Site icon Vistara News

ವಿಸ್ತಾರ ಸಂಪಾದಕೀಯ: ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ, ಯುವ ಕ್ರಿಕೆಟಿಗರಿಗೆ ಸ್ಫೂರ್ತಿ

Virat kohli

ಧನಿಕ ಕ್ರಿಕೆಟ್​ನ ಸರ್ವಶ್ರೇಷ್ಠ ಬ್ಯಾಟರ್​ ವಿರಾಟ್ ಕೊಹ್ಲಿ (Virat Kohli) ಅವರು ‘ಭಾರತದ ಕ್ರಿಕೆಟ್​ ದೇವರು’ ಸಚಿನ್​ ತೆಂಡೂಲ್ಕರ್ (Sachin Tendulkar) ಶತಕಗಳ ದಾಖಲೆ ಮುರಿದ್ದಾರೆ. ವಿರಾಟ್ ಈಗ ಏಕ ದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ‘ಏಕೈಕ ಆಟಗಾರ’ ಎಂಬ ವಿಶ್ವ ದಾಖಲೆ ಬರೆದಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಕಪ್ ಸೆಮಿ ಫೈನಲ್ ಪಂದ್ಯದಲ್ಲಿ (ICC World Cup 2023) ಅವರು ತಮ್ಮ 50ನೇ ಶತಕ ಬಾರಿಸಿದ್ದಾರೆ. ವಿಶ್ವ ಕಪ್ ಟೂರ್ನಿಯಲ್ಲೇ ಅವರು ಸಚಿನ್ ದಾಖಲೆಯ ಮುರಿದು ಗರಿಷ್ಠ ಏಕದಿನ ಶತಕಗಳ ದಾಖಲೆ ಬರೆದ ಅವರು ಇತಿಹಾಸದ ಪುಸ್ತಕದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿರುವುದು ವಿಶೇಷವಾಗಿದೆ. ಇದೇ ಸೆಮಿ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೆರಡು ದಾಖಲೆಗಳನ್ನು ಮಾಡಿದ್ದಾರೆ. ವಿಶ್ವ ಕಪ್ ಆವೃತ್ತಿಯೊಂದರಲ್ಲಿ ಅತ್ಯಧಿಕ 50 ಪ್ಲಸ್ ಸ್ಕೋರ್ ಬಾರಿಸಿದ ಆಟಗಾರ ಎಂಬ ಖ್ಯಾತಿ ಪಡೆದಿದ್ದಾರೆ. ಈ ಹಾದಿಯಲ್ಲಿ ಅವರು ಭಾರತದ ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ ಎಂಬುದೇ ವಿಶೇಷ. ಅಲ್ಲದೇ, ಅತ್ಯಧಿಕ ರನ್‌ ಗಳಿಕೆಯಲ್ಲೂ ದಾಖಲೆ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್​ ಅವರು ವಿಶ್ವಕಪ್​ ಆವೃತ್ತಿಯೊಂದರಲ್ಲಿ 11 ಪಂದ್ಯಗಳನ್ನು ಆಡಿ 673 ರನ್​ ಬಾರಿಸಿದ್ದರು. ಇದು ಈವರೆಗೆ ವಿಶ್ವಕಪ್​ನ ದಾಖಲೆಯಾಗಿಯೇ ಉಳಿದಿತ್ತು. ಈ ದಾಖಲೆಯನ್ನೂ ಕೊಹ್ಲಿ ಮುರಿದಿದ್ದಾರೆ. ಹಾಲಿ ಆವೃತ್ತಿಯ ವಿಶ್ವಕಪ್​ನಲ್ಲಿ ಸದ್ಯ 674* ಬಾರಿಸುವ ಮೂಲಕ ಈ ದಾಖಲೆ ಬರೆದಿದ್ದಾರೆ. ಹೊಸ ತಲೆಮಾರಿನ ಕ್ರಿಕೆಟ್‌ನ ಶ್ರೇಷ್ಠ ಎನಿಸಿರುವ ವಿರಾಟ್ ದಾಖಲೆಗಳ ಮೇಲೆ ದಾಖಲೆ ಮಾಡುತ್ತಿರುವುದು ಭಾರತೀಯ ಕ್ರೀಡಾ ಅಭಿಮಾನಿಗಳಿಗೆ ಪುಳಕವನ್ನುಂಟು ಮಾಡಿದೆ(Vistara Eidtorial).

ವಿರಾಟ್​ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ಅವರ ತವರು ಮೈದಾನ ಮುಂಂಬಯಿಯ ವಾಂಖೆಡೆಯಲ್ಲೇ ಅತ್ಯಧಿಕ ಶತಕಗಳ ದಾಖಲೆ​ ಮುರಿದಿರುವುದು ಕಾಕತಾಳಿಯ. ಅಪ್ಪಟ ಕ್ರಿಕೆಟ್​ ಪ್ರೇಮಿಗಳ ನಾಡು ಮುಂಬಯಿಯಲ್ಲಿ ದಾಖಲೆ ಮುರಿದಿರುವುದು ಇನ್ನೊಂದು ವಿಶೇಷ ಸಂಗತಿ. ದಾಖಲೆ ಮುರಿದ ತಕ್ಷಣ ವಿರಾಟ್​ ಗ್ಯಾಲರಿಯಲ್ಲಿದ್ದ ಸಚಿನ್​ ತೆಂಡೂಲ್ಕರ್ ಅವರಿಗೆ ತಲಬಾಗಿ ನಮಿಸಿದರು. ಇಡೀ ಮೈದಾನನವೇ ಅವರಿಗೆ ಎದ್ದು ನಿಂತು ಚಪ್ಪಾಳೆ ಹೊಡೆಯಿತು. ವಿರಾಟ್ ಅವರ ವ್ಯಕ್ತಿತ್ವವನ್ನು ಪರಿಚಯಿಸಿತು, ಎಷ್ಟೇ ದೊಡ್ಡ ಸಾಧನೆ ಮಾಡಿದರೂ ವಿನಯವಂತಿಕೆ ಮುಖ್ಯ. ಈ ವಿಷಯದಲ್ಲೂ ಸಚಿನ್ ಅವರ ಹಾದಿಯನ್ನೇ ವಿರಾಟ್ ತುಳಿಯುತ್ತಿದ್ದಾರೆ.

2008ರಲ್ಲಿ ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ, ಒಬ್ಬ ಚಾಂಪಿಯನ್ ಕ್ರಿಕೆಟಿಗನಾಗಿ ಬೆಳೆದು ಬಂದ ದಾರಿ, ಕಿರಿಯರಿಗೆ ಮಾದರಿಯಾಗಿದೆ. 35 ವರ್ಷದ ವಿರಾಟ್ ಅವರು, ಏಕದಿನ, ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ನಲ್ಲಿ ತಮ್ಮದೇ ಅಚ್ಚಳಿಯ ಪ್ರಭಾವನ್ನು ಬೀರುತ್ತಿದ್ದಾರೆ. ಐಪಿಎಲ್‌ನಲ್ಲೂ ರನ್‌ಗಳ ರಾಶಿಯನ್ನು ಪೇರಿಸಿದ್ದಾರೆ. ನಿಜಕ್ಕೂ ಅವರು ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ರಾಯಭಾರಿಯಾಗಿ ಹೊರ ಹೊಮ್ಮಿದ್ದಾರೆ. ಕ್ರಿಕೆಟ್ ಅಂಗಣದಲ್ಲಿನ ದಾಖಲೆಗಳಿಂದ ಮಾತ್ರವಲ್ಲದೇ ಅವರು ಅಂಗಣದಾಚೆಗೂ ತೋರಿರುವ ಸಂಯಮ, ವಿನಯವಂತಿಕೆಯ ಸದ್ಗುಣಗಳು ಅವರನ್ನು ಶ್ರೇಷ್ಠರ ಸಾಲಿಗೆ ಸೇರಿಸಿವೆ.

ವಿರಾಟ್ ಕೊಹ್ಲಿ ಅವರಿಗೆ ಈಗ ದಾಖಲೆಗಳು ಹೊಸದಲ್ಲ. ಬ್ಯಾಟ್ ಹಿಡಿದು ಅಂಗಣಕ್ಕೆ ಇಳಿದರೆ ಸಾಕು ದಾಖಲೆಗಳು ತಾನಾಗಿಯೇ ಸೃಷ್ಟಿಯಾಗುತ್ತ ಹೋಗುತ್ತವೆ. ಹಾಗೆ ನೋಡಿದರೆ, ದಾಖಲೆಗಳಿಗಾಗಿ ಆಡುವ ಮನಸ್ಥಿತಿಯಿಂದ ವಿರಾಟ್ ಹೊರ ಬಂದಾಗಿದೆ ಎಂಬುದು ಅವರ ಆಟವನ್ನು ನೋಡಿದರೆ ವೇದ್ಯವಾಗುತ್ತದೆ. ತಂಡದ ಗೆಲುವೇ ಮೊದಲ ಆದ್ಯತೆಯನ್ನಾಗಿಸಿಕೊಂಡಿರುವ ವಿರಾಟ್ ಪ್ರಸಕ್ತ ವಿಶ್ವಕಪ್ ಪಂದ್ಯಾವಳಿಯಲ್ಲಿ ತೋರುತ್ತಿರುವ ಗಮನಾರ್ಹ ಪ್ರದರ್ಶನವು, ಭಾರತಕ್ಕೆ ಮತ್ತೊಂದು ವಿಶ್ವಕಪ್ ತಂದುಕೊಡುವುದರಲ್ಲಿ ಯಾವುದೇ ಅನುಮಾನ ಉಳಿದಿಲ್ಲ.

ವಿರಾಟ್ ಕೊಹ್ಲಿ ಅವರು ನಾಯಕನಾಗಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಫಿಟ್ನೆಸ್ ಸಂಸ್ಕೃತಿಯನ್ನು ಅಳವಡಿಸಿದರು. ಅವರನ್ನು ಅನುಸರಿಸುತ್ತಿರುವ ಅನೇಕ ಭಾರತೀಯ ಕಿರಿಯ ಕ್ರಿಕೆಟಿಗರು ಫಿಟ್ನೆಸ್‌ಗೆ ಆದ್ಯತೆಯನ್ನು ನೀಡುತ್ತಿದ್ದಾರೆ. ಅದರ ಪ್ರತಿಫಲವನ್ನು ನಾವು ಕ್ರಿಕೆಟ್ ಅಂಗಣದಲ್ಲಿ ಕಾಣಬಹುದು. ಕೇವಲ ಬ್ಯಾಟಿನಿಂದ ಮಾತ್ರವಲ್ಲದೇ ಆಟದ ಸರ್ವಮಯ ಹಾಗೂ ಆಟದ ಆಚೆಗಿನ ಬದುಕಿನಿಂದಾಗಿಯೂ ವಿರಾಟ್ ಶ್ರೇಷ್ಠರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ವಿರಾಟ್ ಈಗ ನೀಡುತ್ತಿರುವ ಪ್ರದರ್ಶನವನ್ನು ಗಮನಿಸಿದರೆ ಇನ್ನೂ ಐದಾರು ವರ್ಷ ಅವರು ಅಗ್ರ ಕ್ರಿಕೆಟ್ ಆಟವಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಲ್ಲಿಯವರೆಗೆ ಅವರ ಬ್ಯಾಟಿನಿಂದ ಇನ್ನಷ್ಟು ದಾಖಲೆಗಳು ಹೊರ ಹೊಮ್ಮಲಿ, ಪರಿಣಾಮ ಭಾರತೀಯ ಕ್ರಿಕೆಟ್ ಉಚ್ಚ್ರಾಯ ಸ್ಥಿತಿಯನ್ನು ತಲುಪಲಿ ಎಂದು ಹಾರೈಸೋಣ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಭಾರತ ವಿರೋಧಿ ಉಗ್ರರ ಸರಣಿ ಹತ್ಯೆ; ಪ್ರತ್ಯೇಕತಾವಾದಿಗಳಿಗೆ ಕೇಡುಗಾಲ!

Exit mobile version