Site icon Vistara News

Virat Kohli : ಮೈದಾನದಲ್ಲೇ ಗುರ್​ ಎಂದ ಗಂಭೀರ್​, ಘರ್ಜಿಸಿದ ವಿರಾಟ್​ ಕೊಹ್ಲಿ!

Virat Kohli roars on the field!

#image_title

ಲಖನೌ: ವಿರಾಟ್​ ಕೊಹ್ಲಿ (Virat Kohli) ಕ್ರಿಕೆಟ್​ ಲೋಕದ ಅತ್ಯಂತ ಆಕ್ರಮಣಕಾರಿ ಆಟಗಾರ. ಈ ಸ್ಟಾರ್ ಆಟಗಾರನ ದೊಡ್ಡ ಟೀಕಾಕಾರ ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​. ಹೀಗಾಗಿ ಇವರಿಬ್ಬರದು ಹಾವು- ಮುಂಗುಸಿ ಮುನಿಸು. ಈ ಕೋಪ ಲಖನೌನಲ್ಲಿ ಸೋಮವಾರ ಸ್ಫೋಟಗೊಂಡಿತು. ಇಬ್ಬರೂ ಪರಸ್ಪರ ಗುರಾಯಿಸಿಕೊಂಡರಲ್ಲದೆ, ಮಾತಿನ ಚಕಮಕಿಯೂ ನಡೆಸಿದರು. ಕೊನೆಗೆ ಸುತ್ತ ಮುತ್ತ ಇದ್ದ ಆಟಗಾರರು ಅಂಪೈರ್​​ಗಳು ಅವರಿಬ್ಬರನ್ನು ಬೇರ್ಪಡಿಸಬೇಕಾಯಿತು. ಇವರಿಬ್ಬರ ಜಗಳ ಸೋಶಿಯಲ್​ ಮೀಡಿಯಾದಲ್ಲಿ ದೊಡ್ಡ ಸುದ್ದಿಯಾಯಿತಲ್ಲದೆ ಮೀಮ್​ಗಳ ಮಳೆಯೇ ಸುರಿಯಿತು.

ಐಪಿಎಲ್​ನ 43ನೇ ಪಂದ್ಯದಲ್ಲಿ ಲಖನೌ ಸೂಪರ್​ ಜಯಂಟ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ತಂಡ 18 ರನ್​ಗಳಿಂದ ಸೋಲಿಸಿತ್ತು. ಪಂದ್ಯದ ಬಳಿಕ ಪರಸ್ಪರ ಅಭಿನಂದಿಸುವ ಸಮಯದಲ್ಲಿ ಗಂಭೀರ್​ ಮತ್ತು ಕೊಹ್ಲಿಯ ಕೋಳಿ ಜಗಳ ಆರಂಭಗೊಂಡಿತು. ಬಳಿಕ ಪರಸ್ಪರ ಯುದ್ಧಕ್ಕೆ ನಿಂತ ಹಾಗೆ ಮಾಡಿದರಲ್ಲದೆ ಅಂತಿಮವಾಗಿ ಉಳಿದವರ ಮಧ್ಯಪ್ರವೇಶದಿಂದ ತಣ್ಣಗಾಯಿತು.

ಜಗಳ ಶುರುವಾಗಿದ್ದು ಹೇಗೆ?

ಪಂದ್ಯ ಮುಗಿದ ಬಳಿಕ ಆಟಗಾರರು ಪರಸ್ಪರ ಮಾತನಾಡುವುದು ಮಾಮೂಲು. ಅದೇ ರೀತಿ ಎಲ್ಲರಿಗೂ ಹಸ್ತಲಾಘವ ಕೊಟ್ಟ ಬಳಿಕ ವಿರಾಟ್​ ಕೊಹ್ಲಿ ಹಾಗೂ ಲಕ್ನೊ ತಂಡದ ಕೈಲ್​ಮೇಯರ್ಸ್​​ ಪರಸ್ಪರ ಮಾತನಾಡಿಕೊಂಡು ಹೋಗುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಗೌತಮ್ ಗಂಭೀರ್​, ವಿರಾಟ್​ ಕೊಹ್ಲಿಯ ಬಳಿ ಮಾತನಾಡದಂತೆ ಕೈಲ್​ ಮೇಯರ್ಸ್​ ಅವರನ್ನು ಎಳೆದುಕೊಂಡು ಹೋಗುತ್ತಾರೆ. ಇದು ಕೊಹ್ಲಿಯನ್ನು ಕೆರಳಿಸುತ್ತದೆ ಹಾಗೂ ಮಾತಿನಲ್ಲೇ ಪ್ರತಿಕ್ರಿಯಿಸುತ್ತಾರೆ. ಕೋಪಗೊಂಡ ಗಂಭೀರ್​ ಜಿದ್ದಿಗೆ ಬಿದ್ದು ಜಗಳಕ್ಕೆ ಹೋಗುತ್ತಾರೆ. ಕೆ. ಎಲ್​ ರಾಹುಲ್​ ಸೇರಿದಂತೆ ಹಲವರು ತಡೆಯಲು ಮುಂದಾದರೂ ಗಂಭೀರ್​ ಮುಂದಕ್ಕೆ ಹೋಗುತ್ತಾರೆ. ಬಳಿಕ ಅವರಿಬ್ಬರು ವಾಗ್ವಾದ ನಡೆಸುತ್ತಾರೆ. ಅಂತಿಮವಾಗಿ ಅಮಿತ್ ಮಿಶ್ರಾ ಸೇರಿದಂತೆ ಹಲವರು ಅವರಿಬ್ಬರನ್ನು ಬೇರ್ಪಡಿಸುತ್ತಾರೆ.

ಬೆಂಗಳೂರಿನಲ್ಲೇ ಶುರುವಾಗಿತ್ತು ಜಿದ್ದು

ಬೆಂಗಳೂರಿನಲ್ಲಿ ನಡೆದ ಮೊದಲ ಚರಣದ ಪಂದ್ಯದಲ್ಲಿ ಲಕ್ನೊ ತಂಡ ಆರ್​ಸಿಬಿ ವಿರುದ್ಧ ಕೊನೇ ಎಸೆತದಲ್ಲಿ ವಿಜಯ ಸಾಧಿಸಿತ್ತು. ಈ ವೇಳೆ ಗೌತಮ್​ ಗಂಭೀರ್​ ಮೈದಾನದಲ್ಲಿ ಆರ್​ಸಿಬಿ ಅಭಿಮಾನಿಗಳಿಗೆ ಬಾಯ್ಮುಚ್ಚಿ ಎಂದು ಸನ್ನೆ ಮಾಡಿದ್ದರು. ಇದು ವಿರಾಟ್​ ಕೊಹ್ಲಿಯನ್ನು ಮೊದಲು ಕೆರಳಿಸಿತ್ತು. ಅತ್ತ ಆರ್​ಸಿಬಿ ಅಭಿಮಾನಿಗಳೂ ಕೋಪಗೊಂಡಿದ್ದರು. ಆಗಲೇ ಲಖನೌನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆ ತಂಡವನ್ನು ಸೋಲಿಸಲೇಬೇಕು ಎಂಬ ವಿಷಯ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡ್​ ಆಗಿತ್ತು.

ಗಂಭೀರ್​ಗೆ ತಕ್ಕ ಪಾಠವನ್ನೇ ಕಲಿಸಬೇಕು ಎಂದೇ ನಿರ್ಧರಿಸಿದ್ದ ವಿರಾಟ್ ಕೊಹ್ಲಿ, ಲಖನೌ ಪಂದ್ಯದಲ್ಲಿ ಪ್ರತಿ ಬಾರಿಯೂ ಪ್ರೇಕ್ಷಕರಿಗೆ ಫ್ಲೈಯಿಂಗ್ ಕಿಸ್​ ಕೊಟ್ಟಿದ್ದರು. ಬಾಯ್ಮುಚ್ಚು ಎಂದು ಹೇಳುವುದಲ್ಲ, ಹೃದಯ ಗೆಲ್ಲಬೇಕು ಎಂದು ಸಂಕೇತ ಮಾಡಿ ತೋರಿಸುತ್ತಿದ್ದರು. ಈ ಮೂಲಕ ಬೆಂಗಳೂರಿನ ಪ್ರೇಕ್ಷಕರಿಗೆ ಬಾಯ್ಮುಚ್ಚು ಎಂದು ಹೇಳಿದ್ದ ಗಂಭೀರ್​ಗೆ ತಿರುಗೇಟು ಕೊಟ್ಟಿದ್ದರು.

ಇದನ್ನೂ ಓದಿ: Youngest Players To Smash A Century In IPL: ಐಪಿಎಲ್​ನಲ್ಲಿ ಶತಕ ಬಾರಿಸಿದ ಕಿರಿಯ ಬ್ಯಾಟ್ಸ್​ಮನ್​​ಗಳು

ನವಿನ್​ ಉಲ್​ ಹಕ್​ ಜತೆಯೂ ಜಗಳ

ಗಂಭೀರ್​ ಜತೆ ಜಗಳವಾಗುವ ಮೊದಲು ಲಕ್ನೊ ಬೌಲರ್​ ನವೀನ್​ ಉಲ್​ ಹಕ್​ ಜತೆಯೂ ಕಾದಾಡಿದ್ದರು ಕೊಹ್ಲಿ. ನವೀನ್ ಬ್ಯಾಟಿಂಗ್ ಮಾಡುವ ವೇಳೆ ಅವರಿಬ್ಬರ ನಡುವೆ ವಾಕ್ಸಮರ ನಡೆದಿತ್ತು. ಈ ವೇಳೆ ಕೊಹ್ಲಿ ತಮ್ಮ ಶೂಗೂ ಸಮಾನವಲ್ಲ ಎಂಬ ರೀತಿಯಲ್ಲಿ ಸಂಕೇತ ತೋರಿದ್ದರು. ಪಂದ್ಯ ಮುಗಿದ ಬಳಿಕ ಹಸ್ತ ಲಾಘವ ಮಾಡುವ ವೇಳೆ ನವೀನ್​ ಮತ್ತು ಕೊಹ್ಲಿಯ ನಡುವೆ ಮತ್ತೆ ಅದೇ ಸಣ್ಣ ಸೆಣಸಾಟ ನಡೆಯಿತು.

ಸದಾ ಜಗಳ

ಗೌತಮ್​ ಗಂಭೀರ್ ಕ್ರಿಕೆಟ್​ ಆಡುತ್ತಿದ್ದ ಸಮಯದಿಂದಲೂ ಕೊಹ್ಲಿಯ ಬಗ್ಗೆ ಅಸಹನೆ ಹೊಂದಿದ್ದರು. ಅವರು ಕೋಲ್ಕೊತಾ ತಂಡದ ಪರ ಐಪಿಎಲ್​ ಆಡುತ್ತಿದ್ದ ವೇಳೆಯೂ ಕೊಹ್ಲಿಯ ಜತೆ ಜಗಳ ಮಾಡಿಕೊಂಡಿದ್ದರು. ಆ ಘಟನೆ ಬಳಿಕ ಅವರಿಬ್ಬರ ಜಿದ್ದು ಜೋರಾಗಿತ್ತು. ಗಂಭೀರ್ ಸಿಕ್ಕ ಅವಕಾಶವನ್ನೆಲ್ಲ ಕೊಹ್ಲಿಯನ್ನು ಟೀಕೆ ಮಾಡಲು ಬಳಸಿಕೊಂಡಿದ್ದಾರೆ. ಕೊಹ್ಲಿ ಶತಕ ಹೊಡೆದಾಗಲೂ ಟೀಕಿಸುವ ಮಟ್ಟಕ್ಕೆ ಬಂದಿತ್ತು. ಕೊನೆಗೆ ಗಂಭೀರ್​ ಟೀಕೆ ನಗೆಪಾಟಲಿಗೆ ಈಡಾಗಲು ಶುರುವಾಗಿತ್ತು.

Exit mobile version