ನವದೆಹಲಿ: ನಿಗದಿತ ತೂಕಗಿಂತ ಹೆಚ್ಚಿನ ಭಾರ ಇದ್ದ ಕಾರಣ ಚಿನ್ನದ ಪದಕದ ಸ್ಪರ್ಧೆಯಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್ ಪೋಗಟ್ ವಿಚಾರದಲ್ಲಿ ಕೆಲವು ರಾಜಕೀಯ ನಾಯಕರು ಪರ ಮತ್ತು ವಿರೋಧದ ಚರ್ಚೆಗಳನ್ನು ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ವಿನೇಶ್ ಪೋಗಟ್(Vinesh Phogat) ಅವರು ಒಲಿಂಪಿಕ್ಸ್ ಆರಂಭಕ್ಕೂ 4 ತಿಂಗಳ ಹಿಂದೆಯೇ ಟ್ವೀಟ್ ಮೂಲಕ ಭಾರತ ಕುಸ್ತಿ ಫೆಡರೇಷನ್ ವಿರುದ್ಧ ಗಂಭೀರ ಆರೋಪ ಆಡಿದ್ದರು. ಈ ಟ್ವಿಟ್ ಇದೀಗ ವೈರಲ್ ಆಗಿದೆ.
ನಾಲ್ಕು ತಿಂಗಳ ಹಿಂದೆ ಅಂದರೆ ಎಪ್ರಿಲ್ನಲ್ಲಿ ವಿನೇಶ್ ಫೋಗಟ್ ಅವರು ಭಾರತ ಕುಸ್ತಿ ಫೆಡರೇಷನ್ (WFI) ತನ್ನ ವಿರುದ್ಧ ಡೋಪಿಂಗ್ ಪಿತೂರಿ ಮಾಡುವ ಸಾಧ್ಯತೆಗಳಿವೆ ಎಂದು ಗಂಭೀರ ಆರೋಪ ಮಾಡಿದ್ದರು. ಆದರೆ, ಫೆಡರೇಷನ್ ಈ ಆರೋಪವನ್ನು ತಳ್ಳಿಹಾಕಿತ್ತು.
ವಿನೇಶ್ ಮಾಡಿದ್ದ ಆರೋಪವೇನು?
“ಒಲಿಂಪಿಕ್ಸ್ ಅರ್ಹತಾ ಪಂದ್ಯಗಳಲ್ಲಿ ನನ್ನ ಭಾಗವಹಿಸುವಿಕೆ ತಡೆಯಲು ಡಬ್ಲ್ಯುಎಫ್‌ಐ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಡೋಪಿಂಗ್ ಪ್ರಕರಣದಲ್ಲಿ ತನ್ನನ್ನು ಸಿಲುಕಿಸುವ ಭಯವಿದೆ. ನಾನು ಅಭ್ಯಾಸದ ವೇಳೆ ಸೇವಿಸುವ ನೀರಿನಲ್ಲಿ ಡೋಪಿಂಗ್ ಅಂಶವುಳ್ಳ ಕೆಲ ರಾಸಾಯನಿಕವನ್ನು ಬೆರೆಸಿರುವ ಅನುಮಾನವಿದೆ” ಎಂದು ವಿನೇಶ್ ಫೋಗಟ್ ಆರೋಪಿಸಿದ್ದರು.
ವಿನೇಶ್ ಆರೋಪಕ್ಕೆ ಅಂದು ಪ್ರತಿಕ್ರಿಯೆ ನೀಡಿದ ಡಬ್ಲ್ಯುಎಫ್‌ಐ, ವಿನೇಶ್ ಅವರ ಕೋರಿಕೆಯ ಇ-ಮೇಲ್ ಮಾರ್ಚ್ 18 ರಂದು ಬಂದಿತ್ತು. ಆದರೆ ನೋಂದಣಿ ದಿನಾಂಕ ಮಾರ್ಚ್ 11 ಆಗಿದ್ದರಿಂದ ಅದಾಗಲೇ ಸ್ಪರ್ಧಿಗಳು, ತರಬೇತುದಾರರು ಮತ್ತು ವೈದ್ಯಕೀಯ ಸಿಬ್ಬಂದಿ ಪ್ರವೇಶಗಳನ್ನು ಯುಡಬ್ಲ್ಯುಡಬ್ಲ್ಯುಗೆ ಕಳುಹಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿ ಆರೋಪವನ್ನು ತಳ್ಳಿ ಹಾಕಿತ್ತು. ಇದೀಗ ಅಂದು ವಿನೇಶ್ ಹೇಳಿದಂತೆ ಫೈನಲ್ ಪಂದ್ಯಕ್ಕೂ ಮುನ್ನ ಅವರು ಸೇವಿಸಿದ ನೀರಿನಲ್ಲಿ ರಾಸಾಯನಿಕ ಬಳಿಸಿ ಅವರನ್ನು ಉದ್ದೇಶಪೂರ್ವಕವಾಗಿ ಅನರ್ಹಗೊಳ್ಳುವಂತೆ ಮಾಡಲಾಯಿತೇ ಎಂಬ ಹೊಸ ಚರ್ಚೆಗಳು ಹುಟ್ಟಿಕೊಂಡಿದೆ.
ಇದನ್ನೂ ಓದಿ Vinesh Phogat: ವಿನೇಶ್ರನ್ನು ಪ.ಬಂಗಾಳ ಸಿಎಂ ಮಾಡಿ; ಭಾರತ ರತ್ನ ಕೊಡಿ ಎಂದ ಟಿಎಂಸಿ ನಾಯಕನಿಗೆ ಸವಾಲ್!
ಮಂಗಳವಾರ ನಡೆದ ಅರ್ಹತಾ ಸುತ್ತಿಗೂ ಮುನ್ನ ವಿನೇಶ್ ಅವರ ತೂಕವನ್ನು ಲೆಕ್ಕ ಮಾಡಲಾಗಿತ್ತು. ಈ ವೇಳೆ ಅವರು 49.9 ಕೆಜಿ ತೂಕವಿದ್ದರು. 3 ಬೌಟ್‌ಗಳು ಮುಗಿಯುವ ವೇಳೆಗೆ ಶಕ್ತಿ ಕಾಪಾಡಿಕೊಳ್ಳಲು ಹೈ ಎನರ್ಜಿ ಆಹಾರ ಸೇವಿಸಿದ ಕಾರಣ ಅವರ ತೂಕ 2.8 ಕೆಜಿ ಹೆಚ್ಚಳವಾಗಿತ್ತು. ಈ 2.8 ಕೆಜಿಯನ್ನು ಕಡಿಮೆ ಮಾಡಲು ವಿನೇಶ್ ರಾತ್ರಿಯಿಡೀ ಯಾವುದೇ ಆಹಾರ ಸೇವಿಸದೇ, ಸೈಕ್ಲಿಂಗ್ ನಡೆಸಿ, ಸ್ಕಿಪ್ಪಿಂಗ್ ಮಾಡಿದ್ದರು. ತೂಕ ಇಳಿಸಲು ಬೇಕಾಗುವ ಎಲ್ಲ ಕಸರತ್ತುಗಳನ್ನು ಕೈಗೊಂಡಿದ್ದರು. ಈ ಮೂಲಕ ಅವರು ಸಾಕಷ್ಟು ತೂಕ ಇಳಿಸಿದ್ದರು. ಕೊನೆ ಕ್ಷಣದಲ್ಲಿ ಅವರ ಕೂದಲು ಕತ್ತರಿಸಿ, ಬಟ್ಟೆಗಳ ಗಾತ್ರವನ್ನು ಕುಗ್ಗಿಸಿ ಪರೀಕ್ಷೆಗೆ ಕಳುಹಿಸಲಾಯಿತು. ಆದರೂ 100 ಗ್ರಾಂ ಹೆಚ್ಚಿದ್ದ ಕಾರಣ ಅನರ್ಹಗೊಂಡರು.
ವಿನೇಶ್ ಫೋಗಟ್ ಅವರ ಸಹಾಯಕ ಸಿಬ್ಬಂದಿ ವಿರುದ್ಧ ತನಿಖೆ ನಡೆಸಬೇಕು ಎಂದು ಭಾರತೀಯ ಕುಸ್ತಿ ಪ್ರಾಧಿಕಾರದ ಅಧ್ಯಕ್ಷ ಸಂಜಯ್ ಸಿಂಗ್ ಈಗಾಗಲೇ ಆಗ್ರಹಿಸಿದ್ದಾರೆ. ಇದು ವಿನೇಶ್ ಅವರ ತಪ್ಪಾಗಿರಲು ಸಾಧ್ಯವಿಲ್ಲ. ಅವರು ಉತ್ತಮವಾಗಿ ಭಾಗಿಯಾಗಿದ್ದರು. ಅವರ ಕೋಚ್, ನ್ಯೂಟ್ರಿಶಿಯನ್ ಮತ್ತು ಬೆಂಬಲ ಸಿಬ್ಬಂದಿ ಇದರ ಜವಾಬ್ದಾರಿ ಹೊರಬೇಕು ಎಂದು ಅವರು ಹೇಳಿದ್ದರು. ವಿನೇಶ್ ತೂಕ ಹೆಚ್ಚಳ ವಾಗದಂತೆ ಅವರು ನೋಡಿಕೊಳ್ಳಬೇಕಿತ್ತು. ಇದಕ್ಕೆ ಕಾರಣರಾದವರ ವಿರುದ್ಧ ಭಾರತ ಸರಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು.
ಆರು ಬಾರಿ ಬಿಜೆಪಿ ಸಂಸದರಾಗಿದ್ದ ಬ್ರಿಜ್ ಭೂಷಣ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಾಕ್ಷಿ ಮಲಿಕ್ ಸೇರಿದಂತೆ ದೇಶದ ಉನ್ನತ ಕುಸ್ತಿಪಟುಗಳು ಆರೋಪಿಸಿದ ನಂತರ ಅವರು ರಾಜೀನಾಮೆ ನೀಡಬೇಕಾಯಿತು. ಒಲಿಂಪಿಕ್ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಸೇರಿದಂತೆ ಅಗ್ರ ಕುಸ್ತಿಪಟುಗಳು ಕಳೆದ ವರ್ಷ ಜನವರಿಯಲ್ಲಿ ಬಿಜೆಪಿ ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬೀದಿಗಿಳಿದಿದ್ದರು. ಈ ಪ್ರತಿಭಟನೆಯ ಪ್ರಮುಖ ರುವಾರಿ ಕೂಡ ವಿನೇಶ್ ಅವರೇ ಆಗಿದ್ದರು. ಒಟ್ಟಾರೆ ಅಂದು ವಿನೇಶ್ ಮಾಡಿದ ಆರೋಪ ಇದೀಗ ವಿಪಕ್ಷಗಳಿಗೆ ಆಹಾರವಾಗಿದೆ. ಇದೇ ವಿಚಾರವಾಗಿ ಸದನಲ್ಲಿ ಮತ್ತೆ ಕಿತ್ತಾಟ ನಡೆಯುವ ಸಾಧ್ಯತೆಯೊಂದು ಕಂಡು ಬಂದಿದೆ.