ಕೊಲಂಬೊ: ಸಾಮನ್ಯವಾಗಿ ಕ್ರಿಕೆಟ್ ಪಂದ್ಯದ ವೇಳೆ ನಾಯಿ, ಹಾವು, ಬೆಕ್ಕು ಕಾಣಿಸಿಕೊಳ್ಳುವುದು ಸರ್ವೆ ಸಾಮಾನ್ಯ. ಪಂದ್ಯದ ವೇಳೆ ಇವುಗಳು ಮೈದಾನಕ್ಕೆ ಬಂದು ಪಂದ್ಯಗಳು ಅಡಚಣೆಯಾದ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿದೆ. ಆದರೆ, ಈ ಬಾರಿ ವಿಶೇಷ ಅತಿಥಿಯಂತೆ ಉಡವೊಂದು(Monitor Lizard) ಮೈದಾನಕ್ಕೆ ಬಂದಿದೆ. ಈ ವಿಡಿಯೊ ವೈರಲ್(Viral Video) ಆಗಿದೆ.
ಕೊಲಂಬೊದಲ್ಲಿ ನಡೆಯುತ್ತಿರುವ ಅಫಘಾನಿಸ್ತಾನ ಮತ್ತು ಶ್ರೀಲಂಕಾ(Sri Lanka vs Afghanistan) ನಡುವಣ ಏಕೈಕ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದ ವೇಳೆ ಈ ಘಟನೆ ನಡೆದಿದೆ. 3 ವಿಕೆಟ್ಗೆ 215 ರನ್ ಗಳಿಸಿ ಲಂಕಾ ತಂಡ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಉಡವೊಂದು ಬೌಂಡರಿ ಗೆರೆ ದಾಟಿ ಮೈದಾನಕ್ಕೆ ಎಂಟ್ರಿ ಕೊಟ್ಟಿದೆ. ಇದು ಪಂದ್ಯದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉಡವು ಸೀಳಿದಂತಿದ್ದ ಕೆಂಗುಲಾಬಿ ಬಣ್ಣದ ನಾಲಿಗೆಯನ್ನು ಹೊರಚಾಚುತ್ತಾ ರಾಜ ಗಾಂಭೀರ್ಯ ಹೆಜ್ಜೆ ಹಾಕುತ್ತಾ ಮೈದಾನದಲ್ಲಿ ಓಡಾಡುತ್ತಿರುವ ದೃಶ್ಯವನ್ನು ಕಾಮೆಂಟ್ರಿ ಮೂಲಕ ಹೇಳಲಾಯಿತು.
We had an uninvited guest on the field today 🦎😄#SonySportsNetwork #SLvAFG pic.twitter.com/1LvDkLmXij
— Sony Sports Network (@SonySportsNetwk) February 3, 2024
ಉಡವನ್ನು ಕಂಡ ಫೀಲ್ಡ್ ಅಂಪೈರ್ ಬೌಲಿಂಗ್ ನಡೆಸಲು ಓಡಿ ಬಂದ ನಿಜತ್ ಮಸೂದ್ ಅವರನ್ನು ತಡೆದರು. ಬಳಿಕ ಮೈದಾನ ಸಿಬ್ಬಂದಿಗೆ ಉಡವನ್ನು ಹೊರಗಡೆ ಹಾಕುವಂತೆ ಸೂಚನೆ ನೀಡಿದರು. ಈ ವೇಳೆ ಮೈದಾನದ ಹೊರಗಿದ್ದ ಅಂಪೈರ್ ಉಡವನ್ನು ಓಡಿಸಲು ಕೆಲ ಕಾಲ ಹರ ಸಾಹಸ ಪಟ್ಟರು. ಅಂತಿಮವಾಗಿ ಈ ಉಡ ಮೈದಾನದಿಂದ ಹೊರ ಹೋಯಿತು. ಈ ಎಲ್ಲ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿದೆ. ಈ ವಿಡಿಯೊವನ್ನು ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ತನ್ನ ಅಧಿಕೃತ ಟ್ವಿಟರ್ ಎಕ್ಸ್ನಲ್ಲಿ ಹಂಚಿಕೊಂಡಿದೆ. ‘ನಾವು ಇಂದು ಮೈದಾನದಲ್ಲಿ ಆಹ್ವಾನಿಸದ ಅತಿಥಿಯನ್ನು ಹೊಂದಿದ್ದೇವೆ” ಎಂದು ಈ ದೃಶ್ಯಕ್ಕೆ ಶೀರ್ಷಿಕೆ ನೀಡಿದೆ.
ಇದನ್ನೂ ಓದಿ IND vs ENG: ಸಹ ಆಟಗಾರನಿಗೆ ಅವಾಚ್ಯ ಪದಗಳಿಂದ ಬೈದ ರೋಹಿತ್ ಶರ್ಮ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಫಘಾನಿಸ್ತಾನ ತಂಡ ರಹಮತ್ ಶಾ(91) ಅವರ ಏಕಾಂಗಿ ಬ್ಯಾಟಿಂಗ್ ಸಾಹಸದಿಂದ ಮೊದಲ 198ರನ್ ಗಳಿಸಿತು. ಗುರಿ ಬೆನ್ನಟ್ಟಿರುವ ಲಂಕಾ ತಂಡ 6 ವಿಕೆಟ್ಗೆ 410 ರನ್ ಬಾರಿಸಿ 212 ರನ್ಗಳ ಮುನ್ನಡೆಯಲ್ಲಿದೆ. ಪಂದ್ಯ ಇನ್ನೂ ಕೂಡ ಮೂರು ದಿನಗಳು ಬಾಕಿ ಇದ್ದು ಸದ್ಯದ ಪರಿಸ್ಥಿತಿ ನೋಡುವಾಗ ಅಫಘಾನಿಸ್ತಾನಕ್ಕೆ ಈ ಪಂದ್ಯದಲ್ಲಿ ಇನಿಂಗ್ಸ್ ಸೋಲು ಎದುರಾಗುವ ಲಕ್ಷಣವಿದೆ.
ಶ್ರೀಲಂಕಾ ಪರ ಅನುಭವಿ ಆಟಗಾರ ಏಂಜೆಲೊ ಮ್ಯಾಥ್ಯೂಸ್ ಮತ್ತು ದಿನೇಶ್ ಚಾಂಡಿಮಲ್ ಶತಕ ಬಾರಿಸಿ ಮಿಂಚಿದರು. ಉಭಯ ಆಟಗಾರರು ಸೇರಿಕೊಂಡು 4ನೇ ವಿಕೆಟ್ಗೆ ಬರೋಬ್ಬರಿ 232 ರನ್ಗಳ ಜತೆಯಾಟವಾಡಿದರು. ಏಂಜೆಲೊ ಮ್ಯಾಥ್ಯೂಸ್ 259 ಎಸೆತ ಎದುರಿಸಿ 14 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 141 ರನ್ ಬಾರಿಸಿದರು. ದಿನೇಶ್ ಚಾಂಡಿಮಲ್ 10 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿ 107 ರನ್ ಚಚ್ಚಿದರು.