ಮುಂಬಯಿ: ಭಾರತದ ಹೆಮ್ಮೆಯ ದ್ವಿಚಕ್ರ ವಾಹನ ಕಂಪನಿ ಹೀರೊ ಮೋಟೊಕಾರ್ಪ್(Hero MotoCorp) ತನ್ನೆಲ್ಲ ಬೈಕ್ಗಳ ಬೆಲೆಯನ್ನು ಏಪ್ರಿಲ್ 1ರಿಂದ ಏರಿಕೆ ಮಾಡಲಿದೆ. ಹೀಗಾಗಿ ಹೀರೊ ಬೈಕ್ ಪ್ರೇಮಿಗಳಿಗೆ ಅದರ ಬಿಸಿ ತಟ್ಟಲಿದೆ. ಯಾಕೆಂದರೆ ಕನಿಷ್ಠ ಪಕ್ಷ ಶೇಕಡಾ 2ರಷ್ಟು ಬೆಲೆ ಏರಿಕೆಯಾಗಿದೆ. ಅದೇ ರೀತಿ ಬೆಲೆ ಏರಿಕೆ ಮಾಡೆಲ್ಗಳಿಗೆ ತಕ್ಕಂತೆ ವ್ಯತ್ಯಾಸವೂ ಆಗಲಿದೆ. ಯಾಕೆ ಗೊತ್ತೇ, ಕೇಂದ್ರ ಸರಕಾರ ವಾಹನಗಳ ಮಾಲಿನ್ಯ ಮಾನದಂಡವನ್ನು ಇನ್ನಷ್ಟು ಬಿಗಿಗೊಳಿಸಿದ್ದು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಅದಕ್ಕಾಗಿ ಹೀರೊ ಸೇರಿದಂತೆ ಎಲ್ಲ ವಾಹನ ಕಂಪನಿಗಳು ಎಂಜಿನ್ನಲ್ಲಿ ಬದಲಾವಣೆ ಮಾಡಿಕೊಂಡಿವೆ. ಅದರ ವೆಚ್ಚವನ್ನು ಗ್ರಾಹಕರ ಮೇಲೆ ಹಾಕಲು ಮುಂದಾಗಿದೆ ಕಂಪನಿಗಳು. ಅಂತೆಯೇ ಹೀರೊ ಕೂಡ ತನ್ನ ಬೈಕ್ಗಳ ಬೆಲೆ ಏರಿಕೆ ಮಾಡಲಿದೆ.
ಭಾರತದ ಆಟೋಮೊಬೈಲ್ ಕ್ಷೇತ್ರವು ಬಿಎಸ್6 ಎರಡನೇ ಹಂತದ ಮಾನದಂಡವನ್ನು ಪೂರೈಸುವ ಕೆಲಸದಲ್ಲಿ ಬ್ಯುಸಿಯಾಗಿದೆ. ಪ್ರಮುಖವಾಗಿ ಒಬಿಡಿ ತಾಂತ್ರಿಕತೆಯನ್ನು ಅಳವಡಿಸಲಾಗುತ್ತದೆ (ಆನ್ ಬೋರ್ಡ್ ಡಯಾಗ್ನಾಸ್ಟಿಕ್) . ಈ ಸಾಧನವು ವಾಹನ ಉಗುಳುವ ಹೊಗೆಯ ಪ್ರಮಾಣವನ್ನು ನಿರಂತರವಾಗಿ ಮಾಪನ ಮಾಡುತ್ತದೆ. ಇದಕ್ಕಾಗಿ ಎಂಜಿನ್ನಲ್ಲಿ ಕ್ಯಾಟಲಿಟಿಕ್ ಕನ್ವರ್ಟರ್ ಮತ್ತು ಆಕ್ಸಿಜನ್ ಸೆನ್ಸರ್ಗಳನ್ನು ಅಳವಡಿಸಲಾಗುತ್ತದೆ. ಇದಕ್ಕೆ ತಗುಲುವ ವೆಚ್ಚವನ್ನು ಬೈಕ್ಗಳ ಬೆಲೆ ಏರಿಸುವ ಮೂಲಕ ನಿಭಾಯಿಸಲು ಹೀರೊ ಕಂಪನಿ ಮುಂದಾಗಿದೆ.
ಕೆಲವು ದಿನಗಳಿಂದ ಭಾರತದ ಕಾರು ತಯಾರಿಕಾ ಕಂಪನಿಗಳಾದ ಮಾರುತಿ, ಹ್ಯುಂಡೈ, ಟಾಟಾ ಮೋಟಾರ್ಸ್, ಮರ್ಸಿಡೀಸ್ ಬೆಂಜ್, ಆಡಿ ತನ್ನ ಕಾರುಗಳ ಬೆಲೆಯನ್ನು ಏರಿಕೆ ಮಾಡಿದ್ದವು. ಆ ಕಂಪನಿಗಳು ಕೂಡ ಇದೇ ಕಾರಣವನ್ನು ಕೊಟ್ಟಿದ್ದವು.
ಇದನ್ನೂ ಓದಿ : Honda Shine : ಸ್ಪ್ಲೆಂಡರ್ಗೆ ಪೈಪೋಟಿ ಕೊಡಲು ಬಂದಿದೆ 100 ಸಿಸಿಯ ಹೋಂಡಾ ಶೈನ್
ಬೆಲೆ ಏರಿಕೆಯಾದರೂ ನಮ್ಮ ಗ್ರಾಹಕರಿಗೆ ನಿರಾಸೆಯಾಗದು ಎಂದು ಹೀರೊ ಮೋಟೊಕಾರ್ಪ್ ಹೇಳಿದೆ. ಹೀರೊ ಮೋಟಾರ್ಸೈಕಲ್ಗಳಿಗೆ ಗ್ರಾಮೀಣ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಬರುತ್ತಿದೆ. ಅಲ್ಲಿನ ಗ್ರಾಹಕರಿಗೆ ಹಣಕಾಸು ನೆರವು ಕೂಡ ಕೊಡಲಾಗುತ್ತದೆ ಎಂದು ಕಂಪನಿ ಹೇಳಿದೆ.
ಕೆಲವು ದಿನಗಳ ಹಿಂದೆ ಹೀರೊ ಕಂಪನಿಯು ಹೀರೋ ಕ್ಸೂಮ್ ಸ್ಕೂಟರ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಈ ಸ್ಕೂಟರ್ ಮೂರು ವೇರಿಯೆಂಟ್ಗಳಲ್ಲಿ ಲಭ್ಯವಿದೆ. 68,599, 71,799 ಹಾಗೂ 76,699 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಕ್ಸೂಮ್ ಸ್ಕೂಟರ್ ಸಿಂಗಲ್ ಸಿಲಿಂಡರ್ 110.9 ಸಿಸಿ ಸಾಮರ್ಥ್ಯ ಹೊಂದಿದೆ. ಇದು 8 ಬಿಎಚ್ಪಿ ಪವರ್ ಹಾಗೂ 8.7 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದರಲ್ಲಿ ಇ3 ಸ್ಟಾರ್ಟ್-ಸ್ಟಾಪ್ ಆಯ್ಕೆಯೂ ಇದೆ.