ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (Artificial Intelligence-AI) ಸದ್ದು ಮಾಡುತ್ತಿದೆ. ಈ ತಂತ್ರಜ್ಞಾನವನ್ನು ಸಮಾಜ ಘಾತುಕ ವ್ಯಕ್ತಿಗಳು ವ್ಯಾಪಕವಾಗಿ ಬಳಸುತ್ತಿರುವುದು ಕಳವಳಕಾರಿ ಎಂದು ಸಂಶೋಧಕರು ತಿಳಿಸಿದ್ದಾರೆ. ಎಐ ಅಪ್ಲಿಕೇಷನ್ ಬಳಸಿ ವ್ಯಕ್ತಿಗಳ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಅದರಲ್ಲೂ ಮಹಿಳೆಯರ ಫೋಟೊಗಳನ್ನು ವಿವಸ್ತ್ರಗೊಳಿಸುವಂತೆ ಎಡಿಟ್ ಮಾಡುವ ಎಐ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ಗಳ ಜನಪ್ರಿಯತೆ ಅಧಿಕವಾಗುತ್ತಿದೆ ಎನ್ನುವುದು ಅಧ್ಯಯನದ ಮೂಲಕ ಸಾಬೀತಾಗಿದೆ.
ಸೆಪ್ಟೆಂಬರ್‌ನಲ್ಲಿ 2 ಕೋಟಿಗಿಂತ ಅಧಿಕ ಮಂದಿ ಇಂತಹ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದ್ದಾರೆ ಎಂದು ಸಾಮಾಜಿಕ ನೆಟ್‌ವರ್ಕ್ ವಿಶ್ಲೇಷಣಾ ಕಂಪೆನಿ ಗ್ರಾಫಿಕಾ ಕಂಡುಕೊಂಡಿದೆ. ಗ್ರಾಫಿಕಾ ಪ್ರಕಾರ, ಈ ವಿವಸ್ತ್ರಗೊಳಿಸುವ ಅಥವಾ ನಗ್ನಗೊಳಿಸುವಂತೆ ಎಡಿಟ್ ಮಾಡುವ ವೆಬ್‌ಸೈಟ್‌ಗಳು ಜನಪ್ರಿಯ ಸಾಮಾಜಿಕ ನೆಟ್‌ವರ್ಕ್‌ಗಳನ್ನು ಬಳಸುತ್ತವೆ. ಉದಾಹರಣೆಗೆ ಈ ವರ್ಷ ಎಕ್ಸ್ ಮತ್ತು ರೆಡ್ಡಿಟ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಅಪ್ಲಿಕೇಶನ್‌ಗಳ ಜಾಹೀರಾತು ಲಿಂಕ್‌ಗಳ ಸಂಖ್ಯೆ 2,400%ಕ್ಕಿಂತ ಹೆಚ್ಚಾಗಿದೆ. ಫೋಟೊದಲ್ಲಿ ವ್ಯಕ್ತಿಯು ನಗ್ನವಾಗಿರುವಂತೆ ಮರುಸೃಷ್ಟಿಸಲು ಈ ಆ್ಯಪ್‌ಗಳು ಎಐ ಅನ್ನು ಬಳಸುತ್ತವೆ. ಅದರಲ್ಲೂ ಅನೇಕ ಆ್ಯಪ್‌ಗಳು ಮಹಿಳೆಯರ ಮೇಲೆ ಮಾತ್ರ ಕಾರ್ಯನಿರ್ವಹಿಸುತ್ತವೆ.
‘ಡೀಪ್‌ಫೇಕ್’ ಕೂಡ ಅಂತಹದ್ದೇ ಒಂದು ತಂತ್ರಜ್ಞಾನ. ‘ಡೀಪ್‌ಫೇಕ್’ ವಿಡಿಯೊಗಳನ್ನು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮಾಡಲಾಗುತ್ತದೆ. ಇವು ನೈಜವಾಗಿಯೇ ಕಾಣಿಸುತ್ತವೆ. ಡೀಪ್‌ಫೇಕ್ ವೀಡಿಯೊದಲ್ಲಿ ಸಾಮಾನ್ಯವಾಗಿ ಬೇರೆ ಬೇರೆ ವ್ಯಕ್ತಿಗಳ ದೇಹ ಮತ್ತು ಮುಖವನ್ನು ಡಿಜಿಟಲ್ ಮ್ಯಾನಿಪುಲೇಟ್ ಮಾಡಿ ಜೋಡಿಸಿ ಒರಿಜಿನಲ್ ಆಗಿ ಕಾಣುವಂತೆ ಮಾಡಲಾಗುತ್ತದೆ.
ಗೂಗಲ್ ಹೇಳುವುದೇನು?
ಅಶ್ಲೀಲ ವಿಷಯವನ್ನು ಹೊಂದಿರುವ ಜಾಹೀರಾತುಗಳಿಗೆ ಕಂಪೆನಿಯು ಅನುಮತಿ ನೀಡುವುದಿಲ್ಲ ಎಂದು ಗೂಗಲ್ ವಕ್ತಾರರು ಹೇಳಿದ್ದಾರೆ. “ನಾವು ಪ್ರಶ್ನಾರ್ಹ ಜಾಹೀರಾತುಗಳನ್ನು ಪರಿಶೀಲಿಸಿದ್ದೇವೆ ಮತ್ತು ನಮ್ಮ ನೀತಿಗಳನ್ನು ಉಲ್ಲಂಘಿಸುವ ಜಾಹೀರಾತುಗಳನ್ನು ತೆಗೆದುಹಾಕುತ್ತಿದ್ದೇವೆ” ಎಂದು ಕಂಪೆನಿ ತಿಳಿಸಿದೆ.
ಅಶ್ಲೀಲ ವಿಷಯಗಳ ಯಾವುದೇ ಒಮ್ಮತವಿಲ್ಲದ ಮಾಹಿತಿಯನ್ನು ಸೈಟ್ ನಿಷೇಧಿಸುತ್ತದೆ ಮತ್ತು ಸಂಶೋಧನೆಯ ಪರಿಣಾಮವಾಗಿ ಹಲವಾರು ಡೊಮೇನ್‌ಗಳನ್ನು ನಿಷೇಧಿಸಿದೆ ಎಂದು ರೆಡ್ಡಿಟ್ ವಕ್ತಾರರು ಹೇಳಿದ್ದಾರೆ. ಈ ಕುರಿತು ಎಕ್ಸ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ಇಂತಹ ಕೆಲವು ಆ್ಯಪ್‌ಗಳು ತಿಂಗಳಿಗೆ 9.99 ಡಾಲರ್ ಶುಲ್ಕ ವಿಧಿಸುತ್ತವೆ. ಆದರೂ ಇವು ಸಾಕಷ್ಟು ಗ್ರಾಹಕರನ್ನು ಆಕರ್ಷಿಸುತ್ತಿವೆ ಎಂದು ಸಂಶೋಧಕರು ತಿಳಿಸಿದ್ದಾರೆ. ವಿವಸ್ತ್ರಗೊಳಿಸುವ ಅಪ್ಲಿಕೇಶನ್ ಒಂದನ್ನು ಉದಾಹರಣೆಯನ್ನಾಗಿ ತೆಗೆದುಕೊಂಡ ತಜ್ಞರೊಬ್ಬರು, ʼʼಇಂತಹ ವೆಬ್‌ಸೈಟ್ ದಿನಕ್ಕೆ ಸಾವಿರಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಇವು ಜಾಹೀರಾತು ನೀಡಿ ಜನರನ್ನು ಆಕರ್ಷಿಸುತ್ತದೆ” ಎಂದು ವಿವರಿಸಿದ್ದಾರೆ. ಎಐ ತಂತ್ರಜ್ಞಾನದ ಪ್ರಗತಿಯು ಡೀಪ್‌ಫೇಕ್ ಸಾಫ್ಟ್‌ವೇರ್ ಅನ್ನು ಸುಲಭ ಮತ್ತು ಹೆಚ್ಚು ಪರಿಣಾಮಕಾರಿಯಾಗಿರಿಸುವುದು ಕಳವಳಕಾರಿ ಎಂದು ತಜ್ಞರು ಹೇಳುತ್ತಾರೆ. ಕೆಲವೊಮ್ಮೆ ಸಂತ್ರಸ್ತರಿಗೆ ಕಾನೂನು ಹೋರಾಟದ ಬಗ್ಗೆಯೂ ಅರಿವಿರುವುದಿಲ್ಲ ಎನ್ನುವುದು ಕೂಡ ಗಮನಿಸಬೇಕಾದ ವಿಚಾರ ಎಂದು ತಜ್ಞರು ಹೇಳುತ್ತಾರೆ.
ಯುಎಸ್ ಸರ್ಕಾರವು ಅಪ್ರಾಪ್ತರ ಈ ರೀತಿಯ ಚಿತ್ರಗಳನ್ನು ಉತ್ಪಾದಿಸುವುದನ್ನು ನಿಷೇಧಿಸಿದೆ. ನವೆಂಬರ್‌ನಲ್ಲಿ ಉತ್ತರ ಕೆರೊಲಿನಾದ ಮಕ್ಕಳ ಮನೋವೈದ್ಯರು ತಮ್ಮ ರೋಗಿಗಳ ಫೋಟೊಗಳನ್ನು ಇಂತಹ ಅಪ್ಲಿಕೇಶನ್ ಬಳಸಿ ಎಡಿಟ್ ಮಾಡಿದ್ದಾಕ್ಕಾಗಿ ಅವರಿಗೆ 40 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಜನಪ್ರಿಯ ಹುಡುಕಾಟ ಪದವಾದ “ವಿವಸ್ತ್ರಗೊಳಿಸುವಿಕೆ (Undress)” ಎಂಬ ಕೀವರ್ಡ್ ಅನ್ನು ಟಿಕ್‌ಟಾಕ್ ನಿರ್ಬಂಧಿಸಿದೆ. ಈ ಪದವನ್ನು ಸರ್ಚ್ ಮಾಡಿದರೆ ಇದು “ನಮ್ಮ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ನಡವಳಿಕೆ ಅಥವಾ ವಿಷಯದೊಂದಿಗೆ ಸಂಬಂಧ ಹೊಂದಿರಬಹುದು” ಎಂದು ಎಚ್ಚರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಮೆಟಾ ಫ್ಲಾಟ್‌ಫಾರ್ಮ್ ಇಂಕ್ ವಿವಸ್ತ್ರಗೊಳಿಸುವ ಅಪ್ಲಿಕೇಶನ್‌ಗಳನ್ನು ಹುಡುಕಲು ಸಂಬಂಧಿಸಿದ ಪ್ರಮುಖ ಪದಗಳನ್ನು ನಿರ್ಬಂಧಿಸಲು ಪ್ರಾರಂಭಿಸಿದೆ.
ಇದನ್ನೂ ಓದಿ: Deepfake: ಡೀಪ್‌ಫೇಕ್ ಕುರಿತು ಮೋದಿ ಕಳವಳ; ಕ್ರಮ, ಎಚ್ಚರಿಕೆ ನೀಡುವಂತೆ ಚಾಟ್‌ಜಿಪಿಟಿಗೆ ಸೂಚನೆ