ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (IOC Session) 141ನೇ ಅಧಿವೇಶನ ಮುಂಬಯಿಯಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಇದೇ ಅಕ್ಟೋಬರ್ 15ರಿಂದ 17ರ ತನಕ ನಡೆಯಲಿದೆ. ಅಕ್ಟೋಬರ್ 14ರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅಧಿವೇಶನ ಉದ್ಘಾಟಿಸಲಿದ್ದಾರೆ. ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ಭಾರತ ಮತ್ತು ವಿದೇಶದ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕತಾರ್, ಜೋರ್ಡಾನ್, ಮೊನಾಕೊ, ಲಕ್ಸಂಬರ್ಗ್ ಮತ್ತು ಭೂತಾನ್ ದೇಶಗಳ ಮುಖ್ಯಸ್ಥರು, ಗ್ರೇಟ್ ಬ್ರಿಟನ್ ಮತ್ತು ಲಿಕ್ಟನ್ ಸ್ಟೈನ್‌ನ ರಾಜಮನೆತನದ ಸದಸ್ಯರೊಂದಿಗೆ ಈ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದು ಅದಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಇವರ ಜತೆಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಕ್, ಭಾರತೀಯ ಒಲಿಂಪಿಕ್ ಸಂಸ್ಥೆ ಸೇರಿದಂತೆ ವಿವಿಧ ಕ್ರೀಡಾ ಒಕ್ಕೂಟಗಳ ಪ್ರತಿನಿಧಿಗಳು, ಅನೇಕ ಹಿರಿಯ ಕ್ರೀಡಾಳುಗಳು ಭಾಗವಹಿಸಲಿದ್ದಾರೆ. ಈ ಅಧಿವೇಶನ ಭಾರತಕ್ಕೆ ಸಂದ ಹೆಮ್ಮೆ(Vistara Editorial).
ಭಾರತದ ನೇತೃತ್ವದಲ್ಲಿ ನಡೆದಿದ್ದ ಜಿ-20 ಸಮಾವೇಶ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಜಾಗತಿಕವಾಗಿ ಮೆಚ್ಚುಗೆ ಕೇಳಿಬಂದಿದೆ. ಆ ಯಶಸ್ವಿ ಸಮಾವೇಶದ ನಂತರ ಭಾರತದಲ್ಲಿ ನಡೆಯುತ್ತಿರುವ ಮತ್ತೊಂದು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಇದಾಗಿದೆ. 40 ವರ್ಷಗಳ ನಂತರ ಭಾರತದಲ್ಲಿ ಐಒಸಿ ಅಧಿವೇಶನ ನಡೆಯುತ್ತಿದೆ. ಐಒಸಿ ಅಧಿವೇಶನವು ಒಲಿಂಪಿಕ್ ಕ್ರೀಡಾಕೂಟದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸರ್ವೋಚ್ಚ ಸಂಸ್ಥೆಯಾಗಿದೆ. ಇದು ಒಲಿಂಪಿಕ್ ಚಾರ್ಟರ್ ಅನ್ನು ಅಳವಡಿಸಿಕೊಳ್ಳುವುದು ಅಥವಾ ಪರಿಷ್ಕರಿಸುವುದು, ಐಒಸಿ ಸದಸ್ಯರು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡುವುದು ಹಾಗೂ ಒಲಿಂಪಿಕ್ಸ್‌ನ ಆತಿಥೇಯ ನಗರವನ್ನು ಆಯ್ಕೆ ಮಾಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹೊಂದಿರುತ್ತದೆ. 2022ರ ಫೆಬ್ರವರಿಯಲ್ಲಿ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ನಡೆದ ಬಿಡ್ಡಿಂಗ್ ಐಒಸಿ ಸದಸ್ಯರಾದ ನೀತಾ ಅಂಬಾನಿ ಬಿಡ್ಡಿಂಗ್‌ನಲ್ಲಿ ಭಾಗವಹಿಸಿದ್ದರು. ಈ ಐತಿಹಾಸಿಕ ಸಭೆಯಲ್ಲಿ ಭಾರತದ ಪರವಾಗಿ ಒಟ್ಟು 76 ಮತಗಳಲ್ಲಿ 75 ಮತಗಳು ಲಭಿಸಿವೆ. ಒಲಿಂಪಿಕ್ ಕ್ರೀಡಾಕೂಟವನ್ನು ಭಾರತಕ್ಕೆ ತರುವ ಪ್ರಯತ್ನದಲ್ಲಿ ಇದು ಪ್ರಮುಖವಾದ ಹೆಜ್ಜೆಯಾಗಿದೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಪುಕ್ಕಟೆ ವಿದ್ಯುತ್ ಗಿಮಿಕ್‌ನಿಂದಾಗಿ ರಾಜ್ಯವೇ ಕಗ್ಗತ್ತಲೆಯಲ್ಲಿ ಮುಳುಗದಿರಲಿ!
ಐಒಸಿ ಅಧಿವೇಶನ ಭಾರತಕ್ಕೆ ಲಗ್ಗೆಯಿಟ್ಟರೂ ಒಲಿಂಪಿಕ್ ಕ್ರೀಡಾಕೂಟವೂ ಭಾರತಕ್ಕೆ ಬರುತ್ತದೆಯೇ ಎಂಬುದು ಪ್ರಶ್ನೆ ಇನ್ನೂ ಇದೆ. ನೀತಾ ಅಂಬಾನಿ ಕ್ರೀಡಾಕೂಟವನ್ನೂ ಭಾರತಕ್ಕೆ ತರುವ ಕನಸು ಕಾಣುತ್ತಿದ್ದಾರೆ. ಹೀಗಾಗಿ ಭಾರತದಲ್ಲಿ ಐಒಸಿ ಅಧಿವೇಶನಗಳು ನಡೆಯುವುದು ಈ ನಿಟ್ಟಿನಲ್ಲಿ ಪ್ರಾಮುಖ್ಯವಾಗಿದೆ. ಒಲಿಂಪಿಕ್ಸ್ಗೆ ಆತಿಥ್ಯ ವಹಿಸುವ ನಗರವನ್ನು ಆಯ್ಕೆ ಮಾಡುವುದೂ ಈ ಸಭೆಯಲ್ಲಿ ಚರ್ಚೆಯಾಗುತ್ತದೆ. ಹಾಗೆಯೇ ನೂತನ ಕ್ರೀಡೆಗಳನ್ನು ಇದರಲ್ಲಿ ಸೇರಿಸಲಾಗುತ್ತದೆ ಕೂಡ. ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಮತ್ತು ಸ್ಕ್ವಾಷ್ ಅನ್ನು ಸೇರಿಸಲು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧಿಕೃತವಾಗಿ ಒಪ್ಪಿಕೊಂಡಿದೆ. ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಎರಡೂ ಕ್ರೀಡೆಗಳನ್ನು ಲಾಸ್ ಏಂಜಲಿಸ್ ಸಂಘಟನಾ ಸಮಿತಿಯು ಶಿಫಾರಸು ಮಾಡಿತ್ತು. ಅಂತಿಮವಾಗಿ ಇದನ್ನು ಉನ್ನತ ಒಲಿಂಪಿಕ್ ಸಂಸ್ಥೆ ಅಂಗೀಕರಿಸಿತು. 2022ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್ನ ಅದ್ಭುತ ಯಶಸ್ಸಿನ ನಂತರ ಕ್ರಿಕೆಟ್ ಸೇರ್ಪಡೆ ಒತ್ತಾಯ ಹೆಚ್ಚಾಗಿತ್ತು. ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಕಾಣಿಸಿಕೊಂಡಿದ್ದು 1900ರಲ್ಲಿ ಕೊನೇ ಬಾರಿ. ಹೀಗಾಗಿ ಇದು ಮಹತ್ವದ ಹೆಜ್ಜೆ ಎನಿಸಿದೆ. ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ದೇಶಗಳಲ್ಲಿ ಒಂದಾದ ಭಾರತಕ್ಕೆ ಸಹಜವಾಗಿಯೇ ಇದು ಹೆಗ್ಗಳಿಕೆ ಎನಿಸಲಿದೆ.
ಕ್ರೀಡೆ ಯಾವಾಗಲೂ ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಭರವಸೆ ಮತ್ತು ಸ್ಫೂರ್ತಿಯ ಸಂಕೇತ. ಕ್ರೀಡೆಯ ವಿಚಾರದಲ್ಲಿ ಭಾರತ ಇತ್ತೀಚೆಗೆ ಸಾಕಷ್ಟು ಯಶಸ್ವಿ ಎನಿಸಿಕೊಂಡಿದೆ. ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ನೂರಕ್ಕೂ ಅಧಿಕ ಪದಕಗಳನ್ನು ನಮ್ಮ ಬುಟ್ಟಿಗೆ ಹಾಕಿಕೊಂಡಿರುವುದು ನಮ್ಮ ಸಾಧನೆಯ ಮುಕುಟ. ವಿಶ್ವದ ಜನತೆಯನ್ನು ಒಂದಾಗಿಸುವುದು ಕ್ರೀಡೆಯಿಂದ ಸಾಧ್ಯ. ಕ್ರಿಕೆಟ್ ಮಾತ್ರವಲ್ಲದೆ ಅಥ್ಲೆಟಿಕ್ಸ್ ಮುಂತಾದ ಕ್ರೀಡೆಗಳಲ್ಲಿ ಭಾರತ ಸಾಧನೆಯ ಹೆಜ್ಜೆಗಳನ್ನಿಡುತ್ತಿದೆ. ನಲವತ್ತು ವರ್ಷಗಳ ಹಿಂದೆ, 1983ರಲ್ಲಿ ನವದೆಹಲಿ ಐಒಸಿ ಅಧಿವೇಶನದ 86ನೇ ಆವೃತ್ತಿಗೆ ಆತಿಥ್ಯ ವಹಿಸಿತ್ತು. ಅಂದಿನಿಂದ ಒಲಿಂಪಿಕ್ಸ್ ಭಾರತಕ್ಕೆ ಬರುತ್ತದೆ ಎಂಬ ಭರವಸೆಯಲ್ಲಿ ಅನೇಕ ತಲೆಮಾರುಗಳ ಆಟಗಾರರು ಕಾಯುತ್ತಿದ್ದರು. ಆದರೆ ಒಲಿಂಪಿಕ್ಸ್ ಭಾರತದಲ್ಲಿ ನಡೆಸಲು ಸಾಧ್ಯವಾಗಲಿಲ್ಲ. ಒಲಿಂಪಿಕ್ ಸಮಿತಿಯಲ್ಲಿ ಭಾರತದ ಪರವಾಗಿ ಧ್ವನಿ ಎತ್ತಲು ಯಾವುದೇ ಖಾಸಗಿ ಸದಸ್ಯರು ಇರಲಿಲ್ಲ. ಆರು ವರ್ಷಗಳ ಹಿಂದೆ, ನೀತಾ ಅಂಬಾನಿ ಐಒಸಿಯ ಮೊದಲ ಭಾರತೀಯ ಖಾಸಗಿ ಮಹಿಳಾ ಸದಸ್ಯತ್ವ ಪಡೆದರು. ಅವರ ಕಠಿಣ ಪರಿಶ್ರಮಕ್ಕೆ ಈಗ ಫಲ ಸಿಕ್ಕಿದೆ. ಐಒಸಿ ಆತಿಥ್ಯ ಭಾರತಕ್ಕೆ ಬಂದಂತೆ ಒಲಿಂಪಿಕ್ಸ್ ಕೂಡ ಬರುವ ದಿನಗಳು ದೂರವಿಲ್ಲ ಎಂಬ ಭರವಸೆ ತಾಳೋಣ.