ನವದೆಹಲಿ: ಐಫೋನ್ ಉತ್ಪಾದಕ ಆ್ಯಪಲ್ ಕಂಪನಿಯು (Apple iPhone) ಚೀನಾದ ಮೇಲಿನ ಅವಲಂಬನೆಯನ್ನು ತಗ್ಗಿಸುವುದಕ್ಕಾಗಿ ತನ್ನ ಮುಂಬರುವ ಐಫೋನ್ 15 ಸರಣಿ ಫೋನುಗಳನ್ನು ಭಾರತದಲ್ಲೇ ಉತ್ಪಾದಿಸಲು ಮುಂದಾಗಿದೆ. ಕೆಲವು ವರದಿಗಳ ಪ್ರಕಾರ, ಐಫೋನ್ ಅಸೆಂಬಲ್ ಮಾಡಿ, ಉತ್ಪಾದಿಸಲು ಟಾಟಾ ಗ್ರೂಪ್(Tata Group) ಜತೆ ಪಾಲುದಾರಿಕೆಯನ್ನು ಹೊಂದಲಿದೆ. ಆ್ಯಪಲ್ ಕಂಪನಿಯು ಈ ವರ್ಷ ಸೆಪ್ಟೆಂಬರ್‌ನಲ್ಲಿ ಐಫೋನ್ 15 ಸರಣಿ ಫೋನುಗಳನ್ನು ಲಾಂಚ್ ಮಾಡಲಿದೆ. ಹಾಗಾಗಿ, ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಫೋನುಗಳನ್ನು ಭಾರತದಲ್ಲೇ ಸಿದ್ಧಪಡಿಸಲಿದೆ.
ಭಾರತದಲ್ಲೇ ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಫೋನುಗಳನ್ನು ಅಸೆಂಬಲ್ ಮಾಡಲು ಆ್ಯಪಲ್ ಕಂಪನಿಯು ಟಾಟಾ ಗ್ರೂಪ್‌ನೊಂದಿಗೆ ಪಾಲುದಾರಿಕೆ ಹೊಂದುವುದು ಬಹುತೇಕ ಖಚಿತವಾಗಿದೆ. TrendForce ಪ್ರಕಾರ, ಟಾಟಾ ಗ್ರೂಪ್, ಫಾಕ್ಸ್‌ಕಾನ್, ಪೆಗಾಟ್ರಾನ್, ಲಕ್ಸ್‌ಶೇರ್ ಕಂಪನಿಗಳ ಬಳಿಕ ಆ್ಯಪಲ್‌ಗಾಗಿ ಐಫೋನ್ ತಯಾರಿಸುವ ನಾಲ್ಕನೇ ಕಂಪನಿಯಾಗಲಿದೆ.
ಈಗಾಗಲೇ ಟಾಟಾ ಗ್ರೂಪ್, ವಿಸ್ಟ್ರಾನ್ (Wistron)ನ ಭಾರತೀಯ ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಂಡಿದೆ. ವಿಸ್ಟ್ರಾನ್‌ನ ಈ ಘಟಕವು, ಭಾರತದಲ್ಲೇ ಐಫೋನ್ ಫೋನುಗಳ ಅಸೆಂಬಲ್ ಮಾಡುವ ದೊಡ್ಡ ಘಟಕವಾಗಿದೆ. ವಿಸ್ಟ್ರಾನ್ ಕಂಪನಿಯು ಭಾರತೀಯ ಮಾರುಕಟ್ಟೆಯಿಂದಲೇ ನಿರ್ಗಮಿಸಲು ಯೋಜನೆ ರೂಪಿಸಿದೆ. ಹಾಗಾಗಿ, ಆ್ಯಪಲ್ ಕಂಪನಿಯು ಟಾಟಾ ಗ್ರೂಪ್ ಜತೆ ಪಾಲುದಾರಿಕೆಯನ್ನು ಮಾಡಿಕೊಳ್ಳಲು ಮುಂದಾಗಿದೆ.
ಮುಂಬರುವ ಐಫೋನ್ 15 ಸರಣಿ ಫೋನುಗಳು ಆ್ಯಪಲ್‌ನ ಬಯೋನಿಕ್ ಎ 16 ಚಿಪ್‌ಸೆಟ್ ಹೊಂದುವ ನಿರೀಕ್ಷೆಯಿದೆ. ಇದನ್ನು ಕಳೆದ ವರ್ಷ ಐಫೋನ್ 14 ಪ್ರೊ ಮಾದರಿಗಳಲ್ಲಿ ಪರಿಚಯಿಸಲಾಯಿತು. ಪ್ರೊ ಮಾದರಿಗಳಲ್ಲಿ ಇತ್ತೀಚಿನ ಚಿಪ್‌ಸೆಟ್ ನೀಡವುದು ಹೊಸ ತಂತ್ರವಾಗಿದೆ.
ಬೆಂಗಳೂರಲ್ಲಿ ಆ್ಯಪಲ್ ಕಂಪನಿ ಕಚೇರಿ?
ಐಫೋನ್ ಮತ್ತು ಐಪಾಡ್ ಉತ್ಪಾದಕ ಆ್ಯಪಲ್ ಕಂಪನಿಯು ಬೆಂಗಳೂರಿನ ಪ್ರೆಸ್ಟೀಜ್ ಮಿನ್ಸ್ಕ್ ಸ್ಕ್ವೇರ್‌ನ ಮೆಗಾ ಕಚೇರಿ ಕಟ್ಟಡದಲ್ಲಿ ಹಲವಾರು ಅಂತಸ್ತುಗಳನ್ನು ಲೀಸ್‌ಗೆ ಪಡೆದಿದೆ. ಮುಂದಿನ 10 ವರ್ಷಗಳಿಗೆ ಮಾಸಿಕ 2.44 ಕೋಟಿ ರೂ. ಬಾಡಿಗೆಯನ್ನು ಆ್ಯಪಲ್ (Apple) ನೀಡಲಿದೆ. ಒಟ್ಟು 1,16,888 ಚದರ ಅಡಿ ಪ್ರದೇಶವನ್ನು ಆ್ಯಪಲ್ ಲೀಸ್‌ಗೆ ಪಡೆದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Apple iPhone : ಭಾರತದಲ್ಲಿ ಐಫೋನ್ 3ಜಿಯಿಂದ ಮೊದಲ ರಿಟೇಲ್ ಸ್ಟೋರ್ ತನಕ ಆ್ಯಪಲ್‌ನ 15 ವರ್ಷಗಳ ಯಾತ್ರೆ ಹೇಗಿತ್ತು?
ಪ್ರತಿ ಮೂರು ವರ್ಷಕ್ಕೊಮ್ಮೆ ಬಾಡಿಗೆಯಲ್ಲಿ 15% ಏರಿಕೆಯಾಗಲಿದೆ. ಉಭಯ ಬಣಗಳಿಗೆ 5 ವರ್ಷಗಳ ಲಾಕ್ ಇನ್ ಅವಧಿ ಇರಲಿದೆ. ಆ್ಯಪಲ್ ಕಂಪನಿಯು ಈ ಕಟ್ಟಡದಲ್ಲಿ ತನ್ನ ಗ್ಲೋಬಲ್ ಕೆಪಬಿಲಿಟಿ ಸೆಂಟರ್ ಅನ್ನು ವ್ಯವಸ್ಥೆಗೊಳಿಸಲಿದೆ. ಹಾಗೂ ಅದೇ ಕಟ್ಟಡದಲ್ಲಿ ತನ್ನ ಪ್ರತಿಸ್ಪರ್ಧಿ ಕಂಪನಿಗಳು ಬರದಂತೆ ನಿರ್ಬಂಧಿಸಿದೆ. ಭಾರತದಲ್ಲಿ ತನ್ನ ವಹಿವಾಟನ್ನು ಹಾಗೂ ಐಫೋನ್ ಉತ್ಪಾದನೆಯನ್ನು ವ್ಯಾಪಕವಾಗಿ ವೃದ್ಧಿಸಲು ಆ್ಯಪಲ್ ಮುಂದಾಗಿದ್ದು, ಅದರ ಭಾಗವಾಗಿ ಈ ಕಟ್ಟಡದ ಲೀಸ್ ನಡೆದಿದೆ ಎಂದು ವರದಿಯಾಗಿದೆ.
ತಂತ್ರಜ್ಞಾನದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.