ನವದೆಹಲಿ: ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಹಾಗೂ ನಟಿ ಅನುಷ್ಕಾ ಶರ್ಮಾ (Anushka Sharma) ದಂಪತಿಗೆ ಎರಡನೇ ಮಗು ಜನಿಸಿದೆ. ಫೆಬ್ರವರಿ 15ರಂದು ಗಂಡು ಮಗು ಜನಿಸಿರುವುದಾಗಿ ದಂಪತಿ ಘೋಷಿಸಿದ್ದಾರೆ. ಅನುಷ್ಕಾ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ ಖಾತೆ ಮೂಲಕ ಮಗುವಿಗೆ ಅಕಾಯ್ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ.
“ನಮ್ಮ ಹೃದಯ ಸಂತೋಷದಿಂದ ತುಂಬಿದೆ. ಫೆಬ್ರವರಿ 15ರಂದು ಗಂಡು ಮಗು ಜನಿಸಿದೆ ಎನ್ನುವ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇವೆ. ವಾಮಿಕಾಳಿಗೆ ತಮ್ಮ ಅಕಾಯ್ (Akaay) ಬಂದಿದ್ದಾನೆ. ಈ ಸಂದರ್ಭದಲ್ಲಿ ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಯನ್ನು ಬಯಸುತ್ತೇವೆ. ಅದೇ ರೀತಿ ನಮ್ಮ ಖಾಸಗಿತನವನ್ನೂ ಗೌರವಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇವೆʼʼ ಎಂದು ವಿರುಷ್ಕಾ ದಂಪತಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದರು.
ಅಕಾಯ್ ಪದದ ಅರ್ಥ ಏನು?
ಈ ಮಧ್ಯೆ ಅಕಾಯ್ ಹೆಸರು ಹಲವರ ಗಮನ ಸೆಳೆದಿದೆ. ಅನೇಕರು ಈ ವಿಶೇಷ ಹೆಸರಿನ ಅರ್ಥ ಹುಡುಕಲು ಆರಂಭಿಸಿದ್ದಾರೆ. ಇದು ‘ಕಾಯಾ’ ಎಂಬ ಹಿಂದಿ ಪದದಿಂದ ಬಂದಿದೆ. ಇದರರ್ಥ ‘ದೇಹ’. ಅಕಾಯ್ ಎಂದರೆ ತನ್ನ ಭೌತಿಕ ದೇಹಕ್ಕಿಂತ ಹೆಚ್ಚಿನದನ್ನು ಹೊಂದಿರುವವನು. ಇನ್ನು ಟರ್ಕಿಶ್ ಭಾಷೆಯಲ್ಲಿ ‘ಅಕಾಯ್’ ಎಂಬ ಪದದ ಅರ್ಥ ‘ಹೊಳೆಯುವ ಚಂದ್ರ’ (Shining moon). ಒಟ್ಟಿನಲ್ಲಿ ದಂಪತಿ ತಮ್ಮ ಮಗನಿಗೆ ವಿಶಿಷ್ಟ ಹೆಸರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಕೊಹ್ಲಿ-ಅನುಷ್ಕಾ ದಂಪತಿಗೆ ಮೊದಲ ಮಗು 2021ರಲ್ಲಿ ಜನಿಸಿತ್ತು. ಈ ಹೆಣ್ಣು ಮಗುವಿಗೆ ವಾಮಿಕಾ ಎಂದು ಹೆಸರಿಡಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಅಕಾಯ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾನೆ. ವಿರಾಟ್ ಕೊಹ್ಲಿ ತಮಗೆ ಮಗು ಜನಿಸಿದ ಮಾಹಿತಿಯನ್ನು ಪೋಸ್ಟ್ ಮಾಡಿದ ಕೆಲವೇ ತಾಸುಗಳಲ್ಲಿ 50 ಲಕ್ಷ ಮಂದಿ ಲೈಕ್ ಬಟನ್ ಒತ್ತಿದ್ದರು. ಜತೆಗೆ ಸಿನಿಮಾ, ಕ್ರೀಡಾರಂಗದ ಸೆಲೆಬ್ರಿಟಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ. ನಟ ರಣವೀರ್ ಸಿಂಗ್, ನಟಿ ರಾಕುಲ್ ಪ್ರೀತ್ ಸಿಂಗ್ ಮತ್ತಿತರರು ಅಭಿನಂದಿಸಿದ್ದಾರೆ. ಅಲ್ಲದೆ ಐಪಿಎಲ್ ತಂಡಗಳೂ ಶುಭ ಹಾರೈಸಿವೆ. ಕೊಹ್ಲಿಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ಮತ್ತಿತರ ತಂಡಗಳು ವಿರುಷ್ಕಾ ದಂಪತಿಗೆ ಹಾರೈಸಿವೆ.
ಇದನ್ನೂ ಓದಿ: Virat Kohli : ವಿರಾಟ್ ಕೊಹ್ಲಿ, ಅನುಷ್ಕಾ ದಂಪತಿಗೆ ಗಂಡು ಮಗು; ಹೆಸರು ಅಕಾಯ್
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2017ರ ಡಿಸೆಂಬರ್ 11ರಂದು ಇಟಲಿಯಲ್ಲಿ ಸಪ್ತಪದಿ ತುಳಿದಿದ್ದರು. 2024ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎ.ಬಿ.ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅನುಷ್ಕಾ ಶರ್ಮಾ ಅವರ ಗರ್ಭಧಾರಣೆಯ ವರದಿಗಳನ್ನು ದೃಢಪಡಿಸಿದ್ದರು. “ಹೌದು, ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದು ಕುಟುಂಬದ ಸಮಯ ಮತ್ತು ವಿಷಯ. ಅವರಿಗೆ ಅದು ಮುಖ್ಯ. ಹೆಚ್ಚಿನ ಜನರ ಆದ್ಯತೆ ಕುಟುಂಬ ಎಂದು ನಾನು ಭಾವಿಸುತ್ತೇನೆ. ಭಾರತ ತಂಡದಲ್ಲಿ ನಾವು ವಿರಾಟ್ ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ. ಆದರೆ ಅವರು ರಜೆ ತೆಗೆದುಕೊಂಡಿರುವುದು ಸರಿಯಾದ ನಿರ್ಧಾರʼʼ ಎಂದು ಹೇಳಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ