Site icon Vistara News

World Cup 2023 : ಮುಂಬರುವ ವಿಶ್ವ ಕಪ್​ ಮಿಸ್ ಮಾಡಿಕೊಳ್ಳಲಿರುವ ಸ್ಟಾರ್​ ಪ್ಲೇಯರ್​ಗಳ ಲಿಸ್ಟ್​ ಇಲ್ಲಿದೆ

Rishabh Pant

ನವ ದೆಹಲಿ: ಅಕ್ಟೋಬರ್ 5 ರಿಂದ ಭಾರತದಲ್ಲಿ ಪ್ರಾರಂಭವಾಗಲಿರುವ ಏಕದಿನ ವಿಶ್ವಕಪ್​​ಗೆ ಮುಂಚಿತವಾಗಿ ಎಲ್ಲ ತಂಡಗಳಲ್ಲಿ ಗಾಯದ ಆತಂಕ ಎದುರಾಗಿವೆ. ಕಳೆದ ಆವೃತ್ತಿಯ ಟಿ 20 ಏಷ್ಯಾ ಕಪ್​​ನ ಪಂದ್ಯಾವಳಿಯ ಆಟಗಾರ ಪ್ರಶಸ್ತಿ ಪಡೆದ ಶ್ರೀಲಂಕಾದ ಸ್ಟಾರ್ ಆಲ್​ರೌಂಡರ್​​ ವನಿಂದು ಹಸರಂಗ ಅವರು ಮೆಗಾ ಟೂರ್ನಮೆಂಟ್​ನಿಂದ ಹೊರಗುಳಿಯುವ ಕ್ರಿಕೆಟಿಗರ ಪಟ್ಟಿಗೆ ಸೇರಿಕೊಂಡಿದ್ದಾರೆ.

ಹಸರಂಗ ಹೊರತುಪಡಿಸಿ, ಶ್ರೀಲಂಕಾ ಕೂಡ ವಿಶ್ವಕಪ್​​ನಲ್ಲಿ ದುಷ್ಮಂತ ಚಮೀರಾ ಅವರ ಸೇವೆಯನ್ನು ಕಳೆದುಕೊಳ್ಳಲಿದೆ. ಹೀಗಾಗಿ ಯುವ ಆಟಗಾರರಾದ ಮಹೀಶ್​​ ತೀಕ್ಷಣ, ಮತೀಶಾ ಪತಿರಾನಾ ಮತ್ತು ದಿಲ್ಶಾನ್ ಮಧುಶಂಕಾ ಅವರನ್ನು ತಂಡ ಅಲಂಭಿಸಿದೆ.

ಇದೇ ರೀತಿ ಟೂರ್ನಿಯಲ್ಲಿ ಆಡಲಿರುವ ಹಲವು ತಂಡಗಳಲ್ಲಿ ಆಟಗಾರರು ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿ ಅನ್ರಿಚ್ ನೋರ್ಜೆ , ಇಂಗ್ಲೆಂಡ್​​ ವೇಗದ ಬೌಲರ್​ ಜೋಫ್ರಾ ಆರ್ಚರ್ ಮತ್ತು ಪಾಕಿಸ್ತಾನದ ಯುವ ವೇಗದ ಬೌಲರ್​ ನಸೀಮ್ ಶಾ ಕೂಡ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ಇದೇ ವೇಲೆ ಇಂಗ್ಲೆಂಡ್​ ಸ್ಟಾರ್ ಬ್ಯಾಟರ್​ ಜೇಸನ್ ರಾಯ್ ಅವರನ್ನು ಕೊನೆಯ ಕ್ಷಣದಲ್ಲಿ ತಂಡದಿಂದ ಕೈಬಿಡಲಾಗಿದೆ. ಹ್ಯಾರಿ ಬ್ರೂಕ್ ಅವರನ್ನು ಅವರ ಬದಲಿ ಆಟಗಾರನಾಗಿ ಘೋಷಿಸಲಾಗಿದೆ. ದಕ್ಷಿಣ ಆಫ್ರಿಕಾದ ಆಂಡಿಲೆ ಫೆಹ್ಲುಕ್ವಾಯೊ ಮತ್ತು ಲಿಜಾದ್ ವಿಲಿಯಮ್ಸ್ ಅವರನ್ನು ಬದಲಿ ಆಟಗಾರರಾಗಿ ದಕ್ಷಿಣ ಆಫ್ರಿಕಾ ಹೆಸರಿಸಿದೆ. ಆಫ್ರಿಕಾ ತಂಡದ ಸಿಸಾಂಡಾ ಮಗಲಾ ಅವರೂ ತಂಡದಲ್ಲಿ ಇಲ್ಲ.

ಇದನ್ನೂ ಓದಿ : Asia Cup 2023 : ಏಕ ದಿನ ಕ್ರಿಕೆಟ್​ ಇತಿಹಾಸದಲ್ಲಿಯೇ ಕಳಪೆ ಸಾಧನೆ ಮಾಡಿದ ಶ್ರೀಲಂಕಾ ತಂಡ

ನ್ಯೂಜಿಲೆಂಡ್​ ವಿಚಾರಕ್ಕೆಬಂದಾಗ ನಾಯಕ ಕೇನ್ ವಿಲಿಯಮ್ಸನ್ 2023 ರ ಐಪಿಎಲ್ ಸಮಯದಲ್ಲಿ ಗಾಯಕ್ಕೆ ಒಳಗಾಗಿದ್ದರು. ಅಲ್ಲಿಂದ ಇನ್ನೂ ಸ್ಪರ್ಧಾತ್ಮಕ ಪಂದ್ಯವನ್ನು ಆಡಿಲ್ಲ. ಅವರನ್ನು ನ್ಯೂಜಿಲೆಂಡ್​ನ ವಿಶ್ವಕಪ್ ತಂಡದಲ್ಲಿ ಸೇರಿಸಲಾಗಿದೆ ಆದರೆ ಅವರ ಫಿಟ್ನೆಸ್ ಅನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಇದಲ್ಲದೆ, ವೇಗಿ ಟಿಮ್ ಸೌಥಿ ಇತ್ತೀಚೆಗೆ ಹೆಬ್ಬೆರಳಿನ ಗಾಯದಿಂದ ಬಳಲುತ್ತಿದ್ದಾರೆ, ಇದು ಅವರನ್ನು ಸ್ಪರ್ಧೆಯಿಂದ ಹೊರಗುಳಿಯುವಂತೆ ಮಾಡುತ್ತದೆ. ಮೈಕೆಲ್ ಬ್ರೇಸ್​​ವೆಲ್​ ಅವರೂ ಗಾಯದ ಕಾರಣಕ್ಕೆ ತಂಡಿಂದ ಹೊರಗುಳಿದಿದ್ದಾರೆ.

ಭಾರತದಲ್ಲಿ ಯಾರಿಲ್ಲ?

ಭಾರತದಿಂದ ರಿಷಭ್ ಪಂತ್ ಅವಕಾಶ ಕಳೆದುಕೊಂಡ ಪ್ರಮುಖ ಆಟಗಾರ. ಕಳೆದ ವರ್ಷ ಕಾರು ಅಪಘಾತದಲ್ಲಿ ಅನುಭವಿಸಿದ ಅನೇಕ ಗಾಯಗಳಿಂದ ಚೇತರಿಸಿಕೊಳ್ಳುತ್ತಿರುವುದರಿಂದ ಟೂರ್ನಿಇಂದ ಹೊರಗುಳಿಯಲಿದ್ದಾರೆ. ಪ್ರಮುಖ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಕರೆ ಪಡೆಯಲು ವಿಫಲರಾಗಿದ್ದಾರೆ. ಪ್ರಸ್ತುತ, ಅಕ್ಷರ್ ಪಟೇಲ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ವಿಶ್ವಕಪ್​ಗೆ ಫಿಟ್ ಆಗುವ ನಿರೀಕ್ಷೆಯಿದೆ.

ಆಸ್ಟ್ರೇಲಿಯಾ ತಂಡದ ಪರ ಟ್ರಾವಿಸ್ ಹೆಡ್ ಪ್ರಸ್ತುತ ಕೈ ಗಾಯದಿಂದ ಬಳಲುತ್ತಿರುವುದರಿಂದ ಅವರ ವಿಶ್ವ ಕಪ್​ ಭವಿಷ್ಯವೂ ಗೊಂದಲದಲ್ಲಿದೆ. ಅವರು ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ಇಡೀ ಪಂದ್ಯಾವಳಿಯಲ್ಲದಿದ್ದರೂ ವಿಶ್ವಕಪ್​ನ ಕೆಲವು ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಪ್ರಸ್ತುತ ವಿಶ್ವಕಪ್ ತಂಡದ ಭಾಗವಲ್ಲದ ಮರ್ನಸ್​ ಲಾಬುಶೇನ್​ ತಂಡಕ್ಕೆ ಸೇರ್ಪಡೆಗೊಳ್ಳುವ ಅವಕಾಶಗಳಿವೆ.

Exit mobile version