ಹಂಗೇರಿಯ ಬುಡಾಪೆಸ್ಟ್ನಲ್ಲಿ ನಡೆಯುತ್ತಿರುವ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಅವರು ಚಿನ್ನದ ಪದಕ ಪಡೆದದ್ದಾರೆ. 88.17 ಮೀ. ದೂರ ಜಾವೆಲಿನ್ ಎಸೆದು (javelin throw) ಈ ಕೂಟದಲ್ಲಿ ಚೊಚ್ಚಲ ಮತ್ತು ಐತಿಹಾಸಿಕ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ದೇಶದ ಇತರ ಸ್ಪರ್ಧಿಗಳ ನಿರಾಶಾದಾಯಕ ಪ್ರದರ್ಶನದ ಬೇಸರವನ್ನು ನೀರಜ್ ಅವರ ಸಾಧನೆ ಮರೆಸಿದೆ. ಕನ್ನಡಿಗ ಡಿ.ಪಿ ಮನು (84.14 ಮೀ.) 6ನೇ ಸ್ಥಾನ ಪಡೆದರೆ, ಮತ್ತೋರ್ವ ಭಾರತೀಯ ಕಿಶೋರ್ ಜೇನಾ (84.77 ಮೀ.) 5ನೇ ಸ್ಥಾನಿಯಾಗಿದ್ದಾರೆ. ಈ ಮೂಲಕ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ನ ವೈಯಕ್ತಿಕ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿ ಫೈನಲ್ನಲ್ಲಿ ಮೂವರು ಭಾರತೀಯರು ಸ್ಪರ್ಧಿಸಿ ಇತಿಹಾಸ ಬರೆದರು. ನೀರಜ್ ಚೋಪ್ರಾ ಈಗಾಗಲೇ ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಗೆದ್ದಿದ್ದಾರೆ. ಇದೀಗ ವಿಶ್ವ ಚಾಂಪಿಯನ್ಶಿಪ್ನಲ್ಲಿಯೂ ಚಿನ್ನ ಗೆದ್ದು ನಾಲ್ಕು ಪ್ರಮುಖ ಟೂರ್ನಿಯಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಹಿರಿಮೆಗೆ ಪಾತ್ರರಾದರು. ಜತೆಗೆ ಡೈಮಂಡ್ ಲೀಗ್ನಲ್ಲಿಯೂ ಚಿನ್ನದ ಪದಕದಿಂದ ಮಿನುಗಿದ್ದಾರೆ. ಕಳೆದ ವರ್ಷ ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈ ಬಾರಿ ಚಿನ್ನದ ಪದಕದೊಂದಿಗೆ ಮಿಂಚಿದರು(Vistara Editorial.
ಈ ಟೂರ್ನಿಯಲ್ಲಿ ಭಾರತ ಇದುವರೆಗೆ ಕೇವಲ ಎರಡು ಪದಕ ಮಾತ್ರ ಗೆದ್ದಿತ್ತು. ಇದರಲ್ಲಿ ಒಂದು ಪದಕ ಕಳೆದ ವರ್ಷ ನೀರಜ್ ಅವರೇ ತಂದುಕೊಟ್ಟಿದ್ದರು. 2003ರ ಪ್ಯಾರಿಸ್ ವಿಶ್ವ ಕೂಟದ ಮಹಿಳೆಯರ ಲಾಂಗ್ಜಂಪ್ನಲ್ಲಿ ಅಂಜು ಬಾಬಿ ಜಾರ್ಜ್ ಮೊದಲ ಪದಕ ಪಡೆದಿದ್ದರು. ಅವರು ಕಂಚಿನ ಪದಕ ಗೆದ್ದಿದ್ದರು. ಇದೀಗ ಮತ್ತೆ ನೀರಜ್ ಪದಕ ಗೆದ್ದು ಈ ಕೂಟದಲ್ಲಿ ಭಾರತದ ಪದಕ ಸಂಖ್ಯೆಯನ್ನು ಮೂರಕ್ಕೆ ಏರಿಸಿದ್ದಾರೆ. ನೀರಜ್ 2021ರಲ್ಲಿ ಒಲಿಂಪಿಕ್ಸ್ನಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್ನಲ್ಲಿ ಚಿನ್ನದ ಪದಕ ಗೆದ್ದ ಏಕೈಕ ಭಾರತೀಯ. ನೀರಜ್ ಸುಲಭವಾಗಿ ಕ್ರೀಡಾ ತರಬೇತಿ ದೊರಕಿಸಿಕೊಳ್ಳಬಹುದಾದ ಕುಟುಂಬದಿಂದೇನೂ ಬಂದವರಲ್ಲ. ಡಿಸೆಂಬರ್ 24, 1997ರಂದು ಹರಿಯಾಣದ ಖಂಡ್ರಾ ಪಾಣಿಪತ್ನಲ್ಲಿ ಮಧ್ಯಮ ವರ್ಗದ ಕೃಷಿಕ ಹಿನ್ನೆಲೆಯ ಹರಿಯಾಣವಿ ಕುಟುಂಬದಲ್ಲಿ ಜನಿಸಿದ ನೀರಜ್, ಸ್ಥೂಲಕಾಯದಿಂದಾಗಿ ಕ್ರೀಡೆಯಲ್ಲಿ ಗೆಲುವು ಸಾಧಿಸಲಾರರು ಎಂದು ಮೊದಲು ಎಲ್ಲರೂ ಅಂದುಕೊಂಡಿದ್ದರು. ಆದರೆ ಬಾಲ್ಯದಿಂದಲೂ ಕ್ರೀಡೆಯಲ್ಲಿ ಸಾಕಷ್ಟು ಸಕ್ರಿಯರಾಗಿದ್ದ ನೀರಜ್ ಕಠಿಣ ಪರಿಶ್ರಮದ ಮೂಲಕ, ಕ್ರೀಡಾ ಅಕಾಡೆಮಿಯ ತರಬೇತಿಯ ಮೂಲಕ ಇಂದು ಈ ಹಂತ ತಲುಪಿದ್ದಾರೆ. ಟೋಕಿಯೊ ಒಲಿಂಪಿಕ್ಸ್ನ ಸಾಧನೆಯ ಬಳಿಕ ಭಾರತೀಯ ಸೇನೆ ಸೇರಿಕೊಂಡು ಇಂದು ಸುಬೇದಾರ್ ಪದವಿಗೆ ಬಡ್ತಿ ಪಡೆದಿದ್ದಾರೆ.
ಸಾಮಾನ್ಯ ಕೃಷಿ ಹಿನ್ನೆಲೆಯ, ಗ್ರಾಮೀಣ ಬದುಕಿನಿಂದ ಬಂದ ನೀರಜ್ ಚೋಪ್ರಾ ಭಾರತ ಹೆಮ್ಮೆಪಡುವ ಸಾಧನೆ ಮಾಡಿದ್ದಾರೆ ಎಂಬುದು ಕ್ರೀಡಾ ವಲಯದಲ್ಲಿ ನಾವು ಕಲಿಯಬೇಕಾದ ಪಾಠ. ನೀರಜ್ ಸೇರಿದಂತೆ ಹಲವು ಇಂಥ ಉಚ್ಚ ಮಟ್ಟದ ಸಾಧನೆ ಮಾಡಿದ ನಮ್ಮ ಹಲವು ಕ್ರೀಡಾಪಟುಗಳು ಬೆಂಕಿಯಲ್ಲಿ ಅರಳಿದ ಹೂಗಳು. ಮೊನ್ನೆ ಮೊನ್ನೆ ಚೆಸ್ ಫೈನಲ್ ತಲುಪಿದ ತಮಿಳುನಾಡಿನ ಪ್ರಜ್ಞಾನಂದ ಅವರನ್ನೂ ಇಲ್ಲಿ ಗಮನಿಸಬಹುದು.
ಇಂದು ಕ್ರಿಕೆಟ್ ಮಾತ್ರವಲ್ಲ, ಹಲವು ಕ್ರೀಡೆಗಳಲ್ಲಿ ಭಾರತೀಯರು ವಿಶ್ವವಿಕ್ರಮ ಮೆರೆಯುತ್ತಿದ್ದಾರೆ. ಕಳೆದ ವರ್ಷ ನವದೆಹಲಿಯಲ್ಲಿ ನಡೆದ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಚಿನ್ನದ ಪದಕ ಜಯಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಭಾರತದ ಮಹಿಳಾ ಬಾಕ್ಸರ್ಗಳು ವಿಶ್ವಮಟ್ಟದಲ್ಲಿ ಗಣನೀಯ ಸಾಧನೆ ಮಾಡುತ್ತಿದ್ದಾರೆ. ಚೆಸ್ನಲ್ಲಂತೂ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಅವರಿಗೆ ನಡುಕ ತಂದಿಟ್ಟ ಹಲವು ಆಟಗಾರರು ಭಾರತೀಯರೇ. ಇದೆಲ್ಲ ಎಲ್ಲಿಂದ ಆರಂಭವಾಯಿತು? ಕೆಲವು ಕ್ರೀಡಾಪಟುಗಳು ಒಲಿಂಪಿಕ್ಸ್ನಲ್ಲಿ, ಅಂತಾರಾಷ್ಟ್ರೀಯ ಪಂದ್ಯಾಟಗಳಲ್ಲಿ ಮೆರೆದು, ಪದಕಗಳನ್ನು ಗೆದ್ದು ಪ್ರಸಿದ್ಧರಾದರು. ಸಹಜವಾಗಿಯೇ ಈ ಕ್ರೀಡೆಯ ಬಗೆಗೆ ಆಸಕ್ತಿಯನ್ನು ಹೊಂದಿದ್ದ ಆದರೆ ಯಾವ ಪ್ರೋತ್ಸಾಹವನ್ನೂ ಅದುವರೆಗೆ ಪಡೆದಿರದಿದ್ದ ಗ್ರಾಮೀಣ ಪ್ರತಿಭೆಗಳು ಈ ಕ್ರೀಡೆಗಳಲ್ಲಿಯೂ ಭವಿಷ್ಯವಿದೆ ಎಂಬುದನ್ನು ಕಂಡುಕೊಂಡರು. ಕ್ರೀಡೆಗಳು ಜನಪ್ರಿಯವಾಗತೊಡಗಿದಂತೆ ಸರ್ಕಾರದ ಪ್ರೋತ್ಸಾಹ ಹೆಚ್ಚಿತಲ್ಲದೆ, ಕೋಚಿಂಗ್ ಸೌಲಭ್ಯ ಕೂಡ ಹೆಚ್ಚಿತು. ಜನರ ಕುತೂಹಲ ಹಾಗೂ ಕ್ರೀಡೆಗೆ ಪೋಷಣೆ ಕೂಡ ಹೆಚ್ಚಿತು. ಇದೊಂದು ಬಗೆಯ ಸರಣಿ ಪ್ರತಿಕ್ರಿಯೆ. ಆದ್ದರಿಂದ ನಾವು ಈ ಕ್ರೀಡೆಗಳ ಮೊದಲ ತಲೆಮಾರಿನ ಸಾಧಕ- ಸಾಧಕಿಯರಿಗೆ ಕೃತಜ್ಞರಾಗಿರಬೇಕು.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಕೋಚಿಂಗ್ ಸೆಂಟರ್ಗಳ ರಾಜಧಾನಿ ಕೋಟಾದಲ್ಲಿ ಸರಣಿ ಆತ್ಮಹತ್ಯೆ ಆತಂಕಕಾರಿ
ಆದರೆ ಇವುಗಳಿಗೆ ಇನ್ನಷ್ಟು ಪೋಷಣೆ ಬೇಕಿದೆ. ಮುಖ್ಯವಾಗಿ ಗ್ರಾಮೀಣ ಪರಿಸರದಲ್ಲಿ ಈ ಕ್ರೀಡೆಗಳಿಗೆ ಬೇಕಾದ ಕೋಚಿಂಗ್ ಲಭ್ಯವಿಲ್ಲ. ಪ್ರತಿಭೆಗಳನ್ನು ಗುರುತಿಸುವ ವ್ಯವಸ್ಥೆಯೂ ಇಲ್ಲ. ಇದು ಸಿದ್ಧವಾಗಬೇಕು. ಮಹಿಳಾ ಬಾಕ್ಸರ್ಗಳಿಗೆ ಕೇಂದ್ರ, ರಾಜ್ಯ ಸರ್ಕಾರಗಳು, ಕ್ರೀಡಾ ಪ್ರಾಧಿಕಾರಗಳು ಮತ್ತಷ್ಟು ಪ್ರೋತ್ಸಾಹ ನೀಡಿದರೆ ಭವಿಷ್ಯದಲ್ಲಿ ಇವರು ಇನ್ನಷ್ಟು ಸಾಧನೆ ಮಾಡುವುದರಲ್ಲಿ ಸಂದೇಹವಿಲ್ಲ. ಹೊಸ ಪ್ರತಿಭೆಗಳೂ ಸಿದ್ಧರಾಗುತ್ತಾರೆ. 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಲಿರುವ ನೀರಜ್, ಮತ್ತೊಂದು ಚಿನ್ನದ ಪದಕದ ಭರವಸೆ ಮೂಡಿಸಿದ್ದಾರೆ. ಭಾರತದ ಮಹಿಳಾ ಬಾಕ್ಸರ್ಗಳೂ ಹೆಚ್ಚು ಪದಕ ಗೆಲ್ಲುವ ಆಶಾಕಿರಣವಿದೆ. ಇವರಿಗೆ ಸೂಕ್ತ ಪ್ರೋತ್ಸಾಹ, ಅಭ್ಯಾಸಕ್ಕೆ ಮೂಲಸೌಕರ್ಯಗಳನ್ನು ಒದಗಿಸಬೇಕು. ಕ್ರಿಕೆಟ್ನ ಕಣ್ಣು ಕೋರೈಸುವ ಜನಪ್ರಿಯತೆ ಹಾಗೂ ಶ್ರೀಮಂತಿಕೆಯ ಮುಂದೆ ಇತರ ಕ್ರೀಡೆಗಳು ಮಂಕಾಗದಂತೆ ನೋಡಿಕೊಳ್ಳಬೇಕಿದೆ.
ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.