ನ್ಯೂಯಾರ್ಕ್ : ಸ್ಪೇನ್‌ನ ಟೆನಿಸ್ ದಿಗ್ಗಜ ೨2 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳ ವಿಜೇತ ರಾಫೆಲ್ ನಡಾಲ್ ನಿವೃತ್ತಿಯ ಅಂಚಿನಲ್ಲಿದ್ದಾರೆ. ಇದು ಅವರ ಅಪ್ಪಟ ಅಭಿಮಾನಿಗಳಿಗೆ ಬೇಸರದ ವಿಷಯ. ಆದರೆ, ಆ ಕೊರತೆಯನ್ನು ನೀಗಿಸಲು ಟೊಂಕ ಕಟ್ಟಿ ನಿಂತಿದ್ದಾರೆ ಅದೇ ದೇಶದ ಯುವ ಟೆನಿಸ್ ಪಟು ಕಾರ್ಲೊಸ್ ಅಲ್ಕರಾಝ್. ಹೌದು, ಈ ಋತುವಿನ ಕೊನೇ ಗ್ರ್ಯಾನ್ ಸ್ಲಾಮ್ ಟೂರ್ನಿ, ಯುಎಸ್ ಓಪನ್ (US OPEN) ಪುರುಷರ ಸಿಂಗಲ್ಸ್‌ನಲ್ಲಿ ಅವರು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಈ ಮೂಲಕ ಟೆನಿಸ್ ಲೋಕದ ದೈತ್ಯ ಪ್ರತಿಭೆ ರಾಫೆಲ್ ನಡಾಲ್ ಅವರ ಜೈತ್ರ ಯಾತ್ರೆಯನ್ನು ಮುಂದುವರಿಸುವ ಹೊಣೆಗಾರಿಕೆ ಹೆಗಲೇರಿಸಿಕೊಂಡಿದ್ದಾರೆ.
ಭಾನುವಾರ ತಡ ರಾತ್ರಿ (ಭಾರತೀಯ ಕಾಲಮಾನ) ನಡೆದ ಪ್ರಶಸ್ತಿ ಸುತ್ತಿನ ಫೈಟ್‌ನಲ್ಲಿ ೧೯ ವರ್ಷದ ಸ್ಪೇನ್‌ನ ಅಲ್ಕರಾಝ್, ನಾರ್ವೆಯ ಮತ್ತೊಬ್ಬ ಯುವ ತಾರೆ 23 ವರ್ಷದ ಕ್ಯಾಸ್ಪರ್ ರುಡ್ ಅವರಿಗೆ 6-4, 2-6, 7-6(7/1), 6-3 ಸೆಟ್‌ಗಳಿಂದ ಸೋಲುಣಿಸಿ ಚೊಚ್ಚಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡರು. ಇದೇ ವೇಳೆ ಅವರು ಜಾಗತಿಕ ಶ್ರೇಯಾಂಕ ಪಟ್ಟಿಯಲ್ಲಿ ನೂತನ ನಂ.1 ಆಟಗಾರನಾಗಿಯೂ ಮಿಂಚಿದ್ದಾರೆ. ರಷ್ಯಾದ ಆಟಗಾರ ಡ್ಯಾನಿಲ್ ಮೆಡ್ವೆಡೆವ್ ಅವರನ್ನು ಹಿಂದಿಕ್ಕಿ ಕಾರ್ಲೊಸ್ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. 2001ರ ಬಳಿಕ ಎಟಿಪಿ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಅತ್ಯಂತ ಕಿರಿ ವಯಸ್ಸಿನ ಆಟಗಾರ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಲೇಟನ್ ಹೆವಿಟ್, 2001ರಲ್ಲಿ ತಮ್ಮ 20ನೇ ವಯಸ್ಸಿಗೆ ವಿಶ್ವದ ನಂ.1 ಸ್ಥಾನ ಅಲಂಕರಿಸಿದ್ದರು.
“ವಿಶ್ವದ ನಂ.1 ಆಟಗಾರನಾಗುವುದು ಹಾಗೂ ಗ್ರ್ಯಾನ್ ಸ್ಲಾಮ್ ಟ್ರೋಫಿ ಗೆಲ್ಲುವುದು ನನ್ನ ಬಾಲ್ಯದ ಕನಸು. ಅದಿಂದು ನನಸಾಗಿದೆ,”ಎಂದು ಕಾರ್ಲೊಸ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ” ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯ ಫೈನಲ್ ಆಡುವುದು ತ್ರಾಸದಾಯಕ. ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಹೊರತರಬೇಕಾಗುತ್ತದೆ,” ಎಂದು ಅಲ್ಕರಾಝ್ ಹೇಳಿದ್ದಾರೆ. ಟೂರ್ನಿಯಲ್ಲಿ ಹಲವು ಬಾರಿ 5 ಸೆಟ್‌ಗಳ ಪಂದ್ಯಗಳಲ್ಲಿ ಗೆಲವು ಸಾಧಿಸಿದ್ದ ಕಾರ್ಲೊಸ್, ಒಟ್ಟಾರೆ 7 ಪಂದ್ಯಗಳಲ್ಲಿ 23 ಗಂಟೆ ಮತ್ತು 40 ನಿಮಿಷಗಳ ಸೆಣಸಾಡಿದ್ದಾರೆ.
ರುಡ್‌ಗೆ ನಿರಾಸೆ
ಇದೇ ವೇಳೆ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ನಾರ್ವೆಯ ಮೊದಲ ಟೆನಿಸ್ ತಾರೆ ಎಂಬ ದಾಖಲೆ ನಿರ್ಮಿಸಲು ಮುಂದಾಗಿದ್ದ ಕಾಸ್ಪರ್ ರುಡ್‌ಗೆ ನಿರಾಸೆ ಎದುರಾಗಿದೆ. ಹಾಲಿ ಋತುವಿನ ಫ್ರೆಂಚ್ ಓಪನ್ ಟೂರ್ನಿಯ ಫೈನಲ್‌ನಲ್ಲೂ ಸೋತು ಅವರು ರನ್ನರ್‌ಅಪ್ ಸ್ಥಾನ ಪಡೆದಿದ್ದರು. ಇದು ಅವರ ನಿರಾಸೆಯನ್ನು ಇಮ್ಮಡಿಗೊಳಿಸಿದೆ. ಆದಾಗ್ಯೂ, ಅವರು ಎಟಿಪಿ ಶ್ರೇಯಾಂಕ ಪಟ್ಟಿಯಲ್ಲಿ ೭ರಿಂದ ೨ನೇ ಸ್ಥಾನಕ್ಕೆ ಬಡ್ತಿ ಪಡೆದುಕೊಂಡರು.
‘ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ ಎಂದನ್ನಿಸಿಕೊಳ್ಳುವುದು ನನಗೆ ಹೆಚ್ಚುಗಾರಿಕೆಯ ಸಂಗತಿ. ಆದರೆ, ಗ್ರ್ಯಾನ್ ಸ್ಲಾಮ್ ಗೆಲ್ಲದ ಬೇಸರವಿದೆ. ಪ್ರಯತ್ನ ಮುಂದುವರಿಸುವೆ, ಪ್ರಶಸ್ತಿ ಗೆಲ್ಲುವೆ ಹಾಗೂ ನಂಬರ್ ಒನ್ ಆಟಗಾರನಾಗುವೆ,” ಎಂದು ರುಡ್ ಹೇಳಿದ್ದಾರೆ.
ಬಹುಮಾನ ಎಷ್ಟು?
ಅಮೆರಿಕ ಓಪನ್ ಟೂರ್ನಿಯಲ್ಲಿ ಈ ಬಾರಿ ಮಹಿಳಾ ಸಿಂಗಲ್ಸ್ ಮತ್ತು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಟ್ರೋಫಿ ಗೆದ್ದವರು ಬರೋಬ್ಬರಿ 30 ಕೋಟಿ ರೂ.ಗಳ ಭಾರಿ ಬಹುಮಾನ ಮೊತ್ತ ದೊರಕಿದೆ.
ಇದನ್ನೂ ಓದಿ | US Open | ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಮಹಿಳೆಯರ ಸಿಂಗಲ್ಸ್ ಚಾಂಪಿಯನ್, ಜೇಬರ್ ರನ್ನರ್‌ಅಪ್