Site icon Vistara News

Great Wall Motors ಭಾರತ ಪ್ರವೇಶ ಯೋಜನೆ ಬಂದ್‌

great wall motors

ಬೆಂಗಳೂರು: ಚೀನಾ ಮೂಲದ ಕಾರು ತಯಾರಿಕಾ ಕಂಪನಿ Great Wall Motors ಭಾರತಕ್ಕೆ ಪ್ರವೇಶ ಮಾಡುವ ಯೋಜನೆಯನ್ನು ಕೈಬಿಟ್ಟಿದೆ.

ಭಾರತ ಸರಕಾರದ ಜತೆಗಿನ ಮಾತುಕತೆ ಬಿಗಿ ನಿಯಮಗಳ ಹಿನ್ನೆಲೆಯಲ್ಲಿ ಮುರಿದು ಬಿದ್ದ ಕಾರಣ Great Wall Motors ಕಂಪನಿಯು 789 ಕೋಟಿ ರೂಪಾಯಿಯ ಹೂಡಿಕೆ ಯೋಜನೆಯನ್ನು ಹಿಂದಕ್ಕೆ ಪಡೆದಿದೆ. ಅಲ್ಲದೆ, ಈಗಾಗಲೇ ಮಾರುಕಟ್ಟೆ ವಿಸ್ತರಣೆ ಸೇರಿದಂತೆ ನಾನಾ ಕೆಲಸಗಳಿಗೆ ನೇಮಕ ಮಾಡಿಕೊಂಡಿದ್ದ ೮ರಿಂದ ೧೦ ಸಿಬ್ಬಂದಿಯನ್ನು ಬಿಡುಗಡೆಗೊಳಿಸಿದೆ. ಅವರಿಗೆ ಮೂರು ತಿಂಗಳ ಸಂಬಳ ಹಾಗೂ ಸೆವೆರೆನ್‌ ಪ್ಯಾಕೇಜ್‌ ಕೊಡಲಾಗಿದೆ.

೨೦೨೦ರ ಆಟೋ ಎಕ್ಸ್‌ಪೋದಲ್ಲಿ ಪಾಲ್ಗೊಂಡಿದ್ದ Great Wall Motors, ಭಾರತದಲ್ಲಿ ಹೂಡಿಕೆ ಮಾಡುವ ಪ್ರಸ್ತಾಪ ಮಾಡಿತ್ತು. ಅದಕ್ಕಾಗಿ ಜನರಲ್‌ ಮೋಟಾರ್ಸ್‌ ನಡುವೆ ಒಪ್ಪಂದ ಮಾಡಿಕೊಂಡು ಪುಣೆಯ ತಲೆಂಗಾವ್‌ನಲ್ಲಿರುವ ಆ ಕಂಪನಿಯ ಉತ್ಪಾದನಾ ಘಟಕವನ್ನು ಖರೀದಿ ಮಾಡಲು ಮುಂದಾಗಿತ್ತು.

ಏನು ಕಾರಣ?

ಜನರಲ್‌ ಮೋಟಾರ್ಸ್‌ ಹಾಗೂ Great Wall Motors ಕಂಪನಿ ೨೦೨೦ರಲ್ಲಿ ಮಾಡಿದ್ದ ಒಪ್ಪಂದವು ೨೦೨೨ರ ಜೂನ್‌ ೩೦ಕ್ಕೆ ಮುಕ್ತಾಯಗೊಂಡಿದೆ. ಈ ಅವಧಿಯೊಳಗೆ Great Wall Motors ಭಾರತ ಸರಕಾರದ ಜತೆಗಿನ ಒಪ್ಪಂದವನ್ನು ಮುಗಿಸಬೇಕಾಗಿತ್ತು. ಆದರೆ, ಚೀನಾ ಕಂಪನಿಯಾಗಿರುವ ಕಾರಣ ಕೇಂದ್ರ ಸರಕಾರ ಕಠಿಣ ನಿಯಮಗಳನ್ನು ಹೇರಿತ್ತು. ಆದರೆ, ಅದು ಒಪ್ಪಿಗೆಯಾಗದ ಕಾರಣ ಕಂಪನಿ ಯೋಜನೆಯನ್ನೇ ಕೈಬಿಟ್ಟಿದೆ.

ನಾಲ್ಕನೇ ಕಂಪನಿ

Great Wall Motors ಕಂಪನಿ ಯೋಜನೆ ವೈಫಲ್ಯವಾಗುವುದರೊಂದಿಗೆ ಒಟ್ಟಾರೆ ನಾಲ್ಕು ಚೀನಾದ ಕಾರು ತಯಾರಕ ಕಂಪನಿಗಳ ಭಾರತ ಪ್ರವೇಶ ಯೋಜನೆ ವಿಫಲಗೊಂಡಂತಾಗಿದೆ. ಈ ಹಿಂದೆ ಚಂಗನ್‌, ಹೈಮಾ ಹಾಗೂ ಚೆರಿ ಇದೇ ಮಾದರಿಯಲ್ಲಿ ಯೋಜನೆ ರೂಪಿಸಿಕೊಂಡು ವೈಫಲ್ಯ ಕಂಡಿತ್ತು.

ಇದನ್ನೂ ಓದಿ: ಮಾರುಕಟ್ಟೆಗೆ ಇಳಿದ Urban Cruiser Hyryder ಕಾರು

Exit mobile version