ಹೊಸದಿಲ್ಲಿ: ಅಕ್ಟೋಬರ್ 1ರ ಬಳಿಕ ಭಾರತದಲ್ಲಿ ತಯಾರಾಗುವ ಹಾಗೂ ಆಮದು ಮಾಡಿಕೊಳ್ಳುವ ಕಾರುಗಳಿಗೆ ಅವುಗಳ ಕ್ರ್ಯಾಶ್ ಟೆಸ್ಟ್ (crash test) ಫಲಿತಾಂಶದ ಆಧಾರದ ಮೇಲೆ ಸ್ಟಾರ್ ರೇಟಿಂಗ್ (star rating) ನೀಡಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.
ಈ ‘ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ’ (ಭಾರತ್-ಎನ್‌ಸಿಎಪಿ) 3.5 ಟನ್‌ಗಿಂತ ಕಡಿಮೆ ತೂಕದ M1 ವಾಹನಗಳಿಗೆ ಅನ್ವಯಿಸುತ್ತದೆ. M1 ವರ್ಗದಲ್ಲಿ ಪ್ರಯಾಣಿಕ ಮೋಟಾರು ವಾಹನಗಳು ಬರುತ್ತವೆ. ಇವುಗಳಲ್ಲಿ ಚಾಲಕ ಸೇರಿಸಿ ಆಸನಗಳ ಸಂಖ್ಯೆ ಎಂಟರ ಒಳಗಿರುತ್ತದೆ.
ಕಾರುಗಳ ಕ್ರ್ಯಾಶ್ ಸುರಕ್ಷತೆಯ ಮೌಲ್ಯಮಾಪನವನ್ನು ಒದಗಿಸಲು ಪ್ರೋಗ್ರಾಂ ಅನ್ನು ಪ್ರಮಾಣಿತ ಪ್ರಯೋಗಾಲಯ ಪರೀಕ್ಷೆಗಳ ಆಧಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ಭಾರತ್-ಎನ್‌ಸಿಎಪಿ ಸ್ವಯಂಪ್ರೇರಿತ ಕಾರ್ಯಕ್ರಮ. ಸಚಿವಾಲಯವು ಕೆಲವು ವಾಹನಗಳಿಗೆ ನಿರ್ದಿಷ್ಟ ಮಾರ್ಗಸೂಚಿ ನೀಡಬಹುದು ಎಂದು ಸೂಚನೆ ತಿಳಿಸಿದೆ.
ಸುರಕ್ಷತೆಯ ಒಟ್ಟಾರೆ ಮೌಲ್ಯಮಾಪನವು ಮೂರು ಅಂಶಗಳನ್ನು ಒಳಗೊಂಡಿರುತ್ತದೆ. ವಯಸ್ಕರ ಸುರಕ್ಷತೆ, ಮಕ್ಕಳ ಸುರಕ್ಷತೆ, ಮತ್ತು ಸೇಫ್ಟಿ ಅಸಿಸ್ಟ್ ತಂತ್ರಜ್ಞಾನ. ಪ್ರತಿಯೊಂದಕ್ಕೂ ಪ್ರತ್ಯೇಕ ಪರೀಕ್ಷೆ ಮತ್ತು ಮೌಲ್ಯಮಾಪನಗಳಿವೆ. ಈ ರೇಟಿಂಗ್‌ಗಳು ಆಟೋಮೊಬೈಲ್‌ಗಳ ಬೆಲೆಯ ಮೇಲೆ ಪರಿಣಾಮ ಬೀರುವುದಿಲ್ಲ. ಹೆಚ್ಚಿನ ರೇಟಿಂಗ್ ಹೊಂದಿರುವ ಕಾರುಗಳು ರಸ್ತೆಯಲ್ಲಿದ್ದರೆ ಅಪಘಾತಗಳಲ್ಲಿ ಸಾವಿನ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾರತ್-ಎನ್‌ಸಿಎಪಿ ಗ್ರಾಹಕ ಕೇಂದ್ರಿತವಾಗಿ ಕಾರ್ಯನಿರ್ವಹಿಸುತ್ತದೆ. ಸ್ಟಾರ್-ರೇಟಿಂಗ್ ಆಧಾರದ ಮೇಲೆ ಸುರಕ್ಷಿತ ಕಾರುಗಳನ್ನು ಆಯ್ಕೆ ಮಾಡಲು ಗ್ರಾಹಕರಿಗೆ ಇದು ಅವಕಾಶ ನೀಡಲಿದೆ. ಇದು ಕಾರುಗಳ ಸುರಕ್ಷತೆ ವಿಚಾರದಲ್ಲಿ ಕಂಪನಿಗಳ ನಡುವೆ ಆರೋಗ್ಯಕರ ಸ್ಪರ್ಧೆ ಹುಟ್ಟುಹಾಕಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಹೇಳಿದ್ದರು.
2021ರಲ್ಲಿ ಭಾರತದಲ್ಲಿ ರಸ್ತೆ ಅಪಘಾತಗಳಿಂದ ಕನಿಷ್ಠ 1.53 ಲಕ್ಷ ಜನರು ಸಾವನ್ನಪ್ಪಿದ್ದಾರೆ. ದ್ವಿಚಕ್ರ ವಾಹನಗಳು ಅತಿ ಹೆಚ್ಚು ಅಪಘಾತ (52,416) ಮತ್ತು ಸಾವು (22,786) ಕಂಡಿವೆ. ನಂತರದ ಸ್ಥಾನದಲ್ಲಿ ಕಾರುಗಳು, ಟ್ಯಾಕ್ಸಿಗಳು ಮತ್ತು ವ್ಯಾನ್‌ಗಳಿಗೆ ಸಂಬಂಧಿಸಿ 25,431 ಅಪಘಾತಗಳು ಮತ್ತು 9,191 ಸಾವುಗಳು ಸಂಭವಿಸಿವೆ.
ಇದನ್ನೂ ಓದಿ: Safety Car : 5 ಸ್ಟಾರ್ ರೇಟಿಂಗ್ ಹೊಂದಿರುವ ಸುರಕ್ಷಿತ ಕಾರುಗಳೇ ಭಾರತದ ಗ್ರಾಹಕರ ಆದ್ಯತೆ