Site icon Vistara News

Agnikul Cosmos: ಯಶಸ್ವಿಯಾಗಿ ರಾಕೆಟ್ ಉಡಾವಣೆ ಮಾಡಿದ ಸ್ಟಾರ್ಟ್ ಅಪ್ ಕಂಪನಿ ಅಗ್ನಿಕುಲ್ ಕಾಸ್ಮೋಸ್; ಮೋದಿ ಅಭಿನಂದನೆ

Agnikul Cosmos

Agnikul Cosmos

ಚೆನ್ನೈ: ಚೆನ್ನೈ ಮೂಲದ ಖಾಸಗಿ ಬಾಹ್ಯಾಕಾಶ ಸ್ಟಾರ್ಟ್ ಅಪ್ ಅಗ್ನಿಕುಲ್ ಕಾಸ್ಮೋಸ್ (Agnikul Cosmos) ಇಂದು (ಮೇ 30) ಅಗ್ನಿಬಾನ್ ಎಸ್‌ಒಆರ್‌ಟಿಇಡಿ (Suborbital Tech Demonstrator) ಎಂಬ ರಾಕೆಟ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಸಂಬಂಧ ಇಸ್ರೋ (Indian Space Research Organisation) ಸಂತಸ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಭಿನಂದನೆ ತಿಳಿಸಿದೆ.‌

ʼʼಅಗ್ನಿಬಾನ್‌ ಸಾರ್ಟೆಡ್ 01 (Agnibaan SOrTeD) ಮಿಷನ್‌ ಅನ್ನು ತಮ್ಮ ಉಡಾವಣಾ ಪ್ಯಾಡ್‌ನಿಂದ ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಅಗ್ನಿಕುಲ್‌ ಕಾಸ್ಮೋಸ್‌ಗೆ ಅಭಿನಂದನೆಗಳು. ಅರೆ-ಕ್ರಯೋಜೆನಿಕ್‌ ಲಿಕ್ವಿಡ್‌ ಎಂಜಿನ್‌ನ ಮೊದಲ ನಿಯಂತ್ರಿತ ಹಾರಾಟವು ಪ್ರಮುಖ ಮೈಲಿಗಲ್ಲು ಎನಿಸಿಕೊಂಡಿದೆʼʼ ಎಂದು ಇಸ್ರೋ ತಿಳಿಸಿದೆ. ಐಐಟಿ ಮದ್ರಾಸ್‌ನ ಪ್ರಾಧ್ಯಾಪಕ ಮತ್ತು ಅಗ್ನಿಕುಲ್‌ನ ಮಾರ್ಗದರ್ಶಕ ಸತ್ಯ ಆರ್. ಚಕ್ರವರ್ತಿ ಕೂಡ ಶ್ರೀಹರಿಕೋಟಾದಿಂದ ಉಡಾವಣೆ ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

“ಶ್ರೀಹರಿಕೋಟಾದ ಎಸ್‌ಡಿಎಸ್‌ಸಿ-ಶಾರ್‌(SDSC-SHAR)ನಿಂದ ಭಾರತದ ಮೊದಲ ಮತ್ತು ಏಕೈಕ ಖಾಸಗಿ ಲಾಂಚ್‌ ಪ್ಯಾಡ್‌ನಿಂದ ಅಗ್ನಿಬಾನ್ ಸಾರ್ಟೆಡ್‌ ಮಿಷನ್ 01 ಅನ್ನು ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದೆ. ಈ ರಾಕೆಟ್‌ ವಿಶ್ವದ ಮೊದಲ ಸಿಂಗಲ್ ಪೀಸ್ 3 ಡಿ ಮುದ್ರಿತ ಎಂಜಿನ್‌ನಿಂದ ಚಾಲಿತವಾಗಿದೆ ಮತ್ತು ಇದು ಸೆಮಿ ಕ್ರಯೋ ಎಂಜಿನ್ ಹೊಂದಿರುವ ಭಾರತದ ಮೊದಲ ಹಾರಾಟ ಎನಿಸಿಕೊಂಡಿದೆ” ಎಂದು ಅಗ್ನಿಕುಲ್‌ ತಿಳಿಸಿದೆ.

ಅಭಿನಂದನೆ ತಿಳಿಸಿದ ಪ್ರಧಾನಿ ಮೋದಿ

ಇತ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೂಡ ಈ ಅಭೂತಪೂರ್ವ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಎಕ್ಸ್‌ ಮೂಲಕ ಅಭಿನಂದನೆ ತಿಳಿಸಿದ ಅವರು, “ಇಡೀ ರಾಷ್ಟ್ರವೇ ಹೆಮ್ಮೆ ಪಡುವಂತಹ ಗಮನಾರ್ಹ ಸಾಧನೆ. ವಿಶ್ವದ ಮೊದಲ ಸಿಂಗಲ್-ಪೀಸ್ 3ಡಿ ಮುದ್ರಿತ ಅರೆ-ಕ್ರಯೋಜೆನಿಕ್ ಎಂಜಿನ್‌ನಿಂದ ಚಾಲಿತ ಅಗ್ನಿಬಾನ್ ರಾಕೆಟ್‌ನ ಯಶಸ್ವಿ ಉಡಾವಣೆ ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಒಂದು ಮಹತ್ವದ ಕೊಡುಗೆಯಾಗಿದೆ ಮತ್ತು ನಮ್ಮ ಯುವ ಶಕ್ತಿಯ ಗಮನಾರ್ಹ ಜಾಣ್ಮೆಗೆ ಸಾಕ್ಷಿಯಾಗಿದೆ. ಅಗ್ನಿಕುಲ್ ಕಾಸ್ಮೋಸ್ ತಂಡಕ್ಕೆ, ಅವರ ಭವಿಷ್ಯದ ಪ್ರಯತ್ನಗಳಿಗೆ ನನ್ನ ಶುಭ ಹಾರೈಕೆಗಳು” ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Chandrayaan 4: ಚಂದ್ರಯಾನ 4ಕ್ಕೆ ಇಸ್ರೋ ಸಜ್ಜು; ಚಂದ್ರನ ವಿಶೇಷ ಸ್ಥಳದಲ್ಲಿ ಬಾಹ್ಯಾಕಾಶ ನೌಕೆ ಲ್ಯಾಂಡಿಂಗ್!

5ನೇ ಪ್ರಯತ್ನ

ಇದು ಅಗ್ನಿಕುಲ್ ಕಾಸ್ಮೋಸ್ ನಡೆಸಿದ 5ನೇ ಪ್ರಯತ್ನವಾಗಿತ್ತು. ಈ ಹಿಂದೆ ರಾಕೆಟ್‌ ಉಡಾವಣೆ ಮಾಡಲು 4 ಬಾರಿ ಪ್ರಯತ್ನ ನಡೆದಿತ್ತಾದರೂ ಕೊನೆಯ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆಯಿಂದ ರದ್ದುಗೊಳಿಸಲಾಗಿತ್ತು. 575 ಕೆಜಿ ತೂಕ ಮತ್ತು 6.2 ಮೀಟರ್ ಉದ್ದದ ರಾಕೆಟ್ ಶ್ರೀಹರಿಕೋಟಾದಿಂದ ಬಂಗಾಳ ಕೊಲ್ಲಿಗೆ ಯಶಸ್ವಿಯಾಗಿ ಹಾರಾಟ ನಡೆಸಿತು. ʼʼಅಗ್ನಿಬಾನ್ ಸಾರ್ಟೆಡ್‌ ಅರೆ-ಕ್ರಯೋಜೆನಿಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ವಾಣಿಜ್ಯಿಕವಾಗಿ ಲಭ್ಯವಿರುವ ವಾಯುಯಾನ ಟರ್ಬೈನ್ ಇಂಧನವನ್ನು, ಮುಖ್ಯವಾಗಿ ಸೀಮೆಎಣ್ಣೆ ಮತ್ತು ವೈದ್ಯಕೀಯ ದರ್ಜೆಯ ದ್ರವ ಆಮ್ಲಜನಕವನ್ನು ಬಳಸುತ್ತದೆʼʼ ಎಂದು ಅಗ್ನಿಕುಲ್ ಕಾಸ್ಮೋಸ್ ಪ್ರೈವೇಟ್ ಲಿಮಿಟೆಡ್‌ನ ಸಹ ಸಂಸ್ಥಾಪಕ ಮೊಯಿನ್ ಎಸ್‌ಪಿಎಂ ತಿಳಿಸಿದ್ದಾರೆ.

Exit mobile version