Site icon Vistara News

WFI Polls Row: ಹೊಸ ಕುಸ್ತಿ ಒಕ್ಕೂಟವೇ ರದ್ದು; ಕುಸ್ತಿಪಟುಗಳ ಬಿಗಿಪಟ್ಟಿಗೆ ಚಿತ್‌ ಆದ ಕೇಂದ್ರ

brijnhushan sanjaya singh

ಹೊಸದಿಲ್ಲಿ: ಹೊಸ ಅಧ್ಯಕ್ಷ ಸಂಜಯ ಸಿಂಗ್‌ (Sanjay Singh) ಸೇರಿದಂತೆ ಇತ್ತೀಚೆಗೆ ಆಯ್ಕೆಯಾದ ನೂತನ ಭಾರತೀಯ ಕುಸ್ತಿ ಒಕ್ಕೂಟವನ್ನೇ (Wrestling Federation of India – WFI) ಭಾರತದ ಕ್ರೀಡಾ ಸಚಿವಾಲಯ ರದ್ದುಗೊಳಿಸಿದೆ. ಇತ್ತೀಚೆಗೆ ಸಾಕ್ಷಿ ಮಲಿಕ್‌ (Sakshi Malik) ಸೇರಿದಂತೆ ವಿಶ್ವಖ್ಯಾತಿಯ ಹಲವು ಕುಸ್ತಿಪಟುಗಳು ಸಂಜಯ್‌ ಆಯ್ಕೆಯ ಬಗ್ಗೆ (WFI Polls Row) ಆಕ್ರೋಶ ವ್ಯಕ್ತಪಡಿಸಿದ್ದರು.

ಬಿಜೆಪಿ ಸಂಸದ ಮತ್ತು ಮಾಜಿ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಅವರ ನಿಕಟವರ್ತಿ ಸಂಜಯ್‌ ಸಿಂಗ್ ಅವರು ಗುರುವಾರ ಕುಸ್ತಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಮೇಲೆ ಬೀದಿಗಿಳಿದ ಅಗ್ರ ಕುಸ್ತಿಪಟುಗಳ ಬೆಂಬಲದೊಂದಿಗೆ ಸ್ಪರ್ಧೆಗೆ ಇಳಿದಿದ್ದ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಶೆರಾನ್ ವಿರುದ್ಧ ಸಂಜಯ್ ಸಿಂಗ್ 47ರಲ್ಲಿ 40 ಮತಗಳನ್ನು ಗಳಿಸಿದ್ದರು. ಸಂಜಯ್ ಸಿಂಗ್ ಈ ಹಿಂದೆ ಉತ್ತರ ಪ್ರದೇಶ ಕುಸ್ತಿ ಸಂಸ್ಥೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು WFI ಕೊನೆಯ ಕಾರ್ಯಕಾರಿ ಮಂಡಳಿಯ ಭಾಗವಾಗಿದ್ದರು. 2019ರಿಂದ ಅದರ ಜಂಟಿ ಕಾರ್ಯದರ್ಶಿಯಾಗಿದ್ದರು.

ರಾಷ್ಟ್ರೀಯ ಸ್ಪರ್ಧೆಗಳ ʼತರಾತುರಿʼಯ ಘೋಷಣೆಗಳ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ಕ್ರೀಡಾ ಸಚಿವಾಲಯವು ʼಡಬ್ಲ್ಯುಎಫ್‌ಐನ ಸಂವಿಧಾನದ ನಿಬಂಧನೆಗಳನ್ನು ಅನುಸರಿಸದೆʼ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಇಲಾಖೆ ಹೇಳಿದೆ.

“ಇಂತಹ ನಿರ್ಧಾರಗಳನ್ನು ಕಾರ್ಯಕಾರಿ ಸಮಿತಿಯು ತೆಗೆದುಕೊಳ್ಳಬೇಕು. ಅದರ ಮೊದಲು ಅಜೆಂಡಾಗಳನ್ನು ಪರಿಗಣನೆಗೆ ಇರಿಸಬೇಕಾಗುತ್ತದೆ. WFI ಸಂವಿಧಾನದ ಆರ್ಟಿಕಲ್ XI ಪ್ರಕಾರ ʼನೋಟಿಸ್‌ಗಳು ಮತ್ತು ಸಭೆಗಳಿಗೆ ಕೋರಂʼ ಶೀರ್ಷಿಕೆಯಡಿಯಲ್ಲಿ, EC ಸಭೆಗೆ ಕನಿಷ್ಠ ಸೂಚನೆ ಅವಧಿ 15 ದಿನ ಎಂಬುದು ಸ್ಪಷ್ಟವಾಗಿದೆ. 1/3 ಕೋರಂ ಪ್ರತಿನಿಧಿಗಳು ಇರಬೇಕು. ತುರ್ತು ಇಸಿ ಸಭೆಗೆ ಸಹ ಕನಿಷ್ಠ ಸೂಚನೆ ಅವಧಿಯು 7 ದಿನಗಳು ಮತ್ತು 1/3 ಪ್ರತಿನಿಧಿಗಳ ಕೋರಂ ಅಗತ್ಯವಿದೆ.” ಎಂದು ಕ್ರೀಡಾ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

“ಹೊಸದಾಗಿ ಚುನಾಯಿತವಾದ ಸಂಸ್ಥೆಯಲ್ಲಿ ಮಾಜಿ ಪದಾಧಿಕಾರಿಗಳ ಸಂಪೂರ್ಣ ನಿಯಂತ್ರಣ ಕಾಣುತ್ತಿದೆ. ಫೆಡರೇಶನ್‌ನ ವ್ಯವಹಾರವನ್ನು ಮಾಜಿ ಪದಾಧಿಕಾರಿಗಳು ನಿಯಂತ್ರಿಸುವುದು ಕಂಡುಬರುತ್ತಿದೆ. ಕುಸ್ತಿ ಆಟಗಾರರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ, ನ್ಯಾಯಾಲಯದ ವಿಚಾರಣೆಗೆ ಒಳಗಾಗಿರುವ ವ್ಯಕ್ತಿಯ ಪ್ರಭಾವ ಹೊಸ ಸಮಿತಿಯ ಮೇಲಿದೆ. ಇದು ಕ್ರೀಡಾ ಸಂಹಿತೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ” ಎಂದು ಪ್ರಕಟಣೆ ತಿಳಿಸಿದೆ.

ಕಳೆದ ವಾರ ನಡೆಸಿದ ಭಾವನಾತ್ಮಕ ಪತ್ರಿಕಾಗೋಷ್ಠಿಯಲ್ಲಿ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಸಂಜಯ್ ಸಿಂಗ್ ಅವರ ಆಯ್ಕೆಯನ್ನು ವಿರೋಧಿಸಿ ಮೇಜಿನ ಮೇಲೆ ತಮ್ಮ ಶೂಗಳನ್ನು ಇಟ್ಟು ಕುಸ್ತಿಯನ್ನು ತ್ಯಜಿಸುವ ನಿರ್ಧಾರವನ್ನು ಪ್ರಕಟಿಸಿದ್ದರು. ಬಜರಂಗ್‌ ಪೂನಿಯಾ ಅವರು ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್‌ ಮಾಡುವ ನಿರ್ಧಾರ ಪ್ರಕಟಿಸಿದ್ದರು. ಹಲವಾರು ಸ್ಟಾರ್ ಕುಸ್ತಿಪಟುಗಳು ಕಳೆದ ವರ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಲವಾರು ವಾರ ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ: Sakshi Malik : ಕುಸ್ತಿ ಕ್ಷೇತ್ರ ತೊರೆಯುವ ಬೆದರಿಕೆ ಒಡ್ಡಿದ ಒಲಿಂಪಿಕ್ಸ್​ ಪದಕ ವಿಜೇತೆ ಸಾಕ್ಷಿ ಮಲಿಕ್​

Exit mobile version