Site icon Vistara News

Yuki Bhambri | ಸಿಂಗಲ್ಸ್​ ವಿಭಾಗದ ಟೆನಿಸ್​ಗೆ ವಿದಾಯ ಹೇಳಿದ ಭಾರತದ ಯೂಕಿ ಭಾಂಭ್ರಿ!

Yuki Bhambri

ನವದೆಹಲಿ: ಭಾರತದ ಸ್ಟಾರ್​ ಟೆನಿಸ್ ಆಟಗಾರರಲ್ಲಿ ಒಬ್ಬರಾದ ಯೂಕಿ ಭಾಂಭ್ರಿ ಅವರು ಸಿಂಗಲ್ಸ್ ಮಾದರಿಗೆ ಬುಧವಾರ ವಿದಾಯ ಹೇಳಿದ್ದಾರೆ. ಗ್ರ್ಯಾನ್‌ ಸ್ಲಾಮ್‌ ಟೂರ್ನಿಗಳ ಡಬಲ್ಸ್‌ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುವ ನಿಟ್ಟಿನಲ್ಲಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ದೀರ್ಘಕಾಲ ಮೊಣಕಾಲು ನೋವಿನಿಂದ ಬಳಲುತ್ತಿರುವುದೂ ಕೂಡ ಯೂಕಿ ಅವರು ಸಿಂಗಲ್ಸ್ ವಿಭಾಗ ತೊರೆಯಲು ಮತ್ತೊಂದು ಪ್ರಮುಖ ಕಾರಣವಾಗಿದೆ. ಸಾನಿಯಾ ಮಿರ್ಜಾ ಬಳಿಕ ಸಿಂಗಲ್ಸ್ ವಿಭಾಗದ ಟೆನಿಸ್​ಗೆ​ ವಿದಾಯ ಹೇಳಿದ ಎರಡನೇ ಭಾರತದ ಪ್ರಮುಖ ಟೆನಿಸ್‌ ಪಟು ಎನಿಸಿದ್ದಾರೆ.

“ಸಿಂಗಲ್ಸ್ ವಿಭಾಗದಲ್ಲಿ ನಾನು ಇದುವರೆಗೆ ಆಡಿದ ಟೂರ್ನಿಗಳಲ್ಲಿ ಶ್ರೇಷ್ಠ ನಿರ್ವಹಣೆ ತೋರಿದ್ದೇನೆ. ಆ ಕುರಿತು ಸಂತೃಪ್ತಿ ಇದೆ. ಸಿಂಗಲ್ಸ್​ ವಿಭಾಗದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಿತ್ತೆಂಬ ಪಶ್ಚಾತ್ತಾಪ ಇಲ್ಲ. ಈ ನಿರ್ಧಾರದ ಹಿಂದೆ ಗಾಯದ ಪಾತ್ರವೂ ಪ್ರಮುಖವಾಗಿದೆ” ಎಂದು ಭಾಂಭ್ರಿ ವಿದಾಯದ ಬಳಿಕ ಹೇಳಿದ್ದಾರೆ.

“ಸಿಂಗಲ್ಸ್​ ವಿಭಾಗ ತೊರೆದರೂ ಡಬಲ್ಸ್ ಸ್ಪರ್ಧೆಗಳಲ್ಲಿ ಮುಂದುವರಿಯಲು ನಿರ್ಧರಿಸಿದ್ದೇನೆ. ಗಾಯಗೊಂಡ ಕಾರಣ ಟೆನಿಸ್​ನಿಂದ ಮೂರು ವರ್ಷಗಳ ಕಾಲ ದೂರ ಉಳಿದಿದ್ದೆ. ಆದರೆ 2021ರಲ್ಲಿ ಆಟಕ್ಕೆ ಮರಳಿದರೂ ದೀರ್ಘ ಸಮಯದ ವರೆಗೆ ಹೋರಾಡಲು ಕಷ್ಟವಾಗುತ್ತದೆ. ಈ ಕಾರಣದಿಂದ ಸಿಂಗಲ್ಸ್​ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿದೆ” ಎಂದು ಭಾಂಭ್ರಿ ಹೇಳಿದರು.

ಯೂಕಿ ಭಾಂಭ್ರಿ ಅವರು ಸಿಂಗಲ್ಸ್ ವಿಭಾಗದಲ್ಲಿ 2015, 2016 ಮತ್ತು 2018ರ ಆಸ್ಟ್ರೇಲಿಯಾ ಓಪನ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಆಡಿದ್ದಾರೆ. 2018ರಲ್ಲಿ ಫ್ರೆಂಚ್‌ ಓಪನ್‌, ವಿಂಬಲ್ಡನ್‌ ಮತ್ತು ಅಮೆರಿಕ ಓಪನ್ ಟೂರ್ನಿಗಳ ಮೊದಲ ಸುತ್ತಿನ ಪಂದ್ಯಗಳಲ್ಲೂ ಕಣಕ್ಕಿಳಿದಿದ್ದರು. ಸಿಂಗಲ್ಸ್ ವಿಭಾಗದಲ್ಲಿ 2018ರ ಏಪ್ರಿಲ್‌ನಲ್ಲಿ ಜೀವನಶ್ರೇಷ್ಠ 83ನೇ ರ‍್ಯಾಂಕಿಂಗ್‌ ತಲುಪಿದ್ದು ಅವರ ಪ್ರಮುಖ ಸಾಧನೆಯಾಗಿದೆ.

ಇದನ್ನೂ ಓದಿ | Asian Cup Table Tennis | ಐತಿಹಾಸಿಕ ಪದಕ ಗೆದ್ದ ಮಣಿಕಾ ಬಾತ್ರಾ; ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ

Exit mobile version