತ್ತಿದ್ದಂತೆ ಬೇಸರಗೊಂಡ ಗ್ರಾಮಸ್ಥರು ನಮ್ಮೂರ ಹುಡುಗ ಪದಕ ಗೆದ್ದೇ ಗೆಲ್ಲುವನೆಂಬ ಭರವಸೆ ವ್ಯಕ್ತಪಡಿಸಿದರು. ಅಂತೆಯೇ ಎರಡನೇ ಎಸೆತಕ್ಕೆ ಸುಧಾರಣೆ ಕಂಡ ಅವರು ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಬೆಳ್ಳಿ ಗೆದ್ದರು.
ನೀರಜ್ ಎರಡನೇ ಸ್ಥಾನ ಪಡೆದು ತ್ರಿವರ್ಣಧ್ವಜ ಎತ್ತಿ ಹಿಡಿಯುತ್ತಿದ್ದಂತೆ ಅವರ ಮನೆ ಮಂದಿಯೆಲ್ಲ ಕುಣಿದು ಕುಪ್ಪಳಿಸಿದರು. ಮಹಿಳೆಯರು ಚಪ್ಪಾಳೆ ತಟ್ಟಿ ನೃತ್ಯ ಮಾಡುವ ಮೂಲಕ ತಮ್ಮೂರಿನ ಪ್ರತಿಭೆಯ ಸಾಧನೆಯನ್ನು ಕೊಂಡಾಡಿದರು.
ನೀರಜ್ ತಾಯಿ ಸರೋಜ್ ಚೋಪ್ರಾ ಮಗನ ಸಾಧನೆ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದ್ದಾರೆ. “ನನ್ನ ಪುತ್ರನ ಅವಿರತ ಶ್ರಮಕ್ಕೆ ಬೆಲೆ ದೊರಕಿದೆ,” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ | World Athletics Championships | ಒಂದೇ ತಿಂಗಳಲ್ಲಿ ಎರಡು ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ