ಬಾರ್ಬಡೋಸ್: ದಕ್ಷಿಣ ಆಫ್ರಿಕಾವನ್ನು(South Africa vs India) ಮಣಿಸಿ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದ ಬಳಿಕ ಟಿ20(T20 World Cup 2024) ಕ್ರಿಕೆಟ್ಗೆ ವಿದಾಯ ಹೇಳಿದ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ(Virat Kohli), ಗೆಲುವಿನ ಸಂಭ್ರಮಾಚರಣೆಯನ್ನು ತಂಡದ ಸಹ ಆಟಗಾರರೊಂದಿಗೆ ನೃತ್ಯ ಮಾಡುವ ಮೂಲಕ ಎಂಜಾಯ್ ಮಾಡಿದರು. ಪಂಜಾಬಿ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೊವನ್ನು ಐಸಿಸಿ ತನ್ನ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದೆ.
ಚಿನ್ನದ ಪದಕ ಸ್ವೀಕರಿಸಿದ ಬಳಿಕ ವಿರಾಟ್ ಕೊಹ್ಲಿ, ಅರ್ಶ್ದೀಪ್ ಸಿಂಗ್, ಮೀಸಲು ಆಟಗಾರ ರಿಂಕು ಸಿಂಗ್, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್ ಸುತ್ತಿವರಿದು ಮಸ್ತ್ ನೃತ್ಯ ಮಾಡಿ ಗೆಲುವುವನ್ನು ಸಂಭ್ರಮಿಸಿದ್ದಾರೆ. ಈ ವಿಡಿಯೊ ಇದೀಗ ವೈರಲ್ ಆಗಿದೆ. ಕೊಹ್ಲಿಯ ಅಭಿಮಾನಿಗಳಂತು ಈ ವಿಡಿಯೊವನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾರಂಭಿಸಿದ್ದಾರೆ.
ಸರಣಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ ಅವರು ನಾಯಕ ರೋಹಿತ್ ಶರ್ಮ ಹೇಳಿದಂತೆ ಫೈನಲ್ನಲ್ಲಿ 76 ರನ್ ಗಳಿಸಿ ತಂಡಕ್ಕೆ ನೆರವಾದರು. ಸೆಮಿಫೈನಲ್ ಪಂದ್ಯದ ಬಳಿಕ ಕೊಹ್ಲಿಯನ್ನು ಟೀಕೆ ಮಾಡುತ್ತಿದ್ದವರಿಗೆ ನಾಯಕ ರೋಹಿತ್ ಅವರು ತಕ್ಕ ಉತ್ತರ ನೀಡಿದ್ದರು. ಕೊಹ್ಲಿಯ ಆಟ ಫೈನಲ್ನಲ್ಲಿ ಪ್ರದರ್ಶನಗೊಳ್ಳುತ್ತದೆ. ಆತ ಕ್ಲಾಸ್ ಆಟಗಾರ ಎಂದು ಹೇಳಿದ್ದರು. ರೋಹಿತ್ ಹೇಳಿದಂತೆ ಕೊಹ್ಲಿ ಫೈನಲ್ಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು.
ವಿದಾಯ ಹೇಳಿದ ಕೊಹ್ಲಿ
ವಿರಾಟ್ ಕೊಹ್ಲಿ ಅವರು ಈ ಸ್ಮರಣೀಯ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದರು. ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ವೇಳೆ ಕೊಹ್ಲಿ ತಮ್ಮ ನಿವೃತ್ತಿ ಘೋಷಿಸಿದರು. ‘ದೇವರು ದೊಡ್ಡವನು. ಭಾರತಕ್ಕಾಗಿ ಇದು ನನ್ನ ಕೊನೆಯ ಟಿ20 ಪಂದ್ಯವಾಗಿತ್ತು. ನಾವು ಆ ಕಪ್ ಎತ್ತಲು ಬಯಸಿದ್ದೆ. ಇದು ಸಾಕಾರಗೊಂಡಿದೆ. ಮುಂದಿನ ಪೀಳಿಗೆಗೆ ಟಿ20 ಆಟವನ್ನು ಮುಂದಕ್ಕೆ ಕೊಂಡೊಯ್ಯುವ ಸಮಯ ಇದು. ಅದ್ಭುತ ದಿನದಂದು ವಿದಾಯ ಹೇಳುವ ಸೌಭಾಗ್ಯ ನನಗೆ ಒದಗಿದ್ದು ನಿಜ್ಜಕ್ಕೂ ಸಂತಸ ತಂದಿದೆ” ಎಂದು ಹೇಳಿದರು.
ಇದನ್ನೂ ಓದಿ Rohit Sharma: ಗೆಲುವಿನ ಸವಿ ನೆನಪಿಗಾಗಿ ಪಿಚ್ನ ಮಣ್ಣು ತಿಂದ ರೋಹಿತ್; ವಿಡಿಯೊ ವೈರಲ್
ಕೊಹ್ಲಿ ತಮ್ಮ 125 ಪಂದ್ಯಗಳ ಟಿ 20 ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಭಾರತದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಸ್ವರೂಪದಲ್ಲಿ ಕೊನೆಗೊಳಿಸಿದ್ದಾರೆ. 4188 ರನ್, 48.69 ಸರಾಸರಿ ಮತ್ತು ಸ್ಟ್ರೈಕ್ ರೇಟ್ 137.04 ಹೊಂದಿದ್ದಾರೆ. ಈ ಟಿ 20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ 59 ಎಸೆತಗಳಲ್ಲಿ 76 ರನ್ ಮಾಡುವ ಮೊದಲು ಏಳು ಇನ್ನಿಂಗ್ಸ್‌ಗಳಲ್ಲಿ ಕೇವಲ 75 ರನ್ ಮಾತ್ರ ಗಳಿಸಿದ್ದರು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 8 ವಿಕೆಟ್ಗೆ 169 ರನ್ ಗಳಿಸಲಷ್ಟೇ ಶಕ್ತವಾಯಿತು.
ಕೊನೆಯ ಓವರ್ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ನತ್ತ ಬಾರಿಸಿದ್ದರು. ಬೌಂಡರಿ ಲೈನ್ ನಲ್ಲಿದ್ದ ಸೂರ್ಯ ಕುಮಾರ್ ಯಾದವ್ ಯಾರೂ ಊಹಿಸದಂತೆ ಸಾಹಸಮಯ ಅಮೋಘ ಕ್ಯಾಚ್ ಪಡೆದರು. 21 ರನ್ ಗಳಿಸಿದ್ದ ಡೇವಿಡ್ ಮಿಲ್ಲರ್ ವಿಕೆಟ್ ಕೈಚೆಲ್ಲಿದರು. ಎರಡನೇ ಎಸೆತವನ್ನು ರಬಾಡಾ ಬೌಂಡರಿ ಬಾರಿಸಿದರು. ಮೂರನೇ ಎಸೆತದಲ್ಲಿ ಒಂದು ರನ್ ಬಂತು. ಕೊನೆಯ ಎರಡು ಎಸೆತಗಳಲ್ಲಿ 10 ರನ್ ಅಗತ್ಯವಿತ್ತು. ಹಾರ್ದಿಕ್ ಒಂದು ವೈಡ್ ಎಸೆದರು. ರಬಾಡಾ ಕ್ಯಾಚಿತ್ತು ನಿರ್ಗಮಿಸಿದರು. ಕೊನೆಯ ಎಸೆತದಲ್ಲಿ ಒಂದು ರನ್ ಮಾತ್ರ ಬಂತು. ಭಾರತ 7 ರನ್ಗಳ ಗೆಲುವು ಸಾಧಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದು ಬೀಗಿತು.