Site icon Vistara News

Virat Kohli: ಶತಕ ಹೊಡೆದಿದ್ದು ವಿರಾಟ್ ಕೊಹ್ಲಿ, ಟ್ರೋಲ್ ಆಗಿದ್ದು ಗೌತಮ್ ಗಂಭೀರ್!

Virat kohli hit century and social media trolls Gautam Gambhir

ನವದೆಹಲಿ: ಸನ್ ರೈಸರ್ಸ್ ಹೈದ್ರಾಬಾದ್ (SRH) ವಿರುದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಅವರ ಶತಕಕ್ಕೆ ಎಲ್ಲ ಕಡೆಯಿಂದಲೂ ಮೆಚ್ಚುಗೆ ಹರಿದು ಬರುತ್ತಿದೆ. ಈವರೆಗೂ, ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಪಟ್ಟಿಯಲ್ಲಿ 6 ಶತಕಗಳೊಂದಿಗೆ ಕ್ರಿಸ್ ಗೇಯ್ಲ್ ಅಗ್ರಸ್ಥಾನಿಯಾಗಿದ್ದರು. ಈ ದಾಖಲೆಯನ್ನು ಕೊಹ್ಲಿ ಸಮ ಮಾಡಿದ್ದಾರೆ. ಕೊಹ್ಲಿ ಅವರ ಶತಕಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗುವುದರ ಜತೆಗೆ, ಎಲ್‌ಎಸ್‌ಜಿ ತಂಡದ ಮೆಂಟರ್ ಗೌತಮ್ ಗಂಭೀರ್ (Gautam Gambhir) ಹಾಗೂ ಅಫಘಾನಿಸ್ತಾನದ ಬೌಲರ್ ನವೀನ್ ಉಲ್ ಹಕ್ (naveen ul haq) ಅವರನ್ನು ಕಿಚಾಯಿಸುವ ಮೀಮ್ಸ್, ಟ್ವೀಟ್‌ಗಳು ಹರಿದಾಡುತ್ತಿವೆ. ಗೌತಮ್ ಗಂಭೀರ್ ಅವರ ವಿರೋಧಿ ಪತ್ರಕರ್ತ ಹಾಗೂ ದಿಲ್ಲಿ ಕ್ರಿಕೆಟ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ರಜತ್ ಶರ್ಮಾ ಅವರಂತೂ, ವಿರಾಟ್ ಅವರಿಂದ ಭವ್ಯವಾದ ಶತಕ ನೋಡುವುದೇ ಆನಂದವಾಗಿತ್ತು. ಇದರಿಂದ ಸಜವಾಗಿಯೇ ಎಲ್ಲೋ ಯಾರಾದರೂ ಒಬ್ಬ ಸಂತೋಷವಾಗಿರುವುದಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ಗೌತಮ್ ಗಂಭೀರ್ ಅಸಮಾಧಾಗೊಂಡಿರುತ್ತಾರೆಂದು ರಜತ್ ಶರ್ಮಾ ಪರೋಕ್ಷವಾಗಿ ಕಿಚಾಯಿಸಿದ್ದಾರೆ.

ಸ್ವಿಗಿ ಇನ್ಸ್‌ಟಂಟ್ ಟ್ವಿಟರ್ ಹ್ಯಾಂಡ್, ತಮಾಷೆಯ ಟ್ವೀಟ್ ಮಾಡಿ, ಸಾರಿ ಮಾವು, ಚೀಕು(ಚಿಕ್ಕು) ನಿಜವಾದ ಕಿಂಗ್ ಎಂದು ಹೇಳಿದೆ. ಈ ಟ್ವೀಟ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮಿರ್ ಕೂಡ ವಿರಾಟ್ ಕೊಹ್ಲಿಯನ್ನು ಹೊಗಳುವುದರಲ್ಲಿ ಹಿಂದೆ ಬಿದ್ದಿಲ್ಲ. ಕೇವಲ ಕೊಹ್ಲಿ ಮಾತ್ರ ಸಿಡಿಸಿಬಲ್ಲ ಶತಕ, ಎಂಥಾ ಇನ್ನಿಂಗ್ಸ್ ಎಂದು ಕೊಂಡಾಡಿದ್ದಾರೆ. ವಿಶೇಷ ಎಂದರೆ, ಬಾಬರ್ ಆಜಮ್ ಅವರನ್ನು ಕಿಂಡಲ್ ಮಾಡುವುದಕ್ಕಾಗಿ ಅಮಿರ್ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ವಿರಾಟ್ ಕೊಹ್ಲಿ ಶತಕ ಸಿಡಿಸಿ ಸಂಭ್ರಮ ಪಡುತ್ತಿದ್ದರೆ, ನೆಟ್ಟಿಗರು ಮಾತ್ರ ಆ ಸಂದರ್ಭವನ್ನು ಗೌತಮ್ ಗಂಭೀರ್ ಅವರನ್ನು ಟೀಕಿಸಲು ಬಳಸಿಕೊಳ್ಳುತ್ತಿದ್ದಾರೆ. ಒಬ್ಬರ ಗೆಲುವು, ಇನ್ನೊಬ್ಬರ ಟೀಕಿಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾ ಯಾವಾಗ ಹೇಗೆ ವರ್ತಿಸುತ್ತದೆ ಎಂದು ಹೇಳಲಾಗುವುದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಅಷ್ಟೇ ಅಲ್ಲದೇ, ಗೌತಮ್ ಗಂಭೀರ್‌ಗೆ ಆಗಾಗ ಯಾವುದೇ ಸ್ಟೇಡಿಯಮ್‌ನಲ್ಲಿ ಈ ರೀತಿಯ ಕಾಲೆಯೆಳೆಯುವ ಘಟನೆಗಳು ಪ್ರೇಕ್ಷಕರಿಂದಲೇ ನಡೆಯುತ್ತದೆ. ಗೌತಮ್ ಗಂಭೀರ್ ಇದ್ದ ಜಾಗದಲ್ಲಿರುವ ಪ್ರೇಕ್ಷಕರು, ಕೊಹ್ಲಿ ಕೊಹ್ಲಿ ಎಂದು ಕೂಗು ಹಾಕುವುದು ಆಗಾಗ ಕೇಳಿದ್ದೇವೆ.

ರಜತ್ ಶರ್ಮಾ ಅವರ ಟ್ವೀಟ್

Exit mobile version