ಮುಂಬಯಿ: ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ(WPL 2023) ಗೆಲುವಿನ ನಾಗಾಲೋಟ ಮುಂದುವರಿಸುತ್ತಿರುವ ಮುಂಬೈ ಇಂಡಿಯನ್ಸ್(Mumbai Indians) ತನ್ನ ಅಭಿಯಾನವನ್ನು ನಾಲ್ಕಕ್ಕೆ ವಿಸ್ತರಿಸುವ ಯೋಜನೆಯಲ್ಲಿದೆ. ಭಾನುವಾರದ(ಮಾರ್ಚ್ 12) ಮುಖಾಮುಖಿಯಲ್ಲಿ ಹರ್ಮಾನ್‌ಪ್ರೀತ್ ಕೌರ್ ಪಡೆ ಯುಪಿ ವಾರಿಯರ್ಸ್(UP Warriorz) ಸವಾಲನ್ನು ಎದುರಿಸಲಿದೆ.
ಮುಂಬಯಿಯ ಬ್ರಬೋರ್ನ್ ಸ್ಟೇಡಿಯಂನ ಟ್ರ್ಯಾಕ್’ ಬ್ಯಾಟಿಂಗಿಗೆ ಹೆಚ್ಚಿನ ನೆರವು ನೀಡಲಿರುವ ಕಾರಣ ಇಲ್ಲಿ ಚೇಸಿಂಗ್ ನಡೆಸುವ ತಂಡಕ್ಕೆ ಮೇಲುಗೈ ಅವಕಾಶ ಜಾಸ್ತಿ. ಹೀಗಾಗಿ ಟಾಸ್ ಗೆಲುವು ನಿರ್ಣಾಯಕವಾಗಲಿದೆ.
ಮುಂಬೈ ಬಲಿಷ್ಠ ತಂಡ
ಹರ್ಮನ್‌ಪ್ರೀತ್ ಕೌರ್ ಸಾರಥ್ಯದ ಮುಂಬೈ ಇಂಡಿಯನ್ಸ್ ಅತ್ಯಂತ ಬಲಿಷ್ಠವಾಗಿ ಗೋಚರಿಸಿದೆ. ಬ್ಯಾಟಿಂಗ್, ಬೌಲಿಂಗ್ ಫೀಲ್ಡಿಂಗ್ ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿದೆ. ವೆಸ್ಟ್ ಇಂಡೀಸ್ ತಂಡದ ಹಾರ್ಡ್ ಹಿಟ್ಟರ್ ಹ್ಯಾಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ, ನಥಾಲಿ ಸ್ಕಿವರ್ ಬ್ರಂಟ್, ಪೂಜಾ ವಸ್ತ್ರಾಕರ್, ಅಮೇಲಿಯಾ ಕೆರ್ ಅವರೆಲ್ಲ ಇಲ್ಲಿನ ಸ್ಟಾರ್ ಆಟಗಾರ್ತಿಯರು. ಇವರಲ್ಲಿ ಒಬ್ಬರು ಸಿಡಿದು ನಿಂತರೂ ಪಂದ್ಯದ ಗೆಲುವಿಗೆ ಕೊರತೆ ಇಲ್ಲ. ಒಂದೊಮ್ಮೆ ಈ ಪಂದ್ಯದಲ್ಲಿಯೂ ಮುಂಬೈ ಮೇಲುಗೈ ಸಾಧಿಸಿದರೆ ಫೈನಲ್ ಟಿಕೆಟ್ ಬಹುತೇಕ ಖಚಿತಗೊಳ್ಳಲಿದೆ.
ಇದನ್ನೂ ಓದಿ WPL 2023: ಮೂರು ಕೋಟಿ ರೂ. ನೀರಲ್ಲಿ ಹೋಮ; ಸ್ಮೃತಿ ಮಂಧಾನಾ ಟ್ರೋಲ್ ಮಾಡಿದ ನೆಟ್ಟಿಗರು
ಯುಪಿ ಪರ ನಾಯಕಿ ಅಲಿಸ್ಸಾ ಹೀಲಿ, ಉತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದರೂ ಅಂಡರ್-19 ವಿಶ್ವ ಕಪ್ ವಿಜೇತ ತಂಡದ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಶ್ವೇತಾ ಸೆಹ್ರಾವತ್ ಈ ಟೂನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಅವರು ಸಿಡಿದು ನಿಲ್ಲಲೇಬೇಕಾದ ಅನಿವಾರ್ಯತೆ ಇದೆ. ಉಪ ನಾಯಕಿ ದೀಪ್ತಿ ಶರ್ಮಾ ಕೂಡ ಹೇಳುವಂತಹ ಪ್ರದರ್ಶನ ತೋರಿಲ್ಲ.