Site icon Vistara News

Vinesh Phogat: ಬೆಳ್ಳಿ ಪದಕಕ್ಕಾಗಿ ಕೋರ್ಟ್‌ ಕದ ತಟ್ಟಿದ ವಿನೇಶ್‌ ಫೋಗಟ್‌; ಇಂದು ತೀರ್ಪು ಪ್ರಕಟ

Vinesh Phogat

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ (Paris Olympics 2024) 50 ಕಿಲೋ ತೂಕದ ವಿಭಾಗದ ಫೈನಲ್‌ ಪಂದ್ಯದಲ್ಲಿ ಸ್ಪರ್ಧಿಸಲು ಅನರ್ಹಗೊಂಡ ಬೆನ್ನಲ್ಲೇ ಕುಸ್ತಿಪಟು ವಿನೇಶ್‌ ಫೋಗಟ್‌ (Vinesh Phogat) ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (Court of Arbitration for Sport)ಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನ 50 ಕಿಲೋ ತೂಕದ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಫೈನಲ್‌ಗೂ ಮುನ್ನ ವಿನೇಶ್ ಅವರನ್ನು ಅನರ್ಹಗೊಳಿಸಲಾಗಿತ್ತು. ಬುಧವಾರ ಸಂಜೆ ನಡೆಯಲಿದ್ದ ಫೈನಲ್‌ ಪಂದ್ಯಕ್ಕೂ ಮುನ್ನ ಬೆಳಿಗ್ಗೆ 100 ಗ್ರಾಂ ಹೆಚ್ಚಿನ ತೂಕವನ್ನು ಹೊಂದಿರುವ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ಅವರನ್ನು ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಿದ್ದು, ಕೋಟ್ಯಂತರ ಭಾರತೀಯರ ಚಿನ್ನದ ಪದಕದ ಕನಸಿಗೆ ಕೊಳ್ಳಿ ಇಟ್ಟಂತಾಗಿದೆ. ಈ ಕ್ರಮದ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.

ಇದೀಗ ಜಂಟಿಯಾಗಿ ಬೆಳ್ಳಿ ಪದಕ ಹಸ್ತಾಂತರಿಸುವಂತೆ ಕೋರಿ ವಿನೇಶ್‌ ಫೋಗಟ್‌ ಮನವಿ ಸಲ್ಲಿಸಿದ್ದಾರೆ. ಈ ವಿಚಾರದಲ್ಲಿ ಕೋರ್ಟ್‌ (CAS) ತನ್ನ ಅಂತಿಮ ತೀರ್ಪನ್ನು ಇಂದು (ಆಗಸ್ಟ್‌ 8) ಬೆಳಿಗ್ಗೆ 11:30ಕ್ಕೆ ಪ್ರಕಟಿಸಲಿದೆ. ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು ಫೋಗಟ್ ಪರವಾಗಿ ತೀರ್ಪು ನೀಡಿದರೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (International Olympic Committee) ಬೆಳ್ಳಿ ಪದಕ ನೀಡಬೇಕಾಗುತ್ತದೆ. ಹೀಗಾಗಿ ತೀರ್ಪಿಗಾಗಿ ಭಾರತೀಯರು ನಿರೀಕ್ಷೆಯೆಂದ ಕಾದು ಕುಳಿತ್ತಿದ್ದಾರೆ. ಯಾವುದೇ ಕ್ರೀಡಾ ಕೂಟದ ವೇಳೆ ಉದ್ಭವಿಸಬಹುದಾದ ವಿವಾದಗಳನ್ನು ಪರಿಹರಿಸಲು ಅಂತಾರಾಷ್ಟ್ರೀಯ ಸಂಸ್ಥೆ ಸಿಎಎಸ್‌ಯನ್ನು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಸ್ಥಾಪಿಸಲಾಗಿದೆ.

ಪ್ರಧಾನಿ, ರಾಷ್ಟ್ರಪತಿ ಸಾಂತ್ವನ

ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ವಿನೇಶ್‌ ಅವರು ಕ್ಯೂಬಾದ ಯಸ್ನಿಲಿಸ್​ ಗುಜ್ಮನ್​ ಲೋಪೆಜ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಒಲಿಂಪಿಕ್ಸ್‌ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆ ಮೂಲಕ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದರು. ಅದರಂತೆ ಬುಧವಾರ ಫೈನಲ್‌ ಪಂದ್ಯ ನಡೆಯುವ ಮುನ್ನ ತೂಕ ಪರೀಕ್ಷಿಸುವ ವೇಳೆ 50 ಕೆಜಿಗಿಂತ 100 ಗ್ರಾಂ ಹೆಚ್ಚಿರುವುದು ಕಂಡು ಬಂದಿತ್ತು. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸಹಿತ ಅನೇಕರು ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯ ನಿರ್ಧಾರದ ವಿರುದ್ಧ ಕಿಡಿ ಕಾರಿದ್ದಾರೆ. ಜತೆಗೆ ವಿನೇಶ್‌ ಅವರಿಗೆ ಸಾಂತ್ವನ ಹೇಳಿದ್ದಾರೆ.

ಇದನ್ನೂ ಓದಿ: Vinesh Phogat: ವಿನೇಶ್‌ ಫೋಗಟ್‌ ಅನರ್ಹ; ದಿಢೀರ್ 2-3 ಕೆ.ಜಿ ತೂಕ ಇಳಿಸಲು ಮುಂದಾದರೆ ದೇಹಕ್ಕೆ ಏನಾಗುತ್ತದೆ?

ನಿವೃತ್ತಿ ಘೋಷಣೆ

ಇದೀಗ 29 ವರ್ಷದ ವಿನೇಶ್‌ ಫೋಗಟ್‌ ಅವರು ಕುಸ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ಗುರುವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. “ಕುಸ್ತಿ ನನ್ನ ವಿರುದ್ಧ ಪಂದ್ಯವನ್ನು ಗೆದ್ದಿದೆ. ನಾನು ಸೋತೆ.. ನಿಮ್ಮ ಕನಸುಗಳು ಮತ್ತು ನನ್ನ ಧೈರ್ಯ ಛಿದ್ರವಾಗಿದೆ. ನನಗೆ ಈಗ ಹೆಚ್ಚಿನ ಶಕ್ತಿ ಇಲ್ಲ. ಗುಡ್ ಬೈ ಕುಸ್ತಿ 2001-2024. ನಿಮ್ಮೆಲ್ಲರಿಗೂ ನಾನು ಎಂದೆಂದಿಗೂ ಋಣಿಯಾಗಿರುತ್ತೇನೆ. ಕ್ಷಮಿಸಿ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

Exit mobile version