ನವ ದೆಹಲಿ: ಮಹೀಂದ್ರ ಸಂಸ್ಥೆಯಿಂದ ಮಾರುಕಟ್ಟೆಗೆ ಲಾಂಚ್ ಆಗುತ್ತಿರುವ ನೂತನ ಕಾರ್‌ನ ಟೀಸರ್ ಬಿಡುಗಡೆಯಾಗಿದೆ. ಈ ಕಾರು ಮಹೀಂದ್ರ xuv 900 ಇರಬಹುದು ಎಂದು ಹೇಳಲಾಗಿದೆ. ಮಹೀಂದ್ರ ಸಂಸ್ಥೆಯು ಎಲೆಕ್ಟ್ರಿಕ್ ಕಾರ್‌ಗಳ ಜಗತ್ತಿಗೆ ಈ ಮೂಲಕ ಪ್ರವೇಶಿಸುತ್ತಿದೆ. ಅಗಸ್ಟ್ 15ರಂದು ʼಬಾರ್ನ್ ಎಲೆಕ್ಟ್ರಿಕ್ʼ ಎಂಬ ಹೊಸ ಕಲ್ಪನೆಯಡಿಯಲ್ಲಿ ನೂತನ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಮಹೀಂದ್ರ ಸಂಸ್ಥೆಯು ಘೋಷಣೆ ಮಾಡಲಿದೆ.
ಈಗ ತಾನೇ ಟೀಸರ್ ಮೂಲಕ ಕಾಣಿಸಿಕೊಂಡ ಎಕ್ಸ್‌ಯುವಿ 900 ಕಾರು ಮಾರುಕಟ್ಟೆಗೆ ಬರಲು ಕೆಲವು ವರ್ಷಗಳೇ ಆಗಬಹುದು ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ʼಬಾರ್ನ್ ಎಲೆಕ್ಟ್ರಿಕ್ʼ ಯೋಜನೆಯಡಿಯಲ್ಲಿ ಮೊದಲು ಎಕ್ಸ್‌ಯುವಿ 300 ಕಾರ್‌ನ ಎಲೆಕ್ಟ್ರಿಕ್ ಮಾದರಿ ಮಾರುಕಟ್ಟೆಗೆ ಬರಲಿದೆ ಎಂದು ವರದಿಯಾಗಿದೆ.
ಈಗಾಗಲೇ ವಿದ್ಯುತ್ ಕಾರುಗಳು ಮಾರುಕಟ್ಟೆಯಲ್ಲಿ ಸ್ಥಾನ ಗಳಿಸಿಕೊಂಡಿವೆ. ಭಾರತದ ಟಾಟಾ ಸಂಸ್ಥೆ ಕೂಡ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಹೊಸ ಹೊಸ ಕಾರುಗಳನ್ನು ಪರಿಚಯಿಸುತ್ತಿದೆ. ಈ ಮಧ್ಯೆ ಮಹೀಂದ್ರ ಕೂಡ ಒಂದು ವಿಶಿಷ್ಟ ಕಲ್ಪನೆಯೊಂದಿಗೆ ಜನರ ಗಮನ ಸೆಳೆಯಲು ಸಜ್ಜಾಗಿದೆ.
xuv 900 ಟೀಸರ್
ಈ ಕಾರು MADE ಎಂಬ ಹೊಸ ವಿನ್ಯಾಸದಡಿ ಮೂಡಿಬರುತ್ತಿದೆ. MADE- Mahindra Advanced Design Europe. ಮೇಡ್ ಎಂದರೆ ಮಹೀಂದ್ರ ಸಂಸ್ಥೆಯ ಕಾರು ವಿನ್ಯಾಸದ ಅನುಭವಿ ತಂಡ. ಹೊಸ ವಿನ್ಯಾಸದ ಕಾರು ಅತ್ಯಂತ ಆಕರ್ಷಕವಾಗಿ ಮೂಡಿಬರಲಿದೆ ಎಂಬ ಸೂಚನೆಯನ್ನು ಟೀಸರ್ ನೀಡಿದೆ. ಈ ವಿಭಾಗದ ನೇತೃತ್ವವನ್ನು ಪ್ರತಾಪ್ ಬೋಸ್ ನಿರ್ವಹಿಸುತ್ತಿದ್ದಾರೆ.
ಇದು ಎಸ್‌ಯುವಿ ಆದರೂ ಒಂದು ರೇಸ್ ಕಾರ್ ಮಾದರಿಯಲ್ಲಿ ರೂಪುಗೊಳ್ಳುತ್ತಿದೆ ಎಂದು ಟೀಸರ್ ಮೂಲಕ ತಿಳಿಸಲಾಗಿದೆ. ಫಾರ್ಮುಲಾ-ಇ ಮಾದರಿಯಲ್ಲಿ ಈ ಕಾರನ್ನು ಡಿಸೈನ್ ಮಾಡಲಾಗುತ್ತಿರುವುದು ವಿಶೇಷ. ವಿನೂತನ ಕಾಕ್‌ಪಿಟ್ (ಡ್ರೈವರ್ ಕೂರುವ ಜಾಗ) ಹಾಗೂ ಹೊಸ ರೀತಿಯ ಚೌಕಾಕಾರದ ಸ್ಟೇರಿಂಗ್ ಈ ಕಾರಿನ ಆಕರ್ಷಕ ಸಂಗತಿಗಳಾಗಲಿವೆ. ಈ ಕಾರಿಗೆ ವಿಭಿನ್ನವಾದ ಏರೋಡೈನಮಿಕ್ ವ್ಯವಸ್ಥೆ ಇದೆ. ಇದು ಹೆಚ್ಚು ಪರಿಣಾಮಕಾರಿಯಾಗಲಿದೆ.
ಒಟ್ಟಿನಲ್ಲಿ ಇದೊಂದು ಸ್ಪೋರ್ಟಿ ಲುಕ್‌ನೊಂದಿಗೆ, ಫೈಟರ್ ಜೆಟ್ ಅಥವಾ ಒಂದು ರೇಸ್ ಕಾರಿನಲ್ಲಿ ಕುಳಿತ ಅನುಭವವನ್ನು ನೀಡುವುದು ಖಚಿತ ಎಂದು ಟೀಸರ್ ಮೂಲಕ ಹೇಳಲಾಗಿದೆ.
2023 ಅಥವಾ 2024ರ ಹೊತ್ತಿಗೆ ಮಹೀಂದ್ರ ಸಂಸ್ಥೆಯಿಂದ ಒಟ್ಟು 7 ಕಾರುಗಳು ʼಬಾರ್ನ್ ಎಲೆಕ್ಟ್ರಿಕ್ʼ ಯೋಜನೆಯಡಿಯಲ್ಲಿ ಮಾರುಕಟ್ಟಗೆ ಬರುವ ನಿರೀಕ್ಷೆಯಿದೆ.
ಇದನ್ನೂ ಓದಿ: TaTa Motors ವಾಹನಗಳ ಮಾರಾಟ ಮೇನಲ್ಲಿ 3 ಪಟ್ಟು ಹೆಚ್ಚಳ, 76,210 ಕಾರುಗಳ ಸೇಲ್ಸ್