Site icon Vistara News

Period Tracking Apps ವಿರುದ್ಧ ಅಮೆರಿಕದಲ್ಲಿ ಶುರುವಾಗಿದೆ ಆಂದೋಲನ

Delete Period Tracking Apps

ನ್ಯೂಯಾರ್ಕ್‌: ಅಮೆರಿಕದ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಗರ್ಭಪಾತ ಹಕ್ಕನ್ನು ರದ್ದುಗೊಳಿಸಿದೆ. 15 ವಾರಗಳ ನಂತರದ ಭ್ರೂಣವನ್ನು ಅಬಾರ್ಷನ್‌ ಮಾಡುವಂತಿಲ್ಲ ಎಂದು ತೀರ್ಪಿನಲ್ಲಿ ಹೇಳಿದೆ. ಇದನ್ನು ವಿರೋಧಿಸಿ ಅಲ್ಲಿಯ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಜತೆಯಲ್ಲಿ ಪೀರಿಯೆಡ್ಸ್‌ ಟ್ರಾಕಿಂಗ್‌ ಆ್ಯಪ್‌ (Period Tracking Apps) ವಿರುದ್ಧವೂ ಅವರು ಸಿಟ್ಟು ಮಾಡಿಕೊಂಡಿದ್ದಾರೆ.

ಅಮೆರಿಕದಲ್ಲಿ ಮಹಿಳೆಯರ ಋತುಚಕ್ರವನ್ನು ಲೆಕ್ಕ ಇಡುವ ಪೀರಿಯೆಡ್ಸ್‌ ಟ್ರಾಕರ್‌ ಆ್ಯಪ್‌ಗಳು ಹೆಚ್ಚು ಬಳಕೆಯಲ್ಲಿವೆ. ಋತುಚಕ್ರ ದಿನಗಳ ಬಗ್ಗೆ ಮುನ್ಸೂಚನೆ ನೀಡುವುದಲ್ಲದೆ, ಸೇಫ್‌ ಟೈಮ್‌ ಮತ್ತಿತರ ಮಾಹಿತಿಗಳನ್ನೂ ಈ ಆ್ಯಪ್‌ಗಳು ನೀಡುತ್ತವೆ. ಈ ಆ್ಯಪ್‌ ಅನ್ನು ಮಹಿಳೆಯರು ಈ ಹಿಂದಿನಿಂದಲೂ ಬಳಸಿಕೊಂಡು ಬಂದಿದ್ದಾರೆ. ಆದರೆ ಈ ಆ್ಯಪ್‌ಗಳು ಖಾಸಗಿತನದಲ್ಲಿ ಮೂಗು ತೂರಿಸುತ್ತಿವೆ ಎಂದು ಮಹಿಳೆಯರು ಈಗ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಆ್ಯಪ್‌ಗಳನ್ನು ಡಿಲೀಟ್‌ ಮಾಡಿ ಎಂಬ ಆಂದೋಲನ ಆರಂಭಿಸಿದ್ದಾರೆ.

ಏನಿದು ಗಲಾಟೆ?

ಈ ಪ್ರಕರಣದ ಹಿನ್ನೆಲೆ ಆರಂಭವಾಗುವುದು ೧೯೭೩ರ ರೋ ಮತ್ತು ವೇಡ್‌ ಪ್ರಕರಣದಲ್ಲಿ. ತನ್ನ ಗರ್ಭವನ್ನು ಇರಿಸಿಕೊಳ್ಳಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲು ಗರ್ಭಿಣಿ ಮಹಿಳೆಗೆ ಮೊದಲ ಮೂರು ತಿಂಗಳಲ್ಲಿ ಅಧಿಕಾರವಿದೆ ಎಂದು ನ್ಯಾಯಾಲಯ ಈ ಪ್ರಕರಣದಲ್ಲಿ ತೀರ್ಪು ನೀಡಿತ್ತು. ಇದರಿಂದಾಗಿ ಗರ್ಭಪಾತಕ್ಕೆ ಕಾನೂನಿನ ಮಾನ್ಯತೆ ದೊರೆತಂತಾಗಿತ್ತು.

ಆದರೆ ಇತ್ತೀಚೆಗೆ ಇದಕ್ಕೆ ವ್ಯತಿರಿಕ್ತವಾಗಿ ಅಮೆರಿಕದ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ್ದು, ೧೫ ವಾರಗಳ ನಂತರ ಗರ್ಭಪಾತವನ್ನು ನಿಷೇಧಿಸುವ ಬಗ್ಗೆ ಮಿಸಿಸಿಪ್ಪಿಯಲ್ಲಿ ತರಲಾದ ಕಾನೂನಿನ ಪರವಾಗಿ ಈ ತೀರ್ಪನ್ನು ನೀಡಲಾಗಿದೆ. ಈ ತೀರ್ಪಿನಲ್ಲಿ, ೧೨ ವಾರದೊಳಗಿನ ಗರ್ಭವನ್ನು ಚಿವುಟುವುದನ್ನು ನಿಷೇಧಿಸುವ ಅಧಿಕಾರವನ್ನು ಆಯಾ ರಾಜ್ಯಗಳಿಗೆ ನ್ಯಾಯಾಲಯ ಬಿಟ್ಟುಕೊಟ್ಟಿದೆ. ಇದರಿಂದ ಸೈದ್ಧಾಂತಿಕವಾಗಿ ಗರ್ಭಪಾತವನ್ನು ವಿರೋಧಿಸುವ ರಾಜ್ಯಗಳು ಅಥವಾ ಸರಕಾರಗಳು ಇದನ್ನು ನಿಷೇಧಿಸುವ ಸಾಧ್ಯತೆ ದಟ್ಟವಾಗಿದೆ.

ಆ್ಯಪ್‌ಗಳ ಮೇಲೇಕೆ ಸಿಟ್ಟ?

ಸುಪ್ರೀಂಕೋರ್ಟ್‌ನ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಮಹಿಳೆಯರು ತಮ್ಮ ದೇಹದ ಬಗ್ಗೆ ನಿರ್ಣಯಿಸುವ ಹಕ್ಕು ಮಹಿಳೆಯರಿಗೇ ಇರಬೇಕು, ಕಾನೂನಿಗಲ್ಲ ಎಂದು ವಾದ ಮಂಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ತಮ್ಮ ಖಾಸಗಿ ಮಾಹಿತಿಗಳು ಆ್ಯಪ್‌ಗಳಿಂದ ಸೋರಿಕೆಯಾಗಿ ಕಾನೂನು ಪಾಲಕರ ಕೈಸೇರಿ, ಈ ಪ್ರಕರಣಕ್ಕೆ ನ್ಯಾಯಾಲಯದಲ್ಲಿ ಬಲ ಬರಬಹುದು ಎಂಬ ಅನುಮಾನ ಅವರನ್ನು ಕಾಡುತ್ತಿದೆ.

ಈ ಹಿನ್ನೆಲೆಯಲ್ಲಿ ಪಿರಿಯೆಡ್ಸ್‌ ಟ್ರಾಕರ್‌ಗಳನ್ನು ಫೋನ್‌, ವಾಚುಗಳನ್ನು ಕಿತ್ತೆಸೆಯುವ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ. ಈ ಅಭಿಯಾನಕ್ಕೆ ಹಲವು ಆ್ಯಪ್‌ಗಳು ಪ್ರತಿಕ್ರಿಯೆ ನೀಡಿದ್ದು, ತನ್ನಲ್ಲಿರುವ ಮಾಹಿತಿಯನ್ನು ಯಾರೊಂದಿಗೂ ತಾನು ಹಂಚಿಕೊಳ್ಳುತ್ತಿಲ್ಲ ಎಂದು ʻಫ್ಲೋʼ ಎನ್ನುವ ಆ್ಯಪ್‌ ಸ್ಪಷ್ಟಪಡಿಸಿದೆ.

ಹೀಗೆ ಸಾರ್ವತ್ರಿಕವಾಗಿ ಆ್ಯಪ್‌ ಡಿಲೀಟ್‌ ಮಾಡುವುದರಿಂದ, ಇದರ ಬಳಕೆ ಅಗತ್ಯವಾದವರಿಗೆ ತೊಂದರೆ ಆಗಬಹುದು ಎಂದು ಈ ಆ್ಯಪ್‌ ಕಂಪನಿಗಳು ವಾದಿಸುತ್ತಿವೆ. ಈ ಆಂದೋಲನ ದೊಡ್ಡ ಮಟ್ಟದಲ್ಲಿ ನಡೆದರೆ ಮಹಿಳೆಯರ ಖಾಸಗಿತನದ ಮೇಲ ಕಣ್ಣಿಡುತ್ತಿದ್ದ ಆ್ಯಪ್‌ಗಳ ಮಾರುಕಟ್ಟೆ ಬಿದ್ದುಹೋಗುವುದಂತೂ ಖಚಿತವಾಗಿದೆ.

ಇದನ್ನೂ ಓದಿ|ನಿಮ್ಮ ಮೊಬೈಲ್‌ನಲ್ಲಿ ಈ ಆ್ಯಪ್‌ಗಳು ಇದ್ದರೆ ಹುಷಾರ್‌! ತಕ್ಷಣ ಡಿಲೀಟ್‌ ಮಾಡಿ

Exit mobile version