ಮುಂಬೈ: ರನ್ ಮಷೀನ್ ವಿರಾಟ್ ಕೊಹ್ಲಿ (Virat Kohli) ಮೈದಾನದಲ್ಲಿ ಎಷ್ಟು ಅಗ್ರೆಸ್ಸಿವ್ ಆಗಿರುತ್ತಾರೋ, ಜಿಮ್‌ನಲ್ಲೂ ಅಷ್ಟೇ ಅಗ್ರೆಸ್ಸಿವ್ ಆಗಿ ಕಸರತ್ತು ನಡೆಸುತ್ತಾರೆ. ಹಾಗಾಗಿಯೇ ಅವರು ಜಗತ್ತಿನಲ್ಲೇ ಫಿಟ್ಟೆಸ್ಟ್ ಕ್ರೀಡಾಪಟುಗಳಲ್ಲಿ ಒಬ್ಬರು ಎನಿಸಿದ್ದಾರೆ. ಇನ್ನು ಯುಎಇಯಲ್ಲಿ ಆಗಸ್ಟ್ ೨೭ರಿಂದ ಆರಂಭವಾಗುವ ಏಷ್ಯಾ ಕಪ್‌ನಲ್ಲಿ ಆಡಲು ತಂಡಕ್ಕೆ ಮರಳಿರುವ ವಿರಾಟ್ ಕೊಹ್ಲಿ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಪ್ರ್ಯಾಕ್ಟೀಸ್ ಆರಂಭಿಸಿದ್ದ ವಿರಾಟ್, ಈಗ ಜಿಮ್‌ನಲ್ಲೂ ಭರ್ಜರಿಯಾಗಿ ಕಸರತ್ತು ನಡೆಸಿದ್ದು, ವರ್ಕೌಟ್ ಮಾಡಿದ ವಿಡಿಯೊ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ತಂಡಕ್ಕೆ ಮರಳುತ್ತಿರುವುದು ಆನೆಬಲ ಬಂದಂತಾಗಿದ್ದರೂ, ಅವರು ಫಾರ್ಮ್ ಕೊರತೆಯಿಂದ ಬಳಲುತ್ತಿರುವ ಕಾರಣ ಕೊಹ್ಲಿ ಪ್ರದರ್ಶನದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಬಿಸಿಸಿಐ ಆಯ್ಕೆ ಸಮಿತಿಯ ಕಣ್ಣೂ ವಿರಾಟ್ ಮೇಲಿವೆ. ೨೦೧೯ರ ಬಳಿಕ ಕೊಹ್ಲಿ ಶತಕ ಸಿಡಿಸದಿರುವುದು ಹಾಗೂ ಅವರ ಅಭಿಮಾನಿಗಳು ಮತ್ತೆ ಬ್ಯಾಟಿಂಗ್ ವೈಭವ ನೋಡಲು ಕಾತುರರಾಗಿರುವುದೂ ಏಷ್ಯಾ ಕಪ್ ಪಂದ್ಯಗಳಿಗಾಗಿ ಕಾಯುವಂತೆ ಮಾಡಿದೆ. ಹಾಗಾಗಿ, ವಿರಾಟ್ ಭರ್ಜರಿ ವರ್ಕೌಟ್ ಮೂಲಕ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ.
ಕೊಹ್ಲಿಗೆ ಮಹತ್ವದ ಪಂದ್ಯ:
ಏಷ್ಯಾ ಕಪ್‌ನ ಮೊದಲ ಪಂದ್ಯವೇ ಆಗಸ್ಟ್ ೨೮ರಂದು ಪಾಕಿಸ್ತಾನ ವಿರುದ್ಧ ನಡೆಯಲಿದ್ದು, ಈ ಪಂದ್ಯ ಮಾಜಿ ನಾಯಕನ ಪಾಲಿಗೆ ಮಹತ್ವದ್ದಾಗಿದೆ. ಪಾಕ್ ವಿರುದ್ಧ ನಡೆಯುವ ಪಂದ್ಯವು ಕೊಹ್ಲಿಗೆ ೧೦೦ನೇ ಅಂತಾರಾಷ್ಟ್ರೀಯ ಟಿ-೨೦ ಪಂದ್ಯವಾಗಿದ್ದು, ಸಿಡಿದೇಳುವ ನಿರೀಕ್ಷೆ ಇದೆ.
ಇದನ್ನೂ ಓದಿ | Asia Cup Cricket | ಬ್ಯಾಟಿಂಗ್ ಸುಧಾರಣೆಗೆ ಆರ್‌ಸಿಬಿ ಕೋಚ್ ಮೊರೆ ಹೋದ ವಿರಾಟ್ ಕೊಹ್ಲಿ