Site icon Vistara News

Team India | ಭಾರತ ಕ್ರಿಕೆಟ್‌ ತಂಡಕ್ಕೆ ಯಾರು ಆಗಬಹುದು ಮುಂದಿನ ಸಾರಥಿ?

ಭಾರತ ಕ್ರಿಕೆಟ್‌

ನವ ದೆಹಲಿ: Team India ನಾಯಕರು ಯಾರು ಎಂದು ಕೇಳಿದಾಗ ಯೋಚಿಸಿ ಹೇಳಬೇಕಾದ ಪರಸ್ಥಿತಿ ಸೃಷ್ಟಿಯಾಗದೆ. ಯಾಕೆಂದರೆ ಕಳೆದ ಮೂರ್ನಾಲ್ಕು ತಿಂಗಳಲ್ಲಿ ಏಳು ನಾಯಕರು ಬೇರೆಬೇರೆ ಮಾದರಿಯಲ್ಲಿ ಭಾರತ ತಂಡದ ನೇತೃತ್ವ ವಹಿಸಿದ್ದಾರೆ.

ಕೆಲವೊಂದು ಬಾರಿ ಅನಿವಾರ್ಯತೆಗೆ ನಾಯಕತ್ವ ಬದಲಿಸಿದ್ದರೆ ಇನ್ನೂ ಕೆಲವೊಂದು ಬಾರಿ ಭವಿಷ್ಯದ ನಾಯಕನ ಆಯ್ಕೆಗೂ ಹಲವರಿಗೆ ಅವಕಾಶ ನೀಡಲಾಗಿದೆ. ವಾಸ್ತವದಲ್ಲಿ ವಿರಾಟ್‌ ಕೊಹ್ಲಿ ಕಾಯಂ ನಾಯಕತ್ವಕ್ಕೆ ವಿದಾಯ ಹೇಳಿದ ಬಳಿಕ ಇಷ್ಟೊಂದು ಬದಲಾವಣೆ ಉಂಟಾಗಿರುವುದು. ರೋಹಿತ್‌ ಶರ್ಮ ಅವರನ್ನು ಮೂರು ಮಾದರಿಯ ನಾಯಕರನ್ನಾಗಿ ಆಯ್ಕೆ ಮಾಡಲಾಗಿದ್ದರೂ ಫಿಟ್ನೆಸ್‌ ಸೇರಿದಂತೆ ನಾನಾ ಕಾರಣಗಳಿಗೋಸ್ಕರ ಅವರು ಎಲ್ಲ ಸರಣಿಗೂ ಲಭ್ಯರಾಗುತ್ತಿಲ್ಲ. ಹೀಗಾಗಿ ಹೊಸಬರು ಅವಕಾಶ ಪಡೆಯುತ್ತಿದ್ದಾರೆ.

ನಾಯಕತ್ವ ಬದಲಾವಣೆ ಬಿಸಿಸಿಐಗೆ ಪರೀಕ್ಷೆಯ ವಿಷಯವಾಗಿದ್ದರೂ, ಕ್ರಿಕೆಟ್‌ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಈ ಕುರಿತ ವಿಶ್ಲೇಷಣೆ ಇಲ್ಲಿದೆ.

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದೀರ್ಘಕಾಲ ನಾಯಕರಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಅಲ್ಲದೆ, ನಾಯಕತ್ವ ಸ್ಥಾನದಲ್ಲಿ ಹೇಗಿರಬೇಕು ಎಂಬುದಕ್ಕೆ ಮಾದರಿಯಾದವರು. ಆಟ ಕೈತಪ್ಪಿ ಹೋಗುತ್ತಿದ್ದ ಸಮಯದಲ್ಲೂ ಸ್ಥಿತಪ್ರಜ್ಞರಾಗಿ ಪಂದ್ಯವನ್ನು ಗೆಲ್ಲಲು ಅವಶ್ಯಕತೆಯಿದ್ದ ಎಲ್ಲ ತಂತ್ರಗಳನ್ನು ಉಪಯೋಗಿಸುವ ಚಾಣಾಕ್ಷ ಎಂದೇ ಹೆಸರಾದವರು. ಭಾರತವು ಮೂರು ಐಸಿಸಿ ಟ್ರೋಫಿಯನ್ನು ಎತ್ತಿದ್ದು ಇವರ ನಾಯಕತ್ವದಲ್ಲಿ.

ಇವರ ಬಳಿಕ ಆ ಪರಂಪರೆಯನ್ನು ವಿರಾಟ್ ಕೋಹ್ಲಿ ಮುಂದುವರಿಸಿದರು. ದೀರ್ಘಕಾಲದ ನಾಯಕರಾಗಿ ಭಾರತ ತಂಡವನ್ನು ಮುನ್ನಡೆಸಿದರು. ಆಟಗಾರನಾಗಿ ವಿರಾಟ್ ಅಗ್ರಸ್ಸಿವ್ ಎಂದು ಪ್ರಸಿದ್ಧರಾಗಿದ್ದರು, ಆದರೆ ನಾಯಕರಾಗಿ ವಿರಾಟ್ ಪ್ರೌಢತೆಯಿಂದ ಕಾರ್ಯ ನಿರ್ವಹಿಸಿದ್ದರು. ವಿರಾಟ್ ನಾಯಕರಾದ ಆರಂಭದ ದಿನಗಳಲ್ಲಿ ಧೋನಿಯವರಿಂದ ಸೂಕ್ತ ಸಲಹೆಗಳನ್ನು ಪಡೆದು ನಿಭಾಯಿಸುತ್ತಿದ್ದದ್ದು ಕಂಡುಬಂದಿತ್ತು. ಭಾರತ ಕ್ರಿಕೆಟ್ ತಂಡವು ವಿರಾಟ್ ನಾಯಕತ್ವದಲ್ಲಿ ವಿಶ್ವ ಕಪ್ ಅಥವಾ ಇನ್ಯಾವುದೇ ಐಸಿಸಿ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆದರೆ, ವಿರಾಟ್ ನೇತೃತ್ವದಲ್ಲಿ ಬಾರತ ಒಟ್ಟು 95 ಏಕದಿನ ಪಂದ್ಯಗಳನ್ನಾಡಿದ್ದು 65 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಮಟ್ಟಿಗೆ ವಿರಾಟ್ ಯಶಸ್ವಿ ಹಾಗೂ ಶ್ರೇಷ್ಠ ನಾಯಕ ಎಂದೇ ಹೇಳಬಹುದು.

ಭಾರತ ತಂಡಕ್ಕೆ ಸಮರ್ಥ ನಾಯಕನ ಅಗತ್ಯತೆ

ವಿರಾಟ್ ಮೂರು ಮಾದರಿಯ ಕ್ರಿಕೆಟ್‌ನ ನಾಯಕ ಸ್ಥಾನದಿಂದ ಕೆಳಗಿಳಿದ ಬಳಿಕ ರೋಹಿತ್ ಶರ್ಮ ನಾಯಕರಾದರು. ಆದರೆ, ಈಗಿನ ಸನ್ನಿವೇಶಗಳನ್ನು ಗಮನಿಸಿದರೆ ರೋಹಿತ್ ದೀರ್ಘಕಾಲದ ನಾಯಕರಾಗಿ ಮುಂದುವರಿಯುವುದು ಅನುಮಾನ ಎನ್ನಬಹುದು. ಮುಂಬರುವ 2023ರ ಬಳಿಕ ಭಾರತ ಕ್ರಿಕೆಟ್‌ ತಂಡದ ನಾಯಕರ ಸ್ಥಾನದಲ್ಲಿ ಬದಲಾವಣೆಯಾಗುವ ಸಾಧ್ಯತೆ ಹೆಚ್ಚಾಗಿ ಕಾಣುತ್ತದೆ. ಈಗಾಗಲೇ ರೋಹಿತ್ ಶರ್ಮಾ ಪ್ರಮುಖ ಸರಣಿಯಿಂದ ದೂರವಿದ್ದರು. ಹೀಗಾಗಿ, ಘಟಾನುಘಟಿಗಳ ಅನುಪಸ್ಥಿತಿಯಲ್ಲಿ ತಂಡವನ್ನು ಯುವ ಆಟಗಾರರು ಮುನ್ನಡೆಸುವ ಸನ್ನಿವೇಶ ಎದುರಾಗಿತ್ತು.

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ರಿಷಭ್ ಪಂತ್ ನಾಯಕರಾಗಿದ್ದರು, ಐರ್ಲೆಂಡ್ ವಿರುದ್ಧದ ಸರಣಿಗೆ ಹಾರ್ದಿಕ್ ಪಾಂಡ್ಯ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಪಂದ್ಯವೊಂದರಲ್ಲಿ ಬುಮ್ರಾ ನಾಯಕರಾಗಿದ್ದರು ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಶಿಖರ್ ಧವನ್ ನಾಯಕರಾಗಿದ್ದಾರೆ. ಇದನ್ನೆಲ್ಲ ಗಮನಿಸಿದಾಗ ಬಿಸಿಸಿಐ ಭಾರತ ತಂಡದ ಮುಂದಿನ ನಾಯಕನ ಆಯ್ಕೆಯಲ್ಲಿರುವುದು ತಿಳಿಯಬಹುದಾಗಿದೆ. ಹೀಗೆ ಒಂದೊಂದು ಸರಣಿಗೆ ಒಬ್ಬೊಬ್ಬ ನಾಯಕನನ್ನು ಆಯ್ಕೆ ಮಾಡಲು ಕೆಲವೊಂದು ಅನಿರೀಕ್ಷಿತ ಘಟನೆಗಳೂ ಕಾರಣವಾಗಿತ್ತು. ಹಿರಿಯ ಆಟಗಾರರು ಲಭ್ಯವಿರಲಿಲ್ಲ, ಕೆಲವರು ಗಾಯಗೊಂಡು ಆಡಲು ಸಾಧ್ಯವಿರಲಿಲ್ಲ. ಹೀಗೆ ಅನೇಕ ಕಾರಣಗಳಿದ್ದವು. ಆದರೆ, ಭಾರತಕ್ಕೆ ಒಬ್ಬ ಸಮರ್ಥ ನಾಯಕನ ಅಗತ್ಯವಿರುವುದು ಮಾತ್ರ ಸತ್ಯದ ಸಂಗತಿಯಾಗಿದೆ. ಈ ಹಿಂದೆ ಭಾರತದ ಕೋಚ್ ರಾಹುಲ್ ದ್ರಾವಿಡ್ ಕೂಡ ಭಾರತ ತಂಡಕ್ಕೆ ಸೂಕ್ತ ನಾಯಕನ ಅವಶ್ಯಕತೆಯ ಬಗ್ಗೆ ಅಭಿಪ್ರಾಯ ಪಟ್ಟಿದ್ದರು.

ಯಾರೆಲ್ಲ ಇದ್ದಾರೆ ಈ ರೇಸ್‌ನಲ್ಲಿ?

ಮುಂದಿನ ನಾಯಕನನ್ನು ಆಯ್ಕೆ ಮಾಡುವುದು ತಿಳಿದಷ್ಟು ಸುಲಭವಾಗಿಲ್ಲ. ಏಕೆಂದರೆ ಈ ರೇಸ್‌ನಲ್ಲಿ ಅನೇಕರು ಭಾಗಿಯಾಗಿದ್ದಾರೆ. ಯಾರಿಗೆಲ್ಲ ಅವಕಾಶದ ಬಾಗಿಲು ತೆರೆದಿದೆ? ಯಾರು ಹೊಸ್ತಿಲಲ್ಲಿ ನಿಂತಿದ್ದಾರೆ? ಯಾರು ಅನಿರೀಕ್ಷಿತವಾಗಿ ಒಳ ಬರಬಹುದು ಎಂಬುದು ಪ್ರಶ್ನೆಯಾಗಿದೆ. ಈ ಬಗ್ಗೆ ಈಗಾಗಲೇ ಆಟಗಾರರ ಪರೀಕ್ಷೆ ನಡೆಯುತ್ತಿರುವುದನ್ನು ಗಮನಿಸಬಹುದು.

ಕೆ. ಎಲ್ ರಾಹುಲ್

ಕೆ.ಎಲ್ ರಾಹುಲ್ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಸಮರ್ಥ ಪ್ರದರ್ಶನ ನೀಡುವ ಆಟಗಾರ. ಇವರ ಆಟದ ಶೈಲಿ ಉತ್ತಮವಾಗಿದ್ದು ಈಗಾಗಲೇ ಭಾರತ ತಂಡದ ಆರಂಭಿಕ ಬ್ಯಾಟರ್ ಆಗಿ ಸಾಮರ್ಥ್ಯ ಪ್ರದರ್ಶನ ಮಾಡಿದ್ದಾರೆ. ಆದರೆ, ನಾಯಕರಾಗಿ ತಂಡ ಮನ್ನಡೆಸಲು ಎಷ್ಟು ಸಮರ್ಥರು? ಸಾಧಕ-ಬಾಧಕಗಳೇನು? ಎಂಬ ಪ್ರಶ್ನೆಯಿದೆ. ಈಗಾಗಲೇ ಐಪಿಎಲ್‌ನಲ್ಲಿ ಪಂಜಾಬ್ ಹಾಗೂ ಲಖನೌ ತಂಡವನ್ನು ನಾಯಕರಾಗಿ ಮನ್ನಡೆಸಿದ ಅನುಭವ ಇವರಿಗಿದೆ. ಒಟ್ಟು 42 ಪಂದ್ಯಗಳಲ್ಲಿ 20 ಪಂದ್ಯಗಳಲ್ಲಿ ಕೆ.ಎಲ್ ರಾಹುಲ್ ನೇತೃತ್ವದ ತಂಡ ಗೆಲುವು ಸಾಧಿಸಿದೆ. ಆದರೆ, ಈವರೆಗೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ತಂಡದ ಜವಾಬ್ದಾರಿಯನ್ನು ನಿರ್ವಹಿಸಿಲ್ಲ. ಮೂರು ಮಾದರಿಯಲ್ಲಿ ಒಳ್ಳೆಯ ಫಾರ್ಮ್‌ನಲ್ಲಿದ್ದು, ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತ ಬಂದಿರುವ ಬಲಿಷ್ಠ ಆಟಗಾರ ಎನಿಸಿಕೊಂಡ ಕೆ.ಎಲ್ ರಾಹುಲ್ ಅವರಿಗೆ ನಾಯಕರಾಗಿ ಸಾಮರ್ಥ್ಯವನ್ನು ಸಾಬೀತು ಪಡಿಸಲು ಒಂದು ಸುವರ್ಣಾವಕಾಶ ದೊರಕಿತ್ತು. ಆದರೆ, ರಾಹುಲ್ ಗಾಯಗೊಂಡ ಕಾರಣದಿಂದ ಈ ಅವಕಾಶ ಕೈತಪ್ಪಿತ್ತು.

ಕೆ.ಎಲ್‌ ರಾಹುಲ್

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಕೆ.ಎಲ್. ರಾಹುಲ್ ನಾಯಕರಾಗಬೇಕಿತ್ತು, ಆದರೆ ದುರದೃಷ್ಟವಷಾತ್ ಅದು ಆಗಲಿಲ್ಲ. ರಿಷಭ್ ಪಂತ್ ಹೆಗಲಿಗೆ ಈ ಜವಾಬ್ದಾರಿ ನೀಡಲಾಗಿತ್ತು. ಈ ಮುಂದೆ ಗುಣಮುಖರಾಗಿ ಬಂದ ನಂತರ ಉತ್ತಮ ಫಾರ್ಮ್ ಇದ್ದರೆ ಕೆ.ಎಲ್ ರಾಹುಲ್ ಈ ರೇಸ್‌ನಲ್ಲಿ ಮುಂಚೂಣಿಯಲ್ಲಿರುತ್ತಾರೆ. ಕೆ.ಎಲ್‌ ರಾಹುಲ್‌ ಕೆಲವೊಂದು ಆನ್‌ಫೀಲ್ಡ್‌ ನಿರ್ಣಯಗಳನ್ನು ಮಾಡುವಲ್ಲಿ ಸಫಲರಾದ ದಾಖಲೆಗಳ ಸಂಖ್ಯೆ ಕಡಿಮೆ. ಅಲ್ಲದೆ, ಅವರ ಮದುವೆಯ ಸುದ್ದಿ ಕೇಳಿಬರುತ್ತಿದೆ. ಇದು ಕೂಡ ಅವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಬಹುದು. ರೋಹಿತ್ ಶರ್ಮ ಬಳಿಕ ನಾಯಕ ಸ್ಥಾನಕ್ಕೆ ಕೇಳಿಬರುವ ಮೊದಲ ಹೆಸರು ಕೆ.ಎಲ್ ರಾಹುಲ್ ಅವರದ್ದು. ಹೀಗಾಗಿ ಏನಾಗಬಹುದು ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಿಗಿದೆ.

ರಿಷಭ್ ಪಂತ್

ರಿಷಭ್‌ ಪಂತ್ ಭಾರತದ ಅಗ್ರೆಸ್ಸಿವ್ ಯುವ ಎಡಗೈ ಬ್ಯಾಟರ್ ಹಾಗೂ ಕೀಪರ್! ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಒಟ್ಟು 56% ರಷ್ಟು ಗೆಲುವು ಸಾಧಿಸಿದ ದಾಖಲೆ ರಿಷಭ್ ಹೆಸರಲ್ಲಿತ್ತು. ಕೆ.ಎಲ್ ರಾಹುಲ್ ಲಭ್ಯವಿಲ್ಲದ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ಮುನ್ನಡೆಸುವ ಅವಕಾಶ ದಕ್ಕಿತ್ತು. ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಭಾರತ ತಂಡವು ಕಳಪೆ ಪ್ರದರ್ಶನ ನೀಡಿದ್ದು, ಸೋಲಿಗೆ ಕಾರಣವಾಗಿತ್ತು. ಆದರೆ, ನಂತರದ ಎರಡು ಪಂದ್ಯಗಳಲ್ಲಿ ಭಾರತ ರೋಚಕ ಆಟವಾಡಿತ್ತು. ಆದರೆ, ಇದೊಂದೇ ಸರಣಿಯಿಂದ ರಿಷಭ್ ಸಾಮರ್ಥ್ಯವನ್ನು ಅಳೆಯಲು ಸಾಧ್ಯವಿಲ್ಲ ಎಂಬ ಧ್ವನಿ ಕೂಡ ಕೇಳಿ ಬರುತ್ತಿದೆ. ನಾಯಕ ಸ್ಥಾನಕ್ಕೆ ಹೊಸಬರಾದ ರಿಷಭ್‌ಗೆ ಈ ಸರಣಿಯಲ್ಲಿ ಸೂಕ್ತ ಮಾರ್ಗದರ್ಶನ ಮಾಡಲು ಹಿರಿಯ ಆಟಗಾರರು ಇರಲಿಲ್ಲ. ಈಗಾಗಲೇ ಅನೇಕ ಸಾಧನೆಗಳನ್ನು ಮಾಡುತ್ತಿರುವ ರಿಷಭ್ ಹಿರಿಯರ ಮಾರ್ಗದರ್ಶನವಿದ್ದರೆ ಉತ್ತಮ ನಾಯಕರಾಗಬಹುದು ಎಂಬ ಮಾತು ಒಂದೆಡೆ ಕೇಳುತ್ತಿದೆ. ಆದರೆ, ಮತ್ತೊಂದೆಡೆ ರಿಷಭ್ ಪಂತ್ ಎದುರಿರುವ ಬಾಧಕಗಳ ಕುರಿತು ಚರ್ಚೆ ನಡೆಯುತ್ತಿದೆ.

ರಿಷಭ್‌ ಪಂತ್

ರಿಷಭ್ ಕೂಡ ಧೋನಿಯವರಂತೆ ವಿಕೆಟ್ ಹಿಂದೆ ನಿಂತು ತಂಡವನ್ನು ನಿಭಾಯಿಸುವವರು. ಆದರೆ, ಧೋನಿ ಹಾಗೆ ಸೂಕ್ಷ್ಮತೆಗಳನ್ನು ಗಮನಿಸಿ ನಿರ್ಣಯಗಳನ್ನು ಕೈಗೊಳ್ಳುವಷ್ಟು ಪ್ರೌಢತೆ ಬಂದಿಲ್ಲ. ಅದಕ್ಕೆ, ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಅವರು ಬೌಲಿಂಗ್‌ನಲ್ಲಿ ಮಾಡಿದ ಬದಲಾವಣೆಗಳು ಸಾಕ್ಷಿ ಎನ್ನಲಾಗಿದೆ. ಈ ಸರಣಿಯಲ್ಲಿ ನಾಯಕರಾಗಿದ್ದಾಗ ರಿಷಭ್ ಇಂದ ಉತ್ತಮ ಬ್ಯಾಟಿಂಗ್ ಪ್ರದರ್ಶನ ಕೂಡ ಕಂಡಿಬಂದಿಲ್ಲ. ಹೀಗಾಗಿ ಅವರಿಗೆ ತಂಡದ ಜವಾಬ್ದಾರಿಯನ್ನು ಹೊತ್ತಾಗ ಒತ್ತಡವನ್ನು ನಿಭಾಯಿಸುವ ತಂತ್ರದ ಬಗ್ಗೆ ಇನ್ನೂ ಕಲಿಯಬೇಕಿದೆ. ಎಲ್ಲದಕ್ಕಿಂತ ಮುಖ್ಯವಾಗಿ ರಿಷಭ್ ಇನ್ನೂ ಕಿರಿಯರು ಎಂಬ ಭಾವನೆಯಿದೆ. ತಂಡದಲ್ಲಿ ಬುಮ್ರಾ, ದಿನೇಶ್ ಕಾರ್ತಿಕ್ ಸೇರಿದಂತೆ ಅನೇಕ ಹಿರಿಯ ಆಟಗಾರರಿದ್ದಾಗ ಅವರನ್ನು ನಿಭಾಯಿಸುವ ಹೊಣೆ ತಂಡದ ಅತಿ ಕಿರಿಯ ಆಟಗಾರ ಪಡೆಯುವುದು ಎಷ್ಟು ಸರಿ? ಎಂಬ ಪ್ರಶ್ನೆಯಿದೆ. ಆದರೆ, ರಿಷಭ್ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದರೆ ಇದ್ಯಾವುದೂ ಲೆಕ್ಕಕ್ಕೆ ಬರುವುದಿಲ್ಲ ಎಂಬುದು ಸುಳ್ಳಲ್ಲ. ಕಿರಿಯ ಆಟಗಾರನಾದ ಕಾರಣದಿಂದ ಕ್ರಿಕೆಟ್‌ನಲ್ಲಿ ಇನ್ನೂ ಮುಂದುವರಿದು ದೀರ್ಘಕಾಲದ ನಾಯಕರಾಗಿ ಉಳಿಯಬಹುದು.

ಹಾರ್ದಿಕ್ ಪಾಂಡ್ಯ

ಒಂದು ಟೂರ್ನಿ ಭವಿಷ್ಯವನ್ನು ಬದಲಾಯಿಸಬಹುದು ಎಂಬುದಕ್ಕೆ ಹಾರ್ದಿಕ್ ಪಾಂಡ್ಯ ಸಾಕ್ಷಿಯಾಗಿದ್ದಾರೆ. ಈ ಹಿಂದೆ ನಾಯಕ ಸ್ಥಾನಕ್ಕೆ ಹೆಸರನ್ನು ಯೋಚಿಸುವಾಗ ಎಲ್ಲಿಯೂ ಹಾರ್ದಿಕ್ ಪಾಂಡ್ಯ ಹೆಸರು ಕೇಳಿಬಂದಿಲ್ಲ. ಆದರೆ, 2022ರ ಐಪಿಎಲ್‌ನಲ್ಲಿ ಗುಜರಾತ್ ತಂಡವನ್ನು ಮುನ್ನಡೆಸಿದ್ದಲ್ಲದೆ, ಟ್ರೋಫಿಯನ್ನು ಗೆದ್ದರು. ಆಲ್ ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ನಾಯಕ ಸ್ಥಾನಕ್ಕೂ ಸಿದ್ಧ ಎಂದು ಸಾಬೀತು ಮಾಡಿದರು. ಇದರ ಪರಿಣಾಮವಾಗಿ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡದ ನಾಯಕರಾದರು. ಐರ್ಲೆಂಡ್ ವಿರುದ್ಧ ಭಾರತವು ಸುಲಭಧ ಗೆಲುವು ಸಾಧಿಸಿತು. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಬಿರುಸಿನ ಆಟವನ್ನಾಡುವ ಮೂಲಕ ಆಲ್ ರೌಂಡರ್ ಆಗಿ ಮಿಂಚಿದ್ದರು. ಭಾರತಕ್ಕೆ ಒಬ್ಬ ಆಲ್ ರೌಂಡರ್ ನಾಯಕ ಇದ್ದರೆ ಅನುಕೂಲವೇ ಸರಿ. ಈ ನಿಟ್ಟನಿಲ್ಲಿ ಚಿಂತಿಸಿದಾಗ ಹಾರ್ದಿಕ್‌ ಪಾಂಡ್ಯ ಹೆಸರು ಮೊದಲು ಕೇಳಿಬರುತ್ತದೆ.

ಹಾರ್ದಿಕ್‌ ಪಾಂಡ್ಯ

ಶಿಖರ್ ಧವನ್ ಅಥವಾ ಬುಮ್ರಾ?

ಭಾರತ ಕ್ರಿಕೆಟ್ ತಂಡವು ಮೂರು ಮಾದರಿಗೂ ಒಬ್ಬರನ್ನೇ ನಾಯಕರನ್ನಾಗಿ ಮಾಡುಬಹುದೇ? ಅಥವಾ ಮೂರಕ್ಕೂ ಪ್ರತ್ಯೇಕ ನಾಯಕರನ್ನು ನೇಮಿಸಬಹುದೇ? ಎಂಬ ಒಂದು ಚಿಂತನೆಯಿದೆ. ಮೂರು ಮಾದರಿಗೂ ಒಬ್ಬರೇ ನಾಯಕರಾಗುವುದಾದರೆ ಕೆ.ಎಲ್ ರಾಹುಲ್, ರಿಷಭ್ ಪಂತ್ ಅವರಿಗೆ ಅವಕಾಶ ಹೆಚ್ಚಿದೆ ಎನ್ನಬಹುದು. ಆದರೆ, ಇನ್ನೆರಡು ಸಾಧ್ಯತೆಗಳು ತೆರದುಕೊಂಡಿವೆ. ಈ ಬಾರಿಯ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಬುಮ್ರಾ ಕೂಡ ನಾಯಕರಾಗಿ ಯಶಸ್ವಿಯಾಗಿದ್ದರು. ಹೀಗಾಗಿ ಬುಮ್ರಾ ಕೂಡ ಬಿಸಿಸಿಐಗೆ ಇರುವ ಒಂದು ಆಯ್ಕೆ ಎನ್ನಬಹುದು. ಅಂತೆಯೇ, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಶಿಖರ್ ಧವನ್‌ಗೆ ಕ್ಯಾಪ್ಟನ್ ಪಟ್ಟ ನೀಡಿದ್ದು, ಅವರ ಸಾಮರ್ಥ್ಯದ ಪರೀಕ್ಷೆ ನಡೆಯಲಿದೆ. ಆದರೆ, ಈಗಿನ ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದು ಬುಮ್ರಾ ಅಥವಾ ಶಿಖರ್ ಧವನ್ ಅವರಿಗೆ ಮುಂದೆ ಅವಕಾಶ ಕಡಿಮೆಯಾಗಬಹುದು. ಇವರಿಬ್ಬರಲ್ಲಿ ಯಾರಾದರೂ ನಾಯಕರಾದರೆ ಬಹುಶಃ 2023ರ ವಿಶ್ವ ಕಪ್ ಮಟ್ಟಿಗೆ ಆಗುವ ಸಾಧ್ಯತೆಯಿದೆ.

ಅಚ್ಚರಿಯ ಸಾಧ್ಯತೆ ಏನಿರಬಹುದು?

ಈ ಎಲ್ಲ ಸಾಧ್ಯತೆಗಳನ್ನು ಬದಿಗೊತ್ತಿ ಇನ್ನೊಬ್ಬ ಆಟಗಾರ ಈ ರೇಸ್‌ನಲ್ಲಿ ಗೆಲ್ಲಬಹುದು. ಎಲ್ಲರೂ ನಾಯಕ ಸ್ಥಾನದ ಬಾಗಿಲಲ್ಲಿ ಕಾಯುತ್ತಿರುವಾಗ ಶ್ರೇಯಸ್ ಅಯ್ಯರ್ ಮುನ್ನುಗ್ಗಿ ಒಳಗೆ ಹೋಗಬಹುದು. ಶ್ರೇಯಸ್ ಅಯ್ಯರ್ ಕೂಡ ಉತ್ತಮ ನಾಯಕ ಎಂದು ಐಪಿಎಲ್‌ನಲ್ಲಿ ಸಾಬೀತು ಮಾಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ವಿರಾಟ್ ಕೊಹ್ಲಿಯ ಸ್ಥಾನ ತುಂಬಲು ಸಮರ್ಥರು ಎಂದು ಸಾಬೀತು ಮಾಡಿದ್ದಾರೆ. ಆದರೆ, ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶ್ರೇಯಸ್ ನಾಯಕತ್ವದ ಪರೀಕ್ಷೆ ಇನ್ನೂ ಆಗಬೇಕಿದೆ. ಒಳ್ಳೆಯ ಫಾರ್ಮ್‌ನಲ್ಲಿದ್ದು, ಶಿಸ್ತಿನ ಆಟವನ್ನು ಪ್ರದರ್ಶಿಸುವ ಶ್ರೇಯಸ್ ಅಯ್ಯರ್ ಕೂಡ ನಾಯಕ ಸ್ಥಾನಕ್ಕೆ ಸೂಕ್ತ ಆಯ್ಕೆಯಾಗಬಹುದು.

ಭಾರತ ಕ್ರಿಕೆಟ್‌

ಇದನ್ನೂ ಓದಿ: Commonwealth Games ; ಇದೇ ಮೊದಲ ಬಾರಿಗೆ ಮಹಿಳೆಯರ ಕ್ರಿಕೆಟ್‌, ಭಾರತ ತಂಡ ಪ್ರಕಟ

Exit mobile version