ಹೊಸದಿಲ್ಲಿ: ಟಾಟಾ ಮೋಟಾರ್ಸ್ 2022-23 ರಲ್ಲಿ ತನ್ನ ಬಂಡವಾಳ ವೆಚ್ಚದಲ್ಲಿ ಶೇ.30ರಷ್ಟು ಹೆಚ್ಚಳ ಮಾಡಿದ್ದು, 32,000 ಕೋಟಿ ರೂ.ಗೆ ಏರಿಸಿದೆ.
2021-22 ರಲ್ಲಿ ಕಂಪನಿ 23,000 ಕೋಟಿ ರೂ. ಬಂಡವಾಳ ವೆಚ್ಚ ಮಾಡಿತ್ತು.
ಟಾಟಾ ಮೋಟಾರ್ಸ್ ಈ ವರ್ಷ ತನ್ನ ವಾಣಿಜ್ಯ ವಾಹನ (ಕಮರ್ಶಿಯಲ್ ವೆಹಿಕಲ್), ಪ್ರಯಾಣಿಕರ ವಾಹನ (ಪ್ಯಾಸೆಂಜರ್ ವೆಹಿಕಲ್) ವಿಭಾಗಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ನಿರ್ಧರಿಸಿದೆ.
ದೇಶೀಯವಾಗಿ ಸಾಮರ್ಥ್ಯ ವೃದ್ಧಿಗೆ 6,000 ಕೋಟಿ ರೂ. ಬಂಡವಾಳವನ್ನು ವೆಚ್ಚ ಮಾಡಲಿದೆ. ಜಾಗ್ವಾರ್ ಲ್ಯಾಂಡ್ ರೋವರ್ಗೆ 26,000 ಕೋಟಿ ರೂ. ಹೂಡಿಕೆ ಮಾಡಲಿದೆ.
5 ವರ್ಷಗಳಲ್ಲಿ 10 ಎಲೆಕ್ಟ್ರಿಕ್ ವಾಹನ
ಟಾಟಾ ಮೋಟಾರ್ಸ್ ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ 10 ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಬಿಡುಗಡೆಗೊಳಿಸಲು ನಿರ್ಧರಿಸಿದೆ. ದೇಶೀಯ ಪ್ಯಾಸೆಂಜರ್ ವಾಹನ ವಿಭಾಗದಲ್ಲಿ ಹೊಸ ಉತ್ಪನ್ನಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಕಂಪನಿ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
” ಕೋವಿಡ್ ಬಿಕ್ಕಟ್ಟು, ಸೆಮಿಕಂಡಕ್ಟರ್ ಕೊರತೆ, ಸರಕುಗಳ ದರ ಏರಿಕೆ ಇತ್ಯಾದಿ ಸವಾಲುಗಳಿದ್ದರೂ ಟಾಟಾ ಮೋಟಾರ್ಸ್ ಹಲವು ನೂತನ ದಾಖಲೆಗಳನ್ನು 2021-22ರಲ್ಲಿ ಸೃಷ್ಟಿಸಿದೆʼʼ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ತಿಳಿಸಿದ್ದಾರೆ.
ಎಸ್ಯುವಿ ಮಾರಾಟ ವಿಭಾಗದಲ್ಲಿ ಟಾಟಾ ಮೋಟಾರ್ಸ್ ದಕ್ಷಿಣ ಕೊರಿಯಾದ ಹುಂಡೈ ಬ್ರ್ಯಾಂಡ್ ಅನ್ನು 2021-22ರಲ್ಲಿ ಹಿಂದಿಕ್ಕಿತ್ತು. ಟಾಟಾ ಮೋಟಾರ್ಸ್ ನ ನೆಕ್ಸಾನ್ ಇವಿ ದೇಶದಲ್ಲಿ ಬೆಸ್ಟ್ ಸೆಲ್ಲಿಂಗ್ ಇವಿ ಎನ್ನಿಸಿದೆ. ಕಂಪನಿಯು ಎಲೆಕ್ಟ್ರಿಕ್ ಮಿನಿ ಟ್ರಕ್ ಏಸ್ ಇವಿಯನ್ನು ಅನಾವರಣಗೊಳಿಸಿದೆ.
ಟಾಟಾ ಮೋಟಾರ್ಸ್ ದೇಶೀಯವಾಗಿ ಸಂಶೋಧನೆ ಮತ್ತು ಅಭಿವೃದ್ಧಿಗೆ 2,202 ಕೋಟಿ ರೂ.ಗಳನ್ನು ಹೂಡಿಕೆ ಮಾಡುತ್ತಿದೆ. ಬಂಡವಾಳ ಹೂಡಿಕೆಯಾಗಿ 1,462 ಕೋಟಿ ರೂ.ಗಳನ್ನು ಈಗಾಗಲೇ ಸ್ವೀಕರಿಸಿದೆ. ಇದರೊಂದಿಗೆ 2021-22ರಲ್ಲಿ ಒಟ್ಟು 3,664 ಕೋಟಿ ರೂ.ಗಳನ್ನು ಹೂಡಿದೆ.
ಇದನ್ನೂ ಓದಿ: ಮಾರುಕಟ್ಟೆಗೆ ಬರಲಿದೆ ಟಾಟಾ ‘ಅವಿನ್ಯ’ EV