ಚೆನ್ನೈ: ಐಪಿಎಲ್ 16ನೇ ಆವೃತ್ತಿಯ (IPL 2023) ಪ್ಲೇಆಫ್ ಹಂತದ ಮೊದಲ ಕ್ವಾಲಿಫೈಯರ್ ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮೇ 23ರಂದು ನಡೆಯಲಿದೆ. ಈ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ಗುಜರಾತ್ ಹಾಗೂ ಎರಡನೇ ಸ್ಥಾನ ಪಡೆದುಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೆಣಸಾಸಲಿದೆ. ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಕೊನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 77 ರನ್ಗಳ ಭರ್ಜರಿ ವಿಜಯ ಕಂಡಿತ್ತು. ಲೀಗ್ ಹಂತದ ಉದ್ದಕ್ಕೂ ತಂಡದ ಎಲ್ಲ ಆಟಗಾರರು ಗೆಲುವಿಗಾಗಿ ಎಲ್ಲ ರೀತಿಯಲ್ಲಿ ನೆರವು ನೀಡಿದ್ದರು.
ಗುಜರಾತ್ ಟೈಟನ್ಸ್ ಹಿಂದಿನ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ತಂಡದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಅದ್ಭುತ ಪ್ರದರ್ಶನ ನೀಡಿದ್ದು ಸತತ ಎರಡು ಶತಕಗಳನ್ನು ಸಿಡಿಸಿದ್ದಾರೆ. ಮೊದಲ ಶತಕ ಎಸ್ಆರ್ಎಚ್ ವಿರುದ್ಧ ಎರಡನೇ ಶತಕ ಆರ್ಸಿಬಿ ವಿರುದ್ಧ. ಮೊದಲ ಕ್ಯಾಲಿಫೈಯರ್ನಲ್ಲಿ ಮುಖಾಮುಖಿಯಾಗುವ ಎರಡೂ ತಂಡಗಳು ಬಲಿಷ್ಠವಾಗಿರುವ ಕಾರಣ ಜಿದ್ದಾಜಿದ್ದಿನ ಸ್ಪರ್ಧೆಯನ್ನು ನಿರೀಕ್ಷಿಸಬಹುದು. ಅಲ್ಲದೆ, ಗುಜರಾತ್ ತಂಡ ಚೆನ್ನೈ ವಿರುದ್ಧ ಕಳೆದ ಎರಡು ಆವೃತ್ತಿಗಳ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ.
ತಂಡಗಳ ಬಲವೇನು?
ಸಿಎಸ್ಕೆ ತಂಡದ ಪರ ಋತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೇ ಜೋಡಿ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದೆ. ಡೆವೊನ್ ಕಾನ್ವೇ ಇದುವರೆಗಿನ 13 ಇನಿಂಗ್ಸ್ಗಳಲ್ಲಿ 53.18 ಸರಾಸರಿಯಲ್ಲಿ 585 ರನ್ ಗಳಿಸಿದ್ದರೆ, ಋತುರಾಜ್ ಗಾಯಕ್ವಾಡ್ 42 ಸರಾಸರಿಯಲ್ಲಿ 504 ರನ್ ಗಳಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ತುಷಾರ್ ದೇಶಪಾಂಡೆ 14 ಪಂದ್ಯಗಳಲ್ಲಿ 20 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಮತ್ತು ಮಥೀಶಾ ಪತಿರಾಣಾ ಕ್ರಮವಾಗಿ 17 ಮತ್ತು 15 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಎಲ್ಲ ಆಟಗಾರರು ಸಿಎಸ್ಕೆಯ ಬಲವಾಗಿದ್ದು, ಗೆಲುವಿನ ಅಭಿಯಾನ ಮುಂದುವರಿಸಲಿದೆ. ಅಲ್ಲದೆ, ಮೊದಲ ಬಾರಿಗೆ ಗುಜರಾತ್ ತಂಡವನ್ನು ಸೋಲಿಸುವ ಉತ್ಸಾಹದಲ್ಲಿದೆ.
ಗುಜರಾತ್ ತಂಡ ವಿಚಾರಕ್ಕೆ ಬಂದಾಗ ಗಿಲ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಆ ತಂಡದಲ್ಲಿ ಯಾರೂ ಕೂಡ ಒಟ್ಟು 300ಕ್ಕಿಂತ ಹೆಚ್ಚು ರನ್ ಗಳಿಸಿಲ್ಲ. ಆದರೆ, ಗಿಲ್ ಏಕಾಂಗಿಯಾಗಿ 14 ಪಂದ್ಯಗಳಲ್ಲಿ 56.67 ಸರಾಸರಿಯಲ್ಲಿ 680 ರನ್ ಗಳಿಸಿದ್ದಾರೆ. ಪ್ರಸ್ತುತ, ಐಪಿಎಲ್ 2023 ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಗಿಲ್ ಎರಡನೇ ಸ್ಥಾನದಲ್ಲಿದ್ದಾರೆ ಹಾಗೂ ಆರೆಂಜ್ ಕ್ಯಾಪ್ಗೆ ಸ್ಪರ್ಧಿಯಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ ಮತ್ತು ರಶೀದ್ ಖಾನ್ ಇಬ್ಬರೂ ತಲಾ 28 ವಿಕೆಟ್ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಪರ್ಪಲ್ ಕ್ಯಾಪ್ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಗುಜರಾತ್ ತಂಡವೂ ಗೆಲುವಿನ ಆವೇಗವನ್ನು ಮುಂದುವರಿಸಲು ಎದುರು ನೋಡುತ್ತಿದೆ. ಸಿಎಸ್ಕೆ ವಿರುದ್ಧ ನಾಲ್ಕನೇ ಗೆಲುವಿನ ಗುರಿಯನ್ನು ಹೊಂದಿದೆ.
ಪಿಚ್ ರಿಪೋರ್ಟ್
ಎಂ.ಎ.ಚಿದಂಬರಂ ಸ್ಟೇಡಿಯಂನ ಮೇಲ್ಮೈ ಪಂದ್ಯದಿಂದ ಪಂದ್ಯಕ್ಕೆ ನಿಧಾನಗೊಳ್ಳುತ್ತಿದೆ. ಟಾಸ್ ಗೆಲುವಿನಲ್ಲಿ ಪಾತ್ರ ವಹಿಸಲಿದೆ. ಇಲ್ಲಿ ಮೊದಲು ಬ್ಯಾಟಿಂಗ್ ಮಾಡುವುದು ಸೂಕ್ತ ಆಯ್ಕೆ. ಆದರೆ, ಗುಜರಾತ್ ತಂಡ ಬಲವಾದ ಬೌಲಿಂಗ್ ದಾಳಿಯನ್ನು ಹೊಂದಿರುವುದರಿಂದ ಯಾವುದೇ ಮೊತ್ತವನ್ನು ರಕ್ಷಿಸಲು ಸಾಧ್ಯವಿದೆ. 170ಕ್ಕಿಂತ ಹೆಚ್ಚಿನ ಮೊತ್ತ ಬಾರಿಸಿದರಷ್ಟೇ ಗೆಲುವಿನ ಅವಕಾಶ ಇರುತ್ತದೆ.
ಇತ್ತಂಡಗಳ ಮುಖಾಮುಖಿ
ಒಟ್ಟು ಪಂದ್ಯಗಳು- 03
ಗುಜರಾತ್ ಗೆಲವು- 03
ಚೆನ್ನೈ ಗೆಲುವು- 01
ಸಂಭಾವ್ಯ ತಂಡಗಳು
ಚೆನ್ನೈ ಸೂಪರ್ ಕಿಂಗ್ಸ್ : ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಾಟಿ ರಾಯುಡು, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ ( ನಾಯಕ), ದೀಪಕ್ಹ ಚಾರ್, ತುಷಾರ್ ದೇಶಪಾಂಡೆ, ಮಹೀಶ್ ತೀಕ್ಷಣಾ.
ಇದನ್ನೂ ಓದಿ : IPL 2023 : ವಿರಾಟ್ ಕೊಹ್ಲಿಗೆ ಗಾಯ, ಟೆಸ್ಟ್ ಚಾಂಪಿಯನ್ಷಿಪ್ ಮೊದಲೇ ಟೀಮ್ ಇಂಡಿಯಾಗೆ ಆತಂಕ
ಗುಜರಾತ್ ಟೈಟನ್ಸ್: ಶುಬ್ಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆ), ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ (ಸಿ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ದಸುನ್ ಶನಕಾ, ಮೋಹಿತ್ ಶರ್ಮಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್.
ನೇರ ಪ್ರಸಾರದ ವಿವರಗಳು
ಪಂದ್ಯ ಸಮಯ: ಸಂಜೆ 07:30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಜಿಯೋ ಸಿನೆಮಾ ಅಪ್ಲಿಕೇಶನ್ ಮತ್ತು ವೆಬ್ಸೈಟ್