ತಿರುವನಂತಪುರಂ: ಭಾರತದ ರಸ್ತೆಗಳಲ್ಲಿ ಈಗಾಗಲೇ ಎಲೆಕ್ಟ್ರಿಕ್ ಕಾರುಗಳ ಹವಾ ಆರಂಭವಾಗಿದೆ. ಪ್ರಮುಖ ನಗರಗಳ ರಸ್ತೆಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಸಂಚಾರ ಹೊಸತೇನಲ್ಲ. ಪ್ರಮುಖ ಆಟೊಮೊಬೈಲ್ ಕಂಪನಿಗಳೂ ಈಗ ಎಲೆಕ್ಟ್ರಿಕ್ ಕಾರು ತಯಾರಿಕೆಯಲ್ಲಿ ತೊಡಗಿಸಿವೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳೂ ಜನಪ್ರಿಯತೆ ಗಳಿಸಿವೆ. ಜಗತ್ತು ಎಲೆಕ್ಟ್ರಿಕ್ ವಾಹನಗಳ ಕ್ರಾಂತಿಗೆ ಅಣಿಯಾಗುತ್ತಿದೆ. ಹೊಸ ಸಂಶೋಧನೆಗಳೂ ನಡೆಯುತ್ತಿದೆ.
ಈ ನಡುವೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ 67 ವರ್ಷದ ಹಿರಿಯ ವ್ಯಕ್ತಿ ಆ್ಯಂಟನಿ ಜಾನ್ ಎಂಬುವರು ತಮ್ಮ ದಿನ ನಿತ್ಯದ ಸಂಚಾರಕ್ಕೆ ಸ್ವತಃ ತಾವೇ ಎಲೆಕ್ಟ್ರಿಕ್ ಕಾರೊಂದನ್ನು ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ. village Vartha ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಕಾರಿನ ಬಗ್ಗೆ ಅಪ್ ಲೋಡ್ ಆಗಿದ್ದ ವೀಡಿಯೊ ಲಕ್ಷಾಂತರ ವೀಕ್ಷಕರ ಗಮನ ಸೆಳೆದಿದೆ.
ತಮ್ಮ ದಿನ ನಿತ್ಯದ ಓಡಾಟಕ್ಕೆ ಒಂದು ಎಲೆಕ್ಟ್ರಿಕ್ ಕಾರು ಬೇಕು ಎಂಬುದು ಆ್ಯಂಟನಿ ಜಾನ್ ಅವರ ಬಯಕೆಯಾಗಿತ್ತು. ಈ ಹಿಂದೆ ಅವರು ಎಲೆಕ್ಟ್ರಿಕ್ ಸ್ಕೂಟರ್ ಅನ್ನೂ ತಯಾರಿಸಿದ್ದರು. ಕೆಲ ವರ್ಷಗಳ ಹಿಂದೆ ಅವರು ಎಷ್ಟು ಹುಡುಕಿದರೂ ಅವರಿಗೆ ಬೇಕಾದ ಎಲೆಕ್ಟ್ರಿಕ್ ಕಾರು ಸಿಗಲಿಲ್ಲ. ಆಗ ತಾವೇ ಅದನ್ನು ತಯಾರಿಸಲು ನಿರ್ಧರಿಸಿದರು. ಸಂಶೋಧನೆ ನಡೆಸಿದರು. ಸ್ಥಳೀಯ ಗ್ಯಾರೇಜ್ ಜತೆ ಸಂಪರ್ಕ ಇಟ್ಟುಕೊಂಡರು. ಕೊನೆಗೆ ತಾವು ಅಂದುಕೊಂಡಂತೆಯೇ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಿಯೇ ಬಿಟ್ಟರು. ಕಾರಿನ ಎಲೆಕ್ಟ್ರಿಕಲ್ ಕೆಲಸಗಳನ್ನು ತಾವೇ ಖುದ್ದಾಗಿ ಮಾಡಿದ್ದರು ಆ್ಯಂಟನಿ ಜಾನ್.
ಆ್ಯಂಟನಿ ಜಾನ್ ಅವರು 2018ರಲ್ಲಿ ತಮ್ಮ ಎಲೆಕ್ಟ್ರಿಕ್ ಕಾರು ಯೋಜನೆಯನ್ನು ಆರಂಭಿಸಿದ್ದರು. ಬ್ಯಾಟರಿಗಳು, ಮೋಟಾರ್, ಮತ್ತು ಬಿಡಿಭಾಗಗಳನ್ನು ಸಂಗ್ರಹಿಸಿದ್ದರು. ಕೋವಿಡ್ ಸಂದರ್ಭ ವಿಳಂಬವಾಯಿತು. ಹೋಗಿದ್ದರೂ ಕೈಬಿಡದೆ ಮುಂದುವರಿಸಿ ಯಶಸ್ಸು ಗಳಿಸಿದರು. ಪ್ರತಿ ಗಂಟೆಗೆ 25 ಕಿ.ಮೀ ವೇಗದಲ್ಲಿ ಈ ಕಾರು ಸಂಚರಿಸುತ್ತದೆ. ಹೀಗಾಗಿ ಇದಕ್ಕೆ ರಿಜಿಸ್ಟ್ರೇಶನ್ ಪ್ಲೇಟ್ ಬೇಕಾಗುವುದಿಲ್ಲ. ಆದರೂ ಆ್ಯಂಟನಿ ಜಾನ್ ಅವರು ವಾಹನ ಚಾಲನೆಯ ಪರವಾನಗಿ ಹೊಂದಿದ್ದಾರೆ.
ಈ ಎಲೆಕ್ಟ್ರಿಕ್ ಕಾರು ತಯಾರಿಸಲು 4.5 ಲಕ್ಷ ರೂ.ಗಳನ್ನು ಆ್ಯಂಟನಿ ಜಾನ್ ಅವರು ಖರ್ಚು ಮಾಡಿದ್ದಾರೆ. ಆದರೆ ಅವರಿಗೆ ಕಾರಿನ ಬಗ್ಗೆ ಹೆಮ್ಮೆ ಇದೆ. ಸ್ಥಳೀಯರೂ ಅಚ್ಚರಿಯಿಂದ ಗುರುತಿಸಿದ್ದಾರೆ. ಖುಶಿ ಪಟ್ಟಿದ್ದಾರೆ. ಬ್ಯಾಟರಿ ರಿಚಾರ್ಜ್ ಬಳಿಕ ಗರಿಷ್ಠ 60 ಕಿ.ಮೀ ತನಕ ಚಲಾಯಿಸಬಹುದು ಎನ್ನುತ್ತಾರೆ ಆ್ಯಂಟನಿ ಜಾನ್.