ನವದೆಹಲಿ: ಪಶ್ಚಿಮ ಬಂಗಾಳದ ಬರ್ಹಾಂಪೋರ್ ಲೋಕಸಭಾ ಕ್ಷೇತ್ರದ ಟಿಎಂಸಿ ಸಂಸದ, ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್(Yusuf Pathan) ಅವರು ಬುಧವಾರ 18ನೇ ಲೋಕಸಭೆ(Loksabha)ಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ “ಜೈ ಹಿಂದ್, ಜೈ ಗುಜರಾತ್, ಜೈ ಬಂಗಾಳ ಎಂದು ಘೋಷಣೆ ಕೂಗಿದರು.
ಯೂಸುಫ್ ಪಠಾಣ್ ಮುಸ್ಲಿಂ ಸಮುದಾಯದವರಾಗಿದ್ದರೂ ಕೂಡ ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಅಚ್ಚರಿಗೆ ಕಾರಣವಾಗಿದ್ದು, ಕೆಲ ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಟಿಎಂಸಿ(TMC) ಪಕ್ಷದಿಂದ ಸ್ಪರ್ಧಿಸಿದ್ದ ಯೂಸುಫ್, ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಕಾಂಗ್ರೆಸ್ ಪಕ್ಷದ ಹಾಲಿ ಹಾಗೂ 5 ಬಾರಿಯ ಸಂಸದರಾಗಿದ್ದ ಅಧೀರ್ ರಂಜನ್ ಚೌಧರಿ(Adhir Chowdhury)ಯನ್ನು ಮಣಿಸಿದ್ದರು. ಯೂಸುಫ್ ಪಠಾಣ್ 5,18,066 ಮತಗಳನ್ನು ಪಡೆದರೆ, ತಮ್ಮ ಸಮೀಪದ ಪ್ರತಿಸ್ಪರ್ಧಿ ರಂಜನ್ ಚೌಧರಿ 4,32,340 ಮತಗಳನ್ನು ಮಾತ್ರ ಪಡೆದಿದ್ದರು. ಪಠಾಣ್ 85,726 ಮತಗಳ ಅಂತರದಿಂದ ಗೆದ್ದು ಬೀಗಿದ್ದರು.
ಮೂಲತಃ ಗುಜರಾತ್‌ನವರಾದ ಯೂಸುಫ್ ಪಠಾಣ್ ಐಪಿಎಲ್ನಲ್ಲಿ ಕೆಕೆಆರ್ ತಂಡದ ಪರ ಹಲವು ವರ್ಷಗಳ ಕಾಲ ಆಡಿದ್ದರು. ಅಲ್ಲದೆ ತಂಡದ ಪ್ರಧಾನ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಹೀಗಾಗಿ ಅವರಿಗೆ ಬಂಗಾಳದಾದ್ಯಂತ ಯೂಸುಫ್ಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇದೇ ಕಾರಣದಿಂದ ಅವರಿಗೆ ಪಶ್ಚಿಮ ಬಂಗಾಳದಿಂದ ಟಿಎಂಸಿ ಟಿಕೆಟ್ ನೀಡಲಾಗಿತ್ತು.
ಇದನ್ನೂ ಓದಿ Lok Sabha Speaker: ತುರ್ತು ಪರಿಸ್ಥಿತಿ ಬಗ್ಗೆ ಓಂ ಬಿರ್ಲಾ ಪ್ರಸ್ತಾಪ; ಪ್ರತಿಪಕ್ಷಗಳಿಂದ ಪ್ರತಿಭಟನೆ
18ನೇ ಲೋಕಸಭೆಯ ಮೊದಲ ಅಧಿವೇಶನ(Parliament Sessions)ದ ಮೂರನೇ ದಿನವಾದ ಇಂದು ಹಲವು ಮಹತ್ವದ ಘಟನೆಗಳಿಗೆ ಸಾಕ್ಷಿಯಾಯಿತು. ಇಂದು ಸ್ಪೀಕರ್ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಓಂ ಬಿರ್ಲಾ(Om Birla) ಅವರು ಎರಡನೇ ಬಾರಿ ಲೋಕಸಭೆಯ ಸ್ಪೀಕರ್ ಆಗಿ ಚುನಾಯಿತ(Lok Sabha Speaker)ರಾಗಿದ್ದಾರೆ. ಚುನಾಯಿತರಾದ ಬಳಿಕ ಮೊದಲ ಬಾರಿಗೆ ಸಂಸತ್‌ನಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಸಂದರ್ಭವನ್ನು ಪ್ರಸ್ತಾಪಿಸಿದರು.
ಸ್ಪೀಕರ್ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಓಂ ಬಿರ್ಲಾ, ಇಂದಿರಾ ಗಾಂಧಿ ಆಡಳಿತಾವಧಿಯಲ್ಲಿ ಜಾರಿಗೊಳಿಸಲಾದ ತುರ್ತು ಪರಿಸ್ಥಿತಿ ಬಗ್ಗೆ ಪ್ರಸ್ತಾಪಿಸಿದರು. ಆ ಸಂದರ್ಭದಲ್ಲಿ ಜನರಿಗಾದ ಕಷ್ಟ ಕಾರ್ಪಣ್ಯಗಳ ಬಗ್ಗೆ ಮಾತನಾಡಿದರು. ಅಲ್ಲದೇ ತುರ್ತು ಪರಿಸ್ಥಿತಿಯ 50ನೇ ವರ್ಷಾಚರಣೆ ಹಿನ್ನೆಲೆ ಎರಡು ದಿನ ಮೌನಾಚರಣೆಗೆ ಕರೆ ನೀಡಿದರು. ಇದರ ಬೆನ್ನಲ್ಲೇ ಪ್ರತಿಪಕ್ಷ ನಾಯಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಪರಿಣಾಮವಾಗಿ ಕಲಾಪನ್ನು ಮುಂದೂಡಲಾಯಿತು. ಸರ್ವಾಧಿಕಾರವನ್ನು ನಿಲ್ಲಿಸಿ.. ದೇಶವನ್ನೇ ಜೈಲಾಗಿ ಪರಿವರ್ತಿಸಿದ್ದಾರೆ ಎಂದು ಘೋಷಣೆ ಕೂಗಿದರು.
ಇದಾದ ಬಳಿಕ ತುರ್ತು ಪರಿಸ್ಥಿತಿ ಬಗ್ಗೆ ಪ್ರಸ್ತಾಪಿಸಿದ ಓಂ ಬಿರ್ಲಾ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಗೌರವಾನ್ವಿತ ಸಭಾಧ್ಯಕ್ಷರು ತುರ್ತು ಪರಿಸ್ಥಿತಿಯನ್ನು ಬಲವಾಗಿ ಖಂಡಿಸಿದ್ದು, ಆ ಸಮಯದಲ್ಲಿ ಮಾಡಿದ ಅತಿರೇಕ ವರ್ತನೆ ಮತ್ತು ಪ್ರಜಾಪ್ರಭುತ್ವವನ್ನು ಕತ್ತು ಹಿಸುಕಿದ ರೀತಿಯನ್ನು ಪ್ರಸ್ತಾಪಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಆ ದಿನಗಳಲ್ಲಿ ನಡೆದ ಹಿಂಸಾಚಾರ ಖಂಡಿಸಿ ನಡೆಸಲಾದ ಮೌನಾಚರಣೆಯನ್ನು ನಾವು ಪ್ರಶಂಸಿಸುತ್ತೇವೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.