Site icon Vistara News

Vinesh Phogat: ಚಾಂಪಿಯನ್ಸ್‌ ಫೀಲ್ಡಿನಲ್ಲೇ ಉತ್ತರ ಕೊಡುತ್ತಾರೆ; ಒಲಿಂಪಿಕ್ಸ್‌ ಫೈನಲ್‌ ಪ್ರವೇಶಿಸಿದ ವಿನೇಶ್ ಫೋಗಟ್‌ಗೆ ರಾಹುಲ್‌ ಗಾಂಧಿ ವಿಷ್‌

Vinesh Phogat

ಪ್ಯಾರಿಸ್‌: ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ​ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ (Paris Olympics) 50 ಕೆಜಿ ಕುಸ್ತಿ ಪಂದ್ಯದಲ್ಲಿ ಫೈನಲ್‌ ಪ್ರವೇಶಿಸಿ ಇತಿಹಾಸ ಬರೆದಿದ್ದಾರೆ. ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಅವರು ಯುಸ್ನಿಲಿಸ್ ಗುಜ್ಮಾನ್ (Yusneylys Guzman) ಅವರನ್ನು 5-0 ಅಂತರದಿಂದ ಮಣಿಸಿ  ಒಲಿಂಪಿಕ್ಸ್‌ ಇತಿಹಾಸದಲ್ಲಿ ಫೈನಲ್‌ ಪ್ರವೇಶಿಸಿ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಈ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gndhi) ಅಭಿನಂದನೆ ಸಲ್ಲಿಸಿ, ಚಾಂಪಿಯನ್ಸ್‌ ಯಾವತ್ತೂ ಟೀಕೆಗಳಿಗೆ ಸಾಧನೆ ಮೂಲಕವೇ ಉತ್ತರ ಕೊಡುತ್ತಾರೆ ಎಂದಿದ್ದಾರೆ. ಆ ಮೂಲಕ ಕೇಂದ್ರ ಸರ್ಕಾರಕ್ಕೆ ಪರೋಕ್ಷವಾಗಿ ತಿವಿದಿದ್ದಾರೆ.

ವಿನೇಶ್ ಫೋಗಟ್ ಈ ಹಿಂದೆ ಭಾರತದ ಕುಸ್ತಿ ಫೆಡರೇಷನ್​ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು​ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕುಸ್ತಿಪಟುಗಳೊಂದಿಗೆ ಪ್ರತಿಭಟನೆ ನಡೆಸಿ ನಡು ರಸ್ತೆಯಲ್ಲೇ ಪೊಲೀಸರಿಂದ ಲಾಠಿ ಏಟು ತಿಂದು ಬಂಧನಕ್ಕೆ ಒಳಗಾಗಿದ್ದರು. ಪ್ರತಿಭಟನೆಗೆ ಕೇಂದ್ರ ಸರ್ಕಾರ ಯಾವುದೇ ರೀತಿಯಲ್ಲಿ ಸಹಕರಿಸದೇ ಇದ್ದಾಗ ಪ್ರಧಾನಿ ಮೋದಿಗೆ ಪತ್ರ ಬರೆದು ತಮಗೆ ಲಭಿಸಿದ್ದ ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿಯಾದ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದ (Kartavya Path) ಪಾದಚಾರಿ ಮಾರ್ಗದಲ್ಲಿ ತೊರೆದಿದ್ದರು.

ರಾಹುಲ್‌ ಗಾಂಧಿ ಹೇಳಿದ್ದೇನು?

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿನೇಶ್ ಫೋಗಟ್ ಅವರನ್ನು ಅಭಿನಂದಿಸಿದ ರಾಹುಲ್‌ ಗಾಂಧಿ, “ವಿನೇಶ್ ಒಂದೇ ದಿನದಲ್ಲಿ ವಿಶ್ವದ ಮೂವರು ಅಗ್ರ ಕುಸ್ತಿಪಟುಗಳನ್ನು ಸೋಲಿಸಿದ ನಂತರ ಇಡೀ ದೇಶವೇ ಭಾವುಕವಾಗಿದೆ. ವಿನೇಶ್ ಮತ್ತು ಅವರ ತಂಡದ ಸದಸ್ಯರ ಹೋರಾಟವನ್ನು ನಿರಾಕರಿಸಿದ ಮತ್ತು ಅವರ ಉದ್ದೇಶಗಳು ಮತ್ತು ಸಾಮರ್ಥ್ಯಗಳನ್ನು ಪ್ರಶ್ನಿಸಿದ ಎಲ್ಲರಿಗೂ ಉತ್ತರ ಸಿಕ್ಕಿದೆ. ಭಾರತ ರಕ್ತದ ಕಣ್ಣೀರು ಸುರಿಸುವಂತೆ ಮಾಡಿದ ಇಡೀ ಆಡಳಿತ ವ್ಯವಸ್ಥೆಯು ತನ್ನ ಧೈರ್ಯಶಾಲಿ ಮಗಳ ಮುಂದೆ ಈಗ ಕುಸಿದಿದೆ. ಚಾಂಪಿಯನ್‌ಗಳು ಯಾವತ್ತೂ ಮೈದಾನದಿಂದ ತಮ್ಮ ಉತ್ತರವನ್ನು ನೀಡುತ್ತಾರೆ. ವಿನೇಶ್‌ಗೆ ಶುಭ ಹಾರೈಕೆಗಳು. ಪ್ಯಾರಿಸ್‌ನಲ್ಲಿನ ನಿಮ್ಮ ಯಶಸ್ಸಿನ ಪ್ರತಿಧ್ವನಿಯು ದೆಹಲಿಯವರೆಗೆ ಸ್ಪಷ್ಟವಾಗಿ ಕೇಳಿಸುತ್ತಿದೆ” ಎಂದು ಬರೆದುಕೊಂಡಿದ್ದಾರೆ.

ಅಭಿನಂದನೆಗಳ ಪ್ರವಾಹ

2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಅಭಿನವ್‌ ಬಿಂದ್ರಾ ಕೂಡಾ ಅಭಿನಂದನೆ ಸಲ್ಲಿಸಿದ್ದಾರೆ. ವಿನೇಶ್ ಫೋಗಟ್ ಖಂಡಿತವಾಗಿಯೂ ಚಿನ್ನದ ಪದಕ ಗೆಲ್ಲುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ವಿಶೇಶ್‌ ಅವರ ಸಹೋದರಿ ಗೀತಾ ಫೋಗಟ್‌ ಕೂಡ ಅಭಿನಂದನೆ ಸಲ್ಲಿಸಿ ತಮ್ಮ ತಂದೆಯ ಕನಸು ನನಸಾಗಿದೆ ಎಂದಿದ್ದಾರೆ. ಜತೆಗೆ ದೇಶದ ವಿವಿಧ ಕ್ಷೇತ್ರಗಳ ಗಣ್ಯರೂ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: Paris Olympics: ಫೈನಲ್​ ಪ್ರವೇಶಿಸಿ ಐತಿಹಾಸಿಕ ಪದಕ ಖಾತ್ರಿಪಡಿಸಿದ ಕುಸ್ತಿಪಟು ವಿನೇಶ್ ಫೋಗಟ್

ಮಂಗಳವಾರ ನಡೆದಿದ್ದ ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ವಿನೇಶ್ ಟೋಕಿಯೊ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಜಪಾನ್‌ನ ಯುಯಿ ಸುಸಾಕಿ ಅವರನ್ನು 3-2 ಅಂತರದಿಂದ ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದರು. ಬಳಿಕ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಮೂರು ಬಾರಿಯ ಕಾಮನ್​ವೆಲ್ತ್​ ಚಿನ್ನದ ಪದಕ ವಿಜೇತೆ ಉಕ್ರೇನ್​ನ ಒಕ್ಸಾನಾ ಲಿವಾಚ್ ವಿರುದ್ಧ 7-5 ಅಂತರದ ರೋಚಕ ಗೆಲುವು ಸಾಧಿಸಿ ಸೆಮಿ ಫೈನಲ್​ ಪ್ರವೇಶಿಸಿದರು. ಇದೀಗ ಫೈನಲ್‌ಗೆ ತಲುಪಿ ಭಾರತದ ಚಿನ್ನದ ಪದಕದ ಕನಸು ಜೀವಂತವಾಗಿಸಿದ್ದಾರೆ.

Exit mobile version