ಬೆಂಗಳೂರು: ಸಾಕಷ್ಟು ಜನರು ಶೋರೂಮ್ನಲ್ಲಿ ಕಾರು ಖರೀದಿ ಮಾಡಿ ಹೊರಗಡೆ ಆಲ್ಟ್ರೇಷನ್ ಮಾಡಿಸುತ್ತಾರೆ . ಫಾಗ್ಲ್ಯಾಂಪ್, ಮ್ಯೂಸಿಕ್ ಸಿಸ್ಟಮ್ನಂಥ ಅಗತ್ಯ ಆಕ್ಸೆಸರಿಗಳಿಗೆ ಶೂರೂಮ್ಗಿಂತ ಹೊರಗಡೆ ಬೆಲೆ ಕಡಿಮೆ ಎಂಬ ಕಾರಣಕ್ಕೆ ಈ ರೀತಿ ಮಾಡಿಸುತ್ತಾರೆ. ಇದು ತಪ್ಪೊ, ಸರಿಯೊ ಎಂಬುದು ಹಿಂದಿನಿಂದಲೂ ಚರ್ಚೆಯ ವಿಷಯ. ಹೊರಗಿನ ವರ್ಕ್ಶಾಪ್ಗಳಲ್ಲಿ ಮಾಡಿಸಿದರೆ ಏನೂ ಆಗುವುದಿಲ್ಲ, ಹಣ ಉಳಿಸಬಹುದು ಎಂದು ಸಾಕಷ್ಟು ಜನರು ಹೇಳುತ್ತಾರೆ. ಆದರೆ, ಇಂಥ ಸಂದರ್ಭದಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಸಂಗತಿಯೇನೆಂದರೆ, ಒಂದು ಬಾರಿ ನೀವು ಹೊರಗಡೆ ಆಲ್ಟ್ರೇಷನ್ ಮಾಡಿಸಿದರೆ ನಿಮ್ಮ ವಾಹನದ ವಾರಂಟಿ ಬಹುತೇಕ ನಷ್ಟವಾಗುತ್ತದೆ. ಅಗ್ನಿ ಅನಾಹುತವೇನಾದರೂ ನಡೆದರೆ ಕಾರು ತಯಾರಿಸಿದ ಕಂಪನಿಯವರು ಹೊಣೆಗಾರಿಕೆ ತೆಗೆದುಕೊಳ್ಳುತ್ತಿಲ್ಲ. ಅನಧಿಕೃ ತ ಸರ್ವಿಸ್ ಎಂದು ನಿಮ್ಮತ್ತ ಬೊಟ್ಟು ಮಾಡುತ್ತಾರೆ. ಇಂಥ ಸಂದರ್ಭದಲ್ಲಿ ಕಾರು ರಿಪೇರಿಯ ಸಂಪೂರ್ಣ ದುಡ್ಡನ್ನು ನೀವೇ ಕೈಯಿಂದ ಹಾಕಬೇಕಾಗುತ್ತದೆ. ಇನ್ಯುರೆನ್ಸ್ ಕಂಪನಿಯೂ ಕೈ ಎತ್ತುತ್ತವೆ.
ನೀವು ಖರೀದಿಸಿದ ಕಾರು ಅಥವಾ ಇನ್ಯಾವುದೇ ವಾಹನ ವಾರಂಟಿ ಅವಧಿಯಲ್ಲಿದ್ದರೆ ಸರ್ವಿಸ್ ಸೇರಿದಂತೆ ಎಲ್ಲ ರೀತಿಯ ರಿಪೇರಿಯನ್ನು ಅಧಿಕೃತ ಸರ್ವಿಸ್ ಸೆಂಟರ್ನಲ್ಲಿ ಮಾತ್ರ ಮಾಡಿಸಬೇಕು. ಆದರೆ, ಶೋರೂಮ್ ಸಿಬ್ಬಂದಿ ಎಲ್ಲ ರೀತಿಯ ಆಲ್ಟ್ರೇಷನ್ಗೆ ಒಪ್ಪುವುದಿಲ್ಲ. ಕಂಪನಿ ನಿಗದಿ ಮಾಡಿದ ರಿಪೇರಿ ಮಾತ್ರ ಮಾಡುತ್ತಾರೆ. ಹೆಡ್ಲ್ಯಾಂಪ್ ಸೇರಿದಂತೆ ಕೆಲವೊಂದು ಭಾಗಗಗಳನ್ನು ಬದಲಾಯಿಸುವುದಕ್ಕೆ ಅಥವಾ ಅಪ್ಗ್ರೇಡ್ ಮಾಡುವುದಕ್ಕೂ ಸಿದ್ಧರಿರುವುದಿಲ್ಲ. ಸ್ಟಾಕ್ನಲ್ಲಿ (ವಾಹನ ತಯಾರಾಗುವ ವೇಳೆ) ಬಂದಿದ್ದನ್ನು ಮಾತ್ರ ಅವರು ಹಾಕಿ ಕೊಡುತ್ತಾರೆ. ಹೀಗಾಗಿ ವಾಹನ ಹೆಚ್ಚು ಅಂದ ಕಾಣುವುದಕ್ಕೋಸ್ಕರ ಹೆಡ್ಲ್ಯಾಂಪ್ ಬದಲಾವಣೆ, ಫಾಗ್ ಲ್ಯಾಂಪ್, ಆಂಬಿಯೆಂಟ್ ಲೈಟ್ಗಳನ್ನು ಅಳವಡಿಸುವುದು ಮಾಮೂಲಿ. ಇಂಥ ವೇಳೆಯಲ್ಲಿ ವಾಹನ ತಯಾರಿಸುವ ವೇಳೆ ಮಾಡಲಾಗಿದ್ದ ವೈರಿಂಗ್ಗಳನ್ನು ಬದಲಾಯಿಸಲಾಗುತ್ತದೆ. ಈ ಶಾರ್ಟ್ ಸರ್ಕೀಟ್ ಆಗಿ ವಾಹನಗಳಿಗೆ ಬೆಂಕಿ ತಗುಲು ಸಾಧ್ಯತೆಗಳಿರುತ್ತದೆ. ಇಂಥ ಸಂದರ್ಭದಲ್ಲಿ ಇನ್ಯುರೆನ್ಸ್ ಕಂಪನಿಗಳೂ ಯಾವುದೇ ಪರಿಹಾರ ಒದಗಿಸುವುದಿಲ್ಲ.
ಇಲ್ಲಿದೆ ನೋಡಿ ಉದಾಹರಣೆ?
ಪುಣೆಯಲ್ಲಿ ಕೆಲವು ತಿಂಗಳ ಹಿಂದೆ ಟಾಟಾ ಮೋಟಾರ್ಸ್ನ ನೆಕ್ಸಾನ್ ಇವಿ ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿತ್ತು. ಈ ವೇಳೆ ಎಲೆಕ್ಟ್ರಿಕ್ ವಾಹನಗಳ ಸುರಕ್ಷತೆಯ ಬಗ್ಗೆ ಜೋರು ಚರ್ಚೆ ನಡೆಯಿತು. ಈ ಬಗ್ಗೆ ಟಾಟಾ ಮೋಟಾರ್ಸ್ ಪ್ರತ್ಯೇಕ ಸಂಸ್ಥೆಯಿಂದ ತನಿಖೆ ನಡೆಸಿತು. ಆ ವರದಿಯ ಪ್ರಕಾರ ಕಾರಿಗೆ ಬೆಂಕಿ ಹಿಡಿಯಲು ಮಾಲೀಕರೇ ಕಾರಣ. ಕಾರಿನ ಮಾಲೀಕರು ನೆಕ್ಸಾನ್ ಕಾರಿನ ಹೆಡ್ಲೈನ್ ಅನ್ನು ಅಧಿಕೃತವದಲ್ಲದ ಸರ್ವಿಸ್ ಸ್ಟೇಷನ್ನಲ್ಲಿ ಬದಲಾಯಿಸಿದ್ದರು. ಈ ವೇಳೆ ವೈರ್ಗಳ ಜೋಡಣೆಯಲ್ಲಿ ಲೋಪ ಉಂಟಾಗಿತ್ತು. ಇದರಿಂದ ಉಂಟಾದ ಶಾರ್ಟ್ ಸರ್ಕೀಟ್ನಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಿದೆ. ಈ ಮೂಲಕ ಟಾಟಾ ಮೋಟಾರ್ಸ್ ಈ ಘಟನೆಯಲ್ಲಿ ನಮ್ಮದೇನೂ ತಪ್ಪಿಲ್ಲ ಎಂದು ಹೇಳಿದೆ. ಇದೀಗ ಅನಧಿಕೃತ ಸರ್ವಿಸ್ ಸ್ಟೇಷನ್ ಕಾರಣವೊಡ್ಡಿ ಇನ್ಶುರೆನ್ಸ್ ಕಂಪನಿ ವಿಮೆಯನ್ನು ಕೂಡ ನೀಡುವುದಿಲ್ಲ.
ಏನು ಪರಿಹಾರ?
ಹೊಸ ವಾಹನಗಳನ್ನು ಎಂದಿಗೂ ಅನಧಿಕೃತ ವರ್ಕ್ಶಾಪ್ಗಳಲ್ಲಿ ರಿಪೇರಿ ಮಾಡಿಸಬಾರದು. ಕಾರಿನ ಎಲೆಕ್ಟ್ರಿಕ್ ವಸ್ತುಗಳು ಬೆಂಕಿ ಹೊತ್ತಿಕೊಳ್ಳುವುದಕ್ಕೆ ಪ್ರಮುಖ ಕಾರಣ. ಹೀಗಾಗಿ ಎಲೆಕ್ಟ್ರಿಕ್ ಸಂಬಂಧಿಸಿದ ವಸ್ತುಗಳನ್ನು ಬದಲಾಯಿಸುವಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು.
ಕೆಲವೊಂದು ಮಾಡೆಲ್ನ ಕಾರುಗಳಿಗೆ ಶೋರೂಮ್ಗಳೇ ಕಸ್ಟಮೈಸ್ಡ್ ಆಪ್ಷನ್ ಆಪ್ಷನ್ ನೀಡುತ್ತಿವೆ. ಲೋವರ್ ವೇರಿಯೆಂಟ್ ಕಾರುಗಳಿಗೆ ಟಾಪ್ ಎಂಡ್ನಲ್ಲಿರುವ ಕೆಲವೊಂದು ಆಕ್ಸೆಸರಿಗಳನ್ನು ನೀಡುತ್ತಿವೆ. ಇಂಥದ್ದನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು.
ಇದನ್ನೂ ಓದಿ : Tata Motors : ಕಾರುಗಳ ಎಂಜಿನ್ಗಳನ್ನು ಅಪ್ಗ್ರೇಡ್ ಮಾಡಿದ ಟಾಟಾ ಮೋಟಾರ್ಸ್
ವಾರಂಟಿ ಅವಧಿಯ ಮುಗಿಯುವ ತನಕ ಹೊಸ ಕಾರಿನಲ್ಲಿ ಯಾವುದೇ ಬದಲಾವಣೆ ಮಾಡಬಾರದು. ವಾರಂಟಿ ಮುಗಿದ ಬಳಿಕ ವಾಹನಗಳಿಗೆ ನಾವು ಹೊಣೆಯಾಗಿರುತ್ತೇವೆ. ಇನ್ಶುರೆನ್ಸ್ ಕಂಪನಿಗಳಿಗೆ ಪ್ರೀಮಿಯಮ್ ಕಟ್ಟಿಕೊಂಡರೆ ಸಾಕು.
ಕಾರುಗಳಿಗೆ ಮಿತಿ ಮೀರಿದ ಆಲ್ಟ್ರೇಷನ್ ಕೂಡ ಮಾಡಲು ಹೋಗಬಾರದು. ಇದರಿಂದ ಕಾರಿನ ಕ್ಷಮತೆಗೆ ಪೆಟ್ಟು ಬೀಳುತ್ತದೆ. ಏರೋಡೈನಮಿಕ್ಸ್ ಅಡಚಣೆಯಾಗಿ ಮೈಲೇಜ್ ಕೂಡ ಕಡಿಮೆಯಾಗುತ್ತದೆ.