ಬೆಂಗಳೂರು: ಮಾರುತಿ ಸುಜುಕಿ ಕಂಪನಿ (Maruti Suzuki) ತನ್ನ ಎಲ್ಲ ಕಾರುಗಳ ಬೆಲೆಯನ್ನು ಏರಿಕೆ ಮಾಡಿದೆ. ಅದರಂತೆ ಸುಜುಕಿ ಕಂಪನಿಯ ಜನಪ್ರಿಯ ಕಾರುಗಳಾಗಿರುವ ಸೆಲೆರಿಯೊ ಹಾಗೂ ವ್ಯಾಗನ್ ಆರ್ ಕಾರುಗಳ ಬೆಲೆ 1500 ರೂಪಾಯಿಯಷ್ಟು ಏರಿಕೆಯಾಗಿದೆ. ಕೇಂದ್ರ ಸರಕಾರ ಮಾಲಿನ್ಯ ಮಾನದಂಡಗಳನ್ನು ಬಿಗಿಗೊಳಿಸಿದ ಕಾರಣ ಕಾರಿನ ಎಂಜಿನ್ನಲ್ಲಿ ಕೆಲವೊಂದು ಬದಲಾವಣೆ ಮಾಡುವುದು ಅನಿವಾರ್ಯವಾಗಿದೆ. ಈ ಬದಲಾವಣೆಗೆ ಹೆಚ್ಚುವರಿ ತಾಂತ್ರಿಕತೆಯನ್ನು ಅಳವಡಿಸಲಾಗಿದ್ದು ಅದರ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಿದೆ ಮಾರುತಿ ಸುಜುಕಿ ಕಂಪನಿ.
ಮಾರುತಿ ಸುಜುಕಿ ವ್ಯಾಗನ್ ಆರ್ಗೆ ಎಷ್ಟು ಏರಿಕೆ?
ಮಾರುತಿ ಸುಜುಕಿಯ ವ್ಯಾಗನ್ ಆರ್ ಕಾರಿಗೆ ಇದುವರೆಗೆ ಆರಂಭಿಕ ಬೆಲೆ 5.54 ಲಕ್ಷ ರೂಪಾಯಿಗಳಾಗಿದ್ದರೆ ಟಾಪ್ ಎಂಡ್ ಕಾರಿಗೆ 7.42 ಲಕ್ಷ ರೂಪಾಯಿ ನಿಗದಿ ಮಾಡಲಾಗಿತ್ತು. ಟಾಪ್ ಎಂಡ್ ಕಾರು ಜಡ್ಎಕ್ಸ್ಐ ಆಟೋಮ್ಯಾಟಿಕ್. ಹೊಸ ದರ ಪಟ್ಟಿಯ ಪ್ರಕಾರ ವ್ಯಾಗನ್ ಆರ್ ಕಾರಿನ ಆರಂಭಿಕ ಬೆಲೆ 5.56 ಲಕ್ಷ ರೂಪಾಯಿಯಿಂದ ಆರಂಭಗೊಂಡು 7.44 ಲಕ್ಷ ರೂಪಾಯಿಗಳಾಗಿವೆ. ಇದು ಎಕ್ಸ್ ಶೋರೂಮ್ ಬೆಲೆಯಾಗಿದೆ.
ಮಾರುತಿ ಸುಜುಕಿ ಸೆಲೆರಿಯೊಗೆ ಎಷ್ಟು ಬೆಲೆ ಏರಿಕೆಯಾಗಿದೆ?
ಮಾರುತಿ ಸುಜುಕಿ ಸೆಲೆರಿಯೊ ನಾಲ್ಕು ವೇರಿಯೆಂಟ್ಗಳಲ್ಲಿ ಲಭ್ಯವಿದೆ. ಎಲ್ಸ್ಎಕ್ಸ್ಐ, ವಿಎಕ್ಸ್ಐ, ಜಡ್ಎಕ್ಸ್ಐ ಹಾಗೂ ಜಡ್ಎಕ್ಸ್ಐ ಪ್ಲಸ್. ಈಗ ಮಾರುತಿ ಸುಜುಕಿ ಸೆಲೆರಿಯೊ ಕಾರಿನ ಬೆಲೆ 5.38 ಲಕ್ಷ ರೂಪಾಯಿಯಿಂದ ಆರಂಭಗೊಂಡು 7.16 ಲಕ್ಷ ರೂಪಾಯಿ ತನಕ ಆಗಿದೆ. ಒಟ್ಟಾರೆಯಾಗಿ 1500 ರೂಪಾಯಿ ಏರಿಕೆಯಾಗಿದೆ.
ಮಾರುತಿ ಸುಜುಕಿ ವ್ಯಾಗನ್ ಆರ್, ಸೆಲೆರಿಯೊ ಎಂಜಿನ್ ಬಗ್ಗೆ
ಮಾರುತಿ ಸುಜುಕಿ ವ್ಯಾಗನ್ ಆರ್ ಆರ್ ಹಾಗೂ ಸೆಲೆರಿಯೊ 1.0 ಲೀಟರ್ ಎಂಜಿನ್ ಹೊಂದಿದೆ. ಇದರಲ್ಲಿ ಸಿಎನ್ಜಿ ಆವೃತ್ತಿಯೂ ಇದೆ. ಈ ಎಂಜಿನ್ಗೆ ಐದು ಸ್ಪೀಡ್ನ ಗೇರ್ ಬಾಕ್ಸ್ ಕೂಡ ಇದೆ. ಜತೆಗೆ ಆಟೋಮ್ಯಾಟಿಕ್ ಆವೃತ್ತಿಯೂ ಲಭ್ಯವಿದೆ. ಸಿಎನ್ಜಿ ಎಂಜಿನ್ ಹೊಂದಿರುವ ಕಾರಿನಲ್ಲಿ ಮ್ಯಾನುಯಲ್ ಗೇರ್ ಬಾಕ್ಸ್ ಮಾತ್ರ ಇದೆ.
ಇದನ್ನೂ ಓದಿ : Innova Hycross : ಟಾಪ್ ಎಂಡ್ ವೇರಿಯೆಂಟ್ ಇನ್ನೋವಾ ಕಾರುಗಳ ಬುಕಿಂಗ್ ಸ್ಥಗಿತ
ಇವೆಲ್ಲದರ ನಡುವೆ ಮಾರುತಿ ಸುಜುಕಿ ಕಾರುಗಳ ಒಟ್ಟು ಮಾರಾಟ ಕಳೆದ ವರ್ಷಕ್ಕಿಂತ ಇಳಿಕೆಯಾಗಿದೆ. 2022ರಲ್ಲಿ 1,70, 395 ಕಾರುಗಳು ಮಾರಾಟವಾಗಿದ್ದರೆ, ಹಾಲಿ ವರ್ಷ 1,70, 071 ಕಾರುಗಳು ಮಾರಾಟವಾಗಿವೆ. ಮಾರುತಿ ಸುಜುಕಿ ಬ್ರೆಜಾ, ಎರ್ಟಿಗಾ, ಎಕ್ಸ್ಎಲ್6, ಎಸ್ ಕ್ರಾಸ್ ಹಾಗೂ ಗ್ರ್ಯಾಂಡ್ ವಿಟಾರಾ ಕಾರಿಗೆ ಅತಿ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ.