ನವದೆಹಲಿ: ನಾಯಕಿ ಬೆತ್ ಮೂನಿ(85*) ಮತ್ತು ಲಾರಾ ವೊಲ್ವಾರ್ಡ್ಟ್(76) ಅವರ ಆಕರ್ಷಕ ಅರ್ಧಶತಕ ನೆರವಿನಿಂದ ಗುಜರಾತ್ ಜೈಂಟ್ಸ್(Gujarat Giants) ತಂಡ ಬಲಿಷ್ಠ ಆರ್ಸಿಬಿ(Royal Challengers Bangalore) ವಿರುದ್ಧ 19 ರನ್ಗಳ ಗೆಲುವು ಸಾಧಿಸಿ ಈ ಬಾರಿಯ ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.
ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್ ಆರಂಭಿಕ ಆಟಗಾರ್ತಿಯರಾದ ಬೆತ್ ಮೂನಿ ಮತ್ತು ಲಾರಾ ವೊಲ್ವಾರ್ಡ್ಟ್ ಅವರ ಆಕ್ರಮಣಕಾರಿ ಬ್ಯಾಟಿಂಗ್ನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 199 ರನ್ ಬಾರಿಸಿ ತನ್ನ ಟಾಸ್ ಆಯ್ಕೆಯನ್ನು ಸಮರ್ಥಿಸಿಕೊಂಡಿತು. ಬೃಹತ್ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಹೋದ ಆರ್ಸಿಬಿ ಅಂತಿಮ ಹಂತದಲ್ಲಿ ಸತತ ವಿಕೆಟ್ ಕಳೆದುಕೊಂಡು ವಿಕೆಟ್ಗೆ ರನ್ ಗಳಿಸಿ ಸೋಲೊಪ್ಪಿಕೊಂಡಿತು. ಸತತ 4 ಸೋಲಿನಿಂದ ಕಂಗೆಟ್ಟಿದ್ದ ಗುಜರಾತ್ ಜೈಂಟ್ಸ್ ಮೊದಲ ಗೆಲುವಿನ ನಗೆ ಬೀರಿತು.
ಬೃಹತ್ ಮೊತ್ತದ ಜತೆಯಾಟವಾಡಿದ ಮೂನಿ-ವೊಲ್ವಾರ್ಡ್ಟ್
ಗೆಲ್ಲಲೇ ಬೇಕು ಎಂದು ಪಣತೊಟ್ಟು ಆಡಲಿಳಿದ ಗುಜರಾತ್ ತಂಡದ ನಾಯಕಿ ಬೆತ್ ಮೂನಿ ಇನಿಂಗ್ಸ್ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಅವರ ಜತೆಗಾರ್ತಿ ವೊಲ್ವಾರ್ಡ್ಟ್ ಕೂಡ ಇದೇ ರೀತಿಯ ಆಟಕ್ಕೆ ಹೊಂದಿಕೊಂಡು ಬಿರುಸಿನ ಬ್ಯಾಟಿಂಗ್ ನಡೆಸಿದರು. ಉಭಯ ಆಟಗಾರರ ಸ್ಫೋಟಕ ಬ್ಯಾಟಿಂಗ್ನಿಂದ ತಂಡ ವಿಕೆಟ್ ನಷ್ಟವಿಲ್ಲದೆ 6 ಓವರ್ಗಳ ಪವರ್ ಪ್ಲೇಯಲ್ಲಿ 59 ರನ್ ಕಲೆಹಾಕಿತು.
ಪವರ್ ಪ್ಲೇ ಮುಗಿದರೂ ಮೂನಿ ಮತ್ತು ವೊಲ್ವಾರ್ಡ್ಟ್ ಬ್ಯಾಟಿಂಗ್ ಜೋಶ್ ಕಡಿಮೆಯಾಗಲಿಲ್ಲ. ಆರ್ಸಿಬಿ ಬೌಲರ್ಗಳಿಗೆ ಚಳಿ ಬಿಡಿಸಿದರು. ಅನುಭವಿ ಟೀಮ್ ಇಂಡಿಯಾದ ಆಟಗಾರ್ತಿಯಾಗಿರುವ ರೇನುಕಾ ಸಿಂಗ್ ಅವರಂತೂ ಸರಿಯಾಗಿ ದಂಡಿಸಿಕೊಂಡರು. ಅಬ್ಬರ ಬ್ಯಾಟಿಂಗ್ ಕಂಡು ವಿಚಲಿತರಾದ ಅವರು ಹಲವು ವೈಡ್ ಎಸೆತಗಳನ್ನು ಕೂಡ ಎಸೆದರು. ಕಳೆದ ಪಂದ್ಯದಲ್ಲಿ ಘಾತಕ ಬೌಲಿಂಗ್ ನಡೆಸಿ ವಿಕೆಟ್ ಕಿತ್ತಿದ್ದ ಸೋಫಿ ಡಿವೈನ್ ಈ ಪಂದ್ಯದಲ್ಲಿ ವಿಕೆಟ್ ಲೆಸ್ ಜತೆಗೆ ದುಬಾರಿಯಾಗಿ ಕಂಡು ಬಂದರು. 3 ಓವರ್ಗೆ 37 ರನ್ ಬಿಟ್ಟುಕೊಟ್ಟರು.
Captain Beth Mooney can do no wrong!
— Women's Premier League (WPL) (@wplt20) March 6, 2024
This time with a sharp catch behind the stumps to dismiss the well-set Ellyse Perry 👏👏
Live 💻📱https://t.co/W8mqrR94WB#TATAWPL | #GGvRCB pic.twitter.com/xEDUMynHhh
ಶತಕದತ್ತ ಮುನ್ನುಗುತ್ತಿದ್ದ ವೊಲ್ವಾರ್ಡ್ಟ್ ಅವರು ರನೌಟ್ ಬಲೆಗೆ ಬಿದ್ದು ವಿಕೆಟ್ ಕಳೆದುಕೊಂಡರು. 45 ಎಸೆತಗಳಿಂದ 13 ಬೌಂಡರಿ ಬಾರಿ 76 ರನ್ ಚಚ್ಚಿದರು. ವೊಲ್ವಾರ್ಡ್ಟ್ ಮತ್ತು ಮೂನಿ ಸೇರಿಕೊಂಡು ಮೊದಲ ವಿಕೆಟ್ಗೆ ಬರೋಬ್ಬರಿ 140 ರನ್ ಜತೆಯಾಟ ನಡೆಸಿದರು. ಈ ಮೊತ್ತ ಕೇವಲ 13 ಓವರ್ನಲ್ಲಿ ದಾಖಲಾಗಿತ್ತು. ವೊಲ್ವಾರ್ಡ್ಟ್ ವಿಕೆಟ್ ಪತನದ ಬಳಿಕ ಫೋಬೆ ಲಿಚ್ಫೀಲ್ಡ್ 18 ರನ್ ಗಳಿಸಿದ್ದು ಬಿಟ್ಟರೆ, ಬಳಿಕ ಬಂದವರೆಲ್ಲ ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್ ಕೈಚೆಲ್ಲಿದರು. ಮೂನಿ 12 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿ ಅಜೇಯ 85 ರನ್ ಗಳಿಸಿದರು.
ಇದನ್ನೂ ಓದಿ WPL 2024: ಅತೀ ವೇಗದ ಬೌಲಿಂಗ್ ಮೂಲಕ ದಾಖಲೆ ನಿರ್ಮಿಸಿದ ಮುಂಬೈ ಇಂಡಿಯನ್ಸ್‌ನ ಶಬ್ನಿಮ್ ಇಸ್ಮಾಯಿಲ್
ದಿಟ್ಟ ಹೋರಾಟ ನಡೆಸಿ ಸೋತ ಆರ್ಸಿಬಿ
ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆರ್ಸಿಬಿ ಮೊದಲ ಎರಡು ಓವರ್ನಲ್ಲಿ ಕೇವಲ 7 ರನ್ ಮಾತ್ರ ಗಳಿಸಿತು. ಮೂರನೇ ಓವರ್ನಲ್ಲಿ ನಾಯಕಿ ಸ್ಮೃತಿ ಮಂಧಾನಾ ಬಿರುಸಿನ ಬ್ಯಾಟಿಂಗ್ ನಡೆಸಿ 17 ರನ್ ಬಾರಿಸಿದರು. ಇಲ್ಲಿಂದ ಚೇತರಿಕೆ ಕಂಡ ಆರ್ಸಿಬಿ ಬಳಿಕ ಸರಾಗವಾಗಿ ರನ್ ಗಳಿಸಿಸುತ್ತಲೇ ಸಾಗಿತು. ವಿಕೆಟ್ ಕೂಡ ಬೀಳುತ್ತಿತ್ತು. ಆದರೆ, ಕ್ರೀಸ್ಗೆ ಬಂದ ಆಟಗಾರ್ತಿಯರೆಲ್ಲರೂ ಕಡಿಮೆ ಎಸೆತಗಳಿಂದ ಕನಿಷ್ಠ 20 ಪ್ಲಸ್ ಮೊತ್ತ ದಾಖಲಿಸಿದರು. ಎಲ್ಲಿಸ್ ಪೆರ್ರಿ ಅವರು 24 ರನ್ಗಳಿಗೆ 23 ಎಸೆತ ಎದುರಿಸಿದರು.
ಅಂತಿಮ ಹಂತದಲ್ಲಿ ಜಾರ್ಜಿಯಾ ವೇರ್ಹ್ಯಾಮ್ ಅವರು ಎಬಿಡಿ ಶೈಲಿಯಲ್ಲಿ ಬ್ಯಾಟ್ ಬೀಸಿ ತಂಡಕ್ಕೆ ಗೆಲುವಿನ ನಿರೀಕ್ಷೆ ಮೂಡಿಸಿದರು. ಆದರೆ ಅವರು ರನೌಟ್ ಆದರು. ಈ ವಿಕೆಟ್ ಪತನಗೊಳ್ಳುತ್ತಿದ್ದಂತೆ ಆರ್ಸಿಬಿ ಸೋಲು ಕೂಡ ಖಚಿತವಾಯಿತು. ವೇರ್ಹ್ಯಾಮ್ ಕೇವಲ 22 ಎಸೆತಗಳಿಂದ 48 ರನ್ ಚಚ್ಚಿದರು. ಒಟ್ಟು ಈ ಪಂದ್ಯದಲ್ಲಿ 7 ರನೌಟ್ಗಳು ದಾಖಲಾದವು. ಆರಂಭಿಕ 2 ಓವರ್ನಲ್ಲಿ ರನ್ ಹರಿದು ಬಾರದ್ದೇ ಆರ್ಸಿಬಿ ಸೋಲಿಗೆ ಪ್ರಮುಖ ಕಾರಣ.