Site icon Vistara News

World Cup 2011: ಭಾರತದ 2ನೇ ಏಕದಿನ ವಿಶ್ವಕಪ್​ ಗೆಲುವಿಗೆ ತುಂಬಿತು 13 ವರ್ಷ

World Cup 2011

ಮುಂಬಯಿ: ‘ಇಂಡಿಯಾ ಲಿಫ್ಟ್ ದಿ ವರ್ಲ್ಡ್ ಕಪ್, ಆಫ್ಟರ್ 28 ಇಯರ್ಸ್” ಭಾರತೀಯ ಕ್ರಿಕೆಟ್ ಅಭಿಮಾನಿಗಳು ಎಂದೂ ಮರೆಯದ ಸಾಲುಗಳಿವು. ಏಪ್ರಿಲ್‌ 2ರ ರಾತ್ರಿ ಹತ್ತು ದಾಟಿದ ಹೊತ್ತು. ಮುಂಬೈಯ ವಾಂಖೆಡೆ ಮೈದಾನದಲ್ಲಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಶ್ರೀಲಂಕಾದ ಕುಲಶೇಖರನ್​ ಎಸೆತಕ್ಕೆ ಸಿಕ್ಸರ್​ ಬಾರಿಸಿ ಭಾರತಕ್ಕೆ ಜಯ ತಂದಿತ್ತರೆ, ಇಡೀ ದೇಶವೇ ಹುಚ್ಚೆದ್ದು ಕುಣಿದಿತ್ತು. ಭಾರತೀಯ ಕ್ರಿಕೆಟಿನ 28 ವರ್ಷಗಳ ಸುದೀರ್ಘ‌(World Cup History) ಕನಸೊಂದು ಸಾಕಾರಗೊಂಡಿತ್ತು. 1983 ಕಪಿಲ್​ ಡೆವಿಲ್ಸ್​ ಬಳಿಕ ಭಾರತ ಕಪ್​ ಎತ್ತಿ ಮೆರೆದಾಡಿತ್ತು. ಸಚಿನ್​ ಅವರ ವಿಶ್ವಕಪ್ ​ಬಯಕೆಯೂ ಇಲ್ಲಿ ತೀರಿತ್ತು. ಭಾರತದ ಈ ಎರಡನೇ ಏಕದಿನ ವಿಶ್ವಕಪ್(World Cup 2011) ಸಂಭ್ರಮಕ್ಕೆ ಈಗ 13 ವರ್ಷದ ಸಂಭ್ರಮ.

ಅರಬ್ಬಿ ಸಮುದ್ರ ಕೂಡ ಸ್ತಬ್ಧವಾಗಿತ್ತು!

ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ನಾಯಕ ಮಹೇಲಾ ಜಯವರ್ಧನೆ ಶತಕದ ನೆರವಿನಿಂದ 275 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಭಾರತ ತಂಡ ಗೌತಮ್ ಗಂಭೀರ್(gautam gambhir) ಅವರ 97 ರನ್ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಅಜೇಯ 91 ರನ್ ನೆರವಿನಿಂದ ಜಯಭೇರಿ ಬಾರಿಸಿ ಇತಿಹಾಸ ನಿರ್ಮಿಸಿತ್ತು. ಕ್ರಿಕೆಟ್‌ ಅಭಿಮಾನಿಗಳ ಸಂತಸದ ಅಬ್ಬರಕ್ಕೆ ಸ್ಟ್ರೇಡಿಯಂ ಸಮೀಪದ ಅರಬ್ಬಿ ಸಮುದ್ರ ಕೂಡ ಒಂದು ಕ್ಷಣ ಸ್ತಬ್ಧವಾಗಿತ್ತು! ಟೀಮ್​ ಇಂಡಿಯಾ ಶ್ರೀಲಂಕಾ ವಿರುದ್ಧ ಆರು ವಿಕೆಟ್​ಗಳ ಅಂತರದಿಂದ ಜಯ ಸಾಧಿಸಿತ್ತು.

ತನ್ನ ಕೊನೆಯ ವಿಶ್ವಕಪ್ ಆಡಿದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್(sachin tendulkar) ಅವರನ್ನು ಭಾರತ ತಂಡದ ಆಟಗಾರರು ಮೈದಾನದ ಸುತ್ತ ಹೆಗಲಲ್ಲಿ ಹೊತ್ತು ಮೆರವಣಿಗೆ ನಡೆಸಿದ್ದರು. 1983ರಲ್ಲಿ ಕಪಿಲ್‌ ದೇವ್‌ ನಾಯಕತ್ವದ ಭಾರತ ತಂಡ ಮೊಟ್ಟ ಮೊದಲ ಬಾರಿ ಐಸಿಸಿ ಏಕದಿನ ವಿಶ್ವಕಪ್‌ ಮುಡಿಗೇರಿಸಿಕೊಂಡಿತ್ತು. ಇದಾದ ಬಳಿಕ 28 ವರ್ಷಗಳ ಬಳಿಕ ಧೋನಿ ನಾಯಕತ್ವದ ಟೀಮ್‌ ಇಂಡಿಯಾ ವಿಶ್ವಕಪ್​ ಗೆದ್ದು ಸಂಭ್ರಮಿಸಿತ್ತು.

ಇದನ್ನೂ ಓದಿ World Cup final: ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಶತಕ ಬಾರಿಸಿದ ಸಾಧಕರಿವರು

ಗುಂಪು ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಶ್ರೀಲಂಕಾ ತಂಡ, ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಭಾರತಕ್ಕೆ ತಲೆ ಬಾಗಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ್ದ ಶ್ರೀಲಂಕಾ ನಿಗದಿತ 50 ಓವರ್‌ಗಳಿಗೆ ಆರು ವಿಕೆಟ್‌ ಕಳೆದುಕೊಂಡು 274 ರನ್‌ ಗಳಿಸಿತ್ತು.ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲಿಯೇ ಸಚಿನ್‌ ತೆಂಡೂಲ್ಕರ್‌ ಹಾಗೂ ವಿರೇಂದ್ರ ಸೆಹವಾಗ್​ ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಕಂಡಿತು. ಉಭಯ ಆಟಗಾರರ ವಿಕೆಟ್​ ಲಸೀತ್​ ಮಾಲಿಂಗ್​ ಕಿತ್ತರು. ಈ ವೇಳೆ ಭಾರತದ ಅಭಿಮಾನಿಗಳು ನಿರಾಸೆಗೊಂಡರು. ಆದರೆ ಗೌತಮ್‌ ಗಂಭೀರ್‌ ಹಾಗೂ ಅಂದಿನ ನಾಯಕ ಮಹೇಂದ್ರ ಸಿಂಗ್‌ ಧೋನಿಯವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಭಾರತ ಪಂದ್ಯ ಗೆದ್ದು ವಿಶ್ವಕಪ್‌ ಎತ್ತಿ ಹಿಡಿದಿತ್ತು. ಈ ಸಂಭ್ರಮಕ್ಕೆ ಇದೀಗ 13 ವರ್ಷ ತುಂಬಿದೆ. ಈ ತಂಡದಲ್ಲಿದ್ದ ವಿರಾಟ್​ ಕೊಹ್ಲಿ ಮತ್ತು ಆರ್​. ಅಶ್ವಿನ್​ ಅವರು ಮಾತ್ರ ಇದೀಗ ಟೀಮ್​ ಇಂಡಿಯಾ ಪರ ಆಡುತ್ತಿದ್ದಾರೆ. ಉಳಿದೆಲ್ಲ ಆಟಗಾರರು ನಿವೃತ್ತಿ ಹೇಳಿದ್ದಾರೆ.

ಕಳೆದ ವರ್ಷ ನಡೆದ ಏಕದಿನ ವಿಶ್ವ ಕಪ್​ನಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿ ಒಂದೇ ಒಂದು ಪಂದ್ಯ ಸೋಲು ಕಾಣದೆ ಫೈನಲ್​ ಪ್ರವೇಶಿಸಿತ್ತು. ಧೋನಿ ಬಳಿಕ ರೋಹಿತ್​ ಅವರು ಭಾರತಕ್ಕೆ ವಿಶ್ವಕಪ್​ ಗೆದ್ದು ಕೊಡಲಿದ್ದಾರೆ ಎಂದು ಇಡೀ ದೇಶವೇ ಬಹಳ ನಿರೀಕ್ಷೆಯಿಂದ ಕಾದು ಕುಳಿತಿತ್ತು. ಆದರೆ ಫೈನಲ್​ನಲ್ಲಿ ಆಸ್ಟ್ರೇಲಿಯಾ ಇದಕ್ಕೆ ಅಡ್ಡಗಾಲಿಕ್ಕಿತ್ತು.

Exit mobile version