ನವ ದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆಯ ದೂರುಗಳನ್ನು ಸಲ್ಲಿಸಿದ ತಮಗೆ ಭೀಕರ ಪರಿಣಾಮಗಳ ಬೆದರಿಕೆ ಮತ್ತು ಹಣದ ಆಮಿಷ ಒಡ್ಡಲಾಗುತ್ತಿದೆ ಎಂದು ಮಹಿಳಾ ಕುಸ್ತಿಪಟುಗಳು ಆರೋಪಿಸಿದ್ದಾರೆ.
ಏಳು ಮಹಿಳಾ ಕುಸ್ತಿಪಟುಗಳು ಸೇರಿ ಜಂತರ್ ಮಂತರ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನವನ್ನು ಪ್ರವೇಶಿಸಿದೆ. ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತರಾಗಿರುವ ಕುಸ್ತಿಪಟು ವಿನೇಶ್ ಫೋಗಟ್, ದೂರುದಾರರನ್ನು ಬಗ್ಗಿಸಲು ಬೆದರಿಕೆ ಹಾಗೂ ಆಮಿಷದ ಅಸ್ತ್ರ ಒಡ್ಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಏಳು ದೂರುದಾರರಲ್ಲಿ ಒಬ್ಬಳಾದ ಅಪ್ರಾಪ್ತ ವಯಸ್ಸಿನ ಕುಸ್ತಿಪಟುವಿನ ಕುಟುಂಬಕ್ಕೆ ಕೂಡ ಸಿಂಗ್ ಬೆದರಿಕೆ ಹಾಕಿದ್ದಾರೆ ಎಂದು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ದೂರಿದ್ದಾರೆ.
ಕುಸ್ತಿಪಟುಗಳ ಆಕ್ರೋಶಕ್ಕೆ ಕಾರಣವಾಗಿರುವ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್, ಬಿಜೆಪಿಯಿಂದ ಆಯ್ಕೆಯಾಗಿರುವ ಕೈಸರ್‌ಗಂಜ್‌ನ ಸಂಸದರೂ ಆಗಿದ್ದಾರೆ. ಆರೋಪಿಯ ಮೇಲೆ ಎಫ್‌ಐಆರ್ ಆಗಿ ಬಂಧನ ಆಗುವವರೆಗೂ ತಾವು ಇಲ್ಲಿಂದ ಕದಲುವುದಿಲ್ಲ ಎಂದು ಧರಣಿ ಕೂತಿರುವ ಕುಸ್ತಿಪಟುಗಳು ಹೇಳಿದ್ದಾರೆ.
“ಸಿಂಗ್ ಅಪ್ರಾಪ್ತ ಸಂತ್ರಸ್ತೆಗೆ ಬೆದರಿಕೆ ಹಾಕುತ್ತಿದ್ದಾರೆ ಮತ್ತು ದೂರನ್ನು ಹಿಂಪಡೆಯುವಂತೆ ಕುಟುಂಬದ ಸದಸ್ಯರ ಮೇಲೆ ಒತ್ತಡ ಹೇರಲಾಗುತ್ತಿದೆ. ಬೆದರಿಕೆ ಹಾಕುತ್ತಿರುವವರಲ್ಲಿ ಒಬ್ಬರು ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಕೋಚ್ ಮತ್ತು ಇನ್ನೊಬ್ಬರು ಹರಿಯಾಣ ಕುಸ್ತಿ ಅಸೋಸಿಯೇಷನ್‌ನ ಕಾರ್ಯದರ್ಶಿ ಎಂದು ನಮಗೆ ತಿಳಿದು ಬಂದಿದೆ. ಆಕೆಯ ಮನೆಗೆ ತೆರಳಿ ಮನೆಯವರ ಮೇಲೆ ಒತ್ತಡ ಹೇರಿ ಹಣ ನೀಡುತ್ತಿದ್ದಾರೆ. ದೂರನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ. ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧ ದೂರು ದಾಖಲಿಸಿರುವ ಮಹಿಳಾ ಕುಸ್ತಿಪಟುಗಳಿಗೂ ಬೆದರಿಕೆ ಹಾಕಲಾಗುತ್ತಿದೆʼʼ ಎಂದು ಜಂತರ್ ಮಂತರ್‌ನಲ್ಲಿ ಭಜರಂಗ್ ಪುನಿಯಾ ಹೇಳಿದ್ದಾರೆ.
ನವದೆಹಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರುಗಳನ್ನು ದಾಖಲಿಸಲಾಗಿದೆ. ಕುಸ್ತಿಪಟುಗಳು 2012ರಿಂದ 2022ರವರೆಗಿನ ಲೈಂಗಿಕ ಕಿರುಕುಳದ ಅನೇಕ ಘಟನೆಗಳನ್ನು ಉಲ್ಲೇಖಿಸಿದ್ದಾರೆ. ದುರದೃಷ್ಟಕರ ಸಂಗತಿಯೆಂದರೆ, ಪೊಲೀಸ್ ಠಾಣೆಯಲ್ಲಿ ದೂರುಗಳನ್ನು ದಾಖಲಿಸಿದ ಸಂತ್ರಸ್ತರ ಹೆಸರುಗಳನ್ನು ಡಬ್ಲ್ಯುಎಫ್‌ಐ ಅಧ್ಯಕ್ಷರಿಗೆ ಸೋರಿಕೆ ಮಾಡಲಾಗಿದೆ ಎಂದು ಕೂಡ ವಿನೇಶ್ ದೂರಿದ್ದಾರೆ.
“ಅಪ್ರಾಪ್ತೆ ನೀಡಿದ ಲೈಂಗಿಕ ಕಿರುಕುಳದ ದೂರನ್ನು ಪೊಲೀಸರು ಪರಿಗಣಿಸಿ ಎಫ್‌ಐಆರ್ ಮಾಡಬೇಕು ಹಾಗೂ ಪೋಕ್ಸೊ ಅಡಿಯಲ್ಲಿ ಆರೋಪಿಯನ್ನು ಬಂಧಿಸಬೇಕು. ಆದರೆ ಪೊಲೀಸರು ಇದುವರೆಗೆ ಏಕೆ ಈ ಕೆಲಸ ಮಾಡಿಲ್ಲ ಎಂದು ವಿನೇಶ್ ಪ್ರಶ್ನಿಸಿದ್ದಾರೆ. ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳ ತನಿಖೆಗಾಗಿ ಕ್ರೀಡಾ ಸಚಿವಾಲಯ ರಚಿಸಿರುವ ಉಸ್ತುವಾರಿ ಸಮಿತಿಯಲ್ಲಿ ತಾವು ನಂಬಿಕೆ ಕಳೆದುಕೊಂಡಿದ್ದೇವೆ ಎಂದು ಪ್ರತಿಭಟನಾ ನಿರತ ಕುಸ್ತಿಪಟುಗಳು ಹೇಳಿದ್ದಾರೆ.
ಜನವರಿ ತಿಂಗಳಲ್ಲಿಯೇ ಈ ಬಗ್ಗೆ ಒಮ್ಮೆ ಪ್ರತಿಭಟನೆ ನಡೆಸಿದ್ದರು. ದೂರು ನೀಡಿದರೂ ಪೊಲೀಸರು ಪ್ರತಿಕ್ರಿಯಿಸಲ್ಲ ಎಂದು ಪ್ರತಿಭಟಿಸಲಾಗಿತ್ತು. ದಿಲ್ಲಿ ಕೋರ್ಟ್ ನೀಡಿದ ನಿರ್ದೇಶನದಂತೆ ಈಗ ಎಫ್‌ಐಆರ್ ದಾಖಲಿಸಲಾಗಿದೆ. ಈ ಬಾರಿ ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಸೇರಿದಂತೆ ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಫುಟ್‌ಪಾತ್‌ನಲ್ಲಿ ರಾತ್ರಿ ಮಲಗಿ ಪ್ರತಿಭಟಿಸಿದರು.
ಇದನ್ನೂ ಓದಿ: Wrestlers Protest: ಫುಟ್ ಪಾತ್ನಲ್ಲಿ ಮಲಗಿದ ಭಾರತದ ಒಲಿಂಪಿಯನ್ ಕುಸ್ತಿ ಪಟುಗಳು; ಕಾರಣ ಏನು?