ಬೆಂಗಳೂರು: ಪ್ರಸ್ತುತ ಆಧಾರ್ ಕಾರ್ಡ್ (Aadhaar Card) ಅನ್ನು ಪ್ರಮುಖ ದಾಖಲೆಯಾಗಿ ಪರಿಗಣಿಸಲಾಗುತ್ತದೆ. ಪ್ರತಿಯೊಂದು ವ್ಯವಹಾರಕ್ಕೂ ಆಧಾರ್ ಕಾರ್ಡ್ ಅಗತ್ಯ ಎನ್ನುವಷ್ಟರ ಮಟ್ಟಿಗೆ ಇದರ ಬಳಕೆ ವ್ಯಾಪಕವಾಗಿದೆ. ಒಂದು ವೇಳೆ ನಮ್ಮ ಆಧಾರ್ ಕಾರ್ಡ್ ಕಳೆದು ಹೋದರೆ ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಂತ ಚಿಂತಿಸಬೇಕಾಗಿಲ್ಲ. ಆಧಾರ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು? ನಂಬರ್ ಅನ್ನು ಮರಳಿ ಪಡೆಯುವುದು ಹೇಗೆ? ಎನ್ನುವುದರ ವಿವರ ಇಲ್ಲಿದೆ.
ನಂಬರ್ ಹಂಚಿಕೊಳ್ಳಬೇಡಿ
ಭಾರತೀಯ ನಿವಾಸಿಗಳು ಮತ್ತು ಅನಿವಾಸಿ ಭಾರತೀಯರಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡುವ 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯೇ (UID) ಆಧಾರ್. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಅಥವಾ ಆಧಾರ್ ಸಂಖ್ಯೆಯನ್ನು ಕಳೆದುಹೋದರೆ ಅದನ್ನು ಯುಐಡಿಎಐನ ಟೋಲ್ ಫ್ರೀ ಸಂಖ್ಯೆ 1947ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಇಲ್ಲದಿದ್ದರೆ ಆನ್‌ಲೈನ್ ಮೂಲಕ ಅಧಿಕೃತ ಪೋರ್ಟಲ್‌ನಲ್ಲಿ ವರದಿ ಮಾಡಬಹುದು. ಇದು ನಿಮ್ಮ ಆಧಾರ್ ಸಂಖ್ಯೆಯ ದುರುಪಯೋಗವನ್ನು ತಡೆಯಲು ಸಹಾಯ ಮಾಡುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಆಧಾರ್ ಸಂಖ್ಯೆಯನ್ನು ಅನಧಿಕೃತ ವ್ಯಕ್ತಿಗಳು ಅಥವಾ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬೇಡಿ. ನಿಮ್ಮ ಆಧಾರ್ ಸಂಖ್ಯೆಯನ್ನು ಸಾರ್ವಜನಿಕ ಕಂಪ್ಯೂಟರ್ ಅಥವಾ ಕ್ಲೌಡ್ ಸ್ಟೋರೇಜ್‌ನಂತಹ ಅಸುರಕ್ಷಿತ ಸ್ಥಳಗಳಲ್ಲಿ ಸಂಗ್ರಹಿಸಿ ಇಡಬೇಡಿ.
ಹೀಗೆ ಮಾಡಿ
ಯುಐಡಿಎಐ ಪೋರ್ಟಲ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ನಿಮ್ಮ ಆಧಾರ್ ಕಾರ್ಡ್ ಅನ್ನು ಕಳೆದುಕೊಂಡಿದ್ದರೆ ಅದನ್ನು ಹಿಂಪಡೆಯಲು ಅಥವಾ ಹೊಸದನ್ನು ಪಡೆಯಲು ಈ ವಿಧಾನವನ್ನು ಅನುಸರಿಸಬೇಕು.
- ಆಧಾರ್ ಸೇವೆಯನ್ನು ಬಳಸಿಕೊಂಡು ತನ್ನ ಆಧಾರ್ ಸಂಖ್ಯೆಯನ್ನು ಕಂಡುಹಿಡಿಯಬಹುದು ಮತ್ತು ಕಳೆದುಹೋದ ಯುಐಡಿ / ಇಐಡಿ (Enrolment ID)ಯನ್ನು ಮರಳಿ ಪಡೆಯಬಹುದು. ಅದಕ್ಕಾಗಿ ವೆಬ್ಸೈಟ್ https://myaadhaar.uidai.gov.in/ಗೆ ಭೇಟಿ ನೀಡಿ
- ಸಹಾಯವಾಣಿ 1947ಕ್ಕೆ ಕರೆ ಮಾಡಿದರೆ ಸಂಪರ್ಕ ಕೇಂದ್ರದ ಏಜೆಂಟ್ ಇಐಡಿ ಸಂಖ್ಯೆಯನ್ನು ಪಡೆಯಲು ಸಹಾಯ ಮಾಡುತ್ತಾರೆ. ಈ ಇಐಡಿ ಸಂಖ್ಯೆಯ ಸಹಾಯದಿಂದ ಇ-ಆಧಾರ್ ಡೌನ್ಲೋಡ್ ಮಾಡಿಕೊಳ್ಳಬಹುದು.
- 1947 ನಂಬರ್ಗೆ ಕರೆ ಮಾಡುವ ಮೂಲಕ ಐವಿಆರ್ಎಸ್ (IVRS) ವ್ಯವಸ್ಥೆಯಲ್ಲಿ ಇಐಡಿ ಸಂಖ್ಯೆಯಿಂದ ಆಧಾರ್ ಸಂಖ್ಯೆಯನ್ನು ಪಡೆಯಬಹುದು
ಒಂದು ವೇಳೆ ಮೊಬೈಲ್ ಸಂಖ್ಯೆಯನ್ನು ಆಧಾರ್ ಜತೆ ನೋಂದಾಯಿಸಿದ್ದರೆ ನಿಮ್ಮ ಇಐಡಿ ಅಥವಾ ಆಧಾರ್ ಅನ್ನು ಕಂಡುಕೊಳ್ಳುವ ವಿಧಾನ:
- ಆಧಾರ್ನ ವೆಬ್ಸೈಟ್ ಓಪನ್ ಮಾಡಿ ʼRetrieve Lost or Forgotten UID/EIDʼ ಆಯ್ಕೆ ಕ್ಲಿಕ್ ಮಾಡಿ
- ನೀವು ಹಿಂಪಡೆಯಲು ಬಯಸುವ ಇಐಡಿ / ಯುಐಡಿಯನ್ನು ಆಯ್ಕೆ ಮಾಡಿ ಮತ್ತು ನಂತರ ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯನ್ನು ನಮೂದಿಸಿ (ಆಧಾರ್ನಲ್ಲಿ ನೋಂದಾಯಿಸಿದಂತೆ).
- ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ಗೆ ಇಐಡಿ/ ಆಧಾರ್ ನಂಬರ್ ಬರಲಿದೆ.
ಮೊಬೈಲ್ ನಂಬರ್‌ನೊಂದಿಗೆ ನೋಂದಣಿಯಾಗದ ಆಧಾರ್ ಕಾರ್ಡ್ ಕಳೆದು ಹೋದರೆ ಕೈಗೊಳ್ಳಬೇಕಾದ ವಿಧಾನ:
- 1947 ನಂಬರ್ಗೆ ಕರೆ ಮಾಡಬೇಕು
- ಸಿಆರ್ಎಂ ಆಪರೇಟರ್ಗಳು ಮೂಲ ಜನಸಂಖ್ಯಾ ಡೇಟಾವನ್ನು ಸಂಗ್ರಹಿಸುತ್ತಾರೆ ಮತ್ತು ನೀವು ಒದಗಿಸಿದ ಮಾಹಿತಿಯು ದಾಖಲೆಯ ಜತೆ ಹೊಂದಿಕೆಯಾದರೆ ಇಐಡಿಯನ್ನು ಒದಗಿಸುತ್ತಾರೆ.
- ಸಮರ್ಪಕ ಮಾಹಿತಿಯನ್ನು ಒದಗಿಸದಿದ್ದರೆ ಇಐಡಿಗೆ ಸಂಬಂಧಿಸಿದ ಮಾಹಿತಿಯನ್ನು ಸಿಗುವುದಿಲ್ಲ ಎನ್ನುವುದನ್ನು ಗಮನಿಸಿ.
ಇಐಡಿ ಲಭಿಸಿದ ಬಳಿಕ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಇಐಡಿ ಮತ್ತು ತಮ್ಮ ಮೊಬೈಲ್ ಸಂಖ್ಯೆಯನ್ನು ಒದಗಿಸುವ ಮೂಲಕ ಆಧಾರ್ ಕಾರ್ಡ್‌ನ ಪ್ರತಿಯನ್ನು ಪ್ರಿಂಟ್ ತೆಗೆಯಬಹುದು.
ಇಐಡಿ ಎಂದರೇನು?
ಇಐಡಿ ಎಂಬುದು ಪ್ರತಿ ಆಧಾರ್ ಅರ್ಜಿದಾರರಿಗೆ ನಿಗದಿಪಡಿಸಿದ 28 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆ. ನಿಮ್ಮ ಆಧಾರ್ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸುವುದು, ಕಳೆದುಹೋದ ಅಥವಾ ಮರೆತುಹೋದ ಆಧಾರ್ ಸಂಖ್ಯೆಯನ್ನು ಹಿಂಪಡೆಯುವುದು, ನಿಮ್ಮ ಗುರುತನ್ನು ಪರಿಶೀಲಿಸುವುದು ಮತ್ತು ಕೆವೈಸಿ ಕಾರ್ಯವಿಧಾನಗಳನ್ನು ಪೂರ್ಣಗೊಳಿಸುವುದು ಮುಂತಾದ ವಿವಿಧ ಉದ್ದೇಶಗಳಿಗಾಗಿ ಇದನ್ನು ಬಳಸಲಾಗುತ್ತದೆ. ನೀವು ಆಧಾರ್ ಸಂಖ್ಯೆಗೆ ಅರ್ಜಿ ಸಲ್ಲಿಸಿದಾಗ ಇಐಡಿ ಅನ್ನು ಸಹ ನಿಯೋಜಿಸಲಾಗುತ್ತದೆ. ಇದರ ಮೊದಲ 14 ಅಂಕಿಗಳನ್ನು ಸಾಮಾನ್ಯ ಸಂಖ್ಯೆಯಾಗಿದ್ದರೆ ಮುಂದಿನ 14 ಅಂಕಿಗಳು ನಿಮ್ಮ ಆಧಾರ್ ನೋಂದಣಿಯ ದಿನಾಂಕ ಮತ್ತು ಸಮಯವನ್ನು ಸೂಚಿಸುತ್ತದೆ.
ಇದನ್ನೂ ಓದಿ: Gaganyaan Mission: ಅಬಾರ್ಟ್ ಟೆಸ್ಟ್ ಡೆಮೋನಲ್ಲಿ ಇಸ್ರೋ ಏನನ್ನು ಪರೀಕ್ಷಿಸಲಿದೆ? ಇಲ್ಲಿದೆ ಡಿಟೇಲ್ಸ್…
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ