Site icon Vistara News

EV Charger Station: 7 ಸಾವಿರ ಚಾರ್ಜರ್‌ ಸ್ಥಾಪಿಸಲಿವೆ ಭಾರತ್ ಪೆಟ್ರೋಲಿಯಂ, ಟಿಪಿಇಎಂ

BPCL and TPEM will start 7000 EV Charger station across India

ಬೆಂಗಳೂರು: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (TPEM) ಭಾರತದಾದ್ಯಂತ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು(EV Charger Stations) ಸ್ಥಾಪಿಸುವ ಸಲುವಾಗಿ ಸಹಯೋಗ ಸಾಧಿಸುವ ಎಂಓಯುಗೆ ಸಹಿ ಹಾಕಿದೆ. ಟಾಟಾ ಇವಿ ಮಾಲೀಕರು ಆಗಾಗ್ಗೆ ಭೇಟಿ ನೀಡುವ ಸ್ಥಳಗಳಲ್ಲಿ ಚಾರ್ಜರ್‌ಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಈ ಸಹಯೋಗವು ಬಿಪಿಸಿಎಲ್‌ನ ವ್ಯಾಪಕವಾದ ಇಂಧನ ಕೇಂದ್ರಗಳ ಜಾಲವನ್ನು ಮತ್ತು ಭಾರತೀಯ ರಸ್ತೆಯಲ್ಲಿ ಓಡಾಡುತ್ತಿರುವ 1.15 ಲಕ್ಷಕ್ಕೂ ಹೆಚ್ಚು ಟಾಟಾ ಇವಿಗಳಿಂದ ದೊರೆಯುವ ಟಿಪಿಎಂನ ಒಳನೋಟಗಳನ್ನು ಬಳಸಿಕೊಳ್ಳುವಲ್ಲಿ ನೆರವಾಗಲಿದೆ. ಹೆಚ್ಚುವರಿಯಾಗಿ, ಬಿಪಿಸಿಎಲ್ ಗ್ರಾಹಕರ ಅನುಭವವನ್ನು ಸುಧಾರಿಸಲು ಚಾರ್ಜರ್ ಬಳಕೆಯ ಮಾಹಿತಿ ಮತ್ತು ಒಳನೋಟಗಳನ್ನು ಸಂಗ್ರಹಿಸಲಿದೆ.

ಟಿಪಿಇಎಂ ಮತ್ತು ಬಿಪಿಸಿಎಲ್ ನಡುವಿನ ಈ ಒಪ್ಪಂದವು ಭಾರತದಾದ್ಯಂತ ಇರುವ ಇವಿ ಮಾಲೀಕರ ಒಟ್ಟಾರೆ ಅನುಭವವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಟಾಟಾ ಇವಿ ಬಳಕೆದಾರರಿಗೆ ಪಾವತಿ ಮಾಡುವುದನ್ನು ಸುಲಭಗೊಳಿಸಲು ಮತ್ತು ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಹೆಚ್ಚಿನ ಜನರನ್ನು ಉತ್ತೇಜಿಸಲು, ಈ ಎರಡು ಕಂಪನಿಗಳು ಕೋ-ಬ್ರಾಂಡೆಡ್ ಆರ್‌ಎಫ್‌ಐಡಿ ಕಾರ್ಡ್ ಮೂಲಕ ಅನುಕೂಲಕರ ಪಾವತಿ ವ್ಯವಸ್ಥೆಯನ್ನು ಪರಿಚಯಿಸುವ ಸಾಧ್ಯತೆಯನ್ನು ಅನ್ವೇಷಿಸುತ್ತಿವೆ.

ಬಿಪಿಸಿಎಲ್ ರಾಷ್ಟ್ರವ್ಯಾಪಿ 21,000 ಇಂಧನ ಕೇಂದ್ರಗಳ ಜಾಲವನ್ನು ಹೊಂದಿದೆ ಮತ್ತು ಕಾರ್ಯತಂತ್ರ, ಹೂಡಿಕೆಗಳು ಮತ್ತು ಪರಿಸರ ಗುರಿಗಳನ್ನು ಸಂಯೋಜಿಸುವ ಮೂಲಕ ಸುಸ್ಥಿರ ಭವಿಷ್ಯಕ್ಕಾಗಿ ಬದ್ಧವಾಗಿದೆ. ಮುಂದಿನ ಐದು ವರ್ಷಗಳಲ್ಲಿ, ಕಂಪನಿಯು ಸುಮಾರು 7,000 ಇಂಧನ ಕೇಂದ್ರಗಳಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಎಲೆಕ್ಟ್ರಿಕ್ ವಾಹನ ಮಾಲೀಕರ ಆತಂಕಗಳನ್ನು ನಿವಾರಿಸಲು, ಬಿಪಿಸಿಎಲ್ ರಾಷ್ಟ್ರದಾದ್ಯಂತ 90 ಎಲೆಕ್ಟ್ರಿಕ್ ವೆಹಿಕಲ್ ಫಾಸ್ಟ್ ಚಾರ್ಜಿಂಗ್ ಹೈವೇ ಕಾರಿಡಾರ್‌ಗಳನ್ನು ಪ್ರಾರಂಭಿಸಿದೆ. ಪ್ರಮುಖ ಹೆದ್ದಾರಿಗಳ ಎರಡೂ ಬದಿಗಳಲ್ಲಿ ಸುಮಾರು ಪ್ರತಿ 100 ಕಿಲೋಮೀಟರ್‌ಗಳಿಗೆ ಈ ವೇಗದ ಚಾರ್ಜಿಂಗ್ ಸ್ಟೇಷನ್ ಒದಗಲಿದೆ. ಈ ಕಾರಿಡಾರ್‌ಗಳು ವಿವಿಧ ಹೆದ್ದಾರಿಗಳಲ್ಲಿ 30,000 ಕಿಲೋಮೀಟರ್‌ಗಿಂತಲೂ ಹೆಚ್ಚು ವ್ಯಾಪ್ತಿಯಲ್ಲಿ ಲಭ್ಯವಿದ್ದು, ಇವಿಗಳಿಗೆ ಹೆಚ್ಚಿನ ಅನುಕೂಲತೆ ಒದಗಿಸುತ್ತದೆ.

ಬಿಪಿಸಿಎಲ್ ರಿಟೇಲ್‌ನ ಪ್ರಭಾರ ಕಾರ್ಯನಿರ್ವಾಹಕ ನಿರ್ದೇಶಕ ಸಂತೋಷ್ ಕುಮಾರ್ ಮಾತನಾಡುತ್ತಾ, ‘2040ರ ವೇಳೆಗೆ ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುವ ರಾಷ್ಟ್ರದ ದೃಷ್ಟಿಗೆ ಅನುಗುಣವಾಗಿ ಬಿಪಿಸಿಎಲ್ ನಿರಂತರವಾಗಿ ಶ್ರಮಿಸುತ್ತಿದೆ. ಬಿಪಿಸಿಎಲ್ ಸುಸ್ಥಿರ ಉಪಕ್ರಮಗಳನ್ನು ಬೆಂಬಲಿಸಲು ಮತ್ತು ಆದ್ಯತೆ ನೀಡಲು ಸಮಗ್ರವಾದ ಡಿಕಾರ್ಬೊನೈಸೇಶನ್ ಕಾರ್ಯತಂತ್ರದ ಭಾಗವಾಗಿ ನಮ್ಮ 7000 ಸಾಂಪ್ರದಾಯಿಕ ಚಿಲ್ಲರೆ ಔಟ್‌ಲೆಟ್‌ಗಳನ್ನು ಶಕ್ತಿ ಕೇಂದ್ರಗಳಾಗಿ ಪರಿವರ್ತಿಸುವ ಗುರಿಯತ್ತ ಸ್ಥಿರವಾಗಿ ಚಲಿಸುತ್ತಿದೆ. ಬಿಪಿಸಿಎಲ್ ಈಗಾಗಲೇ ಹೆದ್ದಾರಿಗಳಾದ್ಯಂತ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳ ದೊಡ್ಡ ಜಾಲವನ್ನು ಸ್ಥಾಪಿಸಿದೆ. ಇವಿ ಎಂಬುದು ಸಹಯೋಗದ ಕ್ಷೇತ್ರವಾಗಿದ್ದು, ಟಿಪಿಇಎಂ ಜೊತೆಗೆ ಕೈಜೋಡಿಸುವುದರಿಂದ ಬಿಪಿಸಿಎಲ್ ಮತ್ತು ಟಿಪಿಇಎಂನ ಇವಿ ಕೆಲಸಗಳು ಮತ್ತೊಂದು ಹಂತಕ್ಕೆ ಏರಲಿದೆ’ ಎಂದು ಹೇಳಿದ್ದಾರೆ.

ಟಿಪಿಇಎಂ ಭಾರತದ ಇವಿಗಳಲ್ಲಿ ಮಾರುಕಟ್ಟೆ ನಾಯಕರಾಗಿದ್ದು, ಎಲೆಕ್ಟ್ರಿಕ್ ಪ್ರಯಾಣಿಕ ವಾಹನಗಳಲ್ಲಿ ಶೇ.71ಕ್ಕಿಂತ ಹೆಚ್ಚಿನ ಮಾರುಕಟ್ಟೆ ಪಾಲನ್ನು ಹೊಂದಿದೆ. ಭಾರತೀಯ ರಸ್ತೆಗಳಲ್ಲಿರುವ 115,000ಕ್ಕೂ ಹೆಚ್ಚು ಟಾಟಾ ಇವಿಗಳಲ್ಲಿ ಶೇ.75ರಷ್ಟು ಪ್ರಾಥಮಿಕ ಬಳಕೆಯ ವಾಹನಗಳಾಗಿದ್ದು, ಟಿಪಿಇಎಂ ಭಾರತದ ಎಲೆಕ್ಟ್ರಿಕ್ ಮೊಬಿಲಿಟಿ ಕ್ರಾಂತಿಯಲ್ಲಿ ಮುನ್ನಡೆ ಸಾಧಿಸಿದ್ದಕ್ಕೆ ಪುರಾವೆಯಾಗಿದೆ.

ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ, ‘ಭಾರತದ ನಗರಗಳಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಇವಿ ಅಳವಡಿಕೆಯು ಒಂದು ಪ್ರಮುಖ ಮಾರ್ಗವಾಗಿದೆ. ವ್ಯಾಪಕವಾಗಿ ಹರಡಿರುವ ಮತ್ತು ವಿಶ್ವಾಸಾರ್ಹ ಚಾರ್ಜಿಂಗ್ ಮೂಲಸೌಕರ್ಯವು ಭಾರತದಲ್ಲಿ ಇವಿ ಬಳಕೆಯನ್ನು ಹೆಚ್ಚುಗೊಳಿಸಲು ಪ್ರಮುಖ ಕಾರಣವಾಗಿದೆ. ಭಾರತದಲ್ಲಿ ಚಾರ್ಜಿಂಗ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ನಮ್ಮ ಬದ್ಧತೆಗೆ ಅನುಗುಣವಾಗಿ, ಇ-ಮೊಬಿಲಿಟಿಯ ಭಾರತದ ಪ್ರಯಾಣವನ್ನು ವೇಗಗೊಳಿಸುವ ಗುರಿಯನ್ನು ಹೊಂದಿರುವ ಬಿಪಿಸಿಎಲ್ ಜೊತೆಗೆ ನಮ್ಮ ಕಾರ್ಯತಂತ್ರದ ಸಹಯೋಗವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಬೆಳೆಯುತ್ತಿರುವ ಇವಿ ಗ್ರಾಹಕರ ನೆಲೆಯನ್ನು ಬಲಗೊಳಿಸುವ ಮೂಲಸೌಕರ್ಯ ಒದಗಿಸುವ ಮೂಲಕ ಈ ಸಹಭಾಗಿತ್ವದ ಪಾಲುದಾರಿಕೆಯು ಧನಾತ್ಮಕ ಬದಲಾವಣೆಯನ್ನು ಉತ್ತೇಜಿಸುವ ನಮ್ಮ ದೂರದೃಷ್ಟಿಯನ್ನು ಸಾರುತ್ತದೆ. ಟಿಪಿಇಎಂನ ಸಾಟಿಯಿಲ್ಲದ ಇವಿ ಬಳಕೆಯ ಒಳನೋಟಗಳು ಮತ್ತು ಬಿಪಿಸಿಎಲ್ ನ ಅಸಾಧಾರಣ ರಾಷ್ಟ್ರವ್ಯಾಪಿ ನೆಟ್‌ವರ್ಕ್‌ನ ಪ್ರಯೋಜನ ಇದರಿಂದ ದೊರೆಯಲಿದೆ. ಈ ಸಹಯೋಗ ದೇಶದಲ್ಲಿ ಮೂಲಸೌಕರ್ಯಗಳನ್ನು ಚಾರ್ಜಿಂಗ್ ಕ್ಷೇತ್ರವನ್ನು ಮರುರೂಪಿಸುವ ಸಾಮರ್ಥ್ಯವನ್ನು ಹೊಂದಿದೆ’ ಎನ್ನುತ್ತಾರೆ.

ಪ್ರಪಂಚದಾದ್ಯಂತ ನಡೆದ ಅಧ್ಯಯನಗಳು ಇವಿ ಅಳವಡಿಕೆಯನ್ನು ಚಾಲನೆ ಮಾಡಲು ಸಮಗ್ರ ಮತ್ತು ಅನುಕೂಲಕರವಾದ ಚಾರ್ಜಿಂಗ್ ಮೂಲಸೌಕರ್ಯ ಅವಶ್ಯವಾಗಿದೆ ಮತ್ತು ಚಾರ್ಜಿಂಗ್ ಮೂಲಸೌಕರ್ಯದಲ್ಲಿನ ಬೆಳವಣಿಗೆಯು ಇವಿ ಅಳವಡಿಕೆಯಲ್ಲಿ ಹೆಚ್ಚಿನ ಬೆಳವಣಿಗೆಗೆ ಕಾರಣವಾಗುತ್ತದೆ ಎಂಬುದನ್ನು ತೋರಿಸುತ್ತದೆ. ಎರಡು ಪ್ರಮುಖ ಕಂಪನಿಗಳ ನಡುವಿನ ಸಹಯೋಗವು ದೇಶದಲ್ಲಿನ ಚಾರ್ಜಿಂಗ್ ಮೂಲಸೌಕರ್ಯದ ಬೆಳವಣಿಗೆಯನ್ನು ವೇಗಗೊಳಿಸುತ್ತದೆ ಮತ್ತು ಇದರಿಂದಾಗಿ ಭಾರತದಲ್ಲಿ ಮುಖ್ಯವಾಹಿನಿಯಲ್ಲಿ ಇವಿ ಅಳವಡಿಕೆಗೆ ಕೊಡುಗೆ ನೀಡುತ್ತದೆ.

ಈ ಸುದ್ದಿಯನ್ನೂ ಓದಿ: Ev Charging Station | ಬೆಂಗಳೂರಿನಲ್ಲಿ ಇವಿ ಚಾರ್ಜಿಂಗ್‌ ಕೇಂದ್ರಗಳನ್ನು ಆರಂಭಿಸಿದ ಶೆಲ್‌

Exit mobile version