ನವದೆಹಲಿ: ಅರುಣಚಾಲ ಪ್ರದೇಶದ ಮೂವರು ವುಶು (ಮಾರ್ಷಲ್ ಆರ್ಟ್ಸ್) ಕ್ರೀಡಾಪಟುಗಳಿಗೆ ವೀಸಾ ನೀಡಲು ಚೀನಾ (China Stapled Visa) ಕುತಂತ್ರ ಬುದ್ಧಿ ತೋರಿದ ಹಿನ್ನೆಲೆಯಲ್ಲಿ ಭಾರತ ವುಶು ತಂಡವು ಚೀನಾಗೆ ತೆರಳದಿರಲು ತೀರ್ಮಾನಿಸಿದೆ. ಆ ಮೂಲಕ ಚೀನಾದ ಚೆಂಗ್ಡುವಿನಲ್ಲಿ ಜುಲೈ 28ರಿಂದ ಆಗಸ್ಟ್ 8ರವರೆಗೆ ನಡೆಯುವ ವಲ್ಡ್ ಯುನಿವರ್ಸಿಟಿ ಗೇಮ್ಸ್ ಟೂರ್ನಿಯನ್ನು ಭಾರತ ಬಹಿಷ್ಕರಿಸಿದೆ.
ಒಬ್ಬ ತರಬೇತುದಾರ, ಮೂವರು ಅಧಿಕಾರಿಗಳು ಹಾಗೂ 8 ವುಶು ಕ್ರೀಡಾಪಟುಗಳು ಸೇರಿ ಒಟ್ಟು 12 ಸದಸ್ಯರ ತಂಡವು ಚೀನಾಗೆ ತೆರಳಬೇಕಿತ್ತು. ಆದರೆ, ಅರುಣಾಚಲ ಪ್ರದೇಶದ ಮೂವರು ಮಹಿಳಾ ಅಥ್ಲೀಟ್‌ಗಳಾದ ನ್ಯೆಮಾನ್ ವಾಗ್ಸು, ಒನಿಲು ತೆಂಗ ಹಾಗೂ ಮೆಪುಂಗ್ ಲಮ್ಗು ಅವರಿಗೆ ಚೀನಾ ಸ್ಟೇಪಲ್ಡ್ ವೀಸಾ (Stapled Visa- ಇದೊಂದು ರೀತಿಯ ಪೇಪರ್ ವೀಸಾ. ಪಾಸ್‌ಪೋರ್ಟ್ ಮೇಲೆ ಸ್ಟಾಂಪ್ ಬದಲು ಪೇಪರ್ ಅಂಟಿಸುವುದು) ನೀಡುವ ಮೂಲಕ ಉದ್ಧಟತನ ಮಾಡಿದೆ. ಹಾಗಾಗಿ, ಭಾರತ ತಂಡವು ವಲ್ಡ್ ಯುನಿವರ್ಸಿಟಿ ಗೇಮ್ಸ್‌ನಲ್ಲಿ ಭಾಗವಹಿಸದೆ ಪ್ರತಿಭಟನೆ ವ್ಯಕ್ತಪಡಿಸಿದೆ.
ಜುಲೈ 25ರಂದು ತಡರಾತ್ರಿ ಭಾರತದ ವುಶು ತಂಡವು ಚೀನಾಗೆ ತೆರಳಲು ಮುಂದಾಗಿತ್ತು. ಆದರೆ, ದೆಹಲಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಂಡವನ್ನು ತಡೆದಿದ್ದಾರೆ. ಇದಾದ ಬಳಿಕ ಟೂರ್ನಿಯಲ್ಲಿ ಭಾಗವಹಿಸದಿರಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಜುಲೈ 16ರಂದೇ ಅರುಣಾಚಲ ಪ್ರದೇಶದ ಮೂವರು ಅಥ್ಲೀಟ್‌ಗಳು ಸೇರಿ ತಂಡದ ಎಲ್ಲ ಸದಸ್ಯರು ವೀಸಾಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅರುಣಾಚಲ ಪ್ರದೇಶದ ಮೂವರು ಅಥ್ಲೀಟ್‌ಗಳ ಹೊರತಾಗಿ ಎಲ್ಲರಿಗೂ ಸರಿಯಾದ ಸಮಯಕ್ಕೆ ಸರಿಯಾದ ವೀಸಾ ಸಿಕ್ಕಿದೆ.
ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ
ಭಾರತದ ಮೂವರು ಅಥ್ಲೀಟ್‌ಗಳಿಗೆ ಸರಿಯಾದ ವೀಸಾ ನೀಡದ ಚೀನಾ ವಿರುದ್ಧ ಭಾರತ ಆಕ್ರೋಶ ವ್ಯಕ್ತಪಡಿಸಿದೆ. “ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಲು ಭಾರತದ ಮೂವರು ಅಥ್ಲೀಟ್‌ಗಳಿಗೆ ಸ್ಟೇಪಲ್ಡ್ ವೀಸಾ ನೀಡಿರುವುದು ಖಂಡನೀಯ. ಭಾರತವು ಚೀನಾದ ಇಂತಹ ನೀತಿಯನ್ನು ವಿರೋಧಿಸುತ್ತದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಏಷ್ಯಾದ 2ನೇ ಕ್ರೀಡಾಪಟು; ಮೊದಲ ಸ್ಥಾನದಲ್ಲಿ ಮಹಿಳಾ ಆಟಗಾರ್ತಿ
ಚೀನಾದಲ್ಲಿ ಸೆಪ್ಟೆಂಬರ್‌ನಲ್ಲಿ ಆರಂಭವಾಗುವ ಏಷ್ಯನ್ ಗೇಮ್ಸ್‌ನಲ್ಲೂ ಅರುಣಾಚಲ ಪ್ರದೇಶದ ಮೂವರು ಅಥ್ಲೀಟ್‌ಗಳಿದ್ದಾರೆ. ಅರುಣಾಚಲ ಪ್ರದೇಶ ನಮ್ಮ ದೇಶಕ್ಕೆ ಸೇರಿದ್ದು ಎಂದು ಹುರುಳಿಲ್ಲದ ವಾದ ಮಂಡಿಸುವ ಚೀನಾ, ಅಥ್ಲೀಟ್‌ಗಳು ಅರುಣಾಚಲ ಪ್ರದೇಶದವರಾದ ಕಾರಣ ಇಂತಹ ಕುತಂತ್ರ ಬುದ್ಧಿ ಪ್ರದರ್ಶಿಸಿದೆ ಎಂದು ತಿಳಿದುಬಂದಿದೆ.