Site icon Vistara News

Compact SUV’s | ಎಸ್​ಯುವಿ ಅಭಿಮಾನಿಗಳಿಗೆ ಸಿಹಿ ಸುದ್ದಿ; ಶೀಘ್ರವೇ ಈ ಎಲ್ಲ ಕಾರುಗಳು ಬೆಲೆ ಇಳಿಕೆ?

Compact SUV's

ಬೆಂಗಳೂರು : ಜಿಎಸ್​ಟಿ ಸಮಿತಿ ಶನಿವಾರ (ಡಿಸೆಂಬರ್​17) ಸಭೆ ನಡೆಸಿ ಕೆಲವೊಂದು ಉತ್ಪನ್ನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು ಕಡಿಮೆ ಮಾಡಿದೆ. ಶೇಕಡಾ 5ರಷ್ಟು ಕಡಿಮೆ ಮಾಡುವ ಪ್ರಸ್ತಾಪವನ್ನು ಸಮಿತಿ ಮುಂದಿಟ್ಟಿದಿದೆ. ಈ ವ್ಯಾಪ್ತಿಗೆ ಆಟೋಮೊಬೈಲ್​ ಕ್ಷೇತ್ರದಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಕಾಂಪಾಕ್ಟ್​ ಎಸ್​ಯುವಿಗಳೂ (Compact SUV’s) ಬರಲಿವೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಈ ಸೆಗ್ಮೆಂಟ್​ನ ಕಾರು ಖರೀದಿಗೆ ಮುಂದಾಗಿರುವ ಲಕ್ಷಾಂತರ ಮಂದಿಗೆ ಶುಭ ಸುದ್ದಿ ಲಭಿಸಿದೆ.

ಕಾಂಪಾಕ್ಟ್​ ಎಸ್​ಯುವಿಗಳಿಗೆ ಪ್ರಸ್ತುತ ಶೇಕಡಾ 20ರಿಂದ 23 ಜಿಎಸ್​ಟಿ ಪಾವತಿಸಬೇಕಾಗಿದೆ. ಆದರೆ, ಹೊಸ ನಿಯಮಗಳ ಪ್ರಕಾರ 1500 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಎಂಜಿನ್​ ಹೊಂದಿರುವ, 4000 ಮಿಲಿ ಮೀಟರ್​ಗಿಂತ ಕಡಿಮೆ ಉದ್ದ ಹೊಂದಿರುವ ಹಾಗೂ 170 ಮಿಲಿ ಮೀಟರ್​ಗಿಂತ ಕಡಿಮೆ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ವಾಹನಗಳನ್ನು ಎಸ್​ಯುವಿಗಳೆಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ ಎಸ್​ಯುವಿಗೆ ಹಾಕುವ ಶೇ.20ರಿಂದ 22ರವರೆಗಿನ ಜಿಎಸ್​ಟಿ ಅನ್ವಯವಾಗುವುದಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿರುವ ಕೆಲವೊಂದು ಕಾಂಪಾಕ್ಟ್​ ಎಸ್​​ಯುವಿಗಳಿಗೆ ಹೊಸ ನಿಯಮಗಳು ಅನ್ವಯಗೊಂಡರೆ ಅವುಗಳ ದರ ಇನ್ನಷ್ಟು ಅಗ್ಗವಾಗಲಿದೆ. ಗ್ರಾಹಕರ ಮಟ್ಟಿಗೆ ಇದು ಸಂತಸದ ಸುದ್ದಿ.

ಯಾವೆಲ್ಲ ಕಾರುಗಳು?

ಮೇಲಿನ ನಿಯಮದ ಪ್ರಕಾರ ಹ್ಯುಂಡೈ ಕಂಪನಿಯ ವೆನ್ಯು, ಕಿಯಾದ ಸೆಲ್ಟೋಸ್​, ಮಾರುತಿ ಸುಜುಕಿ ಬ್ರೆಜಾ ಹಾಗೂ ಮಹಿಂದ್ರಾ ಕಂಪನಿಯ ಎಕ್ಸ್​ಯುವಿ 300 ಕಾರಿನ ಜಿಎಸ್​ಟಿ ಶೇಕಡಾ 5 ಇಳಿಕೆಯಾಗಲಿದೆ. ಇದರ ನೇರ ಲಾಭ ಗ್ರಾಹಕರಿಗೆ ದೊರೆಯಲಿದೆ.

ವೆನ್ಯು ಕಾರಿನಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​ ಎಂಜಿನ್ ಆಯ್ಕೆಗಳಿವೆ. ಡೀಸೆಲ್​ ಎಂಜಿನ್​ 1,493 ಸಿಸಿ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್​ನಲ್ಲಿ 998 ಸಿಸಿ ಹಾಗೂ 1,197 ಸಿಸಿಎ ಎರಡು ಆಯ್ಕೆಗಳಿವೆ. ವೆನ್ಯು ಕಾರು 3,995 ಮಿಲಿ ಮೀಟರ್​ ಉದ್ದವಿದ್ದು, 190ರಿಂದ 195 ಎಂಎಮ್​ ಗ್ರೌಂಡ್​ ಕ್ಲಿಯರೆನ್ಸ್​ ಹೊಂದಿದೆ. ಕಿಯಾ ಸೊನೆಟ್​ ಕೂಡ ಇಷ್ಟೇ ಗಾತ್ರವನ್ನು ಹೊಂದಿದ್ದು 1.0 ಹಾಗೂ 1.2 ಲೀಟರ್​ನ ಪೆಟ್ರೋಲ್​ ಎಂಜಿನ್​ ಹೊಂದಿದೆ.

ಮಾರುತಿ ಸುಜುಕಿ ಬ್ರೆಜಾ ಕಾರು 1,492 ಸಿಸಿಯ ಎಂಜಿನ್​ ಹೊಂದಿದ್ದು, 3,995 ಮಿಲಿ ಮೀಟರ್​ ಉದ್ದವಿದೆ. ಗ್ರೌಂಡ್​ ಕ್ಲಿಯರೆನ್ಸ್​ 200 ಮಿಲಿ ಮೀಟರ್​ನಷ್ಟಿದೆ. ಟಾಟಾ ನೆಕ್ಸಾನ್​ 1,497 ಸಿಸಿ ಡೀಸೆಲ್​ ಹಾಗೂ, 1,199 ಸಿಸಿ ಪೆಟ್ರೋಲ್​ ಎಂಜಿನ್ ಹೊಂದಿದೆ. ಇದು 3,993 ಮೀಟರ್​ ಉದ್ದವಿದ್ದು 209 ಮಿಲಿಮೀಟರ್ ಗ್ರೌಂಡ್​ ಕ್ಲಿಯರೆನ್ಸ್ ಹೊಂದಿದೆ. ಮಹೀಂದ್ರಾ ಎಕ್ಸ್​ಯುವಿ 300 ಕಾರು 1,497 ಸಿಸಿಯ ಡೀಸೆಲ್​ ಹಾಗೂ 1,199 ಸಿಸಿಯ ಪೆಟ್ರೋಲ್​ ಎಂಜಿನ್​ ಹೊಂದಿದೆ. ಇದು 180 ಮಿಲಿ ಮೀಟರ್​ ಗ್ರೌಂಡ್​ ಕ್ಲಿಯರೆನ್ಸ್​ ಹೊಂದಿದ್ದು 3,995 ಮಿಲಿ ಮೀಟರ್​ ಉದ್ದವಿದೆ.

ಇನ್ನೂ ಇಲ್ಲ ಸ್ಪಷ್ಟತೆ

48ನೇ ಜಿಎಸ್​ಟಿ ಕೌನ್ಸಿಲ್​ ಸಭೆಯಲ್ಲಿ ಈ ಬಗ್ಗೆ ಸೂಚನೆ ಸಿಕ್ಕಿರುವ ಹೊರತಾಗಿಯೂ ಸ್ಪಷ್ಟತೆ ಇಲ್ಲ. ಈ ಮೇಲಿನ ಕಾರುಗಳು ಹೊಸ ನಿಯಮಗಳಿಗೆ ಹತ್ತಿರ ಇದೆ. ಆದಾಗ್ಯೂ ಗ್ರೌಂಡ್​ ಕ್ಲಿಯರೆನ್ಸ್​ ವಿಚಾರಕ್ಕೆ ಬಂದಾಗ ಸ್ಲಪ ಅಧಿಕವಾಗಿದೆ. ಕೌನ್ಸಿಲ್​ ಈ ಬಗ್ಗೆ ಸ್ಪಷ್ಟತೆ ಕೊಟ್ಟ ಬಳಿಕ ದರಪಟ್ಟಿಯನ್ನು ಕಂಪನಿಗಳು ನಿಗದಿ ಮಾಡಬಹುದು.

ಇದನ್ನೂ ಓದಿ | EV Bike | ಶೀಘ್ರ ರಸ್ತೆಗೆ ಪ್ಯೂರ್ ಇವಿ ಕಂಪನಿಯ ಇಕೊಡ್ರಿಫ್ಟ್​ ಎಲೆಕ್ಟ್ರಿಕ್​ ಬೈಕ್​

Exit mobile version