ಕೊಲೊಂಬೊ: ಇಲ್ಲಿನ ಹಂಬಂಟೋಟದ ಮಹಿಂದಾ ರಾಜಪಕ್ಸ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ಅಫ್ಘಾನಿಸ್ತಾನ ವಿರುದ್ಧ ನಡೆದ ಮೂರು ಏಕದಿನ ಪಂದ್ಯಗಳ ಮೊದಲ ಪಂದ್ಯದಲ್ಲಿ ಲಂಕಾ ತಂಡ ಸೋಲು ಕಂಡಿದೆ. ಈ ಪಂದ್ಯದ ಬಗ್ಗೆ ಎಲ್ಲರ ಗಮನವಿದ್ದದ್ದು ಶ್ರೀಲಂಕಾ ತಂಡ ಮತೀಶಾ ಪತಿರಾನಾ ಅವರ ಮೇಲೆ. ಐಪಿಎಲ್ನಲ್ಲಿ ಸಿಎಸ್ಕೆ ವಿರುದ್ಧ ಆಡಿದ್ದ ಅವರು ಮೊದಲ ಬಾರಿಯೇ ಟ್ರೋಫಿ ಗೆದ್ದಿದ್ದರು. ಆದರೆ, ಪಂದ್ಯದಲ್ಲಿ ನೈಜವಾಗಿ ಮಿಂಚಿದ್ದು ಅಫಘಾನಿಸ್ತಾನ ತಂಡದ ಆರಂಭಿಕ ಬ್ಯಾಟರ್ ಇಬ್ರಾಹಿಂ ಜದ್ರಾನ್. ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯಂತೆಯೇ 18 ನೇ ಸಂಖ್ಯೆಯ ಜರ್ಸಿ ಧರಿಸುವ ಈ ಯುವ ಆಟಗಾರ ಪಂದ್ಯದಲ್ಲಿ 98 ರನ್ ಗಳಿಸಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಅಫಘಾನಿಸ್ತಾನ ತಂಡ ಲಂಕಾವನ್ನು ಮಣಿಸಿದೆ. ಇದೇ ವೇಳೆ ಈ ಬ್ಯಾಟರ್ ಭಾರತ ತಂಡದ ಯುವ ಪ್ರತಿಭೆ ಶುಭ್ಮನ್ ಗಿಲ್ ಸೃಷ್ಟಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.
Winning start to the series. 🇦🇫👊 pic.twitter.com/U1PSRSMOaA
— Ibrahim Zadran (@IZadran18) June 2, 2023
ಆರು ತಿಂಗಳ ಬಳಿಕ ಇಬ್ರಾಹಿಮ್ ಜದ್ರಾನ್ ಕ್ರಿಕೆಟ್ನಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಅಫ್ಘಾನಿಸ್ತಾನ ತಂಡದ 2019 ರಲ್ಲಿ ಪಾದಾರ್ಪಣೆ ಮಾಡಿದ ಜದ್ರಾನ್ ಅವರ ಸ್ಫೋಟಕ ಬ್ಯಾಟಿಂಗ್ ವೈಖರಿ ವರ್ಷದ ಹಿಂದೆ ಜಿಂಬಾಬ್ವೆ ಪ್ರವಾಸದಲ್ಲಿ ಆರಂಭಗೊಂಡಿತ್ತು. ಕಳೆದ ನವೆಂಬರ್ನಲ್ಲಿ ಶ್ರೀಲಂಕಾ ಪ್ರವಾಸದ ಸರಣಿಯಲ್ಲಿ ಮೂರು ಶತಕಗಳನ್ನು ಬಾರಿಸಿದ್ದರು. ಅಂತೆಯೇ ಶುಕ್ರವಾರ ಲಂಕಾ ನೀಡಿದ್ದ 269 ರನ್ಗಳ ಗುರಿ ಬೆನ್ನಟ್ಟಿದ್ದ ಅಫಘಾನಿಸ್ತಾನ ತಂಡದ ಪರ ಜದ್ರಾನ್ ಏಕಾಂಕಿ ಹೋರಾಟ ನಡೆಇಸದ್ದರು. 35 ಎಸೆತಗಳಲ್ಲಿ ಅರ್ಧಶತಕದ ಗಡಿ ತಲುಪಿದ್ದ ಅವರು 98 ರನ್ ಬಾರಿಸಿ ಗೆಲುವಿಗೆ ಕಾರಣರಾದರು.
ಈ ಅತ್ಯುತ್ತಮ ಪ್ರದರ್ಶನಕ್ಕಾಗಿ ಇಬ್ರಾಹಿಮ್ ಜದ್ರಾನ್ ತಮ್ಮ ಒಂಬತ್ತನೇ ಇನಿಂಗ್ಸ್ನಲ್ಲಿ 500ಕ್ಕೂ ಹೆಚ್ಚು ರನ್ ಬಾರಿಸಿದ ಹೊಸ ದಾಖಲೆ ಸೃಷ್ಟಿಸಿದ್ದರು. ಈ ಮೂಲಕ ಅವರು ಪಾಕಿಸ್ತಾನ ತಂಡದ ಇಮಾಮ್-ಉಲ್- ಹಕ್ ಅವರ ದಾಖಲೆಯನ್ನು ಸರಿಗಟ್ಟುವ ಜತೆಗೆ ಭಾರತದ ಯುವ ಬ್ಯಾಟರ್ ಶುಬ್ಮನ್ ಗಿಲ್ (10 ಇನ್ನಿಂಗ್ಸ್) ಅವರನ್ನು ಹಿಂದಿಕ್ಕಿದ್ದಾರೆ.
ಜದ್ರಾನ್ ಇದೀಗ ಅಫಘಾನಿಸ್ತಾನ ತಂಡದ ಶ್ರೇಷ್ಠ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅದಕ್ಕಿಂತ ಮೊದಲು ಅವರು ದೇಶೀಯ ಕ್ರಿಕೆಟ್ನಲ್ಲೂ ಮಿಂಚಿದ್ದರು. ಘಾಜಿ ಅಮಾನುಲ್ಲಾ ಖಾನ್ ಏಕದಿನ ಪಂದ್ಯಾವಳಿಯಲ್ಲಿ ಮತ್ತು ನಂತರ ಶ್ಪಗೆಜಾ ಕ್ರಿಕೆಟ್ ಲೀಗ್ನ ಲಿಸ್ಟ್ ಎ ಕ್ರಿಕೆಟ್ನಲ್ಲಿ ಮಿಂಚಿದ್ದರು. ಅದೇ ರೀತಿ 2017ರ ಜನವರಿಯಲ್ಲಿ ನಡೆದ 2018ರ ಅಂಡರ್ 19 ವಿಶ್ವ ಕಪ್ನಲ್ಲೂ ಮಿಂಚಿದ್ದರು.
ಇದನ್ನೂ ಓದಿ : IPL 2023 : ಧೋನಿ ಬಗ್ಗೆ ಹೊಗಳಿ ಬರೆದ ಲಂಕಾ ಬೌಲರ್ ಮತೀಶ್ ಪತಿರಾನಾ ಸಹೋದರಿ ವಿಶುಕಾ; ಕಾರಣವೇನು?
2019ರಲ್ಲಿ ಜದ್ರಾನ್ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿದ್ದರು. ಚಟ್ಟೋಗ್ರಾಮ್ ಸ್ಟೇಡಿಯಮ್ನಲ್ಲಿ ನಡೆದಿದ್ದ ಆ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ 87 ರನ್ ಗಳಿಸುವ ಮಾರ್ಗದಲ್ಲಿ ಚೊಚ್ಚಲ ಪಂದ್ಯದಲ್ಲೇ ಅರ್ಧ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿ ಪಡೆದಿದ್ದರು. ನಂತರ, ಅವರನ್ನು ಏಕದಿನ ಮತ್ತು ಟಿ 20 ಪಂದ್ಯಗಳಿಗೆ ಆಯ್ಕೆ ಮಾಡಲಾಯಿತು. ಇದೀಗ ಆಫ್ಘನ್ ತಂಡದ ಆರಂಭಿಕ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ.